ಭಾರತ ಪ್ರವಾಸಕ್ಕೂ ಮುನ್ನ ಕಾಂಗರೂ ಕಂಗೆಡಿಸಿದ ಪಾಕ್ ವಿರುದ್ಧದ ಸರಣಿ ಸೋಲು

ಮೊಹಮದ್ ಅಬ್ಬಾಸ್ (೧೦ ವಿಕೆಟ್) ಬಿರುದಾಳಿಗೆ ಸಿಕ್ಕ ಆಸೀಸ್, ಎರಡು ಪಂದ್ಯ ಸರಣಿಯನ್ನು ೦-೧ರಿಂದ ಕೈಚೆಲ್ಲಿದೆ. ಕಾಂಗರೂ ಪಡೆಯ ಈ ಸೋಲು ಮುಂಬರಲಿರುವ ಭಾರತ ವಿರುದ್ಧದ ಸರಣಿ ಹಿನ್ನೆಲೆಯಲ್ಲಿ ಮಹತ್ವವೆನಿಸಿದೆ. ವಿರಾಟ್ ಕೊಹ್ಲಿ ಪಡೆಗೆ ಈ ಬಾರಿಯ ಆಸೀಸ್ ಪ್ರವಾಸ ವರವಾಗುವುದೇ?

ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡಕ್ಕೆ ಈ ಬಾರಿಯ ಕಾಂಗರೂ ಪ್ರವಾಸ ವರವಾಗಿ ಪರಿಣಮಿಸುವ ಸಾಧ್ಯತೆಯನ್ನು ಶನಿವಾರವಷ್ಟೇ (ಅ.೧೯) ಮುಕ್ತಾಯ ಕಂಡ ಆಸೀಸ್-ಪಾಕ್ ನಡುವಣದ ಎರಡು ಟೆಸ್ಟ್ ಪಂದ್ಯ ಸರಣಿ ಸ್ಫುಟಪಡಿಸಿದೆ. ಮೊಹಮದ್ ಅಬ್ಬಾಸ್ (33ಕ್ಕೆ ೫) ಎರಡನೇ ಇನ್ನಿಂಗ್ಸ್‌ನಲ್ಲೂ ಕೆಡವಿದ ಐದು ವಿಕೆಟ್‌ಗಳ ಸಾಧನೆಯ ನೆರವಿನಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ ವಿರುದ್ಧ ೩೭೩ ರನ್ ಭಾರಿ ಗೆಲುವು ಸಾಧಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು ಪಾಕಿಸ್ತಾನ ೧-೦ ಅಂತರದಿಂದ ಜಯಿಸಿತು.

ಪಾಕಿಸ್ತಾನ ಎದುರಿನ ಈ ಸೋಲು ಆಸ್ಟ್ರೇಲಿಯಾವನ್ನು ದಿಗಿಲುಗೊಳಿಸಿರುವುದು ಸುಳ್ಳಲ್ಲ. ಏಕೆಂದರೆ, ಅದರ ಮುಂದಿರುವುದು ಬಲಿಷ್ಠ ಭಾರತದ ಸವಾಲು. ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಕಾಂಗರೂ ನೆಲದಲ್ಲಿ ಸರಣಿ ಗೆಲುವಿನ ಅದ್ಭುತ ಅವಕಾಶ ಭಾರತದ ಎದುರಿಗಿದ್ದು, ಇದಕ್ಕಿಂತಲೂ ಅದಕ್ಕೆ ಮತ್ತೊಂದು ಅವಕಾಶ ಸಿಗದು. ಇದಕ್ಕೆ ಪ್ರಮುಖ ಕಾರಣ ಆಸ್ಟ್ರೇಲಿಯಾ ತಂಡ ಹಿಂದೆಂದಿಗಿಂತಲೂ ತನ್ನ ಶಕ್ತಿಯನ್ನು ಕಳೆದುಕೊಂಡಿರುವುದು.

ಮೊದಲಿಗೆ, ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕೆಮರೂನ್ ಬ್ಯಾಂಕ್ರಫ್ಟ್‌ರಂಥ ಸೇವೆಯನ್ನು ಈಗಾಗಲೇ ಆಸ್ಟ್ರೇಲಿಯಾ ಕಳೆದುಕೊಂಡಿದೆ. ಇದೇ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ, ಕೇಪ್‌ಟೌನ್ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪದಂಥ ಕುಕೃತ್ಯಕ್ಕೆ ಕೈಹಾಕಿ ಈ ಮೂವರೂ ಆಟಗಾರರನ್ನು ರಾಷ್ಟ್ರೀಯ ಸೇವೆಯಿಂದ ಕಳೆದುಕೊಂಡಿದೆ. ಬ್ಯಾಂಕ್ರಫ್ಟ್ ೯ ತಿಂಗಳ ಅಮಾನತು ಶಿಕ್ಷೆಯಲ್ಲಿದ್ದರೆ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ತಲಾ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಂತೆ ಆಸ್ಟ್ರೇಲಿಯಾ ಸ್ವಯಂ ನಿರ್ಬಂಧ ಹೇರಿದೆ.

ಅಪ್ರತಿಮ ನಾಯಕ ಹಾಗೂ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಅಲಭ್ಯತೆಯು ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಶಕ್ತಿಯನ್ನು ಉಡುಗಿಸಿದೆ. ಇನ್ನು, ಉಪನಾಯಕ ಡೇವಿಡ್ ವಾರ್ನರ್ ಅಂತೂ ತಂಡದ ಬ್ಯಾಟಿಂಗ್‌ನ ಮತ್ತೊಂದು ಶಕ್ತಿಯಂತಿದ್ದರು. ಎಡಗೈ ಆಟಗಾರನ ಅಲಭ್ಯತೆ ಕೂಡ ಕಾಂಗರೂ ಪಾಲಿಗೆ ಅಸಹನೀಯ ಕ್ಷಣಗಳನ್ನು ಹುಟ್ಟುಹಾಕಿದೆ. ಒಟ್ಟಾರೆ, ಈ ಮೂವರು ಆಟಗಾರರ ಅಲಭ್ಯತೆ ಒಂದೆಡೆಯಾದರೆ, ಈ ಮಧ್ಯೆ ಉಸ್ಮಾನ್ ಖವಾಜ ಗಾಯಗೊಂಡು ಭಾರತ ಸರಣಿಗೆ ಅನುಮಾನವಾಗಿರುವುದು ಕೂಡ ಆಸ್ಟ್ರೇಲಿಯಾಗೆ ಖಂಡಿತ ಹಿನ್ನಡೆಯನ್ನು ಉಂಟುಮಾಡುವ ಸಂಭವವಿದೆ.

ಇದನ್ನೂ ಓದಿ : ಕ್ರಿಕೆಟ್ | ಭಾರತ ವಿರುದ್ಧದ ಸರಣಿಗೆ ಗಾಯಾಳು ಉಸ್ಮಾನ್ ಖವಾಜ ಅನುಮಾನ

ಸರಣಿ ಗೆದ್ದ ಸಂಭ್ರಮ

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಆಕ್ರಮಣಕಾರಿ ಆಟವಾಡಿದ ಪಾಕಿಸ್ತಾನ, ಕಾಂಗರೂ ಪಡೆಯನ್ನು ಅತ್ಯಂತ ದಯನೀಯವಾಗಿ ಮಣಿಸುವಲ್ಲಿ ಯಶಸ್ವಿಯಾಗಿದೆ. ವಾಸ್ತವವಾಗಿ, ಮೊದಲ ಪಂದ್ಯದಲ್ಲೇ ಪಾಕಿಸ್ತಾನ ಗೆಲುವು ಸಾಧಿಸಬೇಕಿತ್ತು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ಮನೋಜ್ಞ ಶತಕವು ಪಾಕಿಸ್ತಾನದ ಜಯದ ಬಯಕೆಯನ್ನು ಹೊಸಕಿಹಾಕಿತ್ತು. ಆದರೆ, ಎರಡನೇ ಪಂದ್ಯವನ್ನು ಇನ್ನೂ ಒಂದೂವರೆ ದಿನ ಬಾಕಿ ಇರುವಂತೆಯೇ ಪಾಕಿಸ್ತಾನ ವಶಕ್ಕೆ ಪಡೆದು ಅಧಿಕಾರಯುತ ಗೆಲುವು ಪಡೆಯಿತು.

ಅಬ್ಬಾಸ್ ಮಿಂಚು

ಪಾಕಿಸ್ತಾನದ ಸರಣಿ ಗೆಲುವಿನಲ್ಲಿ ಮೊಹಮದ್ ಅಬ್ಬಾಸ್ ನಿರ್ವಹಿಸಿದ ಪಾತ್ರ ದೊಡ್ಡದು. ತಂಡದ ಗೆಲುವನ್ನು ಪಂದ್ಯದ ಮೂರನೇ ದಿನದಂದೇ ಮುಂತಿಳಿಸಿದ್ದ ಅವರು, ನಾಲ್ಕನೇ ದಿನದಾಟದಂದು ಆತ್ಮವಿಶ್ವಾಸದೊಂದಿಗೆ ಬ್ಯಾಟಿಂಗ್ ನಡೆಸುತ್ತಿದ್ದ ಆಸ್ಟ್ರೇಲಿಯಾದ ಆತ್ಮವಿಶ್ವಾಸವನ್ನು ಅಬ್ಬಾಸ್ ವಿಚಲಿತಗೊಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ೩೩ ರನ್‌ಗಳಿಗೆ ೫ ವಿಕೆಟ್ ಗಳಿಸಿದ್ದ ಅಬ್ಬಾಸ್, ಮಾರಕ ದಾಳಿಯ ಜತೆಗೆ ಬಾಬರ್ ಆಜಮ್ (೯೯) ಮತ್ತು ಸರ್ಫರಾಜ್ ಅಹಮದ್ (೮೧) ಅದ್ಭುತ ಜತೆಯಾಟದಲ್ಲಿ ೫೩೮ ರನ್‌ಗಳ ಅಸಾಧ್ಯ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ, ದಿನದಾಟದ ಮಧ್ಯಾಹ್ನದ ಭೋಜನ ವಿರಾಮದ ಹೊತ್ತಿಗೇ ಸೋಲಿನತ್ತ ಮುಖ ಮಾಡಿದ್ದು ನಿಶ್ಚಿತವಾಗಿತ್ತು.

ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ೧೪೧ ರನ್ ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದ ಖವಾಜ ಗಾಯಗೊಂಡು ಮೈದಾನಕ್ಕೆ ಇಳಿಯದೆ ಹೋದದ್ದು ಕೂಡ ಆಸ್ಟ್ರೇಲಿಯಾದ ಹಿನ್ನಡೆಗೆ ಕಾರಣವಾಯಿತು. ಏರಾನ್ ಫಿಂಚ್ (೩೧), ಟ್ರಾವಿಸ್ ಹೆಡ್ (೩೬), ಮಾರ್ನುಸ್ (೪೩) ಮತ್ತು ಮಿಚೆಲ್ ಸ್ಟಾರ್ಕ್ (೨೮) ಬಿಟ್ಟರೆ ಮಿಕ್ಕವರು ಎರಡಂಕಿ ದಾಟಲಿಲ್ಲ. ಕ್ರೀಸ್‌ಗೆ ಕಚ್ಚಿನಿಂತಿದ್ದ ಫಿಂಚ್, ಹೆಡ್, ಮಾರ್ನುಸ್ ಮಾತ್ರವಲ್ಲದೆ, ಮಿಚೆಲ್ ಮಾರ್ಶ್ (೫) ವಿಕೆಟ್ ಪಡೆದ ಮೊಹಮದ್ ಅಬ್ಬಾಸ್ ಕಾಂಗರೂ ಚೇತರಿಸಿಕೊಳ್ಳಲಾರದಂತೆ ಮಾಡಿದರು. ಪರಿಣಾಮ ೪೯.೪ ಓವರ್‌ಗಳಲ್ಲಿ ೧೬೪ ರನ್‌ಗಳಿಗೆ ಆಸೀಸ್ ತನ್ನ ಎರಡನೇ ಇನ್ನಿಂಗ್ಸ್ ಹೋರಾಟ ಮುಗಿಸಿತು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ: ೨೮೨ ಮತ್ತು ೪೦೦/೯ (ಫಕಾರ್ ಜಮಾನ್ ೬೬, ಅಜರ್ ಅಲಿ ೬೪, ಬಾಬರ್ ಆಜಮ್ ೯೯, ಸರ್ಫರಾಜ್ ಅಹಮದ್ ೮೧; ನಾಥನ್ ಲಿಯೋನ್ ೧೩೫ಕ್ಕೆ ೪); ಆಸ್ಟ್ರೇಲಿಯಾ: ೧೪೫ ಮತ್ತು ೧೬೪/೯ (ಟ್ರಾವಿಸ್ ಹೆಡ್ ೩೬, ಮಾರ್ನುಸ್ ೪೩; ಮೊಹಮದ್ ಅಬ್ಬಾಸ್ ೬೨ಕ್ಕೆ ೫); ಪಂದ್ಯ ಹಾಗೂ ಸರಣಿಶ್ರೇಷ್ಠ: ಮೊಹಮದ್ ಅಬ್ಬಾಸ್; ಫಲಿತಾಂಶ: ಪಾಕಿಸ್ತಾನಕ್ಕೆ ೩೭೩ ರನ್ ಗೆಲುವು ಮತ್ತು ಎರಡು ಪಂದ್ಯ ಸರಣಿ ೧-೦ಯಿಂದ ಕೈವಶ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More