ಯಮಗುಚಿ, ಡಾನ್ ಸವಾಲು ಮೀರಿದ ಸೈನಾ-ಕಿಡಾಂಬಿ ಶ್ರೀಕಾಂತ್ ಕ್ವಾರ್ಟರ್‌ಗೆ

ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಜಪಾನ್ ಆಟಗಾರ್ತಿ ಹಾಗೂ ವಿಶ್ವದ ಎರಡನೇ ಶ್ರೇಯಾಂಕಿತೆ ಅಕಾನಿ ಯಮಗುಚಿ ವಿರುದ್ಧ ಸೈನಾ ೨೧-೧೫, ೨೧-೧೭ರ ನೇರ ಗೇಮ್‌ಗಳ ಗೆಲುವಿನೊಂದಿಗೆ ಎಂಟರ ಘಟ್ಟಕ್ಕೇರಿದರು

ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿ ಹೊರನಡೆದ ನಂತರ ಭಾರತದ ಸವಾಲನ್ನು ಮುಂದುವರೆಸಿರುವ ಸೈನಾ ನೆಹ್ವಾಲ್, ಅಪಾಯಕಾರಿ ಆಟಗಾರ್ತಿ ಅಕಾನಿ ಯಮಗುಚಿಯನ್ನು ನೇರ ಗೇಮ್‌ಗಳಲ್ಲೇ ಹಣಿದು ಮುಂದಿನ ಹಂತಕ್ಕೆ ಧಾವಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಜಪಾನ್ ಆಟಗಾರ್ತಿಯ ಎದುರು ಸೈನಾ ಸಾಧಿಸಿದ ಮೊದಲ ಗೆಲುವಿದು ಎಂಬುದು ಗಮನಾರ್ಹ.

ಜಪಾನ್ ಆಟಗಾರ್ತಿಯನ್ನು ಸೈನಾ ಕಡೆಯ ಬಾರಿಗೆ ಮಣಿಸಿದ್ದು ಚೀನಾ ಓಪನ್‌ನಲ್ಲಿ. ೨೦೧೪ರ ಚೀನಾ ಓಪನ್ ಪಂದ್ಯಾವಳಿಯಲ್ಲಿ ಯಮಗುಚಿಯನ್ನು ಮಣಿಸಿದ್ದ ಸೈನಾ, ಆನಂತರದಲ್ಲಿ ಎದುರಾದ ಪ್ರತೀ ಪಂದ್ಯಗಳಲ್ಲಿಯೂ ಅಕಾನಿ ಯಮಗುಚಿಯನ್ನು ಮಣಿಸುವಲ್ಲಿ ಸೈನಾ ವಿಫಲವಾಗಿದ್ದರು. ಇನ್ನು, ಪ್ರಸಕ್ತ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ಹಾಗೂ ವನಿತೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕಿ ರೆಡ್ಡಿ ಜೋಡಿ ಕೂಡ ಜಯದ ಓಟ ಮುಂದುವರೆಸಿದೆ.

ಮೊದಲ ಸುತ್ತಿನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರನಿಗೆ ಆಘಾತ ನೀಡಿದ್ದ ಸಮೀರ್ ವರ್ಮಾ, ಈ ಬಾರಿಯ ಏಷ್ಯಾಡ್ ಚಾಂಪಿಯನ್ ಜೊನಾಥನ್ ಕ್ರಿಸ್ಟಿ ವಿರುದ್ಧ ಕಠಿಣ ಹೋರಾಟ ನಡೆಸಿ ೨೩-೨೧, ೬-೨೧, ೨೨-೨೦ರಿಂದ ಗೆದ್ದು ಎಂಟರ ಘಟ್ಟಕ್ಕೆ ಧಾವಿಸುವಲ್ಲಿ ಸಫಲವಾದರು. ಇದೀಗ ಮುಂದಿನ ಸುತ್ತಿನಲ್ಲಿ ಅವರು ಚೀನಿ ಆಟಗಾರ ತಮ್ಮ ದೇಶದವರೇ ಆದ ಕಿಡಾಂಬಿ ಶ್ರೀಕಾಂತ್ ವಿರುದ್ಧ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಲಿನ್ ಡಾನ್ ವಿರುದ್ಧ ಕಿಡಾಂಬಿ ಶ್ರೀಕಾಂತ್ ರೋಚಕ ಗೆಲುವು ಸಾಧಿಸಿದರು

ಇದನ್ನೂ ಓದಿ : ಡೆನ್ಮಾರ್ಕ್ ಓಪನ್ | ಲಿನ್ ಡಾನ್ ಪರೀಕ್ಷೆಗೆ ಸಜ್ಜಾದ ಕಿಡಾಂಬಿ ಶ್ರೀಕಾಂತ್

ಶ್ರೇಯಾಂಕರಹಿತ ಜೋಡಿಯಾದ ಅಶ್ವಿನಿ ಪೊನ್ನಪ್ಪ ಹಾಗೂ ಎನ್ ಸಿಕಿ ರೆಡ್ಡಿ ಜೋಡಿ ಏಳನೇ ಶ್ರೇಯಾಂಕಿತ ಜೋಡಿ ದಕ್ಷಿಣ ಕೊರಿಯಾದ ಲೀ ಸೊ ಹೀ ಮತ್ತು ಶಿಂಗ್ ಸೆಯುಂಗ್ ಚಾನ್ ಜೋಡಿಯನ್ನು ೧೮-೨೧, ೨೨-೨೦, ೨೧-೧೮ರ ಮೂರು ಗೇಮ್‌ಗಳ ಆಟದಲ್ಲಿ ಮಣಿಸಿ ಅಂತಿಮ ಎಂಟರ ಹಂತಕ್ಕೆ ದಾಪುಗಾಲಿಟ್ಟಿತು. ಮೊದಲ ಗೇಮ್‌ನಲ್ಲಿ ಕೇವಲ ಮೂರು ಪಾಯಿಂಟ್ಸ್‌ಗಳಿಂದ ಹಿನ್ನಡೆ ಅನುಭವಿಸಿದ ಅಶ್ವಿನಿ-ಸಿಕಿ ರೆಡ್ಡಿ ಜೋಡಿ ಎರಡನೇ ಗೇಮ್‌ನಲ್ಲಿ ಪ್ರಬಲ ಪೈಪೋಟಿ ನೀಡಿದ ದಕ್ಷಿಣ ಕೊರಿಯಾ ಜೋಡಿಯನ್ನು ಹಣಿದು ೧-೧ ಸಮಬಲ ಸಾಧಿಸಿತು. ಇನ್ನು, ನಿರ್ಣಾಯಕ ಗೇಮ್‌ನಲ್ಲಂತೂ ಮತ್ತೊಮ್ಮೆ ಭಾರತೀಯ ಜೋಡಿ ಅಮೋಘ ಆಟದೊಂದಿಗೆ ಜಯಭೇರಿ ಬಾರಿಸಿ ಮುಂದಿನ ಹಂತಕ್ಕೆ ಧಾವಿಸಿತು.

ಇದಕ್ಕೂ ಮುನ್ನ ನಡೆದ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಸೈನಾ ಕೇವಲ ೩೬ ನಿಮಿಷಗಳಲ್ಲೇ ಯಮಗುಚಿ ಸವಾಲನ್ನು ಮೆಟ್ಟಿನಿಂತರು. ೨೦೧೪ರ ನವೆಂಬರ್‌ನಲ್ಲಿ ಚೀನಾ ಓಪನ್ ನಂತರ ಸತತ ಆರು ಮುಖಾಮುಖಿಗಳಲ್ಲಿ ಸೈನಾ ಎದುರು ವಿಜೃಂಭಿಸಿದ್ದ ಯಮಗುಚಿ ಏಳನೇ ಗೆಲುವಿನ ಕನಸಿನಲ್ಲಿದ್ದರು. ಆದರೆ, ಗುರುವಾರ (ಅ.೧೮) ನಡೆದ ಪಂದ್ಯದಲ್ಲಿ ಸೈನಾ ಆರ್ಭಟದ ಎದುರು ನಿಲ್ಲಲಾಗದ ಯಮಗುಚಿ, ಟೂರ್ನಿಯಿಂದ ಹೊರಬಿದ್ದರು. ಮುಂದಿನ ಪಂದ್ಯದಲ್ಲಿ ಸೈನಾ ಮತ್ತೋರ್ವ ಜಪಾನ್ ಆಟಗಾರ್ತಿ ನೊಜೊಮಿ ಒಕುಹಾರ ವಿರುದ್ಧ ಸೆಣಸಲಿದ್ದಾರೆ.

ಕಿಡಾಂಬಿಗೆ ಭರ್ಜರಿ ಗೆಲುವು

ಇತ್ತ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿಡಾಂಬಿ ಶ್ರೀಕಾಂತ್ ಚೀನಿ ಆಟಗಾರ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್‌ಗೆ ಆಘಾತ ಮೂಡಿಸಿದರು. ನಿರ್ಣಾಯಕ ಘಟ್ಟದಲ್ಲಿ ಎದುರಾದ ಒತ್ತಡವನ್ನು ಮೆಟ್ಟಿನಿಂತ ಶ್ರೀಕಾಂತ್, 18-21, 21-17, 21-16ರಿಂದ ಗೆಲುವು ಪಡೆದರು. ನಿರೀಕ್ಷೆಯಂತೆಯೇ ಮೊದಲ ಗೇಮ್‌ನಲ್ಲಿ ಲಿನ್ ಡಾನ್, ಶ್ರೀಕಾಂತ್‌ಗೆ ಆಘಾತ ನೀಡಿದರು. ಆದಾಗ್ಯೂ, ಮೊದಲ ಗೇಮ್‌ನಲ್ಲೇನೂ ಶ್ರೀಕಾಂತ್ ಕಳಪೆ ಆಟವಾಡಿರಲಿಲ್ಲ. ಆದರೆ, ಈ ಸೋಲಿನಿಂದ ಧೃತಿಗೆಡದ ಶ್ರೀಕಾಂತ್, ಎರಡು ಮತ್ತು ಮೂರನೇ ಗೇಮ್‌ಗಳಲ್ಲಿ ಪ್ರಬಲ ಹೋರಾಟ ನಡೆಸಿ ಲಿನ್ ಡಾನ್‌ ಜಯದ ಓಟಕ್ಕೆ ತಡೆಹಾಕಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More