ವಿಂಡೀಸ್ ಏಕದಿನ ಸರಣಿ; ಗಾಯಾಳು ಶಾರ್ದೂಲ್ ಬದಲು ಯಾದವ್‌ಗೆ ಸ್ಥಾನ

ಗಾಯಾಳು ಶಾರ್ದೂಲ್ ಠಾಕೂರ್‌ ಬದಲಿಗೆ ವಿಂಡೀಸ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಗೆ ಉಮೇಶ್ ಯಾದವ್ ಸ್ಥಾನ ಪಡೆದಿದ್ದಾರೆ. ಇದೇ ವೇಳೆ, ನಿಯಮ ಉಲ್ಲಂಘನೆಗಾಗಿ ವಿಂಡೀಸ್ ಪ್ರಧಾನ ಕೋಚ್ ಸ್ಟುವರ್ಟ್ ಲಾ ಅವರನ್ನು ಮೊದಲೆರಡು ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ

ಇದೇ ಭಾನುವಾರದಿಂದ (ಅ.೨೧) ಆರಂಭವಾಗುತ್ತಿರುವ ಐದು ಏಕದಿನ ಪಂದ್ಯ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಪ್ರಕಟವಾಗಿರುವ ಭಾರತ ತಂಡಕ್ಕೆ ಉಮೇಶ್ ಯಾದವ್‌ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ಮುಕ್ತಾಯ ಕಂಡ ಕೆರಿಬಿಯನ್ನರ ಎದುರಿನ ಹೈದರಾಬಾದ್‌ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಹತ್ತು ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಉಮೇಶ್ ಯಾದವ್‌ಗೆ ಆಯ್ಕೆಸಮಿತಿ ಏಕದಿನ ಸರಣಿಗೂ ಸ್ಥಾನ ಕಲ್ಪಿಸಿದೆ.

ಬಲಗೈ ವೇಗಿ ಉಮೇಶ್ ಯಾದವ್ ಇಲ್ಲೀವರೆಗೆ ಭಾರತ ತಂಡದ ಪರ ೭೩ ಏಕದಿನ ಪಂದ್ಯಗಳನ್ನಾಡಿದ್ದು, ೧೦೫ ವಿಕೆಟ್ ಗಳಿಸಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಮುಂಬೈನ ಶಾರ್ದೂಲ್ ಠಾಕೂರ್ ಬಲಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಅವರ ಸ್ಥಾನದಲ್ಲಿ ಉಮೇಶ್ ಯಾದವ್ ಭಾರತ ತಂಡದ ಬೌಲಿಂಗ್ ಪಡೆಗೆ ಸೇರ್ಪಡೆಯಾಗಿದ್ದಾರೆ. ೨೭ರ ಹರೆಯದ ಶಾರ್ದೂಲ್ ಠಾಕೂರ್ ಶ್ರೀಲಂಕಾ ವಿರುದ್ಧ ೨೦೧೭ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಉಮೇಶ್ ಯಾದವ್ ಕೊನೆಯ ಏಕದಿನ ಪಂದ್ಯವನ್ನಾಡಿದ್ದು ಜುಲೈ ತಿಂಗಳಿನಲ್ಲಿ. ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರದಲ್ಲಿ ಉಮೇಶ್ ಯಾದವ್ ಆಡುತ್ತಿರುವ ಮೊದಲ ಏಕದಿನ ಪಂದ್ಯ ಸರಣಿ ಇದಾಗಿದೆ. ಅಂದಹಾಗೆ, ಏಷ್ಯಾ ಕಪ್ ವಿಜೇತ ಭಾರತ ತಂಡದಲ್ಲಿ ಉಮೇಶ್ ಯಾದವ್ ಭಾಗಿಯಾಗಿರಲಿಲ್ಲ.

ಇದನ್ನೂ ಓದಿ : ಉಮೇಶ್ ಯಾದವ್ ಮಾರಕ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ವೈಟ್‌ವಾಶ್

ಲಾ ಬ್ರೇಕ್!

ವೆಸ್ಟ್‌ಇಂಡೀಸ್ ತಂಡದ ಪ್ರಧಾನ ಕೋಚ್ ಸ್ಟುವರ್ಟ್ ಲಾ ಅವರಿಗೆ ಭಾರತ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ. ಅಕ್ಟೋಬರ್ ೨೧ ಮತ್ತು ೨೪ರಂದು ನಡೆಯಲಿರುವ ಮೊದಲ ಎರಡು ಪಂದ್ಯಗಳಿಗೆ ಅಮಾನತು ಮಾತ್ರವಲ್ಲ, ಪಂದ್ಯ ಶುಲ್ಕದ ಶೇ. ೧೦೦ರಷ್ಟು ದಂಡ ಮತ್ತು ಮೂರು ಹಿಂಬಡ್ತಿ ಪಾಯಿಂಟ್ಸ್‌ಗಳ ಶಿಕ್ಷೆಯನ್ನೂ ವಿಧಿಸಲಾಗಿದೆ.

ಹೈದರಾಬಾದ್ ಟೆಸ್ಟ್ ಪಂದ್ಯದ ವೇಳೆ ಸ್ಟುವರ್ಟ್ ಲಾ ಟಿವಿ ಅಂಪೈರ್ ಹಾಗೂ ನಾಲ್ಕನೇ ಅಧಿಕಾರಿಯನ್ನು ನಿಂದಿಸಿದ್ದಲ್ಲದೆ, ಅನುಚಿತ ಮಾತುಗಳನ್ನಾಡಿದ್ದರು. ಇದು ಐಸಿಸಿಯ ಆಟಗಾರರ ಮತ್ತು ಆಟಗಾರರ ಬೆಂಬಲಿತ ಸಿಬ್ಬಂದಿಯ ನಿಯಮಾವಳಿಯಾದ ಲೆವಲ್ ೨ರ ನಿಯಮ ೨.೭ರ ಸ್ಪಷ್ಟ ಉಲ್ಲಂಘನೆಯಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಡೊಮಿನಿಕಾ ಟೆಸ್ಟ್ ಪಂದ್ಯದಲ್ಲಿಯೂ ಇಂಥದ್ದೇ ಪ್ರಮಾದ ಎಸಗಿದ್ದ ಸ್ಟುವರ್ಟ್ ಲಾಗೆ, ಶೇ. ೨೫ರಷ್ಟು ದಂಡ ಮತ್ತು ಒಂದು ಪಾಯಿಂಟ್ಸ್ ಹಿಂಬಡ್ತಿ ನೀಡಲಾಗಿತ್ತು.

ಪ್ರಕಟಿತ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಎಂ ಎಸ್ ಧೋನಿ (ವಿಕೆಟ್‌ಕೀಪರ್), ರಿಷಭ್ ಪಂತ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮದ್ ಶಮಿ, ಖಲೀಲ್ ಅಹಮದ್ ಮತ್ತು ಉಮೇಶ್ ಯಾದವ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More