ಯುವ ಒಲಿಂಪಿಕ್ಸ್ | ತ್ರಿವಿಧ ಜಿಗಿತದಲ್ಲಿ ಪ್ರವೀಣ್ ಚಿತ್ರಾವೆಲ್‌ಗೆ ಕಂಚು 

ಯುವ ಒಲಿಂಪಿಕ್ಸ್ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಎರಡನೇ ಪದಕ ಗೆದ್ದಿದೆ. ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರಾವೆಲ್ ಮೂರನೇ ಸ್ಥಾನ ಗಳಿಸಿ ಕಂಚಿಗೆ ಕೊರಳೊಡ್ಡಿದರು. ದಿನದ ಹಿಂದಷ್ಟೇ ೫೦೦೦ ಮೀಟರ್ ವೇಗದ ನಡಿಗೆಯಲ್ಲಿ ಭಾರತಕ್ಕೆ ಸೂರಜ್ ಪನ್ವಾರ್ ಬೆಳ್ಳಿ ಪದಕ ತಂದಿತ್ತಿದ್ದರು

ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಮಂಗಳವಾರ (ಅ.೧೬) ತಡರಾತ್ರಿ ನಡೆದ ಪುರುಷರ ಟ್ರಿಪಲ್ ಜಂಪ್ ವಿಭಾಗದಲ್ಲಿ ಕ್ಯೂಬಾದ ಅಲೆಜಾಂಡ್ರೊ ಡಯಾಜ್ (೧೭.೧೪ ಮೀಟರ್ ಮತ್ತು ೧೭.೦೪ ಮೀಟರ್) ಮೊದಲಿಗರಾಗಿ ಚಿನ್ನ ಗೆದ್ದರು. ನೈಜೀರಿಯಾದ ಇಮ್ಮಾನುವೆಲ್ ಒರಿಟ್ಸೆಮೆಯಿವಾ (೧೬.೩೪ ಮೀಟರ್ ಮತ್ತು ೧೫.೫೧ ಮೀಟರ್) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದರು.

೧೬ರ ಹರೆಯದ ಪ್ರವೀಣ್, ಜಿಗಿತದ ನಾಲ್ಕನೇ ಯತ್ನದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರು. ಈ ನಾಲ್ಕನೇ ಯತ್ನದಲ್ಲಿ ೧೫.೬೮ ಮೀಟರ್ ಜಿಗಿದ ಪ್ರವೀಣ್, ಇದಕ್ಕೂ ಮುನ್ನ ೧೫.೮೪ ಮೀಟರ್ ಸಾಧನೆ ತೋರಿದ್ದರು. ಒಟ್ಟಾರೆ, ೩೧.೫೨ ಮೀಟರ್ ಸಾಧನೆಯೊಂದಿಗೆ ಮೂರನೇ ಸ್ಥಾನ ಗಳಿಸಿದರು.

ಪ್ರವೀಣ್ ಪಡೆದ ಈ ಕಂಚಿನ ಪದಕದೊಂದಿಗೆ ಭಾರತ ಅಥ್ಲೆಟಿಕ್ಸ್‌ನಲ್ಲಿ ಎರಡನೇ ಪದಕವನ್ನು ಜಯಿಸಿತು. ಸೂರಜ್ ಪನ್ವಾರ್ ಸೋಮವಾರ (ಅ.೧೫) ಪುರುಷರ ೫೦೦೦ ಮೀಟರ್ ವೇಗದ ನಡಿಗೆಯಲ್ಲಿ ಬೆಳ್ಳಿ ಪದಕ ಜಯಿಸಿದರು. ಇಲ್ಲೀವರೆಗೆ ಕೂಟದಲ್ಲಿ ಭಾರತ ೧೨ ಪದಕಗಳನ್ನು ಜಯಿಸಿದಂತಾಗಿದೆ. ಪ್ರಸ್ತುತ ಕೂಟದಲ್ಲಿ ಭಾರತ ಗೆದ್ದ ಮೊಟ್ಟಮೊದಲ ಕಂಚಿನ ಪದಕಕ್ಕೆ ಪ್ರವೀಣ್ ಮುನ್ನುಡಿಯಾದರು.

ಸ್ವರ್ಣ ಸಾಧಕರು

ಮೂರು ಸ್ವರ್ಣ, ೮ ಬೆಳ್ಳಿ ಹಾಗೂ ೧ ಕಂಚಿನ ಪದಕಗಳನ್ನು ಗೆದ್ದುಕೊಂಡಿರುವ ಭಾರತ ಪದಕ ಪಟ್ಟಿಯಲ್ಲಿ ೧೨ನೇ ಸ್ಥಾನದಲ್ಲಿದೆ. ಕೂಟದಲ್ಲಿ ಪ್ರಭುತ್ವ ಮೆರೆದಿರುವ ರಷ್ಯಾ ೨೫ ಸ್ವರ್ಣ, ೧೫ ಬೆಳ್ಳಿ ಹಾಗೂ ೧೨ ಕಂಚು ಸೇರಿದ ಒಟ್ಟು ೫೨ ಪದಕಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ. ಅಂದಹಾಗೆ, ಪುರುಷರ ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಸೌರಭ್ ಚೌಧರಿ, ಪುರುಷರ ೬೨ ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಜೆರೆಮಿ ಲಾಲ್ರಿನ್ನುಂಗಾ ಹಾಗೂ ವನಿತೆಯರ ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಮನು ಭಾಕರ್ ಚಿನ್ನ ಗೆದ್ದ ಸಾಧನೆ ಮಾಡಿದರು.

ರಜತ ಪದಕ ಪಡೆದವರು

ಇತ್ತ, ವನಿತೆಯರ ಹಾಗೂ ಪುರುಷರ ಎರಡೂ ವಿಭಾಗದಲ್ಲಿ ಭಾರತ ಬೆಳ್ಳಿ ಗೆದ್ದರೆ, ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್‌) ಮೆಹುಲ್ ಘೋಷ್ (ವನಿತೆಯರ ೧೦ ಏರ್ ರೈಫಲ್ ಶೂಟಿಂಗ್), ಸಾಹು ತುಷಾರ್ ಮಾನೆ (ಪುರುಷರ ೧೦ ಮೀಟರ್ ಏರ್ ರೈಫಲ್) ಸಿಮ್ರನ್ (ವನಿತೆಯರ ೪೩ ಕೆಜಿ ಫ್ರೀಸ್ಟೈಲ್), ಸೂರಜ್ ಪನ್ವಾರ್ (ಪುರುಷರ ೫೦೦೦ ಮೀಟರ್ ವೇಗದ ನಡಿಗೆ) ಹಾಗೂ ತಬಾಬಿ ದೇವಿ (ವನಿತೆಯರ ೪೪ ಕೆಜಿ ವಿಭಾಗದ ಜೂಡೋ) ಕೂಟದಲ್ಲಿ ಬೆಳ್ಳಿ ಪದಕ ಗೆದ್ದವರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More