ಕೊಹ್ಲಿ-ರೋಹಿತ್ ಪ್ರಚಂಡ ಬ್ಯಾಟಿಂಗ್‌ನಲ್ಲಿ ಕರಗಿದ ಕೆರಿಬಿಯನ್ನರ ಜಯದ ಕನಸು

ವಿರಾಟ್ ಅನುಪಸ್ಥಿತಿಯಲ್ಲಿ ಏಷ್ಯಾ ಕಪ್ ಗೆದ್ದುಕೊಟ್ಟ ರೋಹಿತ್ ಶರ್ಮಾ, ಅದೇ ಫಾರ್ಮ್‌ನಲ್ಲಿ ವಿಜೃಂಭಿಸಿದರು. ಇತ್ತ, ಇಂಗ್ಲೆಂಡ್ ಪ್ರವಾಸದ ಬಳಿಕ ಶತಕ ಸಿಡಿಸಿದ್ದಲ್ಲದೆ ಈ ಋತುವಿನಲ್ಲಿ ೨ ಸಹಸ್ರ ರನ್ ಪೂರೈಸಿದ ಕೊಹ್ಲಿ ಬೆರಗು ಮೂಡಿಸಿದರು. ಈ ಇಬ್ಬರ ಆರ್ಭಟದಲ್ಲಿ ವಿಂಡೀಸ್ ಜಯದ ಕನಸು ಕಮರಿತು

ಇಂಗ್ಲೆಂಡ್ ವಿರುದ್ಧದ ವಿದೇಶಿ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ನೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವಿರಾಟ್ ಕೊಹ್ಲಿ, ಸರಿಸುಮಾರು ಒಂದೂವರೆ ತಿಂಗಳುಗಳ ಬಳಿಕ ಮತ್ತದೇ ಫಾರ್ಮ್‌ನಲ್ಲಿ ವಿಜೃಂಭಿಸಿದ್ದು ವಿಸ್ಮಯವೇ. ಅವರಿಗೆ ಸರಿಸಾಟಿಯಂತೆ ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೂಡ ಅಜೇಯ ಶತಕದಲ್ಲಿ ಮಿಂದೆದ್ದು ಕೆರಿಬಿಯನ್ನರ ಜಯದ ಕನಸನ್ನು ಕಸಿಯಿತಷ್ಟೇ ಅಲ್ಲ, ತವರಿನಲ್ಲಿ ಆತಿಥೇಯರನ್ನು ಕಟ್ಟಿಹಾಕಲು ೩೦೦+ ರನ್‌ಗಳೂ ಸಾಕಾಗದು, ಬದಲಿಗೆ ಮೊನಚಿನ ಬೌಲಿಂಗ್ ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಿತು.

ಭಾನುವಾರ ಸಂಜೆ ಗೌಹಾತಿಯ ಬರ್ಸಾಪುರ ಕ್ರೀಡಾಂಗಣದಲ್ಲಿ ನಡೆದ ಐದು ಏಕದಿನ ಪಂದ್ಯ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ೮ ವಿಕೆಟ್‌ಗಳ ಭವ್ಯ ಅಧಿಕಾರಯುತ ಗೆಲುವು ಸಾಧಿಸಿತು. ವಿಂಡೀಸ್ ೩೦೦ ರನ್‌ಗಳ ಗಡಿ ದಾಟಿದಾಗ ಪಂದ್ಯ ರೋಚಕವಾಗಿರಲಿದೆ ಎಂಬ ಸ್ಥಿತಿ ನಿರ್ಮಾಣವಾಗಿತ್ತಾದರೂ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜತೆಯಾಟದಲ್ಲಿ ಪಂದ್ಯ ಏಕಪಕ್ಷೀಯವಾಗಿದ್ದುದು ಮಾತ್ರ ಕೆರಿಬಿಯರನ್ನರನ್ನು ಕಂಗೆಡಿಸಿತು.

ಬರ್ಸಾಪುರದಲ್ಲಿ ರನ್ ಹೊಳೆ!

ಇಂಡೋ-ಕೆರಿಬಿಯನ್ ನಡುವಣದ ಮೊದಲ ಪಂದ್ಯದಲ್ಲಿ ಬರೋಬ್ಬರಿ 648 ರನ್‌ಗಳು ಹರಿದದ್ದು ಇತ್ತಂಡಗಳ ಬ್ಯಾಟಿಂಗ್ ಕೌಶಲಕ್ಕೆ ಸಾಕ್ಷಿಯಾಯಿತು. ಈ ಕ್ರೀಡಾಂಗಣದಲ್ಲಿ ಮೂರು ಅಬ್ಬರದ ಶತಕಗಳು ದಾಖಲಾದವು. ವಿರಾಟ್-ರೋಹಿತ್ ಶತಕಕ್ಕೂ ಮುನ್ನ ವಿಂಡೀಸ್‌ನ ಶಿಮ್ರೊನ್ ಹೆಟ್ಮೆಯರ್ ಕೂಡ ವೃತ್ತಿಬದುಕಿನ ಮೂರನೇ ಶತಕ ದಾಖಲಿಸಿದರು. ಆದರೆ, ಅವರ ಶತಕ ತಂಡದ ಗೆಲುವಿಗೆ ಬರಲಿಲ್ಲವಷ್ಟೆ.

ಮಧ್ಹಾಹ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ವಿರಾಟ್ ಪಡೆ ದಿಗಿಲುಬೀಳುವಂತೆ ಆಡಿದ ವಿಂಡೀಸ್, ಒಂದು ಹಂತದಲ್ಲಿ ಅಸ್ಥಿರ ಆಟದಿಂದ ತಡಬಡಾಯಿಸಿದರೂ, 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 322 ರನ್‌ ಗಳಿಸುವಲ್ಲಿ ಸಫಲವಾಯಿತು. ಸವಾಲಿನ ಮೊತ್ತವನ್ನು ಭೇದಿಸಲು ಮುಂದಾದ ಭಾರತ ಆರಂಭದಲ್ಲಿಯೇ ಆಘಾತ ಎದುರಿಸಿತು. ಎರಡನೇ ಓವರ್‌ನಲ್ಲಿಯೇ ಶಿಖರ್ ಧವನ್ (4 ರನ್) ಒಷೇನ್ ಥಾಮಸ್ ಎಸೆತಕ್ಕೆ ಕ್ಲೀನ್‌ ಬೌಲ್ಡ್‌ ಆಗುತ್ತಿದ್ದಂತೆ ವಿಂಡೀಸ್ ಆಟಗಾರರು ಕುಣಿದಾಡಿ ಸಂಭ್ರಮಿಸಿದರು. ಆದರೆ, ಕೆರಿಬಿಯನ್ನರ ಸಂಭ್ರಮ ಇಲ್ಲಿಗಷ್ಟೇ ಸೀಮಿತವಾಗಿತ್ತು.

ಇದನ್ನೂ ಓದಿ : ಕೊಹ್ಲಿ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿ; ಮರುಕಳಿಸಿದ ಭದ್ರತಾ ವೈಫಲ್ಯ

ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ

ಧವನ್ ನಿರ್ಗಮನದ ನಂತರ ಕ್ರೀಸ್‌ಗೆ ಇಳಿದ ನಾಯಕ ವಿರಾಟ್ ಕೊಹ್ಲಿ ಬೌಲರ್‌ಗಳ ಎಸೆತಗಳನ್ನು ನಿರ್ದಯವಾಗಿ ದಂಡಿಸಿದರು. ಅವರ ಆಟದ ವೇಗ ಮತ್ತು ಅಬ್ಬರಕ್ಕೆ ಪ್ರತಿಯಾಗಿ ರೋಹಿತ್ ಶರ್ಮಾ ಒಡನೆಯೇ ಸ್ಪಂದಿಸಲಿಲ್ಲ. ಎಂದಿನಂತೆ ನಿಧಾನಗತಿಯ ಆದರೆ, ರಕ್ಷಣಾತ್ಮಕ ಆಟಕ್ಕೆ ಮೊರೆಹೋದ ಅವರು, ಕ್ರಮೇಣ ಕೊಹ್ಲಿಗೂ ಮಿಗಿಲಾದ ಆಕ್ರಮಣಕ್ಕಿಳಿದರು. ಮೊದಲಿಗೆ, ಹೆಚ್ಚು ಎಸೆತಗಳನ್ನು ಕೊಹ್ಲಿಗೆ ಎದುರಿಸಲು ಬಿಟ್ಟರು. ವಿರಾಟ್ ಅರ್ಧಶತಕ ಗಳಿಸಿದಾಗ ಶರ್ಮಾ ಕೇವಲ 23 ರನ್‌ ಗಳಿಸಿದ್ದರು. ಈ ಹಂತದಲ್ಲಿ ವಿರಾಟ್ 2018ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಎರಡು ಸಾವಿರ ರನ್‌ ಗಳಿಸಿದ ಮೈಲುಗಲ್ಲು ದಾಟಿದರು. ಇದರೊಂದಿಗೆ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದರು.

ಇದೇ ಬಿರುಸಿನಲ್ಲಿ ಮುನ್ನಡೆದ ಕೊಹ್ಲಿ, ಒಟ್ಟು 88 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಆಗ ರೋಹಿತ್ ಗಳಿಕೆ 55 ರನ್‌. ಆಕರ್ಷಕ ಕವರ್‌ ಡ್ರೈವ್‌, ಪುಲ್, ಕಟ್, ಅಪ್ಪರ್ ಕಟ್‌ ಮತ್ತು ಬ್ಯಾಕ್‌ಫುಟ್‌ ಡ್ರೈವ್‌ಗಳೊಂದಿಗೆ ವಿಜೃಂಭಿಸಿದ ವಿರಾಟ್ ಶತಕದಲ್ಲಿ ಒಂದೇ ಒಂದು ಸಿಕ್ಸರ್ ಕೂಡ ದಾಖಲಾಗಿರಲಿಲ್ಲ. ಮತ್ತೊಂದು ಬದಿಯಲ್ಲಿದ್ದ ರೋಹಿತ್ ಮಾತ್ರ 4 ಸಿಕ್ಸರ್ ದಾಖಲಿಸಿದ್ದರು. 84ನೇ ಎಸೆತದಲ್ಲಿ ರೋಹಿತ್ ೨೦ನೇ ಶತಕ ದಾಖಲಿಸಿದರು. ಇವರಿಬ್ಬರೂ ಎರಡನೇ ವಿಕೆಟ್ ಜತೆಯಾಟದಲ್ಲಿ 246 ರನ್‌ಗಳನ್ನು ಸೇರಿಸಿದರು.

33ನೇ ಓವರ್‌ನಲ್ಲಿ ವಿರಾಟ್ ಫ್ರಂಟ್‌ಪುಟ್‌ ಶಾಟ್‌ಗೆ ಮುನ್ನುಗ್ಗಿ ಸ್ಟಂಪ್ಡ್‌ ಆದರು. ಅವರ ನಿರ್ಗಮನದೊಂದಿಗೆ ವಿರಾಟ್-ರೋಹಿತ್ ಜತೆಯಾಟಕ್ಕೂ ತೆರೆಬಿತ್ತು. ಕೊಹ್ಲಿ ಪ್ರೇಕ್ಷಕರತ್ತ ಬ್ಯಾಟ್‌ ಬೀಸಿ ಅಭಿನಂದನೆ ಸಲ್ಲಿಸುತ್ತಲೇ ಪೆವಿಲಿಯನ್‌ಗೆ ತೆರಳಿದರೆ, ಬಳಿಕ ಬಂದ ಅಂಬಟಿ ರಾಯುಡು (ಔಟಾಗದೆ 22) ಮತ್ತು ರೋಹಿತ್ ತಂಡಕ್ಕೆ ಇನ್ನೂ ೪೫ ಎಸೆತಗಳು ಬಾಕಿ ಇರುವಂತೆಯೇ ಜಯ ತಂದಿತ್ತರು.

ಇದಕ್ಕೂ ಮುನ್ನ ವಿಂಡೀಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಶಿಮ್ರೊನ್ ಹೆಟ್ಮೆಯರ್ ತಂಡದ ಮೊತ್ತ ೩೦೦ರ ಗಡಿ ದಾಟುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಭಾರತದ ವಿರುದ್ಧ ಮೊದಲ ಶತಕ ದಾಖಲಿಸಿದ ಅವರು, ವಿಂಡೀಸ್ ಪರ ವೇಗವಾಗಿ ಮೂರು ಶತಕಗಳನ್ನು ದಾಖಲಿಸಿದ ಆಟಗಾರ ಎನಿಸಿದರು. ಜತೆಗೆ, ವಿಂಡೀಸ್‌ ದೈತ್ಯ ಸರ್ ವಿವ್ ರಿಚರ್ಡ್ಸ್ ದಾಖಲೆಯನ್ನು ಹಿಂದಿಕ್ಕಿದರು. ಕೇವಲ ೭೮ ಎಸೆತಗಳಲ್ಲಿ ತಲಾ ಆರು ಬೌಂಡರಿ, ಆರು ಸಿಕ್ಸರ್ ಸೇರಿದ ಮೂರಂಕಿ ಮುಟ್ಟಿದ ಹೆಟ್ಮೆಯರ್ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ೩೯ನೇ ಓವರ್‌ನಲ್‌ಲಿ ಹೆಟ್ಮೆಯರ್ ವಿಕೆಟ್ ಕಳೆದುಕೊಂಡದ್ದು. ಒಂದೊಮ್ಮೆ ಅವರೇನಾದರೂ ಕ್ರೀಸ್‌ನಲ್ಲಿ ಕೊನೆಯವರೆಗೂ ಇದ್ದಿದ್ದರೆ ವಿಂಡೀಸ್ ೪೦೦ರ ಗಡಿ ಮುಟ್ಟುತ್ತಿತ್ತು ಎಂಬುದರಲ್ಲಿ ಯಾವುದೇ ಸಂದೇಹ ಇರಲಿಲ್ಲ.

ಸಂಕ್ಷಿಪ್ತ ಸ್ಕೋರ್

ವೆಸ್ಟ್‌ಇಂಡೀಸ್: ೩೨೨/೮ (ಕೀರನ್ ಪೊವೆಲ್ ೫೧, ಶಿಮ್ರೊನ್ ಹೆಟ್ಮೆಯರ್ ೧೦೬, ಜೇಸನ್ ಹೋಲ್ಡರ್ ೩೮; ಯಜುವೇಂದ್ರ ಚಾಹಲ್ ೪೧ಕ್ಕೆ ೩, ಮೊಹಮದ್ ಶಮಿ ೮೧ಕ್ಕೆ ೨, ರವೀಂದ್ರ ಜಡೇಜಾ ೬೬ಕ್ಕೆ ೨); ಭಾರತ: ೪೨.೧ ಓವರ್‌ಗಳಲ್ಲಿ ೩೨೬/೨ (ರೋಹಿತ್ ಶರ್ಮಾ ೧೫೨*; ವಿರಾಟ್ ಕೊಹ್ಲಿ ೧೪೦, ಅಂಬಟಿ ರಾಯುಡು ೨೨*; ಒಶೇನ್ ಥಾಮಸ್ ೮೩ಕ್ಕೆ ೧, ದೇವೇಂದ್ರ ಬಿಶೂ ೭೨ಕ್ಕೆ ೧); ಫಲಿತಾಂಶ: ಭಾರತಕ್ಕೆ ೮ ವಿಕೆಟ್ ಗೆಲುವು ಮತ್ತು ೫ ಪಂದ್ಯ ಸರಣಿಯಲ್ಲಿ ೧-೦ ಮುನ್ನಡೆ; ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More