ರೋಚಕ ಸೆಣಸಾಟದಲ್ಲಿ ತಾಯ್‌ ಆಕ್ರಮಣಕ್ಕೆ ಮಣಿದು ಬೆಳ್ಳಿಗೆ ತೃಪ್ತವಾದ ಸೈನಾ

ಪ್ರಚಂಡ ಫಾರ್ಮ್‌ನಲ್ಲಿದ್ದ ಸೈನಾ ನೆಹ್ವಾಲ್ ಡೆನ್ಮಾರ್ಕ್ ಓಪನ್‌ನಲ್ಲಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತರಾದರು. ಭಾನುವಾರ (ಅ.೨೧) ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಸೈನಾ ಚೈನೀಸ್ ತೈಪೆ ಆಟಗಾರ್ತಿ ತಾಯ್ ಟ್ಸು ಯಿಂಗ್ ಎದುರು ೧೩-೨೧, ೨೧-೧೩, ೬-೨೧ರಿಂದ ಸೋತು ರಜತ ಪದಕ ಪಡೆದರು

೨೦೧೨ರ ಬಳಿಕ ಡೆನ್ಮಾರ್ಕ್ ಓಪನ್ ಫೈನಲ್ ತಲುಪಿದ್ದ ಸೈನಾ ನೆಹ್ವಾಲ್ ಮುಂದೆ ಕಠಿಣ ಸವಾಲೇ ಎದುರಿಗಿತ್ತು. ಚೈನೀಸ್ ತೈಪೆ ಆಟಗಾರ್ತಿ ತಾಯ್ ಟ್ಸು ಯಿಂಗ್ ಆಕೆಗೆ ಚೀನಾ ಓಪನ್‌ನಲ್ಲೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದರು. ೨೦೧೨ರಲ್ಲಿ ಚಾಂಪಿಯನ್ ಆಗಿದ್ದ ಸೈನಾ, ಆರು ವರ್ಷಗಳ ಬಳಿಕ ಇಲ್ಲಿ ಮತ್ತೊಮ್ಮೆ ಪ್ರಶಸ್ತಿ ಜಯಿಸಿ ಸಂಭ್ರಮಿಸುವ ಕನಸನ್ನು ತಾಯ್ ಹೊಸಕಿಹಾಕಿದರು. ಈ ಮಧ್ಯೆಈ ಋತುವಿನ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್‌ ಟೂರ್ನಿಯಲ್ಲಿ ಎರಡನೇ ಬಾರಿಗೆ ಫೈನಲ್ ತಲುಪಿದ್ದರು.

ಇದೇ ವರ್ಷಾರಂಭದಲ್ಲಿ ನಡೆದ ಇಂಡೋನೇಷ್ಯಾ ಮಾಸ್ಟರ್ಸ್‌ನಲ್ಲಿ ಫೈನಲ್ ತಲುಪಿದ್ದ ಸೈನಾ, ಆ ಬಳಿಕ ಈ ಋತುವಿನಲ್ಲಿ ಬಿಡಬ್ಲ್ಯೂಎಫ್‌ ವರ್ಲ್ಡ್ ಟೂರ್ ಫೈನಲ್ ಆಡಿದ್ದು ಇದೇ ಮೊದಲು. ಅಂದಹಾಗೆ, ಇಲ್ಲೀವರೆಗಿನ ತಾಯ್ ವಿರುದ್ಧದ ಒಟ್ಟಾರೆ ೧೭ ಹಣಾಹಣಿಯಲ್ಲಿ ತಾಯ್ ಆಟಗಾರ್ತಿಯ ಎದುರು ೫-೧೨ ಹಿನ್ನಡೆ ಅನುಭವಿಸಿದ್ದರು. ಈ ಪೈಕಿ ಈ ಋತುವಿನ ನಾಲ್ಕು ಮುಖಾಮುಖಿಯಲ್ಲಿಯೂ ಸೈನಾ ಸೋಲನುಭವಿಸಿದ್ದುದು ಗಮನಾರ್ಹ. ಡೆನ್ಮಾರ್ಕ್ ಓಪನ್‌ನಲ್ಲಿ ಅದು ಪುನರಾವರ್ತಿಸಿತು.

ಆದರೆ, ಪ್ರಸ್ತುತ ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದ ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಸೈನಾ ನೆಹ್ವಾಲ್, ತಾಯ್ ವಿರುದ್ಧ ಗೆಲುವು ಸಾಧಿಸುವ ಭರವಸೆ ಮೂಡಿಸಿದ್ದರು. ಮಹತ್ವಪೂರ್ಣ ಘಟ್ಟದಲ್ಲಿ ಜಪಾನ್‌ನ ಅಪಾಯಕಾರಿ ಆಟಗಾರ್ತಿಯರಾದ ಅಕಾನಿ ಯಮಗುಚಿ ಮತ್ತು ನೊಜೊಮಿ ಒಕುಹಾರ ವಿರುದ್ಧ ಅಮೋಘ ಗೆಲುವು ಸಾಧಿಸಿದ್ದ ಸೈನಾ, ಸಹಜವಾಗಿಯೇ ಫೈನಲ್‌ನಲ್ಲೂ ಮಿಂಚು ಹರಿಸುವ ಸುಳಿವು ನೀಡಿದ್ದರು. ಏತನ್ಮಧ್ಯೆ, ಮೊದಲ ಸುತ್ತಿನಲ್ಲಿ ಅಮೆರಿಕನ್ ಆಟಗಾರ್ತಿ ಎದುರು ಸೋಲನುಭವಿಸಿದ್ದ ಪಿ ವಿ ಸಿಂಧು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದರು. ಇತ್ತ, ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಿಡಾಂಬಿ ಶ್ರೀಕಾಂತ್ ಆಕರ್ಷಕ ಪ್ರದರ್ಶನ ನೀಡಿದ್ದರಾದರೂ, ಜಪಾನ್ ಆಟಗಾರ ಮೊಮೊಟಾಗೆ ಮತ್ತೊಮ್ಮೆ ಮಂಡಿಯೂರಿ ನಿರಾಸೆ ಅನುಭವಿಸಿದ್ದರು. ಹೀಗಾಗಿ ಟೂರ್ನಿಯಲ್ಲಿ ಪದಕ ಗೆಲ್ಲುವ ಭಾರತದ ಏಕೈಕ ಭರವಸೆಯಾಗಿದ್ದರು ಸೈನಾ.

ಇದನ್ನೂ ಓದಿ : ಇದೇ ಡಿಸೆಂಬರ್ ತಿಂಗಳಲ್ಲಿ ಸೈನಾ ನೆಹ್ವಾಲ್, ಪರುಪಳ್ಳಿ ಕಶ್ಯಪ್ ಕಲ್ಯಾಣ 

ಮೊದಲ ಗೇಮ್‌ನಲ್ಲಿ ನಿರೀfಕ್ಷೆಯಂತೆಯೇ ತಾಯ್ ಆಕ್ರಮಣಕಾರಿ ಆಟದೊಂದಿಗೆ ಕೇವಲಲ ಹದಿನೈದು ನಿಮಿಷಗಳಲ್ಲೇ ವಶಕ್ಕೆ ಪಡೆದರು. ಚೈನೀಸ್ ತೈಪೆ ಆಟಗಾರ್ತಿಗೆ ಪ್ರತಿ ಹೇಳಲು ಸಾಧ್ಯವಾಗದ ಸೈನಾ, ಎರಡನೇ ಗೇಮ್‌ನಲ್ಲಿ ಮಾತ್ರ ತಿರುಗಿಬಿದ್ದರು. ಆಕ್ರಮಣಕ್ಕೆ ಪ್ರತ್ಯಾಕ್ರಮಣವೇ ಸೂಕ್ತ ಎಂಬ ಸೂತ್ರದಡಿ ಮಿಂಚು ಹರಿಸಿದ ಭಾರತೀಯ ಆಟಗಾರ್ತಿ ಇಷ್ಟೇ ಅಂತರದಲ್ಲಿ ಅಂದರೆ ಎಂಟು ಪಾಯಿಂಟ್ಸ್‌ಗಳ ಅಂತರದಲ್ಲಿ ಪಂದ್ಯವನ್ನು ೧-೧ರಿಂದ ಸಮಬಲಗೊಳಿಸಿದರು.

ಆದರೆ, ನಿರ್ಣಾಯಕವಾದ ಮೂರನೇ ಗೇಮ್‌ ಇಬ್ಬರ ಪಾಲಿಗೂ ಮಾಡು ಇಲ್ಲವೇ ಮಡಿ ಎಂಬಂತಾಯಿತು. ಎರಡನೇ ಗೇಮ್ ಅನ್ನು ೧೩-೨೧ರಿಂದ ಸೋತು ತಲ್ಲಣಿಸಿದ್ದ ತಾಯ್, ಅಕ್ಷರಶಃ ಸಿಂಹಿಣಿಯಂತೆ ಸೆಣಸಿದರು. ಶುರುವಿನಲ್ಲಿ ೨-೨ ಸಮಬಲದಲ್ಲಿದ್ದ ಪಾಯಿಂಟ್ಸ್ ಅಂತರ ಕ್ರಮೇಣ ೮-೨ರಿಂದ ತಾಯ್ ಪ್ರಭುತ್ವ ಮೆರೆಯುತ್ತಾ ನಡೆದರು. ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಂತೂ ಅತ್ಯಂತ ನಿರ್ದಯಿ ಆಟವಾಡಿದ ತಾಯ್ ವೃತ್ತಿಬದುಕಿನಲ್ಲಿ ಸೈನಾ ವಿರುದ್ಧದ ಒಟ್ಟಾರೆ ಮುಖಾಮುಖಿಯಲ್ಲಿ ೧೩-೫ರಿಂದ ಮೇಲುಗೈ ಸಾಧಿಸಿದರು.

ಪ್ರಖರ ಶಾಟ್ ಮತ್ತು ಕೋರ್ಟ್‌ನ ನಾಲ್ದೆಸೆಗಳಲ್ಲೂ ಅಡ್ಡಾಡಿದ ತಾಯ್ ಕ್ಷಣಕ್ಷಣಕ್ಕೂ ಸೈನಾ ಆಟದಲ್ಲಿ ಅಸ್ಥಿರ ಭಾವ ಮೂಡಿಸಿದರು. ತೀವ್ರ ಒತ್ತಡಕ್ಕೆ ಗುರಿಯಾದ ಸೈನಾ, ಮೊದಲೆರಡು ಪಾಯಿಂಟ್ಸ್‌ಗಳನ್ನು ಗಳಿಸಿದ್ದು ಬಿಟ್ಟರೆ, ತಾಯ್ ಅಷ್ಟರಲ್ಲಾಗಲೇ ೧೧ ಪಾಯಿಂಟ್ಸ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ವಿರಾಮದ ಹೊತ್ತಿಗೇ ತನ್ನ ಗೆಲುವನ್ನು ಖಾತ್ರಿಪಡಿಸಿದ ತಾಯ್, ಆನಂತರ ಸೈನಾಗೆ ಬಿಟ್ಟುಕೊಟ್ಟದ್ದು ಕೇವಲ ನಾಲ್ಕು ಪಾಯಿಂಟ್ಸ್‌ಗಳನ್ನಷ್ಟೆ!

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More