ಡೆನ್ಮಾರ್ಕ್ ಓಪನ್ | ಲಿನ್ ಡಾನ್ ಪರೀಕ್ಷೆಗೆ ಸಜ್ಜಾದ ಕಿಡಾಂಬಿ ಶ್ರೀಕಾಂತ್

ವಿಶ್ವದ ಮಾಜಿ ನಂ ೧ ಬ್ಯಾಡ್ಮಿಂಟನ್ ಆಟಗಾರ ಕಿಡಾಂಬಿ ಶ್ರೀಕಾಂತ್, ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಠಿಣ ಪರೀಕ್ಷೆಗೆ ಸಜ್ಜಾಗಿದ್ದಾರೆ. ಒಲಿಂಪಿಕ್ ಪದಕ ವಿಜೇತ ಲಿನ್ ಡಾನ್ ಎದುರಿನ ಹಣಾಹಣಿಗೆ ಶ್ರೀಕಾಂತ್ ಅಣಿಯಾಗಿದ್ದು, ಈ ಋತುವಿನಲ್ಲಿ ಮತ್ತೊಂದು ಪರೀಕ್ಷೆ ಎದುರಾಗಿದೆ

ವಿಶ್ವದ ಆರನೇ ಶ್ರೇಯಾಂಕಿತ ಕಿಡಾಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದು, ಇದೀಗ ಕಠಿಣ ಪರೀಕ್ಷೆಗೆ ಗುರಿಯಾಗಿದ್ದಾರೆ. ಟೂರ್ನಿಯ ಆರಂಭಿಕ ದಿನವಾದ ಮಂಗಳವಾರ (ಅ.೧೬) ಹ್ಯಾನ್ಸ್ ಕ್ರಿಸ್ಷಿಯನ್ ಸೋಲ್ಬರ್ಗ್ ವಿಟಿಂಗಸ್ ವಿರುದ್ಧ ನಿರಾಯಾಸ ಗೆಲುವು ಪಡೆದ ಕಿಡಾಂಬಿ, ಗುರುವಾರ (ಅ.೧೮) ನಡೆಯಲಿರುವ ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಅಪಾಯಕಾರಿ ಆಟಗಾರ ಲಿನ್ ಡಾನ್ ಅವರನ್ನು ಎದುರುಗೊಳ್ಳುತ್ತಿದ್ದಾರೆ.

೭,೭೫,೦೦೦ ಡಾಲರ್ ಬಹುಮಾನ ಮೊತ್ತದ ಪ್ರಸ್ತುತ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸ್ಥಳೀಯ ಆಟಗಾರ ವಿಟಿಂಗಸ್ ಎದುರು ೨೧-೧೬, ೨೧-೧೦ರ ಎರಡು ನೇರ ಹಾಗೂ ಸುಲಭ ಗೇಮ್‌ಗಳಲ್ಲಿ ಕಿಡಾಂಬಿ ಜಯಭೇರಿ ಬಾರಿಸಿದರು. ಚೀನಿ ಆಟಗಾರ ಲಿನ್ ಡಾನ್ ಎದುರಿನ ಒಟ್ಟಾರೆ ನಾಲ್ಕು ಮುಖಾಮುಖಿಯಲ್ಲಿ ಶ್ರೀಕಾಂತ್ ಮೂರರಲ್ಲಿ ಸೋತಿದ್ದಾರೆ. ಪ್ರಸ್ತುತ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಲಿನ್ ಡಾನ್ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರೂ, ಅಪಾರ ಅನುಭವಿಯಾಗಿರುವ ಅವರು ಅಪಾಯಕಾರಿಯೇ.

೨೦೧೪ರ ಚೀನಾ ಓಪನ್‌ ಪಂದ್ಯಾವಳಿಯಲ್ಲಿ ಇದೇ ಲಿನ್ ಡಾನ್ ಎದುರು ಶ್ರೀಕಾಂತ್ ಅಮೋಘ ಗೆಲುವು ಸಾಧಿಸಿದ್ದರು. ಆದರೆ, ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೀಕಾಂತ್ ಎದುರು ಲಿನ್ ಡಾನ್ ವಿಜೃಂಭಿಸಿ ಭಾರತೀಯ ಆಟಗಾರನ ಒಲಿಂಪಿಕ್ಸ್ ಪದಕ ಕನಸಿಗೆ ಕೊಳ್ಳಿ ಇಟ್ಟಿದ್ದರು. ಒಂದೊಮ್ಮೆ ಲಿನ್ ಡಾನ್ ವಿರುದ್ಧ ಶ್ರೀಕಾಂತ್ ಗೆಲುವು ಸಾಧಿಸಿದ್ದೇ ಆದಲ್ಲಿ ಹಾಗೂ ಇನ್ನೊಂದು ಪಂದ್ಯದಲ್ಲಿ ಭಾರತದವರೇ ಆದ ಸಮೀರ್ ವರ್ಮಾ ಏಷ್ಯಾ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಜೊನಾಥನ್ ಕ್ರಿಸ್ಟಿಯನ್ನು ಮಣಿಸಿದ್ದೇ ಆದಲ್ಲಿ, ಪ್ರಸ್ತುತ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಕಾದಾಡಲು ವೇದಿಕೆ ಸೃಷ್ಟಿಯಾಗಲಿದೆ.

ಇದನ್ನೂ ಓದಿ : ಶ್ರೀಕಾಂತ್ ಐತಿಹಾಸಿಕ ಸಾಧನೆಯೊಂದಿಗೆ ಮತ್ತೆ ಮಿಂಚಿದ ಭಾರತದ ಶಟ್ಲರ್‌ಗಳು

ಅಂದಹಾಗೆ, ವನಿತೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್ ಸಿಕಿ ರೆಡ್ಡಿ ಜೋಡಿ ದ್ವಿತೀಯ ಸುತ್ತಿಗೆ ಧಾವಿಸುವಲ್ಲಿ ಸಫಲವಾಯಿತು. ಅಮೆರಿಕದ ಏರಿಲ್ ಲೀ ಹಾಗೂ ಸಿಡ್ನಿ ಲೀ ಎದುರು ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ೨೧-೭, ೨೧-೧೧ರ ಎರಡು ನೇರ ಗೇಮ್‌ಗಳಲ್ಲಿ ಭಾರತೀಯ ಜೋಡಿ ಜಯ ಪಡೆಯಿತು. ಆದರೆ, ಮೇಘಣ್ಣ ಜಕ್ಕಂಪುಡಿ ಹಾಗೂ ಎಸ್ ರಾಮ್ ಪೂರ್ವಿಷಾ ಜೋಡಿ ಸ್ವೀಡನ್‌ನ ಎಮ್ಮಾ ಕರಿಸನ್ ಮತ್ತು ಜೊಹಾನ್ನ ಮ್ಯಾಗ್ನುಸನ್ ವಿರುದ್ಧ ೧೭-೨೧, ೧೧-೨೧ರಿಂದ ಸೋಲನುಭವಿಸಿ ಹೊರಬಿದ್ದಿತು.

ಅಂದಹಾಗೆ, ಪ್ರಸ್ತುತ ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಮೊದಲ ಸುತ್ತಲ್ಲೇ ಸೋತು ನಿರ್ಗಮಿಸಿದ್ದು, ಸೈನಾ ನೆಹ್ವಾಲ್ ಮೇಲೆ ಎಲ್ಲರ ಗಮನ ಹರಿದಿದೆ. ಮೊದಲ ಸುತ್ತಿನ ಕಠಿಣ ಕಾದಾಟದಲ್ಲಿ ಗೆಲುವು ಸಾಧಿಸಿ ಪ್ರೀಕ್ವಾರ್ಟರ್‌ಫೈನಲ್ ತಲುಪಿರುವ ಸೈನಾ, ಇದೀಗ ಕ್ವಾರ್ಟರ್‌ಫೈನಲ್ ಮೇಲೆ ಕಣ್ಣಿಟ್ಟಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More