ಡೆನ್ಮಾರ್ಕ್ ಓಪನ್ | ಸೈನಾ ನೆಹ್ವಾಲ್, ಶ್ರೀಕಾಂತ್ ಅಂತಿಮ ನಾಲ್ಕರ ಘಟ್ಟಕ್ಕೆ

ನಾಲ್ಕು ವರ್ಷಗಳ ಬಳಿಕ ಅಕಾನಿ ಯಮಗುಚಿಯ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದ ಸೈನಾ ನೆಹ್ವಾಲ್, ಮತ್ತೋರ್ವ ಜಪಾನ್ ಆಟಗಾರ್ತಿ ನೊಜೊಮಿ ಒಕುಹಾರಗೂ ಸೋಲುಣಿಸಿದರು. ಇಂಡೋನೇಷ್ಯಾದ ಗ್ರೆಗೋರಿಯಾ ಮಾರಿಸ್ಕಾ ವಿರುದ್ಧ ಮುಂದಿನ ಸುತ್ತಿನಲ್ಲಿ ಕಾದಾಡಲಿದ್ದಾರೆ

ಚೀನಾ ಓಪನ್ ಪಂದ್ಯಾವಳಿಯ ಮೊದಲ ಸುತ್ತಲ್ಲೇ ಸೋತು ಆಘಾತ ಅನುಭವಿಸಿದ್ದ ಸೈನಾ ನೆಹ್ವಾಲ್ ಡೆನ್ಮಾರ್ಕ್ ಓಪನ್ ಪಂದ್ಯಾವಳಿಯಲ್ಲಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಒಬ್ಬರ ಹಿಂದೊಬ್ಬರಂತೆ ಇಬ್ಬರು ಜಪಾನ್ ಆಟಗಾರ್ತಿಯರಿಗೆ ಸೋಲುಣಿಸಿದ ಸೈನಾ ನೆಹ್ವಾಲ್, ಅಂತಿಮ ನಾಲ್ಕರ ಘಟ್ಟಕ್ಕೆ ದಾಪುಗಾಲಿಟ್ಟಿದ್ದು, ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಒಡೆನ್ಸಿಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಶುಕ್ರವಾರ (ಅ.೧೯) ವಿಶ್ವದ ಆರನೇ ಶ್ರೇಯಾಂಕಿತೆ ನೊಜೊಮಿ ಒಕುಹಾರ ವಿರುದ್ಧ ೧೭-೨೧, ೨೧-೧೬, ೨೧-೧೨ರಿಂದ ಸೈನಾ ಜಯಭೇರಿ ಬಾರಿಸಿದರು. ಮೊದಲ ಗೇಮ್‌ನಲ್ಲಿ ಎದುರಾದ ಸೋಲಿನಿಂದ ಧೃತಿಗೆಡದ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ, ೫೮ನಿಮಿಷಗಳ ಜಿದ್ದಾಜಿದ್ದಿನ ಕಾದಾಟದಲ್ಲಿ ಒಕುಹಾರಗೆ ಆಘಾತ ನೀಡಿದರು.

ಸಿಂಗಲ್ಸ್ ವಿಭಾಗದಲ್ಲಿ ಉಳಿದುಕೊಂಡಿರುವ ಭಾರತದ ಏಕೈಕ ಆಟಗಾರ್ತಿ ಸೈನಾ ಆಗಿದ್ದು, ಪ್ರತಿಯೊಂದು ಪಂದ್ಯವೂ ಆಕೆಗೆ ಮಹತ್ವವಾಗಿದೆ. ಟೂರ್ನಿಯ ಮೊದಲ ಸುತ್ತಿನಲ್ಲೇ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಆಘಾತಕಾರಿ ಸೋಲು ಕಂಡ ನಂತರದಲ್ಲಿ ಸೈನಾ ಆಟ ಚಿತ್ತಾಕರ್ಷಕವಾಗಿದೆ. ಅಸ್ಥಿರ ಆಟದಿಂದ ತಡವರಿಸುತ್ತಿದ್ದ ಸೈನಾ ಟೂರ್ನಿಯ ಸೆಮಿಫೈನಲ್ ತಲುಪಿರುವುದು ಮಾತ್ರವಲ್ಲ, ಸದ್ಯದ ಆಕೆಯ ಫಾರ್ಮ್ ಅನ್ನು ಕಂಡವರಿಗೆ ಪ್ರಶಸ್ತಿ ಗೆಲ್ಲಲೇನೂ ಅಡ್ಡಿಯಿಲ್ಲ ಎಂಬ ಭರವಸೆ ಮೂಡಿದೆ.

ಇದನ್ನೂ ಓದಿ : ಚೀನಾ ಓಪನ್ ಬ್ಯಾಡ್ಮಿಂಟನ್‌ನಲ್ಲೂ ಮೊಮೊಟಾಗೆ ಮಣಿದ ಕಿಡಾಂಬಿ ಶ್ರೀಕಾಂತ್

ಪ್ರಸಕ್ತ ಟೂರ್ನಿಯಲ್ಲಿ ಶ್ರೇಯಾಂಕರಹಿತ ಆಟಗಾರ್ತಿಯಾಗಿರುವ ಸೈನಾ, ಯಮಗುಚಿ ಮತ್ತು ಒಕುಹಾರ ವಿರುದ್ಧ ಗೆಲುವು ಸಾಧಿಸಿರುವುದು ಸ್ವತಃ ಆಕೆಯಲ್ಲಿನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಮೊದಲ ಗೇಮ್‌ನಲ್ಲಿ ಗೆಲುವು ಪಡೆದ ಒಕುಹಾರ, ಎರಡನೇ ಗೇಮ್‌ನಲ್ಲಿಯೂ ೭-೩ ಮುನ್ನಡೆಯಿಂದ ಸೈನಾಗೆ ಸೋಲುಣಿಸುವ ಸುಳಿವು ನೀಡಿದರು. ಆದರೆ, ಈ ಹಂತದಲ್ಲಿ ಎಚ್ಚರಿಕೆ ವಹಿಸಿದ ಸೈನಾ, ಸತತ ಮೂರು ಪಾಯಿಂಟ್ಸ್ ಕಲೆಹಾಕಿದರು. ಪಟ್ಟುಬಿಡದ ಒಕುಹಾರ ಮತ್ತೊಮ್ಮೆ ೧೦-೬ರಿಂದ ಪ್ರಭುತ್ವ ಮೆರೆದರು.

ಆದರೆ, ಒಕುಹಾರ ಪರಾಕ್ರಮ ಇಲ್ಲಿಗಷ್ಟೇ ಸ್ಥಗಿತವಾಯಿತು. ಸತತ ನಾಲ್ಕು ಪಾಯಿಂಟ್ಸ್ ಗಳಿಸಿದ ಸೈನಾ ಅಂತರವನ್ನು ೧೦-೧೦ಕ್ಕೆ ಸಮಗೊಳಿಸಿದ್ದಲ್ಲದೆ, ಬಳಿಕ ೧೫-೧೨ಕ್ಕೆ ಮುನ್ನಡೆ ಹೆಚ್ಚಿಸಿದರು. ಆನಂತರದಲ್ಲಂತೂ ಸೈನಾ ಮತ್ತೆ ಹಿನ್ನಡೆ ಕಾಣದೆ ೨೧-೧೬ರಿಂದ ಎರಡನೇ ಗೇಮ್ ಗೆದ್ದು, ಮೂರನೇ ನಿರ್ಣಾಯಕ ಕದನಕ್ಕೆ ಪಂದ್ಯವನ್ನು ವಿಸ್ತರಿಸಿದರು. ಇಲ್ಲಿಯೂ ಸೈನಾ ಶುರುವಿನಿಂದಲೇ ಎಚ್ಚರವಹಿಸಿದರು. ಒಂದರ ಹಿಂದೊಂದರಂತೆ ಆರು ಪಾಯಿಂಟ್ಸ್ ಗಳನ್ನು ಗಳಿಸಿದ ಸೈನಾ ೧೨-೩ರಿಂದ ಮುಂದಡಿ ಇಟ್ಟರೆ, ಒಕುಹಾರ ಮತ್ತೆ ಪುಟಿದೇಳದಂತೆ ನೋಡಿಕೊಂಡು ಜಯಶಾಲಿಯಾದರು.

ಕಿಡಾಂಬಿಗೆ ಮತ್ತೆ ಮೊಮೊಟಾ ಸವಾಲು

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಆಟಗಾರ ಕಿಡಾಂಬಿ ಶ್ರೀಕಾಂತ್ ಕೂಡ ಟೂರ್ನಿಯಲ್ಲಿ ಜಯದ ಓಟ ಮುಂದುವರೆಸಿದ್ದಾರೆ. ತಮ್ಮ ದೇಶದವರೇ ಆದ ಸಮೀರ್ ವರ್ಮಾ ವಿರುದ್ಧ ಆಕರ್ಷಕ ಆಟವಾಡಿದ ಶ್ರೀಕಾಂತ್, ನೇರ ಗೇಮ್‌ಗಳಲ್ಲಿ ಜಯ ಸಾಧಿಸಿ ಮುಂದಿನ ಹಂತಕ್ಕೆ ಧಾವಿಸಿದರು. ಆದರೆ, ಮುಂದಿನ ಸುತ್ತು ಅವರ ಪಾಲಿಗೆ ಮತ್ತೊಮ್ಮೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಸಮೀರ್ ವರ್ಮಾ ವಿರುದ್ಧದ ಮೂರು ಗೇಮ್‌ಗಳ ಕಠಿಣ ಕಾದಾಟದಲ್ಲಿ ಶ್ರೀಕಾಂತ್, ೨೨-೨೦, ೧೯-೨೧, ೨೩-೨೧ರಿಂದ ಶ್ರೀಕಾಂತ್ ಜಯಶಾಲಿಯಾದರು.

ಮೊದಲ ಗೇಮ್ ಅನ್ನು ಕಳೆದುಕೊಂಡರೂ, ಎರಡನೇ ಗೇಮ್‌ನಲ್ಲಿ ದಿಟ್ಟ ಆಟವಾಡಿದ ಸಮೀರ್, ಶ್ರೀಕಾಂತ್‌ಗೆ ಸವಾಲಾಗಿ ಪರಿಣಮಿಸಿದರು. ಆದರೆ, ನಿರ್ಣಾಯಕವಾಗಿದ್ದ ಮೂರನೇ ಗೇಮ್‌ನಲ್ಲಿ ಸಮೀರ್‌ಗೆ ರೋಚಕ ಸೋಲುಣಿಸಿದ ಶ್ರೀಕಾಂತ್, ಮೊಮೊಟಾ ಎದುರಿನ ಕಾದಾಟಕ್ಕೆ ಅರ್ಹತೆ ಪಡೆದರು. ಈ ಋತುವಿನಲ್ಲಿ ಎರಡು ಬಾರಿ ಮೊಮೊಟಾಗೆ ಮಣಿದಿರುವ ಶ್ರೀಕಾಂತ್ ಶನಿವಾರ (ಅ.೨೦) ನಡೆಯಲಿರುವ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಅಣಿಯಾಗಿದ್ದಾರೆ.

ಇತ್ತ, ವನಿತೆಯರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಅವರ ಜತೆಯಾಟಗಾರ್ತಿ ಎನ್ ಸಿಕಿ ರೆಡ್ಡಿ ಜೋಡಿ ನಿರಾಸೆ ಅನುಭವಿಸಿತು. ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಜಪಾನ್‌ನ ಯುಕಿ ಫುಕುಶುಮಾ ಮತ್ತು ಸಯಾಕ ಹಿರೋಟ ಜೋಡಿ ಎದುರು ಅಶ್ವಿನಿ ಹಾಗೂ ರೆಡ್ಡಿ ಜೋಡಿ ೧೭-೨೧, ೧೫-೨೧ರಿಂದ ಹಿನ್ನಡೆ ಅನುಭವಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More