ಕ್ರಿಕೆಟ್ | ಭಾರತ ವಿರುದ್ಧದ ಸರಣಿಗೆ ಗಾಯಾಳು ಉಸ್ಮಾನ್ ಖವಾಜ ಅನುಮಾನ

ಭಾರತದ ವಿರುದ್ಧದ ಮಹತ್ವದ ಸರಣಿಗೆ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ಅಲಭ್ಯವಾಗುವ ಸಾಧ್ಯತೆ ಇದೆ. ದುಬೈನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅವರು ಗಾಯಗೊಂಡರು. ಏತನ್ಮಧ್ಯೆ, ಕಾಂಗರೂ ವಿರುದ್ಧದ ಸರಣಿ ಗೆಲುವಿನತ್ತ ಪಾಕಿಸ್ತಾನ ದಾಪುಗಾಲಿಟ್ಟಿದೆ

ದಕ್ಷಿಣ ಆಫ್ರಿಕಾ ವಿರುದ್ಧದ ಚೆಂಡು ವಿರೂಪ ಪ್ರಕರಣದಲ್ಲಿ ಅಮಾನತುಗೊಂಡಿರುವ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕೆಮರೂನ್ ಬ್ಯಾಂಕ್ರಫ್ಟ್‌ರಂಥವರ ಸೇವೆಯಿಂದ ವಂಚಿತವಾಗಿರುವ ಆಸ್ಟ್ರೇಲಿಯಾಗೆ ಇದೀಗ ಉಸ್ಮಾನ್ ಖವಾಜ ಸೇವೆ ಕೂಡ ಅಲಭ್ಯವಾಗುವ ಸಮಾಚಾರ ಅಪ್ರಿಯವಾಗಿದೆ. ಅಬುಧಾಬಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದು, ಗಾಯ ಗಂಭೀರ ಸ್ವರೂಪದ್ದಾಗಿರುವ ಕಾರಣ ಅವರಿಗೆ ವಿಶ್ರಾಂತಿ ಅಗತ್ಯವಿರುವ ಹಿನ್ನೆಲೆಯಲ್ಲಿ ಭಾರತ ಸರಣಿಯಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗಿದೆ.

ಗುರುವಾರ (ಅ.೧೮) ಇಡೀ ದಿನ ಖವಾಜ ಮೈದಾನದಿಂದ ಆಚೆಯೇ ಉಳಿದರು. ದಿನಾಂತ್ಯಕ್ಕೆ ಪಾಕಿಸ್ತಾನ ೪೮೭ ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಎಡ ಮೊಣಕಾಲಿಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಖವಾಜ, ಶುಕ್ರವಾರ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿಯಲಿಲ್ಲ. ಅಗತ್ಯಬಿದ್ದರೆ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಟೀಂ ಆಸ್ಟ್ರೇಲಿಯಾ ಮ್ಯಾನೇಜ್‌ಮೆಂಟ್ ಹೇಳಿತ್ತಾದರೂ, ಖವಾಜ ಸ್ಥಿತಿ ಬ್ಯಾಟಿಂಗ್‌ ಮಾಡುವಷ್ಟು ಶಕ್ತವಾಗಿರಲಿಲ್ಲ. ಹೀಗಾಗಿ, ಖವಾಜ ಬದಲಿಗೆ ಏರಾನ್ ಫಿಂಚ್ ಜತೆಗೆ ಶಾನ್ ಮಾರ್ಶ್ ಕಣಕ್ಕಿಳಿದಿದ್ದರಾದರೂ, ಅವರು ಮೂರನೇ ದಿನಾಂತ್ಯಕ್ಕೇ ವಿಕೆಟ್ ಕಳೆದುಕೊಂಡಿದ್ದರು.

೩೧ರ ಹರೆಯದ ಖವಾಜ, ಮೊದಲ ಟೆಸ್ಟ್ ಪಂದ್ಯದಲ್ಲಿ ೧೪೧ ರನ್‌ಗಳಿದ್ದ ಭರ್ಜರಿ ಶತಕ ದಾಖಲಿಸಿ ತಂಡದ ಸೋಲನ್ನು ತಪ್ಪಿಸಿದ್ದರು. “ಎಡಗೈ ಬ್ಯಾಟ್ಸ್‌ಮನ್ ಖವಾಜಗೆ ತಗಲಿರುವ ಗಾಯ ಗಂಭೀರ ಸ್ವರೂಪದ್ದಾಗಿರುವ ಕಾರಣ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಸಂಜೆ ನಡೆದ ಸ್ಕ್ಯಾನಿಂಗ್ ವರದಿಯಲ್ಲಿ ಇದು ಖಚಿತವಾಗಿದೆ,’’ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಭಾರತ-ಆಸ್ಟ್ರೇಲಿಯಾ ನಡುವೆ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಇಲ್ಲ

ಏತನ್ಮಧ್ಯೆ, ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮದ್ ಕೂಡ ಈ ಪಂದ್ಯದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಪೀಟರ್ ಸಿಡ್ಲ್ ಬೌನ್ಸರ್‌ ಅಹಮದ್‌ ಹೆಲ್ಮೆಟ್‌ಗೆ ಬಡಿದು ಅವರು ಅಸ್ವಸ್ಥರಾದರು. ಒಡನೆಯೇ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತು. ಸದ್ಯ, ಅವರು ಚೇತರಿಸಿಕೊಂಡಿದ್ದು, ಅಸದ್ ಶಫೀಕ್ ಪಂದ್ಯದ ಸಾರಥ್ಯ ಹೊತ್ತರೆ, ಮೊಹಮದ್ ರಿಜ್ವಾನ್ ಕೀಪಿಂಗ್ ಕಾಯಕ ನಿರ್ವಹಿಸಿದರು.

ಗೆಲುವಿನತ್ತ ಪಾಕ್

ಅಂದಹಾಗೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ ದಾಖಲಿಸಿದ ಅದ್ಭುತ ಶತಕದಿಂದ ಗೆಲುವು ಸಾಧಿಸಲಾಗದ ಪಾಕ್, ಎರಡನೇ ಪಂದ್ಯದಲ್ಲಿ ಜಯದತ್ತ ದಾಪುಗಾಲಿಟ್ಟಿತ್ತು. ಮಧ್ಯಾಹ್ನದ ಭೋಜನ ವಿರಾಮದ ಹೊತ್ತಿಗೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ೧೫೫ ರನ್‌ಗೆ ೭ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ, ಇನ್ನೂ ೩೮೩ ರನ್ ಗಳಿಸಬೇಕಾದ ಅಸಾಧ್ಯ ಸ್ಥಿತಿಯಲ್ಲಿತ್ತು. ಈ ಮಧ್ಯೆ, ಭೋಜನ ವಿರಾಮದ ನಂತರದಲ್ಲಿ ಮತ್ತೊಮ್ಮೆ ಮೊಹಮದ್ ಅಬ್ಬಾಸ್ (೫೬ಕ್ಕೆ ೫) ನಡೆಸಿದ ದಾಳಿಗೆ ಮಾರ್ನುಸ್ ಲಬುಚಾಂಗೆ (೪೩) ಪೆವಿಲಿಯನ್ ದಾರಿ ತುಳಿದರು. ೪೮ ಓವರ್‌ಗಳಾದಾಗ ೮ ವಿಕೆಟ್‌ಗೆ ೧೫೮ ರನ್ ಮಾಡಿದ್ದ ಆಸ್ಟ್ರೇಲಿಯಾ, ಸೋಲಿನತ್ತ ಸಾಗಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More