ಡೆನ್ಮಾರ್ಕ್ ಓಪನ್ | ಮೊದಲ ಸುತ್ತಲ್ಲೇ ಸೋತು ಹೊರಬಿದ್ದ ಪಿ ವಿ ಸಿಂಧು

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು, ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಆಘಾತ ಅನುಭವಿಸಿದ್ದಾರೆ. ಅಮೆರಿಕದ ಬೀವೆನ್ ಝಾಂಗ್ ವಿರುದ್ಧದ ಕಾದಾಟದಲ್ಲಿ ಅವರು ಮೂರು ಗೇಮ್‌ಗಳ ಆಟದಲ್ಲಿ ೧೭-೨೧, ೨೧-೧೬, ೧೮-೨೧ರಿಂದ ಪರಾಭವಗೊಂಡರು

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಡೆನ್ಮಾರ್ಕ್ ಓಪನ್‌ನಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ. ಮಂಗಳವಾರ (ಅ.೧೬) ಶುರುವಾದ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಶ್ರೇಯಾಂಕಿತೆ ಸಿಂಧುವಿನ ಶುಭಾರಂಭದ ನಿರೀಕ್ಷೆಯನ್ನು ಶ್ರೇಯಾಂಕರಹಿತ ಅಮೆರಿಕನ್ ಆಟಗಾರ್ತಿ ಹೊಸಕಿಹಾಕಿದರು.

ಸರಿಸುಮಾರು ಒಂದು ತಾಸಿನವರೆಗೆ ನಡೆದ ಮೂರು ಗೇಮ್‌ಗಳ ಕಠಿಣಕಾರಿ ಕಾದಾಟದಲ್ಲಿ ಬೀವೆನ್ ಝಾಂಗ್ ಮಿಂಚಿನ ಆಟದಲ್ಲಿ ಸಿಂಧು ಕಳೆದುಹೋದರು. ಈ ಸೋಲಿನೊಂದಿಗೆ ಅಮೆರಿಕ ಆಟಗಾರ್ತಿ ಎದುರು ಸಿಂಧು ಸತತ ಮೂರನೇ ಬಾರಿಗೆ ಪರಾಭವಗೊಂಡಂತಾಗಿದೆ. ಇದೇ ಫೆಬ್ರವರಿ ತಿಂಗಳಿನಲ್ಲಿ ನಡೆದಿದ್ದ ಇಂಡಿಯನ್ ಓಪನ್ ಫೈನಲ್‌ನಲ್ಲೂ ಝಾಂಗ್ ಎದುರು ಸಿಂಧು ಮುಗ್ಗರಿಸಿದ್ದರು.

ಜಕಾರ್ತದಲ್ಲಿನ ಏಷ್ಯಾಡ್ ಬಳಿಕ ಸಿಂಧು ಕಠಿಣ ಹಾದಿಯಲ್ಲಿ ಸಾಗಿರುವುದು ಆತಂಕ ಸೃಷ್ಟಿಸಿದೆ. ಏಷ್ಯಾಡ್ ಬೆಳ್ಳಿ ವಿಜೇತೆ ಸಿಂಧು ಇಂಡೋನೇಷ್ಯಾದಿಂದ ಬಂದ ಬಳಿಕ ಆಡಿದ ಜಪಾನ್ ಓಪನ್‌ನಲ್ಲಿ ಗಾವೊ ಫಾಂಗ್ಜಿ ವಿರುದ್ಧ ಎರಡನೇ ಸುತ್ತಿನಲ್ಲಿ ನೇರ ಗೇಮ್‌ಗಳಲ್ಲಿ ಸೋತು ತಲ್ಲಣಿಸಿದ್ದರು. ಇನ್ನು, ಜಪಾನ್ ಓಪನ್ ಬಳಿಕ ನಡೆದ ಚೀನಾ ಓಪನ್‌ನಲ್ಲಿ ಕೂಡ ೨೩ರ ಹರೆಯದ ಸಿಂಧು ನಿರಾಸೆ ಅನುಭವಿಸಿದ್ದರು.

ಇದನ್ನೂ ಓದಿ : ಚೀನಾ ಓಪನ್ ಬ್ಯಾಡ್ಮಿಂಟನ್| ಮೊದಲ ಸುತ್ತಲ್ಲೇ ಹೊರಬಿದ್ದ ಸೈನಾ ನೆಹ್ವಾಲ್

ಚೀನಾ ಓಪನ್ ಕ್ವಾರ್ಟರ್‌ಫೈನಲ್‌ವರೆಗೆ ಹೇಗೂ ಸಾಗಿದ್ದ ಸಿಂಧು, ಸ್ಥಳೀಯ ಆಟಗಾರ್ತಿ ಹಾಗೂ ವಿಶ್ವದ ಆರನೇ ಶ್ರೇಯಾಂಕಿತೆ ಚೆನ್ ಯುಫೆ ಎದುರು ೧೧-೨೧, ೨೧-೧೧, ೧೫-೨೧ ಗೇಮ್‌ಗಳಲ್ಲಿ ಸೋಲನುಭವಿಸಿದ್ದರು. ಇದೀಗ ಡೆನ್ಮಾರ್ಕ್ ಓಪನ್‌ನಲ್ಲಿ ಮೊದಲ ಸುತ್ತಲ್ಲೇ ಎದುರಾದ ಸೋಲು ಸಿಂಧು ಅವರನ್ನು ಎಚ್ಚರಿಸಿದೆ. ಪ್ರಸಕ್ತ ಟೂರ್ನಿಯಲ್ಲಿ ಸಿಂಧು ನಿರ್ಗಮನ ಭಾರತದ ಮಿಕ್ಕ ಆಟಗಾರರನ್ನು ಎಚ್ಚರಿಸಿದೆ.

ಸಿಂಧುವಿನ ನಿರ್ಗಮನದಿಂದಾಗಿ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲನ್ನು ಮತ್ತೋರ್ವ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಮುಂದುವರಿಸಬೇಕಿದೆ. ಏಷ್ಯಾಡ್‌ನಲ್ಲಿ ಕಂಚಿನ ಪದಕ ಗೆದ್ದ ಸೈನಾ, ಆ ಬಳಿಕ ನಡೆದ ಜಪಾನ್ ಓಪನ್‌ನಿಂದ ವಿಶ್ರಾಂತಿ ಪಡೆದಿದ್ದರು. ಆದರೆ, ಚೀನಾ ಓಪನ್‌ನಲ್ಲಿ ಮೊದಲ ಸುತ್ತಲ್ಲೇ ಸೋತಿದ್ದ ಸೈನಾ, ಇದೀಗ ಡೆನ್ಮಾರ್ಕ್ ಓಪನ್‌ನಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಅವರೊಂದಿಗೆ ಕಿಡಾಂಬಿ ಶ್ರೀಕಾಂತ್, ಸಾಯಿ ಪ್ರಣೀತ್ ಮುಂತಾದವರು ದಿನದ ಕಡೇ ಅವಧಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More