ಖಂಡಿತ ಚಿನ್ನಕ್ಕೆ ಪಟ್ಟು ಹಾಕುವೆ ಎಂದ ಜಗಜಟ್ಟಿ ಬಜರಂಗ್ ಪುನಿಯಾ

ಕಾಮನ್ವೆಲ್ತ್ ಹಾಗೂ ಏಷ್ಯಾಡ್ ಸ್ವರ್ಣ ಪದಕ ವಿಜೇತ ಬಜರಂಗ್ ಪುನಿಯಾ, ಹಂಗೇರಿಯಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿ. ಮಹತ್ವಪೂರ್ಣ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದೇ ಗೆಲ್ಲುವೆನೆಂಬ ಪಣ ತೊಟ್ಟಿದ್ದಾರೆ ಹರ್ಯಾಣ ಮೂಲದ ಜಗಜಟ್ಟಿ

“ಸುಶೀಲ್ ಕುಮಾರ್ ಅವರಂತೆ ನಾನು ಚಿನ್ನ ಗೆಲ್ಲಲು ಬಯಸುತ್ತೇನೆ. ನನ್ನದೆಲ್ಲಾ ದೇಶಬಾಂಧವರ ಆಶೀರ್ವಾದದೊಂದಿಗೆ ನಾನು ನಿಸ್ಸಂಶಯವಾಗಿಯೂ ನನ್ನ ದೇಶಕ್ಕಾಗಿ ಚಿನ್ನದ ಪದಕ ಗೆದ್ದೇ ಗೆಲ್ಲುವೆ...’’

-ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಸೆಮಿಫೈನಲ್ ಬೌಟ್‌ನಲ್ಲಿ ಗೆಲ್ಲುತ್ತಿದ್ದಂತೆ ಈ ಬಾರಿಯ ಕಾಮನ್ವೆಲ್ತ್ ಮತ್ತು ಏಷ್ಯಾಡ್‌ನಲ್ಲಿ ಸ್ವರ್ಣ ಪದಕ ಗೆದ್ದ ಕುಸ್ತಿಪಟು ಬಜರಂಗ್ ಪುನಿಯಾ ಉದ್ಗರಿಸಿದ ಆತ್ಮವಿಶ್ವಾಸದ ನುಡಿಗಳು ಇವು. ಭಾನುವಾರ (ಅ.೨೧) ನಡೆದ ಪುರುಷರ ೬೫ ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ಸೆಣಸಿನಲ್ಲಿ ಕ್ಯೂಬಾದ ಅಲೆಜಾಂಡ್ರೊ ವಾಲ್ಡೆಸ್ ತೊಬಿಯರ್ ವಿರುದ್ಧ ೪-೩ ಅಂತರದ ರೋಚಕ ಗೆಲುವು ಸಾಧಿಸಿದ ಪುನಿಯಾ ಅವರ ಚಿನ್ನದ ಸಾಕಾರಕ್ಕೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿ.

ಬುಡಾಪೆಸ್ಟ್‌ನ ಪ್ಯಾಪ್ ಲ್ಯಾಸ್ಲೊ ಸ್ಪೋರ್ಟಾಅರೇನಾದಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಪಂದ್ಯಾವಳಿಯಲ್ಲಿ ಬಜರಂಗ್ ಪುನಿಯಾ ಚಿನ್ನ ಗೆಲ್ಲುವ ಭರವಸೆಯಲ್ಲಿದ್ದಾರೆ. ಸೆಮಿಫೈನಲ್ ಬೌಟ್‌ ಅಂತೂ ಕುಸ್ತಿಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಕ್ಯೂಬಾದ ಪ್ರತಿಸ್ಪರ್ಧಿ ನಿಧಾನಗತಿಯಲ್ಲಿ ಬಜರಂಗ್ ವಿರುದ್ಧ ಆಕ್ರಮಣ ಎಸಗಿ ೪-೧ರಿಂದ ೪-೩ರ ಅಂತರದಿಂದ ಪುಟಿದೆದ್ದರು. ಆದರೆ, ಅನುಭವಿ ಕುಸ್ತಿಪಟು ಪುನಿಯಾ ಅವರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಫೈನಲ್‌ಗೆ ಧಾವಿಸಿದರು.

ಸುಶೀಲ್ ಸಾಧನೆ ಸರಿಗಟ್ಟುವ ತವಕ

೨೦೧೦ರಲ್ಲಿ ಮಾಸ್ಕೋದಲ್ಲಿ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಡಬಲ್ ಒಲಿಂಪಿಕ್ಸ್ ಪದಕ ವಿಜೇತ ಹಾಗೂ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ ಚಿನ್ನದ ಪದಕ ತಂದುಕೊಟ್ಟಿದ್ದರು. ವಿಶ್ವ ಕುಸ್ತಿಯಲ್ಲಿ ಭಾರತ ಗೆದ್ದ ಏಕೈಕ ಚಿನ್ನದ ಪದಕವಿದು. ಇದೀಗ ಸುಶೀಲ್ ಕುಮಾರ್ ಸಾಧನೆಯನ್ನು ಸರಿಗಟ್ಟಲು ಬಜರಂಗ್ ಪುನಿಯಾ ತವಕಿಸುತ್ತಿದ್ದು, ಫೈನಲ್‌ನಲ್ಲಿ ಜಪಾನ್ ಮಲ್ಲ ಟಕುಟೊ ಒಟೊಗುರೊ ವಿರುದ್ಧ ಅಖಾಡಕ್ಕೆ ಇಳಿಯಲಿದ್ದಾರೆ.

ಪುರುಷರ ಇದೇ ೬೫ ಕೆಜಿ ವಿಭಾಗದ ಮತ್ತೊಂದು ಸೆಮಿಫೈನಲ್‌ನಲ್ಲಿ ರಷ್ಯಾದ ಅಕ್ಮೆದ್ ಚಕಾಯೆವ್ ವಿರುದ್ಧ ಜಪಾನ್ ಕುಸ್ತಿಪಟು ೧೫-೧೦ರಿಂದ ಮೇಲುಗೈ ಸಾಧಿಸಿದರು. ಫೇವರಿಟ್ ಅಕ್ಮೆದ್ ಚಕಾಯೆವ್‌ಗೆ ಸೋಲುಣಿಸುವಲ್ಲಿ ಟಕುಟೊ ಯಶಸ್ವಿಯಾದರು. ಅಂದಹಾಗೆ, ೨೦೧೩ರ ವಿ‍ಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪದಕ ಗೆದ್ದಿರುವ ೨೪ರ ಹರೆಯದ ಬಜರಂಗ್ ಈ ಬಾರಿ ಮಾತ್ರ ಚಿನ್ನದ ಪದಕಕ್ಕೆ ಪಟ್ಟು ಹಾಕುವ ಪಣ ತೊಟ್ಟಿದ್ದಾರೆ.

View this post on Instagram

Meet the family of the man who's made the country proud, @bajrangpunia60 ! 🙌 @asiangames2018 AsianGames2018 में पहला 🥇 स्वर्ण पदक हासिल करने वाले भारतीय खिलाड़ी ने किया पुण्य का काम, और ऐसा करने में उन्होंने Koi Kasar Nahi छोड़ी। . . . #AsianGames2018 #AsianGames #Achiever #inspirational #Indian #NationHero #Wrestling #Wrestlerlife #Wrestler #AsianChampion #haryanavi #haryanvi #haryana #indianteam #indiaatasiangames #bajrangpunia #jaat #haryanaale #viralvideo #asiangamesjakarta #asiangamespalembang #energyofasia #kheloindia #jhajjar #jind #sonipat #rohtak #karnal #chandigarh

A post shared by Haryanvi हरियाणवी ™ (@_andy_haryana_) on

ಇದನ್ನೂ ಓದಿ : ಕುಸ್ತಿಯಲ್ಲಿ ಭಾರತದ ಹ್ಯಾಟ್ರಿಕ್‌ ಸ್ವರ್ಣಕ್ಕೆ ನೆರವಾದ ಬಜರಂಗ್ ಪುನಿಯಾ

“ಜಿದ್ದಾಜಿದ್ದಿನ ಎರಡು ಕಾದಾಟದಲ್ಲಿ ಗೆಲುವು ಸಾಧಿಸಿರುವುದು ನನ್ನಲ್ಲಿ ಆತ್ಮವಿಶ್ವಾಸ ತುಂಬಿದೆ. ಕ್ಯೂಬಾ ಕುಸ್ತಿಪಟು ಅತ್ಯಂತ ಬಲಶಾಲಿ ಹಾಗೂ ತಾಂತ್ರಿಕವಾಗಿಯೂ ಅನುಭವ ಉಳ್ಳವರೆಂಬುದು ನನಗೆ ಗೊತ್ತಿತ್ತು. ಆದರೆ, ಎರಡನೇ ಅವಧಿಯಲ್ಲಿ ಅವರು ಹತಾಶೆಗೆ ಒಳಗಾಗಿದ್ದುದು ನನಗೆ ವರವಾಯಿತು. ಆದಾಗ್ಯೂ, ಕೊನೆಯ ನಿಮಿಷದಲ್ಲಿ ಅನಿರೀಕ್ಷಿತ ಆಕ್ರಮಣವೆಸಗಿದ ಆತ ಅನಾಯಾಸವಾಗಿ ಎರಡು ಪಾಯಿಂಟ್ಸ್ ಗಳಿಸಿದರು,’’ ಎಂದು ಪುನಿಯಾ ಕ್ಯೂಬಾ ಪ್ರತಿಸ್ಪರ್ಧಿಯೊಂದಿಗಿನ ಕಾದಾಟವನ್ನು ಬಣ್ಣಿಸಿದ್ದಾರೆ.

“ಒಂದೊಮ್ಮೆ ಎದುರಾಳಿಯನ್ನು ಕೆಳಕ್ಕೆ ಕೆಡವಿದ ನಂತರದಲ್ಲಿ ಸಹಜವಾಗಿಯೇ ಆತ, ಕೊನೆಯ ನಿಮಿಷದಲ್ಲಿ ಆಕ್ರಮಣಕ್ಕೆ ಮುನ್ನುಗ್ಗುತ್ತಾನೆ. ಕ್ಯೂಬಾ ಪಟುವೂ ಇದೇ ತಂತ್ರ ಅನುಸರಿಸಿದ. ಆದರೆ, ನನ್ನೆಲ್ಲಾ ಶಕ್ತಿಮೀರಿ ಈ ಆಕ್ರಮಣವನ್ನು ನಿಭಾಯಿಸಿದೆ. ಫೈನಲ್‌ನಲ್ಲಿ ಇದು ಮರುಕಳಿಸದಂತೆ ನಾನು ಎಚ್ಚರವಹಿಸಬೇಕಿದೆ ಎಂಬುದನ್ನು ಇದು ಸಾರಿದೆ. ಕಳೆದ ಎರಡೂ ಬೌಟ್‌ನ ನಿರ್ಣಾಯಕ ಹಂತದಲ್ಲಿ ಮಹತ್ವದ ಪಾಯಿಂಟ್ಸ್ ಕಳೆದುಕೊಂಡಿರುವ ನಾನು, ಮತ್ತೆ ಇದು ಮರುಕಳಿಸದಂತೆ ಎಚ್ಚರವಹಿಸಬೇಕಿದೆ,’’ ಎಂದೂ ಪುನಿಯಾ ಫೈನಲ್‌ಗೆ ಹೆಚ್ಚು ಜಾಗ್ರತೆ ವಹಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More