ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ

ಚಿನ್ನಕ್ಕೆ ಪಟ್ಟು ಹಾಕುವೆನೇ ಹೊರತು ಮತ್ತಾವುದಕ್ಕೂ ಅಲ್ಲ ಎಂದು ಜಪಾನ್ ಮಲ್ಲನೊಂದಿಗಿನ ಕಾದಾಟಕ್ಕೂ ಮುನ್ನ ಛಲ ತೊಟ್ಟಿದ್ದ ಬಜರಂಗ್ ಪುನಿಯಾ ಫೈನಲ್‌ನಲ್ಲಿ ಮುಗ್ಗರಿಸಿದರು. ಬೆಳ್ಳಿ ಪದಕಕ್ಕೆ ತೃಪ್ತವಾದರೂ, ವಿಶ್ವ ಕುಸ್ತಿಯಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕುಸ್ತಿಪಟು ಎನಿಸಿದರು ಬಜರಂಗ್

ಪುರುಷರ ೬೫ ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮೆರೆಯಲು ತುಡಿಯುತ್ತಿದ್ದ ಬಜರಂಗ್ ಪುನಿಯಾ, ಫೈನಲ್‌ನಲ್ಲಿ ಜಪಾನ್ ದೇಶದ ಯುವ ಕುಸ್ತಿಪಟು ಟಕುಟೊ ಒಟೊಗುರೊ ಎದುರು ೯-೧೬ರಿಂದ ಸೋಲನುಭವಿಸಿ ರಜತ ಪದಕಕ್ಕೆ ತೃಪ್ತವಾದರು. ೨೪ರ ಹರೆಯದ ಬಜರಂಗ್ ಪುನಿಯಾಗಿಂತಲೂ ತಾನು ಶಕ್ತಿಶಾಲಿ ಎಂಬುದನ್ನು ಟಕುಟೊ ನಿರೂಪಿಸಿದರು.

ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಸೋಮವಾರ (ಅ. ೨೨) ರಾತ್ರಿ ನಡೆದ ಚಿನ್ನದ ಪದಕಕ್ಕಾಗಿನ ಸೆಣಸಾಟ ತೀವ್ರ ರೋಚಕತೆಯಿಂದ ಕೂಡಿರುವ ಸಾಧ್ಯತೆ ಇತ್ತು. ಆದರೆ, ಬಜರಂಗ್ ಎದುರು ಶುರುವಿನಿಂದಲೇ ಚಾಣಾಕ್ಷತನ ಮೆರೆದ ಟಕುಟೊ, ಭಾರೀ ಅಂತರದಿಂದ ಬಜರಂಗ್‌ಗೆ ಸೋಲುಣಿಸಿದರು. ೧೯ರ ಯುವ ಟಕುಟೊ ಈ ಮೂಲಕ ದೇಶದ ಮೊಟ್ಟಮೊದಲ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡರು. ಟಕುಟೊಗೂ ಮುನ್ನ ಯುಜಿ ಟಕಾಡ ೧೯೭೬ರ ಮಾಂಟ್ರಿಯಲ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ವಿಜೇತ ಎನಿಸಿದ್ದರು. ೧೯೭೪ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾಗ ಅವರಿಗೆ ೨೦ರ ಹರೆಯ.

ಅಂದಹಾಗೆ, ಫೈನಲ್‌ನಲ್ಲಿ ಮುಗ್ಗರಿಸಿದರೂ, ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಕುಸ್ತಿಪಟುವಾಗಿ ಬಜರಂಗ್ ಪುನಿಯಾ ಹೊರಹೊಮ್ಮಿದರು. ೨೦೧೩ರ ಆವೃತ್ತಿಯಲ್ಲಿ ಬಜರಂಗ್ ೬೦ ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ೨೦೧೦ರ ಮಾಸ್ಕೋ ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸುಶೀಲ್ ಕುಮಾರ್ ಚಿನ್ನ ಗೆದ್ದಿದ್ದರು. ಈ ಬಾರಿ ಸುಶೀಲ್ ಸಾಧನೆಯನ್ನು ಸರಿಗಟ್ಟುವ ಗುರಿ ಹೊತ್ತಿದ್ದ ಬಜರಂಗ್‌ಗೆ ಕೊನೆಗೂ ಅದು ಸಾಧ್ಯವಾಗಲಿಲ್ಲ.

ಇದನ್ನೂ ಓದಿ : ಸುಶೀಲ್ ನಿರಾಸೆ ಹೋಗಲಾಡಿಸಿ ಬಂಗಾರದ ಭವ್ಯ ಇತಿಹಾಸ ಬರೆದ ಬಜರಂಗ್

ಅಂದಹಾಗೆ, ಫೈನಲ್‌ ಬೌಟ್‌ನಲ್ಲಿ ಪುನಿಯಾ ಆರಂಭದಲ್ಲೇ ೦-೫ರಿಂದ ಹಿನ್ನಡೆ ಅನುಭವಿಸಿ ಕಳೆಗುಂದಿದರು. ಮೊದಲ ಅವಧಿಯಲ್ಲಿ ಸಂಪೂರ್ಣ ಪ್ರಭುತ್ವ ಮೆರೆದ ಟಕುಟೊ, ಬಜರಂಗ್ ಉಸಿರುಗಟ್ಟುವಂತೆ ಮಾಡಿದರು. ಆದರೆ, ಪಟ್ಟು ಬಿಡದ ಬಜರಂಗ್ ಕೇವಲ ೬-೭ ಪಾಯಿಂಟ್ಸ್‌ಗಳ ಅಂತರದಿಂದ ಮೊದಲ ಅವಧಿಯಲ್ಲಿ ಟಕುಟೊ ವಿರುದ್ಧ ಸರಿಸಮ ಪ್ರದರ್ಶನ ನೀಡಿದರು.

ಮೊದಲ ಅವಧಿಯಲ್ಲಿ ಬಜರಂಗ್ ತಿರುಗಿಬಿದ್ದ ಪರಿಯ ಅರಿವಿದ್ದ ಟಕುಟೊ, ನಂತರದಲ್ಲಿ ಇನ್ನಷ್ಟು ಎಚ್ಚರವಹಿಸಿದರು. ಒಂದೆರಡು ಚಲನೆಗಳಲ್ಲಂತೂ ಬಜರಂಗ್ ಕಾಲುಗಳನ್ನು ಹಿಡಿತಕ್ಕೆ ಪಡೆದ ಜಪಾನ್ ಮಲ್ಲ, ಬಜರಂಗ್ ಅತ್ತಿತ್ತ ಚಲಿಸದಂತೆ ನೋಡಿಕೊಂಡರು. ಎರಡನೇ ಅವಧಿಯಲ್ಲಿನ ಈ ಆಕ್ರಮಣಕಾರಿ ನಡೆಯು ಬಜರಂಗ್ ಸೋಲಲು ಕಾರಣವಾಯಿತು. ಆನಂತರದಲ್ಲಿಯೂ ಮುನ್ನಡೆ ಪಡೆದ ಟಕುಟೊ, ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More