ಕ್ರಿಕೆಟ್ | ದೆಹಲಿ ಮಣಿಸಿದ ಮುಂಬೈಗೆ ಮೂರನೇ ವಿಜಯ್ ಹಜಾರೆ ಟ್ರೋಫಿ

ಹಾಲಿ ಚಾಂಪಿಯನ್ ಕರ್ನಾಟಕದ ವೈಫಲ್ಯದಲ್ಲಿ ಮುಂಬೈ ಈ ಋತುವಿನ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ದೆಹಲಿಯನ್ನು 4 ವಿಕೆಟ್‌ಗಳಿಂದ ಮಣಿಸಿದ ಮುಂಬೈ, ೨೦೦೬-೦೭ರ ನಂತರ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯಿತು

ಹೆಚ್ಚೂ ಕಮ್ಮಿ ಒಂದು ದಶಕದ ನಂತರ ಮುಂಬೈ ವಿಜಯ್ ಹಜಾರೆ ಟ್ರೋಫಿ ಗೆದ್ದು ಸಂಭ್ರಮಿಸಿದೆ. ೨೦೦೬-೦೭ರಲ್ಲಿ ರಾಜಸ್ಥಾನ ತಂಡವನ್ನು ಮಣಿಸಿ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದ ಮುಂಬೈ ತಂಡ, ಹನ್ನೆರಡು ವರ್ಷಗಳ ಬಳಿಕ ಮತ್ತೊಮ್ಮೆ ದೇಶೀ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿಕೊಂಡಿತು. ಆ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ತಂಡ ವಿಜಯದ ಕ್ಷಣಗಳನ್ನು ಆಸ್ವಾದಿಸಿತು.

ಟಾಸ್ ಗೆದ್ದ ಮುಂಬೈ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಶಿವಮ್ ದುಬೆ (೨೯ಕ್ಕೆ ೩), ಹಾಗೂ ಅನುಭವಿ ಬೌಲರ್ ಧವಳ್ ಕುಲಕರ್ಣಿ (೩೦ಕ್ಕೆ ೩) ತಲಾ ಮೂರು ವಿಕೆಟ್ ಪಡೆದು ದೆಹಲಿ ತಂಡವನ್ನು ೧೭೭ ರನ್‌ಗಳಿಗೆ ನಿಯಂತ್ರಿಸಿತು. ೪೫.೪ ಓವರ್‌ಗಳಲ್ಲೇ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡ ದೆಹಲಿ ಸಾಮಾನ್ಯ ಮೊತ್ತಕ್ಕೆ ತನ್ನೆಲ್ಲಾ ವಿಕೆಟ್‌ಗಳನ್ನೂ ಬಲಿಗೊಟ್ಟಿತು.

ಸಾಮಾನ್ಯ ಗೆಲುವಿನ ಗುರಿಯನ್ನು ಬೆನ್ನತ್ತಿದ ಮುಂಬೈ ಪರ ಆದಿತ್ಯ ತಾರೆ (೮೯: ೭೧ ಎಸೆತ, ೧೩ ಬೌಂಡರಿ, ೧ ಸಿಕ್ಸರ್) ಆಕರ್ಷಕ ಅರ್ಧಶತಕ ಬಾರಿಸಿ ತಂಡದ ಗೆಲುವಿಗೆ ಭದ್ರ ತಳಪಾಯ ಹಾಕಿಕೊಟ್ಟರು. ಅವರೊಂದಿಗೆ ಸಿದ್ದೇಶ್ ಲ್ಯಾಡ್ (೪೮) ಈ ಜೋಡಿ ಐದನೇ ವಿಕೆಟ್‌ಗೆ ಕಲೆಹಾಕಿದ ೧೦೫ ರನ್‌ಗಳು ಮುಂಬೈ ಇನ್ನೂ ಹದಿನೈದು ಓವರ್‌ಗಳು ಬಾಕಿ ಇರುವಂತೆಯೇ ವಿಜಯದ ಗೆರೆ ಮುಟ್ಟಲು ನೆರವಾದವು.

ಇದನ್ನೂ ಓದಿ : ಕಿರಿಯರ ವಿಶ್ವಕಪ್: ಕೈಫ್, ಕೊಹ್ಲಿ, ಚಾಂದ್ ನಂತರ ಇದೀಗ ಪೃಥ್ವಿ ಶಾ ಸರದಿ

ಆದಿತ್ಯ ತಾರೆ ಇನ್ನಿಂಗ್ಸ್‌ನ ೧೯ನೇ ಓವರ್‌ನಲ್ಲಿ ಜೀವದಾನ ಪಡೆದಿದ್ದರು. ದೆಹಲಿ ವಿಕೆಟ್‌ಕೀಪರ್ ಉನ್ಮುಕ್ತ್ ಚಾಂದ್ ಕೈಗವಸಿಗೆ ಚೆಂಡು ತಗಲುವ ಮುನ್ನ ಚೆಂಡು ಬೌನ್ಸ್ ಆಗಿದ್ದುದು ಟಿವಿ ರಿಪ್ಲೇಯಲ್ಲಿ ಖಚಿತವಾಗಿತ್ತು. ಅಂತಿಮವಾಗಿ ೩೧ನೇ ಓವರ್‌ನಲ್ಲಿ ಮನನ್ ಶರ್ಮಾ ಬೌಲಿಂಗ್‌ನಲ್ಲಿ ಆದಿತ್ಯ ತಾರೆ ವಿಕೆಟ್ ಕಳೆದುಕೊಂಡರೂ, ಅಷ್ಟರಲ್ಲಾಗಲೇ ಮುಂಬೈ ಜಯದ ಸಮೀಪ ಸಾಗಿಯಾಗಿತ್ತು.

ಆದಿತ್ಯ ತಾರೆ ಜತೆಗೆ ಶತಕದ ಜತೆಯಾಟವಾಡಿದ ಲ್ಯಾಡ್, ೬೮ ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ ೪೮ ರನ್ ಗಳಿಸಿ ಕೇವಲ ಎರಡು ರನ್‌ಗಳಿಂದ ಅರ್ಧಶತಕ ವಂಚಿತರಾದರು. ಲಲಿತ್ ಯಾದವ್ ಬೌಲಿಂಗ್‌ನಲ್ಲಿ ಧ್ರುವ ಶೋರೆಗೆ ಲ್ಯಾಡ್ ಕ್ಯಾಚಿತ್ತು ಹೊರನಡೆಯುವ ಮುನ್ನ ರನೌಟ್ ಒಂದರಿಂದ ಅದೃಷ್ಟವಶಾತ್ ಪಾರಾಗಿದ್ದರು. ಈ ಇಬ್ಬರು ಆಟಗಾರರಿಗೆ ಸಿಕ್ಕ ಜೀವದಾನ ಮುಂಬೈನ ಪರವಾಗಿತ್ತು ಎಂಬುದು ಗಮನಾರ್ಹ. ಏಕೆಂದರೆ, ಜಯದ ಗುರಿ ಬೆನ್ನತ್ತಿದ್ದ ಮುಂಬೈ ಪೃಥ್ವಿ ಶಾ (೮) ಅವರನ್ನು ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲೇ ಕಳೆದುಕೊಂಡು ತತ್ತರಿಸಿತು. ಕ್ರೀಸ್ ತೊರೆಯುವ ಮುನ್ನ ಪೃಥ್ವಿ, ನವದೀಪ್ ಸೈನಿಯ ಎರಡು ಎಸೆತಗಳನ್ನೂ ಬೌಂಡರಿಗಟ್ಟಿದ್ದರು.

ಆ ಬಳಿಕ ಅಜಿಂಕ್ಯ ರಹಾನೆ (೧೦), ನಾಯಕ ಶ್ರೇಯಸ್ ಅಯ್ಯರ್ (೭), ಸೂರ್ಯಕುಮಾರ್ ಯಾದವ್ (೪) ಸೈನಿ ಮತ್ತು ಕುಲವಂತ್ ಖೆಜ್ರೋಲಿಯಾಗೆ ವಿಕೆಟ್ ಒಪ್ಪಿಸಿದರು. ೭.೪ ಓವರ್‌ಗಳಲ್ಲಿ ಕೇವಲ ೪೦ ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಮುಂಬೈ ಕೂಡ ಬೆವೆತುಹೋಗಿತ್ತು. ಆದರೆ, ನಿರ್ಣಾಯಕ ಘಟ್ಟದಲ್ಲಿ ಆದಿತ್ಯ ತಾರೆ ಮತ್ತು ಸಿದ್ಧಾರ್ಥ್ ಲ್ಯಾಡ್ ಸಮಯೋಚಿತ ಮತ್ತು ಜವಾಬ್ದಾರಿಯುತ ಆಟ ಮುಂಬೈ ಮತ್ತೆ ಪುಟಿದೆದ್ದು ನಿಲ್ಲಲು ನೆರವಾಯಿತು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ದೆಹಲಿ ಆರಂಭ ಅತ್ಯಂತ ದಯನೀಯವಾಗಿತ್ತು. ಬೌಲಿಂಗ್‌ಗೆ ಪೂರಕವಾಗಿದ್ದ ಪಿಚ್‌ನಲ್ಲಿ ಧವಳ್ ಕುಲಕರ್ಣಿ ಮತ್ತು ತುಷಾರ್ ದೇಶಪಾಂಡೆ, ದೆಹಲಿಗೆ ಆಘಾತ ನೀಡಿದರು. ದೇಶಪಾಂಡೆ ೩೦ಕ್ಕೆ ೨ ವಿಕೆಟ್ ಗಳಿಸಿದರೆ, ಕುಲಕರ್ಣಿ ಮತ್ತು ಪ್ರವೀಣ್ ದುಬೆ ತಲಾ ಮೂರು ವಿಕೆಟ್ ಗಳಿಸಿ ದೆಹಲಿ ಬ್ಯಾಟಿಂಗ್‌ಗೆ ಕಂಟಕರಾದರು. ಉನ್ಮುಕ್ತ್ ಚಾಂದ್ (೧೩), ಮನನ್ ಶರ್ಮಾಗೂ (೫) ಮುನ್ನ ನಾಯಕ ಗೌತಮ್ ಗಂಭೀರ್ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಕೇವಲ ಒಂದು ರನ್‌ಗೆ ಕ್ರೀಸ್ ತೊರೆದರು.

ಆರು ಓವರ್‌ಗಳಾಗುವ ಹೊತ್ತಿಗೆ ೨೧ ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ದೆಹಲಿ, ಆನಂತರವೂ ಚೇತರಿಸಿಕೊಳ್ಳಲಿಲ್ಲ. ನಿತೀಶ್ ರಾಣಾ (೧೩) ಮತ್ತು ಧ್ರುವ ಶೋರೆ (೩೧) ಇನ್ನಿಂಗ್ಸ್‌ಗೆ ಚೈತನ್ಯ ತುಂಬಲು ಯತ್ನಿಸಿದರಾದರೂ ಹೆಚ್ಚು ಪರಿಣಾಮಕಾರಿಯಾಗಲಿಲ್ಲ. ಆ ಬಳಿಕ ಪವನ್ ನೇಗಿ (೨೧), ಸುಬೋಧ್ ಭಾಟಿ (೨೫) ಮತ್ತು ಹಿಮ್ಮತ್ ಸಿಂಗ್ (೪೧) ನಡೆಸಿದ ಪ್ರತಿರೋಧದಿಂದ ದೆಹಲಿ ೧೭೭ ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಸಂಕ್ಷಿಪ್ತ ಸ್ಕೋರ್

ದೆಹಲಿ: ೪೫.೪ ಓವರ್‌ಗಳಲ್ಲಿ ೧೭೭ (ಧ್ರುವ ಶೋರೆ ೩೧, ಹಿಮ್ಮತ್ ಸಿಂಗ್ ೪೧; ಧವಳ್ ಕುಲಕರ್ಣಿ ೩೦ಕ್ಕೆ ೩, ಶಿವಂ ದುಬೆ ೨೯ಕ್ಕೆ ೩); ಮುಂಬೈ: ೩೫ ಓವರ್‌ಗಳಲ್ಲಿ ೧೮೦/೬ (ಸಿದ್ಧಾರ್ಥ್ ಲ್ಯಾಡ್ ೪೮, ಆದಿತ್ಯ ತಾರೆ ೭೧; ನವದೀಪ್ ಸೈನಿ ೫೩ಕ್ಕೆ ೩); ಫಲಿತಾಂಶ: ಮುಂಬೈಗೆ ೪ ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಆದಿತ್ಯ ತಾರೆ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More