ಏಷ್ಯನ್ ಚಾಂಪಿಯನ್ಸ್ ಟ್ರೋಫಿ | ಓಮನ್ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆ

ಹಾಲಿ ಚಾಂಪಿಯನ್ ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭಾರಂಭದ ನಿರೀಕ್ಷೆ ಹೊತ್ತಿದೆ. ಗುರುವಾರದಿಂದ (ಅ.೧೮) ಮಸ್ಕಟ್‌ನಲ್ಲಿ ಶುರುವಾಗುತ್ತಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಅನನುಭವಿ ಓಮನ್ ತಂಡವನ್ನು ಸುಲಭವಾಗಿ ಮಣಿಸುವ ಲೆಕ್ಕಾಚಾರದಲ್ಲಿದೆ ಭಾರತ ಹಾಕಿ ತಂಡ

ಇಂಡೋನೇಷ್ಯಾದಲ್ಲಿ ನಡೆದ ಹದಿನೆಂಟನೇ ಏಷ್ಯಾಡ್‌ನಲ್ಲಿ ಆರಂಭಿಕ ಹಂತದಲ್ಲಿ ಮಿಂಚಿನ ಪ್ರದರ್ಶನ ನೀಡಿದರೂ, ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ವಿಫಲವಾದ ಭಾರತ ಹಾಕಿ ತಂಡ, ಇದೀಗ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಸಜ್ಜಾಗಿದೆ. ಆತಿಥೇಯ ಓಮನ್ ತಂಡದ ವಿರುದ್ಧ ಭಾರತ ತಂಡ ತನ್ನ ಅಭಿಯಾನ ಆರಂಭಿಸಲಿದ್ದು, ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.

ಜಕಾರ್ತದಲ್ಲಿ ಸ್ವರ್ಣ ಗೆಲ್ಲುವ ಫೇವರಿಟ್ ಎನಿಸಿದ್ದ ಭಾರತ ತಂಡ, ಪಿ ಆರ್ ಶ್ರೀಜೇಶ್ ಸಾರಥ್ಯದಲ್ಲಿ ಆರಂಭಿಕ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿತಾದರೂ, ಕೊನೆಗೆ ಭ್ರಮನಿರಸನಗೊಂಡಿತ್ತು. ಸೆಮಿಫೈನಲ್‌ನಲ್ಲಿ ಮಲೇಷ್ಯಾ ಎದುರು ಸೋಲನುಭವಿಸಿದ ಶ್ರೀಜೇಶ್ ಪಡೆ ಕಂಚಿನ ಪದಕಕ್ಕೆ ತೃಪ್ತವಾಗಿತ್ತು. ಪರಿಣಾಮ, ಶ್ರೀಜೇಶ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮತ್ತೆ ಮನ್‌ಪ್ರೀತ್ ಸಿಂಗ್‌ಗೆ ಸಾರಥ್ಯ ವಹಿಸಲಾಗಿದೆ. ಪ್ರಸ್ತುತ ವಿಶ್ವದ ಐದನೇ ಶ್ರೇಯಾಂಕಿತ ಭಾರತ ತಂಡ, ಸುಲ್ತಾನ್ ಕಾಬೂಸ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಓಮನ್‌ ವಿರುದ್ಧ ಬೃಹತ್ ಗೋಲುಗಳ ಅಂತರದ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ : ಏಷ್ಯಾ ಚಾಂಪಿಯನ್‌ಶಿಪ್ ಹಾಕಿ| ಮತ್ತೆ ನಾಯಕತ್ವದ ಹೊಣೆ ಮನ್‌ಪ್ರೀತ್ ಹೆಗಲಿಗೆ

೨೦೧೪ರ ಏಷ್ಯಾ ಕ್ರೀಡಾಕೂಟದಲ್ಲಿ ಇದೇ ಓಮನ್ ತಂಡವನ್ನು ಎದುರುಗೊಂಡಿದ್ದ ಭಾರತ ತಂಡ, ೭-೦ ಗೋಲುಗಳಿಂದ ಗೆಲುವು ಪಡೆದಿತ್ತು. ಈ ಬಾರಿಯ ಓಮನ್ ವಿರುದ್ಧದ ಪಂದ್ಯ ರೌಂಡ್ ರಾಬಿನ್ ಹಂತದ ಮಿಕ್ಕ ಮಹತ್ವಪೂರ್ಣ ಪಂದ್ಯಗಳ ಹಿನ್ನೆಲೆಯಲ್ಲಿ ತಂಡಕ್ಕೆ ಒಳ್ಳೆಯ ಪರೀಕ್ಷೆಯಾಗಿರಲಿದೆ ಎಂದು ಕೋಚ್ ಹರೇಂದರ್ ಸಿಂಗ್ ತಿಳಿಸಿದ್ದಾರೆ. “ಓಮನ್ ವಿರುದ್ಧದ ಪಂದ್ಯದೊಂದಿಗೆ ಟೂರ್ನಿಯನ್ನು ಆರಂಭಿಸುತ್ತಿರುವ ಕ್ಷಣ ನಮ್ಮನ್ನು ಉದ್ರೇಕಗೊಳಿಸಿದೆ. ಮಲೇಷ್ಯಾ, ಪಾಕಿಸ್ತಾನ, ಜಪಾನ್ ಮತ್ತು ದಕ್ಷಿಣ ಕೊರಿಯಾದಂಥ ಪ್ರಬಲ ರಾಷ್ಟ್ರಗಳ ಪಂದ್ಯಗಳಿಗೆ ಈ ಪಂದ್ಯ ಪೂರ್ವ ತಾಲೀಮಿನಂತಿರಲಿದೆ,’’ ಎಂದು ಹರೇಂದ್ರ ಸಿಂಗ್ ಪಂದ್ಯಾವಳಿಯ ಮುನ್ನಾ ದಿನದಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದಹಾಗೆ, ಪ್ರಸಕ್ತ ಟೂರ್ನಿಯಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ೨೦೧೬ರ ಆವೃತ್ತಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಮಲೇಷ್ಯಾದ ಕೌಂಟನ್‌ನಲ್ಲಿ ನಡೆದಿದ್ದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತ, ೩-೨ ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು. ಆದರೆ, ಹಾಲಿ ಚಾಂಪಿಯನ್ ಎಂಬ ಭ್ರಮೆಯನ್ನು ಬಿಟ್ಟು, ಏಷ್ಯಾಡ್‌ನಲ್ಲಿ ಎಸಗಿದ ಪ್ರಮಾದಗಳನ್ನು ಮತ್ತೆ ಪುನರಾವರ್ತಿಸದೆ ಹೋದರಷ್ಟೇ ಟ್ರೋಫಿ ಉಳಿಸಿಕೊಳ್ಳಲು ಸಾಧ್ಯ ಎಂದು ಹರೇಂದ್ರ ಸಿಂಗ್ ತಂಡವನ್ನು ಎಚ್ಚರಿಸಿದ್ದಾರೆ.

ಓಮನ್ ವಿರುದ್ಧದ ಪಂದ್ಯದ ಬಳಿಕ ಭಾರತ, ಪಾಕಿಸ್ತಾನ ವಿರುದ್ಧ ಅಕ್ಟೋಬರ್ ೨೦ರಂದು ಸೆಣಸಲಿದೆ. ಮರುದಿನ ಜಪಾನ್ ವಿರುದ್ಧ ಸೆಣಸಲಿರುವ ಭಾರತ, ಎರಡು ದಿನಗಳ ನಂತರ ಅಂದರೆ ಅಕ್ಟೋಬರ್ ೨೩ರಂದು ಮಲೇಷ್ಯಾ ಹಾಗೂ ಅ.೨೪ರಂದು ದಕ್ಷಿಣ ಕೊರಿಯಾವನ್ನು ಎದುರುಗೊಳ್ಳಲಿದೆ. ಕಳೆದ ಆವೃತ್ತಿಯಲ್ಲಿ ಭಾರತ, ಜಪಾನ್ ವಿರುದ್ಧ ೧೦-೨, ದಕ್ಷಿಣ ಕೊರಿಯಾ ವಿರುದ್ಧ ೧-೧, ಪಾಕಿಸ್ತಾನ ವಿರುದ್ಧ ೩-೨, ಚೀನಾ ವಿರುದ್ಧ ೯-೦ ಮತ್ತು ಮಲೇಷ್ಯಾ ವಿರುದ್ಧ ೨-೧ ಗೋಲುಗಳಿಂದ ಗುಂಪು ಹಂತದ ಪಂದ್ಯಗಳಲ್ಲಿ ಜಯಭೇರಿ ಬಾರಿಸಿತ್ತು.

ಇನ್ನು, ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ೫-೪ರಿಂದ ಭಾರತ ಮಣಿಸಿತ್ತು. ೨೦೧೧ರ ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆಗಿತ್ತಲ್ಲದೆ, ಆನಂತರ ಟ್ರೋಫಿ ಎತ್ತಿಹಿಡಿದಿದ್ದು ೨೦೧೬ರಲ್ಲಿ. ಇನ್ನುಳಿದಂತೆ, ೨೦೧೨ ಮತ್ತು ೨೦೧೩ರಲ್ಲಿ ಪಾಕಿಸ್ತಾನ ಏಷ್ಯಾ ಚಾಂಪಿಯನ್ ಆಗಿ ಮೆರೆದಾಡಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More