ಇಂಡೋ-ಕೆರಿಬಿಯನ್ ಏಕದಿನ ಸರಣಿ | ಶುಭಾರಂಭದ ತವಕದಲ್ಲಿ ಕೊಹ್ಲಿ-ಹೋಲ್ಡರ್ ಪಡೆ

ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ೨-೦ಯಿಂದ ಕ್ಲೀನ್‌ಸ್ವೀಪ್ ಮಾಡಿದ ಭಾರತ, ಇದೀಗ ಏಕದಿನ ಸರಣಿ ಮೇಲೆ ಕಣ್ಣಿಟ್ಟಿದೆ. ಐದು ಪಂದ್ಯಗಳ ಸರಣಿಗೆ ಗೌಹಾತಿಯಲ್ಲಿ ಭಾನುವಾರದ (ಅ.೨೧) ಮೊದಲ ಪಂದ್ಯದೊಂದಿಗೆ ಚಾಲನೆ ಸಿಗಲಿದ್ದು, ಇತ್ತಂಡಗಳೂ ಶುಭಾರಂಭದ ಗುರಿ ಹೊತ್ತಿವೆ

ಟೆಸ್ಟ್ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮಾಡಿದ ಭಾರತ ತಂಡದ ಸದ್ಯದ ಗುರಿ ಏಕದಿನ ಸರಣಿ ಮೇಲೆ ನಾಟಿದೆ. ಆದರೆ, ಟೆಸ್ಟ್‌ಗೂ ಸೀಮಿತ ಓವರ್‌ಗಳ ಪಂದ್ಯಗಳಿಗೂ ಅದರದೇ ಆದ ವ್ಯತ್ಯಾಸಗಳಿದ್ದು, ಕೆರಿಬಿಯನ್ನರು ಸೀಮಿತ ಓವರ್‌ಗಳ ಸರಣಿಯಲ್ಲಿ ತಿರುಗಿಬೀಳಲು ಯೋಜನೆ ಸಿದ್ಧಗೊಳಿಸಿದೆ. ಇತ್ತ, ಏಷ್ಯಾ ಕಪ್ ಪಂದ್ಯಾವಳಿಯಿಂದ ವಿಶ್ರಾಂತಿ ಪಡೆದ ನಂತರದ ಮೊಟ್ಟಮೊದಲ ಏಕದಿನ ಸರಣಿಯಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿಗೆ ಕೆರಿಬಿಯನ್ನರ ಈ ಸರಣಿ ಮಹತ್ವವಾಗಿದ್ದು, ಜೇಸನ್ ಹೋಲ್ಡರ್ ವಿರುದ್ಧದ ಅವರ ಹೋರಾಟ ಕೌತುಕ ಕೆರಳಿಸಿದೆ.

ಇತ್ತಂಡಗಳೂ ಈ ಸರಣಿಗೂ ಮುನ್ನ ಗೆಲುವಿನ ಸವಿ ಕಂಡಿರುವುದು ವಿಶೇಷ. ಕೆರಿಬಿಯನ್ನರು ತಮ್ಮ ಕಡೆಯ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ೩-೦ ಅಂತರದಿಂದ ಗೆದ್ದರೆ, ಭಾರತ ತಂಡ ರೋಹಿತ್ ಶರ್ಮಾ ಸಾರಥ್ಯದಲ್ಲಿ ಇತ್ತೀಚೆಗಷ್ಟೇ ಮುಕ್ತಾಯ ಕಂಡ ಏಷ್ಯಾ ಕಪ್‌ನಲ್ಲಿ ದಿಗ್ವಿಜಯಿಯಾಗಿದೆ. ಹೀಗಾಗಿ, ಕೊಹ್ಲಿ ಮತ್ತು ಜೇಸನ್ ಹೋಲ್ಡರ್ ನಾಯಕತ್ವದ ಎರಡೂ ತಂಡಗಳ ಪಾಲಿಗೆ ಜಯದ ಅಭಿಯಾನ ಕಾಯ್ದುಕೊಳ್ಳುವ ದಿಸೆಯಲ್ಲಿ ಪ್ರಸ್ತುತ ಸರಣಿ ಮಹತ್ವವೆನಿಸಿದೆ.

ಅಂದಹಾಗೆ, ಐಸಿಸಿ ಏಕದಿನ ಟೀಂ ರ್ಯಾಂಕಿಂಗ್‌ನಲ್ಲಿ ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಕೊಹ್ಲಿ ಪಡೆ ಅಗ್ರಸ್ಥಾನದಲ್ಲಿದ್ದರೆ, ವಿಂಡೀಸ್ ೯ನೇ ಸ್ಥಾನದಲ್ಲಿದೆ. ಸದ್ಯದ ರ್ಯಾಂಕಿಂಗ್ ಸ್ಥಿತಗತಿಯಲ್ಲಿ ವಿಂಡೀಸ್‌ಗಿಂತ ಕೆಳಗಿರುವುದು ಆಫ್ಘಾನಿಸ್ತಾನ, ಜಿಂಬಾಬ್ವೆ, ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ಯುಎಇ ತಂಡಗಳು. ಈ ಪೈಕಿ ಆಫ್ಘಾನಿಸ್ತಾನ ಒಂದನ್ನು ಹೊರತುಪಡಿಸಿದರೆ ಮಿಕ್ಕ ತಂಡಗಳ ಕ್ರಿಕೆಟ್ ಸಾಮರ್ಥ್ಯ ಅಷ್ಟಕ್ಕಷ್ಟೆ.

ವಿಶ್ವಕಪ್‌ಗೆ ತಯಾರಿ!

ಅಂದಹಾಗೆ, ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಣದ ಈ ಏಕದಿನ ಸರಣಿಯು ಮುಂಬರಲಿರುವ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ದೃಷ್ಟಿಯಿಂದ ಮಹತ್ವವೆನಿಸಿದೆ. ಇತ್ತಂಡಗಳೂ ಆಡುವ ಪ್ರತಿಯೊಂದು ಪಂದ್ಯಗಳು ಕೂಡ ಈ ವಿಶ್ವಕಪ್‌ಗಾಗಿನ ತಯಾರಿಯ ಪಂದ್ಯಗಳಾಗಿಯೇ ಗೋಚರಿಸುವುದು ಗಮನೀಯ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮುಂದಿನ ವರ್ಷದ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಉಳಿದಿರುವುದು ಬರೋಬ್ಬರಿ ಎಂಟು ತಿಂಗಳುಗಳಷ್ಟೆ.

ಇದನ್ನೂ ಓದಿ : ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಕ್ರಿಸ್ ಗೇಲ್ ಅಲಭ್ಯ!

ನಿರಾಸೆ ಮೂಡಿಸಿದ ಗೇಲ್

ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಈ ಬಾರಿಯ ಭಾರತ ಪ್ರವಾಸದಿಂದ ಹಿಂದೆ ಸರಿದಿರುವುದು ಇಂಡೋ-ಕೆರಿಬಿಯನ್ ಏಕದಿನ ಕ್ರಿಕೆಟ್ ಸರಣಿಯ ಹೊಳಪನ್ನು ಮಂಕಾಗಿಸಿದೆ. ವೈಯಕ್ತಿಕ ಕಾರಣಗಳಿಂದಾಗಿ ಪ್ರಸ್ತುತ ಸರಣಿಯಿಂದ ಗೇಲ್ ಹಿಂದಕ್ಕೆ ಸರಿದಿದ್ದು, ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಗೇಲ್ ಸರಣಿಗೆ ಅಲಭ್ಯವಾಗಿದ್ದರೂ, ಅನುಭವಿ ಆಟಗಾರರಾದ ಮರ್ಲಾನ್ ಸ್ಯಾಮುಯೆಲ್ಸ್, ವೇಗಿ ಕೆಮರ್ ರೋಚ್‌ರಂಥವರು ಭಾರತಕ್ಕೆ ವಿರುದ್ಧ ಯಾವ ಸಂದರ್ಭದಲ್ಲಿ ಬೇಕಾದರೂ ಅಪಾಯಕಾರಿಯಾಗಿ ಪರಿಣಮಿಸುವ ಛಾತಿ ಉಳ್ಳವರು.

ಇನ್ನು, ಚಂದ್ರಪಾಲ್ ಹೇಮ್‌ರಾಜ್, ಆಲ್ರೌಂಡರ್ ಫ್ಯಾಬಿಯನ್ ಅಲೆನ್ ಹಾಗೂ ವೇಗಿ ಒಶಾನಿ ಥಾಮಸ್ ಇನ್ನಷ್ಟೇ ಏಕದಿನ ಕ್ರಿಕೆಟ್‌ಗೆ ಕಾಲಿಡಬೇಕಿದ್ದು, ಈ ಯುವ ಆಟಗಾರರತ್ತಲೂ ಕ್ರಿಕೆಟ್ ಪಂಡಿತರ ಗಮನ ನಾಟಿದೆ. ಇವರುಗಳೊಂದಿಗೆ ನಾಯಕ ಜೇಸನ್ ಹೋಲ್ಡರ್ ಕೂಡ ಭಾರತ ವಿರುದ್ಧದ ಸರಣಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಮೊದಲ ಟೆಸ್ಟ್‌ಗೆ ಅಲಭ್ಯವಾಗಿದ್ದ ಹೋಲ್ಡರ್, ಹೈದರಾಬಾದ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಲ್ರೌಂಡ್ ಆಟವಾಡಿದ್ದರು. ಐದು ವಿಕೆಟ್ ಮತ್ತು ಅರ್ಧಶತಕ ದಾಖಲಿಸಿದ್ದ ಹೋಲ್ಡರ್ ಉತ್ತಮ ಲಯದಲ್ಲಿದ್ದು, ಭಾರತಕ್ಕೆ ಕಂಟಕರಾಗುವ ಸಾಧ್ಯತೆ ಇದೆ.

ಸರಣಿ ಜಯದ ಗುರಿ

ಇತ್ತ, ಏಷ್ಯಾಕಪ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ಸಾರಥ್ಯದಲ್ಲಿ ಚಾಂಪಿಯನ್ ಮತ್ತೆ ಚಾಂಪಿಯನ್ ಆದ ಭಾರತ ತಂಡ, ಕೆರಿಬಿಯನ್ ವಿರುದ್ಧದ ಸರಣಿಯನ್ನೂ ಜಯಿಸುವ ಗುರಿ ಹೊತ್ತಿದೆ. ಎಂ ಎಸ್ ಧೋನಿ ವಿಕೆಟ್‌ಕೀಪಿಂಗ್ ಕಾಯಕ ಮುಂದುವರೆಸಲಿದ್ದು, ರಿಷಭ್ ಪಂತ್ ಮಧ್ಯಮ ಕ್ರಮಾಂಕದಲ್ಲಿನ ಅಸ್ಥಿರ ಆಟಕ್ಕೆ ಪರ್ಯಾಯ ಶಕ್ತಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮದ್ ಶಮಿ ಸಹ ವೇಗಿ ಖಲೀಲಲ್ ಅಹಮದ್‌ಗೆ ಸಾಥ್ ನೀಡಲಿದ್ದಾರೆ.

ಇನ್ನು, ಗಾಯಾಳು ಶಾರ್ದೂಲ್ ಠಾಕೂರ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಉಮೇಶ್ ಯಾದವ್, ಇದೇ ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೃತ್ತಿಬದುಕಿನ ಶ್ರೇಷ್ಠ ದಾಳಿಯೊಂದಿಗೆ ೧೦ ವಿಕೆಟ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಒಟ್ಟಾರೆ, ಆಲ್ರೌಂಡ್ ಆಟದೊಂದಿಗೆ ಮಿಂಚಲು ಸಜ್ಜಾಗಿರುವ ಭಾರತ ತಂಡ ಸರಣಿಯಲ್ಲಿ ಫೇವರಿಟ್ ಎನಿಸಿದೆ. ಅಂದಹಾಗೆ, ಕಳೆದ ಐದು ಮುಖಾಮುಖಿಯಲ್ಲಿ ಭಾರತ ಮೂರರಲ್ಲಿ ಗೆದ್ದಿದ್ದರೆ, ವೆಸ್ಟ್‌ಇಂಡೀಸ್ ಗೆದ್ದಿರುವುದು ಕೇವಲ ಒಂದು ಪಂದ್ಯದಲ್ಲಷ್ಟೆ. ಮತ್ತೊಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಸಂಭವನೀಯ ಇಲೆವೆನ್

ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಟಿ ರಾಯುಡು, ರಿಷಭ್ ಪಂತ್, ಎಂ ಎಸ್ ಧೋನಿ, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮದ್ ಶಮಿ ಮತ್ತು ಉಮೇಶ್ ಯಾದವ್.

ವೆಸ್ಟ್‌ಇಂಡೀಸ್: ಕೀರನ್ ಪೊವೆಲ್, ಚಂದ್ರಪಾಲ್ ಹೇಮ್‌ರಾಜ್, ಮರ್ಲಾನ್ ಸ್ಯಾಮುಯೆಲ್ಸ್, ಶಿಮ್ರನ್ ಹೆಟ್ಮೇಯರ್, ಸುನಿಲ್ ಆಂಬ್ರಿಸ್, ಶಾಯ್ ಹೋಪ್, ಫೇಬಿಯನ್ ಅಲೆನ್, ಜೇಸನ್ ಹೋಲ್ಡರ್ (ನಾಯಕ), ಕೆಮರ್ ರೋಚ್, ಆಶ್ಲೆ ನರ್ಸ್ ಹಾಗೂ ದೇವೇಂದ್ರ ಬಿಶೂ.

ಪಂದ್ಯ ಆರಂಭ: ಮಧ್ಯಾಹ್ನ ೧.೩೦ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್ | ಸ್ಥಳ: ಗೌಹಾತಿ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More