ಏಷ್ಯನ್ ಚಾಂಪಿಯನ್ಸ್ ಟ್ರೋಫಿ | ಓಮನ್ ಹಣಿದ ಭಾರತಕ್ಕೆ ಈಗ ಪಾಕ್ ಗುರಿ

ಓಮನ್ ತಂಡದ ವಿರುದ್ಧ ೧೧-೦ ಗೋಲುಗಳಿಂದ ವಿಜೃಂಭಿಸಿದ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ, ಇದೀಗ ಪಾಕಿಸ್ತಾನ ವಿರುದ್ಧದ ಸವಾಲಿಗೆ ಅಣಿಯಾಗಿದೆ. ಶನಿವಾರ (ಅ.೨೦) ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಇಂಡೋ-ಪಾಕ್ ಹಣಾಹಣಿ ಕೌತುಕ ಸೃಷ್ಟಿಸಿದೆ

ಓಮನ್‌ನ ಮಸ್ಕಟ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲಲು ವಿಫಲವಾದ ಭಾರತ ತಂಡ, ಪ್ರಸಕ್ತ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡದ ವಿರುದ್ಧ ಕಾದಾಡಲು ಸರ್ವಸನ್ನದ್ಧವಾಗಿದೆ. ತಲಾ ಎರಡು ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಜಯಶಾಲಿ ಆಗಿರುವ ಭಾರತ ಮತ್ತು ಪಾಕಿಸ್ತಾನ, ಮೂರನೇ ಬಾರಿಗೆ ಏಷ್ಯನ್ ಚಾಂಪಿಯನ್ ಎಂದು ಕರೆಸಿಕೊಳ್ಳುವ ಅಪೂರ್ವ ಅವಕಾಶಕ್ಕಾಗಿ ಎದುರುನೋಡುತ್ತಿದ್ದು, ಫೇವರಿಟ್ ಎನಿಸಿರುವ ಭಾರತದ ಆಸೆಗೆ ಅಡ್ಡಗಾಲಾಗಲು ಪಾಕ್ ಹವಣಿಸುತ್ತಿದೆ.

“ಓಮನ್ ವಿರುದ್ಧದ ಈ ಗೆಲುವು ನಿರೀಕ್ಷಿತವಾಗಿದ್ದರೂ, ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಪಂದ್ಯಾವಳಿಯಲ್ಲಿನ ನಿಜ ಸವಾಲು ಎದುರಾಗಲಿದೆ,’’ ಎಂಬ ಭಾರತ ತಂಡದ ಕೋಚ್ ಹರೇಂದರ್ ಸಿಂಗ್ ಮಾತಿನಲ್ಲಿ ಪಾಕಿಸ್ತಾನ ಸೇರಿದಂತೆ ನಂತರದ ದಿನಗಳಲ್ಲಿ ಭಾರತ ತಂಡ ಎದುರಿಸಬೇಕಾದ ಜಪಾನ್, ದಕ್ಷಿಣ ಕೊರಿಯಾ ತಂಡಗಳ ಸವಾಲು ಅಡಗಿದೆ. “ಏಷ್ಯಾಡ್‌ ಸೆಮಿಫೈನಲ್‌ನಲ್ಲಿನ ಸೋಲಿನ ನಂತರದ ಕೆಲವು ದಿನಗಳು ನಮಗೆ ಸಹಜವಾಗಿರಲಿಲ್ಲ. ಪ್ರತಿಯೊಬ್ಬರ ಮನಸ್ಸಲ್ಲೂ ಏಷ್ಯಾಡ್ ವೈಫಲ್ಯವೇ ಅನುರಣಿಸುತ್ತಿತ್ತು. ಆದರೆ, ಭೂತಕಾಲದ ನಿರಾಸೆಯ ಕ್ಷಣಗಳನ್ನು ತಲೆಯಿಂದ ತೆಗೆಯುವುದು ಅನಿವಾರ್ಯವಾಗಿದೆ,’’ ಎಂದು ಹರೇಂದರ್ ತಿಳಿಸಿದರು.

ಅಂದಹಾಗೆ, ಇದೇ ಏಷ್ಯಾಡ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಭಾರತ ಚಿನ್ನದ ಪದಕವನ್ನು ಗೆಲ್ಲಲಾಗದೆ ತೀವ್ರ ನಿರಾಸೆ ಅನುಭವಿಸಿತ್ತು. ಮಲೇಷ್ಯಾ ಎದುರಿನ ಕಾದಾಟದಲ್ಲಿ ಪಿ ಆರ್ ಶ್ರೀಜೇಶ್ ಸಾರಥ್ಯದ ಭಾರತ ತಂಡ ಆಘಾತಕಾರಿ ಸೋಲನುಭವಿಸಿತಾದರೂ, ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಪಾಕಿಸ್ತಾನವನ್ನು ಮಣಿಸುವುದರೊಂದಿಗೆ ಕಂಚಿನ ಪದಕ ಜಯಿಸಿತ್ತು. ಹೀಗಾಗಿ, ಪಾಕ್ ತಂಡ ಕೂಡ ಸಹಜವಾಗಿಯೇ ಆ ಸೋಲಿನ ಬೇಗುದಿಯಲ್ಲೇ ಇದ್ದು, ಮನ್‌ಪ್ರೀತ್ ಸಿಂಗ್ ಸಾರಥ್ಯದ ಭಾರತ ತಂಡವನ್ನು ಮಣಿಸುವ ಸಂಕಲ್ಪ ತೊಟ್ಟಿದೆ.

ದಿಲ್ಪ್ರೀತ್ ಹ್ಯಾಟ್ರಿಕ್ ಗೋಲು

ಇದನ್ನೂ ಓದಿ : ಏಷ್ಯನ್ ಚಾಂಪಿಯನ್ಸ್ ಟ್ರೋಫಿ | ಓಮನ್ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆ

ಅಂದಹಾಗೆ, ಗುರುವಾರ (ಅ.೧೮) ಸುಲ್ತಾನ್ ಕಾಬೂಸ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ, ದಿಲ್ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಗೋಲಿನ ನೆರವಿನೊಂದಿಗೆ ಓಮನ್ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸಿತು. ಆತಿಥೇಯ ತಂಡದ ಅನನುಭವದ ಲಾಭ ಪಡೆದ ಭಾರತ ತಂಡ, ಗೋಲಿನ ಮೇಲೆ ಗೋಲು ದಾಖಲಿಸುವುದರೊಂದಿಗೆ ಹನ್ನೊಂದು ಗೋಲುಗಳಿಂದ ಅಮೋಘ ಗೆಲುವು ಪಡೆಯಿತು.

ಆದಾಗ್ಯೂ, ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಇತ್ತಂಡಗಳಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಎರಡನೇ ಕ್ವಾರ್ಟರ್‌ ಆರಂಭವಾದ ಎರಡೇ ನಿಮಿಷಗಳಲ್ಲಿ ಅಂದರೆ, ೧೭ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ್ ಭಾರತದ ಗೋಲಿನ ಖಾತೆ ತೆರೆದರು. ಅಲ್ಲಿಂದಾಚೆಗೆ ಹರ್ಮನ್‌ಪ್ರೀತ್ ಸಿಂಗ್ (೨೨ನೇ ನಿ.), ಶರ್ಮಾ (೨೩ನೇ ನಿ.), ಮನ್ದೀಪ್ ಸಿಂಗ್ (೩೦ನೇ ನಿ.), ಗುರ್ಜಂತ್ ಸಿಂಗ್ (೩೭ನೇ ನಿ.), ಆಕಾಶ್‌ದೀಪ್ ಸಿಂಗ್ (೪೮ನೇ ನಿ.), ಕುಮಾರ್, ಕಂಗುಜಾಮ್ (೫೩ನೇ ನಿ.) ತಲಾ ಒಂದೊಂದು ಗೋಲು ಹೊಡೆದರೆ, ದಿಲ್ಪ್ರೀತ್ ಸಿಂಗ್ (೪೧, ೫೫, ೫೭ನೇ ನಿ.) ಮೂರು ಗೋಲು ಹೊಡೆದು ಭಾರತದ ಬೊಂಬಾಟ್ ಗೆಲುವಿಗೆ ನೆರವಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More