ಏಷ್ಯನ್ ಚಾಂಪಿಯನ್ಸ್ | ಹಾಕಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮಿಂಚಿದ ಭಾರತ

ಓಮನ್‌ನ ಮಸ್ಕಟ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಸತತ ಮೂರು ಜಯ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕ್ ವಿರುದ್ಧ ೩-೧ರಿಂದ ಗೆದ್ದ ಭಾರತ, ಜಪಾನ್ ವಿರುದ್ಧ ೯-೦ಯಿಂದ ಪ್ರಭುತ್ವ ಮೆರೆಯಿತು

ಇಂಡೋನೇಷ್ಯಾದಲ್ಲಿ ನಡೆದ ಹದಿನೆಂಟನೇ ಏಷ್ಯಾಡ್‌ನಲ್ಲಿ ಸ್ವರ್ಣ ಪದಕ ಗೆದ್ದು ಬೀಗಿದ್ದ ಜಪಾನೀಯರಿಗೆ ಭಾರತ ಹಾಕಿ ತಂಡ, ಆಘಾತಕಾರಿ ಸೋಲುಣಿಸಿದೆ. ಭಾನುವಾರ (ಅ. ೨೧) ರಾತ್ರಿ ನಡೆದ ತನ್ನ ಮೂರನೇ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ಸಾರಥ್ಯದ ಭಾರತ ತಂಡ, ಏಕಪಕ್ಷೀಯ ಪ್ರದರ್ಶನ ನೀಡಿ ೯-೦ ಗೋಲುಗಳಿಂದ ಜಪಾನ್ ತಂಡಕ್ಕೆ ಸೋಲುಣಿಸಿತು. ಈ ಗೆಲುವಿನೊಂದಿಗೆ ಲೀಗ್ ಹಂತದ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ ಭಾರತ ಅಂಕಪಟ್ಟಿಯಲ್ಲಿ ೯ ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನದಲ್ಲಿದೆ.

ಆರು ರಾಷ್ಟ್ರಗಳ ಈ ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ ಪಂದ್ಯಾವಳಿಯಲ್ಲಿ ಮಲೇಷ್ಯಾ ಆರು ಪಾಯಿಂಟ್ಸ್ ಗಳಿಸುವುದರೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತದ ಪರ ಲಲಿತ್ ಉಪಾಧ್ಯಾಯ್, ಮನ್‌ದೀಪ್ ಸಿಂಗ್ ಹಾಗೂ ತಲಾ ಎರಡು ಗೋಲು ಬಾರಿಸಿದರೆ, ಡ್ರ್ಯಾಗ್ ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮತ್ತು ಪೆನಾಲ್ಟಿ ಗೋಲು ಸೇರಿದಂತೆ ಎರಡು ಗೋಲು ಬಾರಿಸಿದರು.

ಪಂದ್ಯ ಶುರುವಾದ ನಾಲ್ಕು ನಿಮಿಷಗಳಲ್ಲೇ ಭಾರತದ ಗೋಲಿನ ಖಾತೆ ತೆರೆಯುವಲ್ಲಿ ಲಲಿತ್ ಉಪಾಧ್ಯಾಯ್ ಯಶಸ್ವಿಯಾದರು. ಗುರ್ಜಂತ್ ಸಿಂಗ್ ೮ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರವನ್ನು ೨-೦ಗೆ ವಿಸ್ತರಿಸಿದ ಬಳಿಕ ೪೫ನೇ ನಿಮಿಷದಲ್ಲಿ ಉಪಾಧ್ಯಾಯ್ ತಮ್ಮ ಎರಡನೇ ಗೋಲು ಹೊಡೆದರು. ಇದಕ್ಕೂ ಮುನ್ನ ೧೭ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸಿದರು. ಅಂತೆಯೇ ನಾಲ್ಕು ನಿಮಿಷಗಳ ನಂತರ ಪೆನಾಲ್ಟಿ ಕಾರ್ನರ್ ಅವಕಾಶದಡಿ ಹರ್ಮನ್‌ ಮತ್ತೊಂದು ಗೋಲು ಹೊಡೆದರು.

ಇದನ್ನೂ ಓದಿ : ನಿವೃತ್ತಿ ಘೋಷಿಸಿದ ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್

ಪಂದ್ಯದ ಮೊದರ್ಲಾಧಲ್ಲೇ ನಾಲ್ಕು ಗೋಲುಗಳನ್ನು ಬಾರಿಸಿದ ಭಾರತದ ಎದುರು ಜಪಾನ್ ತೀವ್ರ ಒತ್ತಡಕ್ಕೆ ಸಿಲುಕಿತು. ಭಾರತದ ರೈಡರ್‌ಗಳ ಕೈಗೆ ಸಿಲುಕಿದ ಜಪಾನ್‌ನ ರಕ್ಷಣಾ ವಲಯ ಅಭದ್ರತೆಯ ಗೂಡಾಯಿತು. ಇದರ ಫಲವಾಗಿ ಮನ್‌ದೀಪ್ ಪಂದ್ಯದ ಕೊನೆಯ ಕ್ವಾರ್ಟರ್‌ನಲ್ಲಿ ಎರಡು ಗೋಲು ಹೊಡೆದರು. ಅವರು ೪೯ ಹಾಗೂ ೫೭ನೇ ನಿಮಿಷದಲ್ಲಿ ಎರಡು ಗೋಲು ಬಾರಿಸಿದರು. ಇದಕ್ಕೂ ಮುನ್ನ ಪಂದ್ಯದ ಎಂಟನೇ ನಿಮಿಷದಲ್ಲಿ ಜಪಾನ್ ಗೋಲಿ ಟಕಾಶಿ ಯೊಶಿಕಾವ, ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಶಾಟ್ ಅನ್ನು ತಡೆಯಲು ಹೋಗಿ ಪೆಟ್ಟುತಿಂದರು.

ಇನ್ನುಳಿದಂತೆ ಭಾರತದ ಪರ ಆಕಾಶ್‌ದೀಪ್ ಸಿಂಗ್ (೩೬ನೇ ನಿ.) ಮತ್ತು ಸುಮಿತ್ (೪೨ನೇ ನಿ.) ತಲಾ ಒಂದೊಂದು ಗೋಲು ದಾಖಲಿಸಿದರು. ಸಂಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಭಾರತ, ಜಪಾನ್ ವಿರುದ್ಧ ಅಧಿಕಾರಯುತ ಗೆಲುವು ಪಡೆಯಿತು. ಜಪಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ೩-೧ ಗೋಲುಗಳಿಂದ ಭಾರತ ಗೆಲುವು ಸಾಧಿಸಿತು. ಲೀಗ್ ಹಂತದ ತನ್ನ ಕೊನೆಯ ಎರಡು ಪಂದ್ಯಗಳನ್ನು ಭಾರತ ಮಂಗಳವಾರ (ಅ.೨೩) ಮಲೇಷ್ಯಾ ವಿರುದ್ಧ ಆಡಲಿದ್ದರೆ, ಮರುದಿನ ದಕ್ಷಿಣ ಕೊರಿಯಾ ವಿರುದ್ಧ ಸೆಣಸಲಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More