ಅಮ್ಮನನ್ನು ಚೆನ್ನಾಗಿ ನೋಡಿಕೊ ಎಂದು ಬರೆದಿಟ್ಟು ನೇಣಿಗೆ ಶರಣಾದ ಕಬಡ್ಡಿ ಕೋಚ್!

ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಸಾಯ್ ಕಬಡ್ಡಿ ಕೋಚ್ ರುದ್ರಪ್ಪ ವಿ ಹೊಸಮನಿ ನೇಣಿಗೆ ಶರಣಾಗಿದ್ದಾರೆ. ತನ್ನಿಂದ ತಪ್ಪಾಗಿದ್ದು, ಎಲ್ಲರನ್ನೂ ನೋಯಿಸಿದ್ದು ತನ್ನನ್ನು ಬಾಧಿಸಿದೆ; ಇದುವೇ ತನ್ನ ಆತ್ಮಹತ್ಯೆಗೆ ಕಾರಣ ಎಂದು ಬರೆದುಕೊಂಡಿದ್ದಾರೆ

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಸಾಯ್ ಟ್ರೇನಿಂಗ್ ಸೆಂಟರ್‌ನಲ್ಲಿ (ಎಸ್‌ಎಐ) ಕಬಡ್ಡಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಾವಣಗೆರೆ ಮೂಲದ ಹಿರಿಯ ಕಬಡ್ಡಿ ಕೋಚ್ ರುದ್ರಪ್ಪ ವಿ ಹೊಸಮನಿ ನೇಣಿಗೆ ಶರಣಾಗಿದ್ದಾರೆ. ಹೋಟೆಲ್ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸೋಮವಾರ (ಅ.೧೫) ಪೊಲೀಸರು ಖಚಿತಪಡಿಸಿದ್ದಾರೆ.

ಹದಿಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ೫೯ ವರ್ಷದ ರುದ್ರಪ್ಪ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ಆಂತರಿಕ ವಿಚಾರಣೆ ನಡೆಸಿದ್ದ ಸಾಯ್, ಕಳೆದ ವಾರ ಅವರನ್ನು ಸೇವೆಯಿಂದ ಅಮಾನತು ಮಾಡಿತ್ತು. ಭಾನುವಾರ (ಅ.೧೪) ಹರಿಹರದ ಹೋಟೆಲೊಂದರಲ್ಲಿ ಅವರು ಉಳಿದುಕೊಂಡಿದ್ದರು. ಆದರೆ, ಕೊಠಡಿ ಪಡೆದ ಹೊಸಮನಿ ಒಮ್ಮೆಯೂ ಆಚೆ ಬಂದಿರಲೇ ಇಲ್ಲ. ಇದರಿಂದ ಸಂಶಯಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಕೊಠಡಿ ಬಾಗಿಲನ್ನು ಒಡೆದು ನೋಡಿದಾಗ ಹೊಸಮನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತು.

ಆತ್ಮಹತ್ಯೆಗೂ ಮುನ್ನ ರುದ್ರಪ್ಪ ಹೊಸಮನಿ, ತನ್ನ ಪತ್ನಿ ದೇವಿಕಾ ಹಾಗೂ ಮಗ ರಾಕೇಶ್‌ಗೆ ಪತ್ರ ಬರೆದಿದ್ದು, ತನ್ನ ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಕ್ಷಮೆ ಯಾಚಿಸಿದ್ದಾರೆ. “ನಾನು ಮಾಡಿದ ತಪ್ಪಿಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತಿದ್ದೇನೆ. ನಾನು ಈ ಸಂದಿಗ್ಧ ಸಂದರ್ಭದಲ್ಲಿ ಅಸಹಾಯಕನಾಗಿದ್ದೇನೆ. ದೇವಿಕಾಳನ್ನು ಚೆನ್ನಾಗಿ ನೋಡಿಕೋ. ಹಾಗೆಯೇ ನನ್ನ ಮೃತದೇಹವನ್ನು ದಾನ ಮಾಡುವುದು,’’ ಎಂದು ಪುತ್ರ ರಾಕೇಶ್‌ಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : #MeToo | ಭಾರತದಲ್ಲಿ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾದ ಪ್ರಮುಖರ ಪಟ್ಟಿ

“ಅಮ್ಮನನ್ನು ಚೆನ್ನಾಗಿ ನೋಡಿಕೊ, ನನಗೆ ತುಂಬಾ ನೋವಾಗಿದೆ. ಇದೇ ಕಾರಣಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ,’’ ಎಂದು ಆತ್ಮಹತ್ಯೆಗೂ ಮುನ್ನ ರುದ್ರಪ್ಪ ಹೊಸಮನಿ ಪತ್ರ ಬರೆದಿಟ್ಟಿದ್ದಾರೆ. ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ ಪೊಲೀಸರು ರುದ್ರಪ್ಪ ಅವರ ಮೃತದೇಹವನ್ನು ಸಂಬಂಧಿಕರಿಗೆ ನೀಡಿದ್ದಾರೆ.

ಅ.೯ರಂದು ಸಾಯ್ ಸಂಕೀರ್ಣದ ಕಬಡ್ಡಿ ಅರೇನಾದಲ್ಲಿ ಬಾಲಕಿಯರ ಡ್ರೆಸ್ಸಿಂಗ್ ರೂಂ ಬಳಿ ನಡೆದ ಘಟನೆ ಸಾಯ್ ಅನ್ನು ಬೆಚ್ಚಿಬೀಳಿಸಿತ್ತು. ಬಾಲಕಿ ಡ್ರೆಸ್ಸಿಂಗ್ ರೂಂನಿಂದ ಹೊರಗೋಡಿ ಬಂದಿದ್ದಳು. ತನ್ನ ಪೋಷಕರಿಗೆ ವಿಷಯ ತಿಳಿಸಿದ ನಂತರದಲ್ಲಿ ರುದ್ರಪ್ಪ ಅವರನ್ನು ಬಾಲಕಿಯ ಪೋಷಕರ ಮನೆಯವರು ಥಳಿಸಿದ್ದರು. ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿದ್ದ ಸಾಯ್ ಅಧಿಕಾರಿಗಳು, ಮರುದಿನವೇ ಆಂತರಿಕ ಸಮಿತಿಯಿಂದ ವಿಚಾರಣೆ ನಡೆಸಲು ಸೂಚಿಸಿದ್ದರು. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ರುದ್ರಪ್ಪ ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಇದೀಗ ಜ್ಞಾನಭಾರತಿ ಪೊಲೀಸ್ ಠಾಣೆ ಕೂಡ ರುದ್ರಪ್ಪ ಅವರ ಆತ್ಮಹತ್ಯೆ ಸಂಗತಿಯನ್ನು ಖಚಿತಪಡಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More