ಡೆನ್ಮಾರ್ಕ್ ಓಪನ್ | ಮತ್ತೆ ಮೊಮೊಟಾಗೆ ಮಣಿದ ಶ್ರೀಕಾಂತ್ ನಿರ್ಗಮನ, ಸೈನಾ ಫೈನಲ್‌ಗೆ

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಿಡಾಂಬಿ ಶ್ರೀಕಾಂತ್ ಸವಾಲಿಗೆ ತೆರೆಬಿದ್ದಿದೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜಪಾನ್ ಆಟಗಾರ ಕೆಂಟೊ ಮೊಮೊಟಾ ಎದುರು ಮತ್ತೆ ಮುಗ್ಗರಿಸಿದ ಶ್ರೀಕಾಂತ್ ಟೂರ್ನಿಯಿಂದ ನಿರ್ಗಮಿಸಿದರು. ಆದರೆ, ಸೈನಾ ನೆಹ್ವಾಲ್ ಫೈನಲ್ ತಲುಪುವಲ್ಲಿ ಯಶ ಕಂಡರು

ಆಕ್ರಮಣಕಾರಿ ಆಟ ಮುಂದುವರೆಸಿರುವ ಸೈನಾ ನೆಹ್ವಾಲ್ ಪ್ರಶಸ್ತಿ ಸುತ್ತಿಗೆ ಸಾಗಿದ್ದಾರೆ. ಡೆನ್ಮಾರ್ಕ್ ಓಪನ್‌ನಲ್ಲಿ ಚಾಂಪಿಯನ್ ಆಗಲು ಆಕೆ ಕ್ರಮಿಸಬೇಕಿರುವುದು ಕೇವಲ ಇನ್ನೊಂದು ಹೆಜ್ಜೆಯನ್ನಷ್ಟೆ. ಆದರೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಕಿಡಾಂಬಿ ಶ್ರೀಕಾಂತ್, ಟೂರ್ನಿಯಲ್ಲಿ ಭ್ರಮನಿರಸನ ಅನುಭವಿಸಿದರು. ಜಪಾನ್ ಆಟಗಾರ ಕೆಂಟೊ ಮೊಮೊಟಾ ಸವಾಲಿನೆದುರು ಮತ್ತೊಮ್ಮೆ ಮಂಡಿಯೂರಿದ ಹೈದರಾಬಾದ್ ಆಟಗಾರ ನಿರಾಸೆಯೊಂದಿಗೆ ತವರಿನತ್ತ ಮುಖ ಮಾಡಿದ್ದಾರೆ.

ಶನಿವಾರ (ಅ.೨೦) ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾ ಆಟಗಾರ್ತಿ ಗ್ರೆಗೊರಿಯಾ ಮಾರಿಸ್ಕಾ ಟುನ್‌ಜುಂಗ್ ವಿರುದ್ಧ ಸೈನಾ, ೨೧-೧೧, ೨೧-೧೨ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆದರೆ, ಕಿಡಾಂಬಿ ಶ್ರೀಕಾಂತ್, ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ೧೬-೨೧, ೧೨-೨೧ರ ಎರಡು ನೇರ ಗೇಮ್‌ಗಳ ಆಟದಲ್ಲಿ ಜಪಾನ್ ಆಟಗಾರನ ಎದುರು ಸೋಲನುಭವಿಸಿದರು.

ಈ ಸೋಲಿನೊಂದಿಗೆ ವೃತ್ತಿಬದುಕಿನಲ್ಲಿ ಶ್ರೀಕಾಂತ್ ಜಪಾನ್ ಆಟಗಾರ ಮೊಮೊಟಾ ಎದುರು ೩-೯ ಹಿನ್ನಡೆ ಅನುಭವಿಸಿದಂತಾಗಿದೆ. ಒಟ್ಟು ಹನ್ನೆರಡು ಮುಖಾಮುಖಿಯಲ್ಲಿ ಜೊಮೊಟಾ ಒಂಬತ್ತು ಬಾರಿ ಭಾರತೀಯ ಆಟಗಾರನ ಎದುರು ಗೆಲುವು ಸಾಧಿಸಿ ಪ್ರಭುತ್ವ ಮೆರೆದರು. ವಾಸ್ತವವಾಗಿ, ಮೊದಲ ಗೇಮ್‌ನಲ್ಲಿ ೩-೫ ಹಿನ್ನಡೆಯಲ್ಲಿದ್ದ ಮೊಮೊಟಾ, ಸತತ ನಾಲ್ಕು ಪಾಯಿಂಟ್ಸ್‌ಗಳನ್ನು ಗಳಿಸುವುದರೊಂದಿಗೆ ೭-೫ ಮುನ್ನಡೆ ಸಾಧಿಸಿದರು.

ಇದೇ ಹಾದಿಯಲ್ಲಿ ಸಾಗಿದ ವಿಶ್ವ ಚಾಂಪಿಯನ್ ಮೊಮೊಟಾ, ಕಿಡಾಂಬಿ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸದಂತೆ ನೋಡಿಕೊಂಡರು. ಇತ್ತ, ಶ್ರೀಕಾಂತ್ ಕೂಡ ಪಟ್ಟು ಬಿಡದೆ ಹೋರಾಟ ನಡೆಸಿದರೂ, ಮೊಮೊಟಾ ೧೧-೧೦ ಅಂತರ ಕಾಯ್ದುಕೊಂಡು ಕೇವಲ ಒಂದು ಪಾಯಿಂಟ್ಸ್ ಹಿನ್ನಡೆ ಅನುಭವಿಸಿದರು. ಬಳಿಕ ೧೫-೧೧, ೨೦-೧೩ರವರೆಗೆ ಸಾಗಿದ ಮೊಮೊಟಾ ಎದುರು ಶ್ರೀಕಾಂತ್ ಮೂರು ಗೇಮ್ ಪಾಯಿಂಟ್ಸ್ ಕಲೆಹಾಕಿ ತಿರುಗೇಟು ನೀಡಲು ಯತ್ನಿಸಿದರಾದರೂ, ಆಗಾಗಲೇ ಮೊಮೊಟಾ ಗೆಲುವಿನ ಅಂಚಿನಲ್ಲಿದ್ದುದರಿಂದ ಅದು ಸಾಧ್ಯವಾಗಲಿಲ್ಲ.

ಇದನ್ನೂ ಓದಿ : ಪಿಬಿಎಲ್ ಹರಾಜು: ಕಿಡಾಂಬಿ, ಸೈನಾ ನೆಹ್ವಾಲ್ ಹಾಗೂ ಸಿಂಧುಗೆ ಬಂಪರ್

ಇನ್ನು, ಎರಡನೇ ಗೇಮ್ ಕೂಡ ಜಿದ್ದಾಜಿದ್ದಿನಿಂದಲೇ ಕೂಡಿತ್ತು. ಇಲ್ಲಿಯೂ ಮೊಮೊಟಾ ೭-೪ ಮುನ್ನಡೆ ಸಾಧಿಸಿದ್ದಲ್ಲದೆ, ವಿರಾಮದ ಹೊತ್ತಿಗೆ ೧೧-೭ರಿಂದ ಕಿಡಾಂಬಿ ಮೇಲೆ ಒತ್ತಡ ಹೇರಿದರು. ಆಟದ ಕೋರ್ಟ್ ಅನ್ನು ಇಡಿಯಾಗಿ ಆವಾಹಿಸಿಕೊಂಡಂತಿದ್ದ ಮೊಮೊಟಾ ಪಾದಚಲನೆ ಶ್ರೀಕಾಂತ್ ಪುಟಿದೇಳಲು ಅವಕಾಶವನ್ನೇ ಕಲ್ಪಿಸಲಿಲ್ಲ. ಪರಿಣಾಮ, ಮೊಮೊಟಾ ೧೬-೧೦ರಿಂದ ಮುನ್ನಡೆ ಸಾಧಿಸುತ್ತಿದ್ದಂತೆ ಕಿಡಾಂಬಿ ಮತ್ತೆ ಮೇಲೇಳಲಾಗದೆ ಕಂಗೆಟ್ಟರು. ಆ ಬಳಿಕ ಶ್ರೀಕಾಂತ್ ಗಳಿಸಿದ್ದು ಕೇವಲ ೨ ಪಾಯಿಂಟ್ಸ್‌ಗಳನ್ನಷ್ಟೆ. ೧೯-೧೨ ಪಾಯಿಂಟ್ಸ್ ಮುನ್ನಡೆ ಪಡೆಯುತ್ತಿದ್ದಂತೆ ಮೊಮೊಟಾ ಫೈನಲ್ ಹಾದಿ ಕೇವಲ ಎರಡು ಪಾಯಿಂಟ್ಸ್‌ಗಳಲ್ಲಷ್ಟೇ ನಿರ್ಧರಿಸುವಂತಿತ್ತು. ಆ ಎರಡು ಪಾಯಿಂಟ್ಸ್‌ಗಳನ್ನು ಗಳಿಸಲು ಮೊಮೊಟಾ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ಸೈನಾ ಆಕ್ರಮಣಕಾರಿ ಆಟ

ಇದಕ್ಕೂ ಮುನ್ನ ನಡೆದ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ ಇಂಡೋನೇಷ್ಯಾ ಆಟಗಾರ್ತಿಯ ಎದುರು ಅತ್ಯಂತ ಆಕ್ರಮಣಕಾರಿ ಆಟವಾಡಿ ಫೈನಲ್‌ಗೆ ಅರ್ಹತೆ ಗಳಿಸಿದರು. ವಿಶ್ವದ ಹತ್ತನೇ ಶ್ರೇಯಾಂಕಿತೆ ಸೈನಾ ಪಂದ್ಯ ಶುರುವಾದ ಕ್ಷಣದಿಂದಲೂ ಆಕ್ರಮಣಕಾರಿತನವನ್ನು ಬಿಟ್ಟುಕೊಡಲಿಲ್ಲ. ೪-೧ ಮುನ್ನಡೆಯೊಂದಿಗೆ ನಡೆದ ಸೈನಾ, ೯-೪ ಮತ್ತು ವಿರಾಮದ ಹೊತ್ತಿಗೆ ೧೧-೫ರಿಂದ ಜಯದ ಹಾದಿಯಲ್ಲಿ ಸಾಗಿದರು. ಸೈನಾ ಆಕ್ರಮಣಕಾರಿ ಆಟದೆದುರು ನಿಲ್ಲಲಾಗದ ಟುನ್‌ಜುಂಗ್ ಒಂದು ವಿಧದಲ್ಲಿ ಏಕಪಕ್ಷೀಯ ಆಟಕ್ಕೆ ಅನುವು ಮಾಡಿಕೊಟ್ಟರು.

ಒಂದರ ಹಿಂದೊಂದರಂತೆ ಐದು ಪಾಯಿಂಟ್ಸ್‌ಗಳನ್ನು ಗಳಿಸಿದ ಸೈನಾ, ಕೇವಲ ೧೩ ನಿಮಿಷಗಳಲ್ಲೇ ಗೇಮ್ ವಶಕ್ಕೆ ಪಡೆದು ಎರಡನೇ ಗೇಮ್‌ಗೆ ಅಣಿಯಾದರು. ಸತತ ಮೂರು ಪಾಯಿಂಟ್ಸ್‌ಗಳೊಂದಿಗೆ ಸೈನಾ ಮುನ್ನಡೆದರು. ಈ ಹಂತದಲ್ಲಿ ತುಸು ಪ್ರತಿರೋಧ ನೀಡಿದ ಟುನ್‌ಜುಂಗ್ ೭-೭ ಪಾಯಿಂಟ್ಸ್ ಸಮಬಲಕ್ಕೆ ಕಾರಣರಾದರು. ಆದರೆ, ಬಳಿಕ ಚೇತರಿಸಿಕೊಂಡ ಸೈನಾ ೧೧-೮ರಿಂದ ಮುಂದಡಿ ಇಟ್ಟದ್ದಲ್ಲದೆ, ಆನಂತರ ಸತತ ಏಳು ಪಾಯಿಂಟ್ಸ್ ಗಳಿಸಿ ಅಂತಿಮವಾಗಿ, ಎರಡನೇ ಗೇಮ್ ಅನ್ನೂ ಗೆದ್ದು ಫೈನಲ್‌ಗೆ ಅರ್ಹತೆ ಗಿಟ್ಟಿಸಿದರು.

ಡೆನ್ಮಾರ್ಕ್ ಓಪನ್‌ನಲ್ಲಿ ೨೦೧೨ರಲ್ಲಿ ಪ್ರಶಸ್ತಿ ಜಯಿಸಿರುವ ಸೈನಾ, ಇದೇ ಮೊದಲ ಬಾರಿಗೆ ಪ್ರಸ್ತುತ ಟೂರ್ನಿಯಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಆಕೆಯ ಎರಡನೇ ಡೆನ್ಮಾರ್ಕ್ ಓಪನ್ ಗೆಲ್ಲುವ ತುಡಿತಕ್ಕೆ ಚೈನೀಸ್ ತೈಪೆ ಆಟಗಾರ್ತಿ ತಾಯ್ ಟ್ಸು ಯಿಂಗ್ ಅಡ್ಡಗಾಲಾಗಲು ಅಣಿಯಾಗಿದ್ದಾರೆ. ಏಷ್ಯಾಡ್‌ ಸೆಮಿಫೈನಲ್‌ನಲ್ಲಿ ಇದೇ ಯಿಂಗ್ ಎದುರು ಸೋತ ಕ್ಷಣಗಳು ಸೈನಾ ನರನಾಡಿಯಲ್ಲಿ ಬಾಧಿಸುತ್ತಿದ್ದು, ಭಾನುವಾರ (ಅ.೨೧) ನಡೆಯಲಿರುವ ಫೈನಲ್‌ ತೀವ್ರ ಕೌತುಕ ಕೆರಳಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More