ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ

ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಅದ್ಭುತ ಫಾರ್ಮ್‌ ಕೆರಿಬಿಯನ್ನರ ನಿದ್ದೆಗೆಡಿಸಿದೆ. ಗೌಹಾತಿ ಪಂದ್ಯದಲ್ಲಿ ಈ ಇಬ್ಬರ ಜೊತೆಯಾಟಕ್ಕೆ ಬೇಸ್ತುಬಿದ್ದಿದ್ದ ಪ್ರವಾಸಿ ವೆಸ್ಟ್‌ ಇಂಡೀಸ್ ವಿಶಾಖಪಟ್ಟಣದಲ್ಲಿ ಬುಧವಾರ (ಅ.೨೪) ನಡೆಯಲಿರುವ ಎರಡನೇ ಪಂದ್ಯಕ್ಕೆ ಅಣಿಯಾಗಿದೆ

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ೮ ವಿಕೆಟ್‌ಗಳಿಂದ ಗೆದ್ದ ಆತಿಥೇಯ ಭಾರತ ತಂಡ, ಎರಡನೇ ಪಂದ್ಯದಲ್ಲಿಯೂ ಅದೇ ಆಕ್ರಮಣಕಾರಿ ಆಟ ಆಡುವ ಗುರಿ ಹೊತ್ತಿದೆ. ಗೌಹಾತಿಯಲ್ಲಿನ ಪಂದ್ಯದಲ್ಲಿ ಭಾರತ ತಂಡ ನೀಡಿದ ಪ್ರದರ್ಶನ, ವಿಶೇಷವಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಟ ಈ ಎರಡನೇ ಪಂದ್ಯದಲ್ಲಿಯೂ ಭಾರತವೇ ಗೆಲ್ಲುವ ಫೇವರಿಟ್ ಎಂದು ನಿಸ್ಸಂಶಯವಾಗಿ ಸಾರಿದೆ.

ತವರಿನಲ್ಲಿ ಭಾರತ ತಂಡವನ್ನು ಕಟ್ಟಿಹಾಕುವ ಕೆರಿಬಿಯನ್ನರ ಕನಸು ಮೊದಲ ಪಂದ್ಯದಲ್ಲೇ ಕಮರಿದೆ. ಆದಾಗ್ಯೂ, ಮತ್ತೊಮ್ಮೆ ಹೋರಾಟಕ್ಕೆ ಅಣಿಯಾಗಿರುವ ಅದು, ವಿಶಾಖಪಟ್ಟಣದಲ್ಲಿ ಜಯದ ಖಾತೆ ತೆರೆಯುವುದರೊಂದಿಗೆ ಸರಣಿಯಲ್ಲಿ ೧-೧ ಸಮಬಲ ಸಾಧಿಸುವ ತುಡಿತದಲ್ಲಿದೆ. ಮೊದಲ ಪಂದ್ಯದಲ್ಲಿ ಸಾಕಷ್ಟು ಮೊತ್ತ ಕಲೆಹಾಕಿದರೂ, ಬೌಲಿಂಗ್‌ನಲ್ಲಿ ನಿಷ್ಕ್ರಿಯತೆ ತೋರಿದ ಕೆರಿಬಿಯನ್ನರು ಪುಟಿದೇಳುವ ವಿಶ್ವಾಸದಲ್ಲಿದ್ದಾರೆ.

ಮುಂಬರುವ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸುವ ಅನಿವಾರ್ಯತೆಯಲ್ಲಿರುವ ಭಾರತ ತಂಡ, ಬಹುಶಃ ಈ ಎರಡನೇ ಪಂದ್ಯದಲ್ಲಿಯೂ ಆ ಪ್ರಯೋಗಕ್ಕೆ ಇಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಿಶ್ವಕಪ್ ಪಂದ್ಯಾವಳಿಗೆ ಹೆಚ್ಚೆಂದರೆ ಇನ್ನು ಎಂಟು ತಿಂಗಳಷ್ಟೇ ಬಾಕಿ ಇದ್ದು, ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲು ಭಾರತ ತಂಡ ಹೆಚ್ಚು ಆಸ್ಥೆ ವಹಿಸಬೇಕಿದೆ. ಈ ದಿಸೆಯಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ತಳೆಯುವ ನಿರ್ಧಾರ ಕೂಡ ಮಹತ್ವ ಎನಿಸಲಿದೆ.

ದಾಖಲೆ ಹೊಸ್ತಿಲಲ್ಲಿ ಕೊಹ್ಲಿ

ಇದನ್ನೂ ಓದಿ : ಕೊಹ್ಲಿ-ರೋಹಿತ್ ಪ್ರಚಂಡ ಬ್ಯಾಟಿಂಗ್‌ನಲ್ಲಿ ಕರಗಿದ ಕೆರಿಬಿಯನ್ನರ ಜಯದ ಕನಸು

ಪಂದ್ಯದಿಂದ ಪಂದ್ಯಕ್ಕೆ ವಿಜೃಂಭಿಸುತ್ತಿರುವ ವಿರಾಟ್ ಕೊಹ್ಲಿ ವಿಶಾಖಪಟ್ಟಣದಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ೮೧ ರನ್‌ ಗಳಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ೧೦ ಸಹಸ್ರ ರನ್ ಗಳಿಸಿದ ಆಟಗಾರ ಎನಿಸಲಿದ್ದಾರೆ. ಆ ಮೂಲಕ, ದೆಹಲಿಯ ಈ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಹತ್ತಿಕ್ಕಲಿದ್ದಾರೆ. ಅಂದಹಾಗೆ, ೧೦ ಸಹಸ್ರ ರನ್ ಗಳಿಸಲು ಸಚಿನ್ ೨೫೯ ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ ಈಗಷ್ಟೇ ೨೦೪ನೇ ಇನ್ನಿಂಗ್ಸ್‌ನಲ್ಲಿದ್ದಾರೆ.

ಇನ್ನು, ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಸಂಪೂರ್ಣ ಏಕಪಕ್ಷೀಯವಾಗಿತ್ತು. ಆದರೆ, ಬೌಲಿಂಗ್‌ ನಿರೀಕ್ಷಿತ ಮಟ್ಟದಲ್ಲಿ ಮೊನಚಿನಿಂದ ಕೂಡಿರಲಿಲ್ಲ. ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅನುಪಸ್ಥಿತಿಯಲ್ಲಿ ಉಮೇಶ್ ಯಾದವ್‌, ಯಜುವೇಂದ್ರ ಚಾಹಲ್, ಮೊಹಮದ್ ಶಮಿ ಮುಂತಾದವರು ಇನ್ನಿಂಗ್ಸ್‌ನ ಕೊನೇ ಓವರ್‌ಗಳಲ್ಲಿ ವಿಫಲವಾಗಿದ್ದರು. ಸದ್ಯ, ಕೆರಿಬಿಯನ್ನರು ಕೂಡ ಉತ್ತಮ ಬ್ಯಾಟಿಂಗ್ ಮಾಡುವಷ್ಟು ಶಕ್ತರಾಗಿರುವ ಹಿನ್ನೆಲೆಯಲ್ಲಿ ಈ ಪ್ರಮಾದ ಮರುಕಳಿಸದಂತೆ ಭಾರತ ತಂಡ ಎಚ್ಚರ ವಹಿಸಬೇಕಿದೆ.

ಭರವಸೆ ಮೂಡಿಸಿದ ಪೊವೆಲ್, ಹೆಟ್ಮೆಯರ್

ಪ್ರವಾಸಿ ತಂಡದ ಪರವಾಗಿ ಮೊದಲ ಪಂದ್ಯದಲ್ಲಿ ಮಿಂಚಿದ್ದು ಯುವ ಆಟಗಾರರಾದ ಕೀರನ್ ಪೊವೆಲ್ ಹಾಗೂ ಶಿಮ್ರೊನ್ ಹೆಟ್ಮೆಯರ್. ಪೊವೆಲ್ ಅರ್ಧಶತಕದಿಂದ ತಂಡದ ಇನ್ನಿಂಗ್ಸ್‌ಗೆ ಗಟ್ಟಿ ತಳಪಾಯ ಹಾಕಿಕೊಟ್ಟರೆ, ಹೆಟ್ಮೆಯರ್ ಅಂತೂ ಮಧ್ಯಮ ಕ್ರಮಾಂಕದಲ್ಲಿ ಅಮೋಘ ಶತಕದೊಂದಿಗೆ ವಿಜೃಂಭಿಸಿದ್ದರು. ಆತಿಥೇಯರ ವಿರುದ್ಧ ೩೦೦ಕ್ಕೂ ಹೆಚ್ಚು ರನ್ ದಾಖಲಿಸಲು ಹೆಟ್ಮೆಯರ್ ನಿರ್ಭಿಡೆ ಬ್ಯಾಟಿಂಗ್ ಸಹಕಾರಿಯಾಗಿತ್ತು. ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಛಲ ತೊಟ್ಟಿರುವ ಕೆರಿಬಿಯನ್ನರು ಉದ್ದೇಶಿತ ಗುರಿ ಮುಟ್ಟಬೇಕಾದರೆ, ಹೆಟ್ಮೆಯರ್ ಮತ್ತೊಮ್ಮೆ ನಿರ್ಣಾಯಕ ಪಾತ್ರ ವಹಿಸಬೇಕಿದೆ.

ಇನ್ನು, ಈ ಇಬ್ಬರ ಜೊತೆಗೆ ನಾಯಕ ಜೇಸನ್ ಹೋಲ್ಡರ್ ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದರು. ಬೌಲಿಂಗ್‌ನಲ್ಲಿ ಮಿಂಚಲು ಸಾಧ್ಯವಾಗದೆ ಹೋದರೂ, ಬ್ಯಾಟಿಂಗ್‌ನಲ್ಲಿ ಹೋಲ್ಡರ್ ತಂಡದ ಇನ್ನಿಂಗ್ಸ್‌ಗೆ ಸಹಕಾರಿಯಾಗಿದ್ದರು. ಪ್ರತಿಭಾನ್ವಿತ ಆಲ್ರೌಂಡ್ ಆದ ಹೋಲ್ಡರ್ ಕೂಡ ಪಂದ್ಯದಲ್ಲಿ ನಿರ್ಣಾಯಕರಾಗಿದ್ದಾರೆ. ಇವರೊಂದಿಗೆ ಕೆಮರ್ ರೋಚ್ ಹಾಗೂ ದೇವೇಂದ್ರ ಬಿಶೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬೇಕಿದೆ.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ಕೆ ಎಲ್ ರಾಹುಲ್, ಮನೀಶ್ ಪಾಂಡೆ, ಎಂ ಎಸ್ ಧೋನಿ (ವಿಕೆಟ್‌ ಕೀಪರ್), ರಿಷಭ್ ಪಂತ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮದ್ ಶಮಿ, ಖಲೀಲ್ ಅಹಮದ್ ಮತ್ತು ಉಮೇಶ್ ಯಾದವ್.

ವೆಸ್ಟ್‌ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಫೇಬಿಯನ್ ಅಲೆನ್, ಸುನಿಲ್ ಆಂಬ್ರಿಸ್, ದೇವೇಂದ್ರ ಬಿಶೂ, ಚಂದ್ರಪಾಲ್ ಹೇಮ್‌ರಾಜ್, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್, ಅಲ್ಜಾರಿ ಜೋಸೆಫ್, ಎವಿನ್ ಲೆವಿಸ್, ಆಶ್ಲೆ ನರ್ಸ್, ಕೀಮೊ ಪೌಲ್, ರೊವ್ಮನ್ ಪೊವೆಲ್, ಕೆಮರ್ ರೋಚ್, ಮರ್ಲಾನ್ ಸ್ಯಾಮುಯೆಲ್ಸ್ ಹಾಗೂ ಒಶೇನ್ ಥಾಮಸ್.

ಪಂದ್ಯ ಆರಂಭ: ಮಧ್ಯಾಹ್ನ ೧.೩೦ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್ | ಸ್ಥಳ: ವಿಶಾಖಪಟ್ಟಣ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More