ಐಎಸ್‌ಎಲ್ ಫುಟ್ಬಾಲ್ | ಛೆಟ್ರಿ-ಮಿಕು ಮೋಡಿಗೆ ಮರುಳಾದ ಪುಣೆ ಎಫ್‌ಸಿ

ಮೊದಲಾರ್ಧದಲ್ಲಿ ನಾಯಕ ಸುನೀಲ್ ಛೆಟ್ರಿ ದಾಖಲಿಸಿದ ಎರಡು ಗೋಲುಗಳ ಜತೆಗೆ ವಿರಾಮದ ಬಳಿಕ ಮಿಕು ಮತ್ತೊಂದು ಗೋಲು ಬಾರಿಸಿ ಬಿಎಫ್‌ಸಿ ತವರಿನಾಚೆ ಜಯದ ಖಾತೆ ತೆರೆಯುವಂತೆ ಮಾಡಿದರು. ಬಿಎಫ್‌ಸಿಯ ಆಕ್ರಮಣಶೀಲ ಆಟದಲ್ಲಿ ಆತಿಥೇಯ ಪುಣೆ ಸಿಟಿ ಸಂಪೂರ್ಣ ಮಂಕಾಯಿತು

ಹಾಲಿ ರನ್ನರ್ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ) ತವರಿನಾಚೆ ಈ ಋತುವಿನಲ್ಲಿ ಮೊದಲ ಜಯದ ಸವಿಯುಂಡಿತು. ತಂಡದ ಅಪ್ರತಿಮ ಆಟಗಾರರಾದ ಸುನಿಲ್ ಚೆಟ್ರಿ ಹಾಗೂ ಮಿಕು ಜೋಡಿಯ ಮೋಡಿಗೆ ಪುಎಣೆ ಎಫ್‌ಸಿ ಮರುಳಾಯಿತು. ಈ ಇಬ್ಬರು ದಾಖಲಿಸಿದ ಮೂರು ಗೋಲುಗಳ ನೆರವಿನೊಂದಿಗೆ ಬಿಎಫ್‌ಸಿ, ಪುಣೆ ಸಿಟಿಯನ್ನು ೩-೦ ಗೋಲುಗಳಿಂದ ಮಣಿಸಿ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿಯಿತು.

ಕಳೆದ ಆವೃತ್ತಿಯಲ್ಲಿಯೂ ತವರಿನಾಚೆ ಸುನೀಲ್ ಛೆಟ್ರಿ ಸಾರಥ್ಯದ ಬಿಎಫ್‌ಸಿ ಅಮೋಘ ಪ್ರದರ್ಶನ ತೋರಿತ್ತು. ಆಡಿದ ಒಂಬತ್ತು ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಜಯಿಸಿದ್ದ ಬಿಎಫ್‌ಸಿ ತಾನೆಷ್ಟು ಅಪಾಯಕಾರಿ ತಂಡವೆಂಬುದನ್ನು ಸ್ಫುಟಪಡಿಸಿತ್ತು. ಸೋಮವಾರ (ಅ. ೨೨) ನಡೆದ ಪಂದ್ಯದ ಗೆಲುವಿನೊಂದಿಗೆ ಈ ಬಾರಿಯೂ ಅದೇ ಹಾದಿಯಲ್ಲಿ ಸಾಗುವ ಸುಳಿವು ನೀಡಿದೆ. ಸುನೀಲ್ ಛೆಟ್ರಿ (೪೧ನೇ ನಿ. ಮತ್ತು ೪೩ನೇ ನಿ.) ಮತ್ತು ಮಿಕು (೬೪ನೇ ನಿ.) ಪುಣೆ ವಿರುದ್ಧ ಗೆಲುವಿನ ರೂವಾರಿಗಳೆನಿಸಿದರು.

ಅಂದಹಾಗೆ, ಬಾಲೆವಾಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಸ್ಪರ್ಧಾತ್ಮಕವಾಗಿರಲಿದೆ ಎಂಬ ನಿರೀಕ್ಷೆ ಇತ್ತಾದರೂ, ಬಿಎಫ್‌ಸಿ ಆಟಗಾರರು ತಮ್ಮ ಆಕ್ರಮಣಕಾರಿ ಆಟದಿಂದ ಆ ನಿರೀಕ್ಷೆಯನ್ನು ಹುಸಿಗೊಳಿಸಿದರು. ಆದಾಗ್ಯೂ, ಪಂದ್ಯ ಶುರುವಾದ ಕೆಲವು ನಿಮಿಷ ಎರಡೂ ತಂಡಗಳು ಆಕ್ರಮಣಕ್ಕೆ ಮುಂದಾಗಲಿಲ್ಲ. ಹೀಗಿರುವಾಗ, ಏಳನೇ ನಿಮಿಷದಲ್ಲಿ ಆತಿಥೇಯ ತಂಡದ ಎಮಿಲಿಯಾನೊ ಅಲ್ಫಾರೊ ಚೆಂಡನ್ನು ಹಿಡಿತಕ್ಕೆ ಪಡೆದು ಗೋಲಿಗಾಗಿ ಮುಗಿಬಿದ್ದಾಗ ಆಟ ಬಿರುಸುಪಡೆದುಕೊಂಡಿತು. ಇತ್ತ, ಬಿಎಫ್‌ಸಿ ಕೂಡ ಮರುಕ್ಷಣದಲ್ಲೇ ಆಕ್ರಮಣ ಆರಂಭಿಸಿತು. 10ನೇ ನಿಮಿಷದಲ್ಲಿ ಮಿಕು ಪುಣೆ ಆವರಣದಲ್ಲಿಆತಂಕ ಸೃಷ್ಟಿಸಿದರು. ಆದರೆ ಚೆಂಡನ್ನು ಗುರಿ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಇದನ್ನೂ ಓದಿ : ೨೦೨೧ರವರೆಗೆ ಬಿಎಫ್‌ಸಿ ಜೊತೆಗಿನ ಸಖ್ಯ ಮುಂದುವರಿಸಿದ ಸುನಿಲ್ ಛೆಟ್ರಿ

ನಂತರದ 16ನೇ ನಿಮಿಷದಲ್ಲಿ ಉದಾಂತ ಸಿಂಗ್ ಅವರಿಗೂ ಉತ್ತಮ ಅವಕಾಶ ಲಭಿಸಿತಾದರೂ, ಉದಾಂತ ಕೂಡ ಗೋಲು ಗಳಿಸುವಲ್ಲಿ ಸಫಲವಾಗಲಿಲ್ಲ. ಈ ವೈಫಲ್ಯಗಳ ನಂತರ ಬಿಎಫ್‌ಸಿಯ ಆಕ್ರಮಣ ಮತ್ತಷ್ಟು ತೀವ್ರತೆ ಪಡೆದುಕೊಂಡಿತು. 41ನೇ ನಿಮಿಷದಲ್ಲಿ ಸುನಿಲ್ ಛೆಟ್ರಿ ಎದುರಾಳಿ ತಂಡದ ಡಿಫೆಂಡರ್‌ಗಳು ಮತ್ತು ಗೋಲ್‌ಕೀಪರ್‌ ವಂಚಿಸಿ ಗೋಲು ಬಾರಿಸುತ್ತಿದ್ದಂತೆ ಬಿಎಫ್‌ಸಿ ಪಾಳೆಯದಲ್ಲಿ ಹರ್ಷವೆಬ್ಬಿಸಿತು. ಪುಣೆ ತಂಡದ ಆವರಣದಲ್ಲಿ ಡಿಮಾಸ್ ಡೆಲ್ಗಾಡೊ ನೀಡಿದ ಪಾಸ್‌ಗೆ ಎದೆಯೊಡ್ಡಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಛೆಟ್ರಿ ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಮುಂದೆ ಸಾಗಿ ಪುಣೆ ಗೋಲಿಯ ಸಮೀಪದಲ್ಲೇ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.

ಎರಡೇ ನಿಮಿಷಗಳ ಅಂತರದಲ್ಲಿ ಮಿಕು ಬಿಎಫ್‌ಸಿಯ ಎರಡನೇ ಗೋಲಿಗೆ ಕಾರಣರಾದರು. ಪುಣೆ ತಂಡದ ರಕ್ಷಣಾ ವಿಭಾಗದವರಿಂದ ಚೆಂಡನ್ನು ಕಸಿದುಕೊಂಡ ಅವರು ಎಡಭಾಗದಲ್ಲಿ ಹೊಂಚು ಹಾಕಿ ನಿಂತಿದ್ದ ಸುನಿಲ್ ಛೆಟ್ರಿ ಕಡೆಗೆ ತಳ್ಳಿದರು. ಚುರುಕಿನ ಪಾದಚಲನೆಯೊಂದಿಗೆ ಮುನ್ನುಗ್ಗಿದ ಛೆಟ್ರಿ ಮಿಂಚಿನ ವೇಗದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಪ್ರಥಮಾರ್ಧದಲ್ಲೇ ಬಿಎಫ್‌ಸಿ ೨-೦ ಮುನ್ನಡೆ ಪಡೆಯುವಂತೆ ಮಾಡಿದರು.

ಎರಡು ಗೋಲುಗಳ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಬಿಎಫ್‌ಸಿ, ದ್ವಿತೀಯಾರ್ಧದಲ್ಲಿ ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ಯತ್ನಕ್ಕೆ 64ನೇ ನಿಮಿಷದಲ್ಲಿ ಫಲ ಸಿಕ್ಕಿತು. ತಂಡದ ಸ್ಟಾರ್ ಆಟಗಾರರಲ್ಲಿ ಒಬ್ಬರಾದ ಮಿಕು ಬಾರಿಸಿದ ಮೋಹಕ ಗೋಲಿನಿಂದ ಅಂತರ 3–0ಗೆ ಹಿಗ್ಗಿತು. ಪಂದ್ಯದ ಕೊನೆಯ 15 ನಿಮಿಷಗಳಲ್ಲಿ ತಿರುಗೇಟು ನೀಡಲು ಪುಣೆ ಎಫ್‌ಸಿ ಪರಿಶ್ರಮಿಸಿದರೂ ಗುರುಪ್ರೀತ್‌ ಸಿಂಗ್ ಸಂಧು ಅವರ ಚುರುಕಿನ ಗೋಲ್‌ಕೀಪಿಂಗ್ ಮುಂದೆ ಪುಣೆ ಆಟಗಾರರು ಮಂಕಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More