ಯುವ ಒಲಿಂಪಿಕ್ಸ್ | ಅಥ್ಲೆಟಿಕ್ಸ್‌ನಲ್ಲಿ ಪದಕ ಬೇಟೆಗೆ ಮುನ್ನುಡಿ ಬರೆದ ಸೂರಜ್

ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಕಿರಿಯರ ಒಲಿಂಪಿಕ್ಸ್ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಮೊದಲ ಪದಕ ಗೆದ್ದಿದೆ. ಪುರುಷರ ೫,೦೦೦ ಮೀಟರ್ ವೇಗದ ನಡಿಗೆ ಸ್ಪರ್ಧೆಯಲ್ಲಿ ಸೂರಜ್ ಪನ್ವಾರ್ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಜಯಿಸಿದರು

ಸ್ಟೇಜ್ ೨ರ ಸ್ಪರ್ಧೆಯಲ್ಲಿ ೨೦ ನಿಮಿಷ ಮತ್ತು ೩೫.೮೭ ಸೆಕೆಂಡುಗಳಲ್ಲಿ ನಿಗದಿತ ಗುರಿ ಮುಟ್ಟಿದ ಸೂರಜ್ ಪನ್ವಾರ್, ಸೋಮವಾರ (ಅ.೧೫) ರಾತ್ರಿ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದರು. ಹೊಸ ಮಾದರಿಯಿಂದಾಗಿ ಯುವ ಒಲಿಂಪಿಕ್ಸ್ ಕೂಟದ ಟ್ರ್ಯಾಕ್ ಮತ್ತು ಫೀಲ್ಡ್‌ನ ಪ್ರತಿಯೊಂದು ಸ್ಪರ್ಧೆಯೂ ಎರಡು ಬಾರಿ ನಡೆಯುತ್ತದೆ. ಹೀಗಾಗಿ, ಈ ಸ್ಪರ್ಧೆಯಲ್ಲಿ ಫೈನಲ್ ಎಂಬುದು ಇರುವುದಿಲ್ಲ. ಎರಡೂ ಸುತ್ತಿನಲ್ಲಿ ಅಥ್ಲೀಟ್‌ಗಳು ನೀಡುವ ಪ್ರದರ್ಶನದ ಆಧಾರದಲ್ಲಿ ವಿಜೇತರನ್ನು ಆರಿಸಲಾಗುತ್ತದೆ.

ಹದಿನೇಳರ ಹರೆಯದ ಸೂರಜ್, ಮೊದಲ ಹಂತದ ಸ್ಪರ್ಧೆಯಲ್ಲಿ ೨೦ ನಿಮಿಷ ೨೩.೩೦ ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಈಕ್ವೆಡಾರ್‌ನ ಪ್ಯಾಟಿನ್ ಆಸ್ಕರ್ ಮೊದಲಿಗರಾಗಿದ್ದರು. ಆಸ್ಕರ್ ಎರಡನೇ ಹಂತದಲ್ಲಿ ೨೦:೧೩.೬೯ ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ, ಮೊದಲ ಹಂತದಲ್ಲಿ ೨೦:೩೮.೧೭ ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು.

ಪನ್ವಾರ್ ಸಮಯಕ್ಕೂ ಆಸ್ಕರ್ ಗುರಿ ಮುಟ್ಟಿದ ಸಮಯಕ್ಕೂ ಏಳು ನಿಮಿಷಗಳ ಅಂತರವಿತ್ತು. ಅರ್ಥಾತ್ ನಿಗದಿತ ಗುರಿಯನ್ನು ಪನ್ವಾರ್ ೪೦:೫೯.೧೭ ಸೆಕೆಂಡುಗಳಲ್ಲಿ ಕ್ರಮಿಸಿದರೆ, ಆಸ್ಕರ್ ಇದೇ ೫,೦೦೦ ಮೀಟರ್ ರೇಸ್‌ ಅನ್ನು ೪೦: ೫೧.೮೬ ಸೆಕೆಂಡುಗಳಲ್ಲಿ ಕ್ರಮಿಸಿದರು. ಇನ್ನುಳಿದಂತೆ ಈ ವಿಭಾಗದಲ್ಲಿ ಪೋರ್ಟೊರಿಕೋದ ಜಾನ್ ಮೊರೆಯು ಮೂರನೇ ಸ್ಥಾನ ಗಳಿಸಿ ಕಂಚು ಪಡೆದರು.

ಇದನ್ನೂ ಓದಿ : ಯುವ ಒಲಿಂಪಿಕ್ಸ್ | ಹಾಕಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಭಾರತಕ್ಕೆ ಬೆಳ್ಳಿ

ಈ ಆವೃತ್ತಿಯಲ್ಲಿ ಭಾರತ ಫೀಲ್ಡ್ ಮತ್ತು ಟ್ರ್ಯಾಕ್ ವಿಭಾಗದಲ್ಲಿ ಗೆದ್ದ ಮೊದಲ ಹಾಗೂ ಒಟ್ಟಾರೆ ಮೂರನೇ ಪದಕವಿದು. ಈ ದಿಸೆಯಲ್ಲಿ ಅಥ್ಲೆಟಿಕ್ಸ್ ವಿಭಾಗದ ಪದಕ ಬೇಟೆಗೆ ಸೂರಜ್ ಮುನ್ನುಡಿ ಬರೆದರು. ಸೂರಜ್‌ಗೂ ಮುನ್ನ ೨೦೧೦ರ ಕೂಟದಲ್ಲಿ ಪುರುಷರ ಡಿಸ್ಕ್ ಎಸೆತದಲ್ಲಿ ಅರ್ಜುನ್ ಮತ್ತು ಪುರುಷರ ೪೦೦ ಮೀಟರ್ ಹರ್ಡಲ್ಸ್‌ನಲ್ಲಿ ದುರ್ಗೇಶ್ ಕುಮಾರ್ ರಜತ ಪದಕಗಳನ್ನು ಗೆದ್ದುಕೊಂಡಿದ್ದರು.

“ನನಗಾಗುತ್ತಿರುವ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ. ಪದಕ ಗೆದ್ದ ಈ ಕ್ಷಣ ನನ್ನ ಪಾಲಿಗೆ ಅತ್ಯಂತ ಮಹತ್ವದ ಭಾವ ಉಂಟುಮಾಡಿದೆ. ಈ ಕೂಟದಲ್ಲಿ ಪದಕ ಗೆಲ್ಲಬೇಕೆಂದು ಕಠಿಣ ಪರಿಶ್ರಮಪಟ್ಟಿದ್ದೆ. ಭಾರತಕ್ಕಾಗಿ ನಾನು ಗೆದ್ದ ಮೊದಲ ಪದಕವಿದು. ಹಿರಿಯರ ವಿಭಾಗದಲ್ಲಿಯೂ ಪದಕ ಗೆಲ್ಲುವುದು ನನ್ನ ಮುಂದಿನ ಗುರಿ,’’ ಎಂದು ಸೂರನ್ ಪನ್ವಾರ್ ಪ್ರತಿಕ್ರಿಯಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More