ವಿಶ್ವ ಕಿರೀಟ ತೊಡುವ ಹ್ಯಾಮಿಲ್ಟನ್ ತವಕಕ್ಕೆ ಬ್ರೇಕ್ ಹಾಕಿದ ಕಿಮಿ ರೈಕೊನೆನ್

ವಿಶ್ವ ಫಾರ್ಮುಲಾ ಒನ್ ರೇಸ್ ಪ್ರಶಸ್ತಿಗಾಗಿ ತುಡಿಯುತ್ತಿರುವ ಲೂಯಿಸ್ ಹ್ಯಾಮಿಲ್ಟನ್ ತವಕಕ್ಕೆ ಕಿಮಿ ರೈಕೊನೆನ್ ತಡೆ ಹಾಕಿದರು. ಭಾನುವಾರ (ಅ. ೨೧) ನಡೆದ ಯುಎಸ್ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಹ್ಯಾಮಿಲ್ಟನ್ ಮೂರನೇ ಸ್ಥಾನಕ್ಕೆ ಕುಸಿದರೆ, ಕಿಮಿ ಸುದೀರ್ಘ ಸಮಯದ ನಂತರ ಚಾಂಪಿಯನ್ ಆದರು

ಐದನೇ ವಿಶ್ವ ಫಾರ್ಮುಲಾ ರೇಸ್ ಚಾಂಪಿಯನ್ ಆಗುವ ಲೂಯಿಸ್ ಹ್ಯಾಮಿಲ್ಟನ್ ಕನಸಿಗೆ ತಾತ್ಕಾಲಿಕ ತಡೆಬಿದ್ದಿದೆ. ಆಸ್ಟಿನ್‌ನಲ್ಲಿ ನಡೆದ ಯುಎಸ್ ಗ್ರ್ಯಾನ್ ಪ್ರೀ ರೇಸ್ ಗೆಲ್ಲುವುದರೊಂದಿಗೆ ಐತಿಹಾಸಿಕ ಸಾಧನೆಯ ಗುಂಗಿನಲ್ಲಿದ್ದ ಮರ್ಸಿಡೆಸ್ ಚಾಲಕ ಲೂಯಿಸ್ ಹ್ಯಾಮಿಲ್ಟನ್‌ಗೆ ಫೆರಾರಿ ಚಾಲಕ ಕಿಮಿ ರೈಕೊನೆನ್ ನಿರಾಸೆ ತರಿಸಿದರು. ೩೯ರ ಹರೆಯದ ಫಿನ್ಲ್ಯಾಂಡ್ ಮೂಲದ ಕಿಮಿ, ಸುದೀರ್ಘ ಕಾಲದ ನಂತರ ಅಂದರೆ, ೧೧೩ ರೇಸ್‌ಗಳ ಬಳಿಕ ಫಾರ್ಮುಲಾ ರೇಸ್ ಪ್ರಶಸ್ತಿ ವೇದಿಕೆಯಲ್ಲಿ ಮಧ್ಯದ ಸ್ಥಾನ ಅಲಂಕರಿಸಿದರು.

ಐದು ವರ್ಷಗಳ ಹಿಂದೆ ಅಂದರೆ ೨೦೧೩ರ ಮಾರ್ಚ್ ತಿಂಗಳಿನಲ್ಲಿ ಆಸ್ಟ್ರೇಲಿಯನ್ ಗ್ರ್ಯಾನ್ ಪ್ರೀ ರೇಸ್ ಗೆದ್ದಿದ್ದ ಕಿಮಿ, ಆ ಬಳಿಕ ಒಂದರ ಹಿಂದೊಂದರಂತೆ ನೂರಕ್ಕೂ ಹೆಚ್ಚು ರೇಸ್‌ಗಳಲ್ಲಿ ಭಾಗವಹಿಸಿದ್ದರೂ ಚಾಂಪಿಯನ್ ಆಗಿರಲಿಲ್ಲ. ಈ ಗೆಲುವಿನೊಂದಿಗೆ ಕಿಮಿ ವೃತ್ತಿಬದುಕಿನಲ್ಲಿ ೨೧ನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇನ್ನು, ರೆಡ್‌ಬುಲ್‌ನ ಡಚ್ ಯುವ ಚಾಲಕ ಮ್ಯಾಕ್ಸ್ ವೆರ್ಸ್ಟಾಪ್ಪೆನ್ ಅಚ್ಚರಿ ಎಂಬಂತೆ ಎರಡನೇ ಸ್ಥಾನ ಗಳಿಸಿದರು. ೧೮ನೇ ಗ್ರಿಡ್‌ನೊಂದಿಗೆ ರೇಸ್‌ ಆರಂಭಿಸಿದರಾದರೂ, ೨.೧ ಸೆ.ಗಳ ಅಂತರದಲ್ಲಿ ಎರಡನೇ ಸ್ಥಾನ ಪಡೆದರು.

ಇತ್ತ, ಹ್ಯಾಮಿಲ್ಟನ್ ಪ್ರಶಸ್ತಿ ರೇಸ್‌ನಲ್ಲಿ ಪ್ರಬಲ ಪೈಪೋಟಿ ಒಡ್ಡುತ್ತಿರುವ ಫೆರಾರಿಯ ಸೆಬಾಸ್ಟಿಯನ್ ವೆಟಲ್, ನಾಲ್ಕನೇ ಸ್ಥಾನ ಗಳಿಸಿದರು. ಅಮೆರಿಕನ್ ಗ್ರ್ಯಾನ್ ಪ್ರೀ ರೇಸ್‌ನ ಫಲಿತಾಂಶದಿಂದಾಗಿ, ಹ್ಯಾಮಿಲ್ಟನ್ ಪ್ರಶಸ್ತಿ ಗೆಲ್ಲುವ ಕಾತರವನ್ನು ಮುಂದಿನ ವಾರ ನಡೆಯಲಿರುವ ಮೆಕ್ಸಿಕೊ ಗ್ರ್ಯಾನ್ ಪ್ರೀಗೆ ವಿಸ್ತರಿಸಿದೆ. ಪ್ರಸಕ್ತ ಹ್ಯಾಮಿಲ್ಟನ್ ೩೪೬ ಪಾಯಿಂಟ್ಸ್ ಗಳಿಸಿರುವ ಹ್ಯಾಮಿಲ್ಟನ್, ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ವೆಟಲ್ ಅವರಿಗಿಂತ ೭೦ ಪಾಯಿಂಟ್ಸ್ ಮುನ್ನಡೆಯಲ್ಲಿದ್ದಾರೆ. ಕೊನೆಯ ಮೂರು ರೇಸ್‌ಗಳಲ್ಲಿ ಇನ್ನೂ ೭೫ ಪಾಯಿಂಟ್ಸ್ ಗಳಿಸುವ ಅವಕಾಶವಿದೆ. ಒಂದೊಮ್ಮೆ ಮೆಕ್ಸಿಕೋದಲ್ಲಿ ವೆಟಲ್ ಚಾಂಪಿಯನ್ ಆದರೆ, ಬ್ರಿಟನ್ ಚಾಲಕ ಹ್ಯಾಮಿಲ್ಟನ್, ಮತ್ತೊಂದು ವಾರ ಕಾಯುವುದು ಅನಿವಾರ್ಯವಾಗುತ್ತದೆ.

ಇದನ್ನೂ ಓದಿ : ವಿಶ್ವ ಚಾಂಪಿಯನ್‌ಶಿಪ್‌ನತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ಹ್ಯಾಮಿಲ್ಟನ್

56 ಲ್ಯಾಪ್‌ಗಳನ್ನು ಕಿಮಿ ರೈಕೊನೆನ್, ೧ ಗಂಟೆ ೩೪ ನಿಮಿಷ ೧೮.೬೪೩ ಸೆ.ಗಳಲ್ಲಿ ಕ್ರಮಿಸಿದರೆ, ರೆಡ್ ಬುಲ್ ಚಾಲಕ ವೆರ್ಸ್ಟಾಪ್ಪೆನ್ +೧.೨೮೧ ಸೆ.ಗಳಲ್ಲಿ ಗುರಿಮುಟ್ಟಿದರು. ಇನ್ನು, ಹ್ಯಾಮಿಲ್ಟನ್ + ೨.೩೪೨ ಸೆ.ಗಳಲ್ಲಿ ಗುರಿ ಮುಟ್ಟಿ ತೃತೀಯ ಸ್ಥಾನ ಪಡೆದರು. ಬಹುತೇಕ ಅಮೆರಿಕನ್ ಗ್ರ್ಯಾನ್ ಪ್ರೀ ರೇಸ್‌ನಲ್ಲೇ ಹ್ಯಾಮಿಲ್ಟನ್ ಉದ್ದೇಶಿತ ಗುರಿ ಮುಟ್ಟುತ್ತಾರೆ ಎಂದುಕೊಂಡಿದ್ದವರೆಲ್ಲರೂ ಕಿಮಿಯ ಕ್ಷಿಪ್ರ ವೇಗದಲ್ಲಿ ಕೊಚ್ಚಿಹೋದರು!

“ಇದೊಂದು ಮಹಾನ್ ವಾರಾಂತ್ಯ. ಪ್ರತೀ ಸಂದರ್ಭದಲ್ಲಿಯೂ ಕಾರು ನಿಯಂತ್ರಣಕ್ಕೆ ತಕ್ಕಂತೆ ಅದ್ಭುತವಾಗಿ ಸ್ಪಂದಿಸಿತು. ವಿಜಯದ ಗುರಿ ಇನ್ನೇನು ಸಮೀಪ ಇದ್ದಾಗ ಕಾರಿನ ಟೈರ್‌ಗಳು ನಿಯಂತ್ರಣಕ್ಕೆ ಸಿಲುಕದಷ್ಟು ವೇಗದಲ್ಲಿದ್ದವು. ಆದರೆ, ಅವು ನಿಯಂತ್ರಣ ತಪ್ಪದಂತೆ ಹಿಡಿದಿಟ್ಟುಕೊಳ್ಳುವಷ್ಟು ವೇಗವನ್ನು ಕಾಯ್ದುಕೊಂಡದ್ದು ಕೊನೆಯವರೆಗೂ ಟೈರ್‌ಗಳು ಅಸ್ಥಿರತೆ ತೋರದಂತೆ ನೋಡಿಕೊಳ್ಳಲಾಯಿತು. ನಿಜ, ನಾವು ಸುದೀರ್ಘ ಸಮಯ ತೆಗೆದುಕೊಂಡೆವು. ಆದರೆ, ಅಂತಿಮವಾಗಿ, ಇಲ್ಲಿ ಪ್ರಶಸ್ತಿ ಪಡೆಯುವಲ್ಲಿ ಸಫಲವಾದೆವು,’’ ಎಂದು ಗೆಲುವಿನ ಬಳಿಕ ಕಿಮಿ ಪ್ರತಿಕ್ರಿಯಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More