ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ | ಸೈನಾ, ಶ್ರೀಕಾಂತ್ ದ್ವಿತೀಯ ಸುತ್ತಿಗೆ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್ ಹಾಗೂ ಕಿಡಾಂಬಿ ಶ್ರೀಕಾಂತ್ ಶುಭಾರಂಭ ಮಾಡಿದ್ದಾರೆ. ಭಾರತದ ಈ ಇಬ್ಬರೂ ಸ್ಟಾರ್ ಆಟಗಾರರು ಕ್ರಮವಾಗಿ ವನಿತೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಲ್ಲಿ ಗೆಲುವು ಸಾಧಿಸಿದರೆ, ಸಮೀರ್ ವರ್ಮಾ ಹೊರಬಿದ್ದರು

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ಎರಡನೇ ದಿನದಂದು ಮಿಶ್ರಫಲ ಅನುಭವಿಸಿತು. ಟೂರ್ನಿಯ ಮೊದಲ ದಿನದಂದು ಪಿ ವಿ ಸಿಂಧು ಶುಭಾರಂಭ ಮಾಡಿದ ನಂತರದಲ್ಲಿ ಸೈನಾ ನೆಹ್ವಾಲ್ ಮತ್ತು ಕಿಡಾಂಬಿ ಶ್ರೀಕಾಂತ್ ಕೂಡ ಅವರನ್ನು ಹಿಂಬಾಲಿಸಿದರು. ಆದರೆ, ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಯುವ ಆಟಗಾರ ಸಮೀರ್ ವರ್ಮಾ ಸೋತು ಹೊರಬಿದ್ದರು.

ಇಂಡೋನೇಷ್ಯಾ ಆಟಗಾರ ಜೊನಾಥನ್ ಕ್ರಿಸ್ಟಿ ವಿರುದ್ಧದ ಪಂದ್ಯದಲ್ಲಿ ಸಮೀರ್ ವರ್ಮಾ ೨೧-೧೬, ೧೭-೨೧, ೧೫-೨೧ರ ಮೂರು ಗೇಮ್‌ಗಳ ಆಟದಲ್ಲಿ ಪರಾಜಿತರಾದರು. ಸರಿಸುಮಾರು ಒಂದು ತಾಸಿನವರೆಗೆ ನಡೆದ ಪಂದ್ಯದಲ್ಲಿ ಸಮೀರ್ ಮೊದಲ ಗೇಮ್ ಅನ್ನು ಗೆದ್ದರಾದರೂ, ತದನಂತರದ ಎರಡೂ ಗೇಮ್‌ಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದರು. ವಿಶ್ವದ ಹದಿಮೂರನೇ ಶ್ರೇಯಾಂಕಿತ ಕ್ರಿಸ್ಟಿ ಮೊದಲ ಗೇಮ್‌ನಲ್ಲಿ ಸೋಲು ಅನುಭವಿಸಿದರೂ, ನಂತರದ ಎರಡೂ ಗೇಮ್‌ಗಳಲ್ಲಿ ಉತ್ತಮ ಆಟವಾಡಿ ದ್ವಿತೀಯ ಸುತ್ತಿಗೆ ಅರ್ಹತೆ ಗಿಟ್ಟಿಸಿದರು.

ಇದಕ್ಕೂ ಮುನ್ನ ನಡೆದ ಪುರುಷರ ಇನ್ನೊಂದು ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಕಿಡಾಂಬಿ ಶ್ರೀಕಾಂತ್, ಹಾಂಕಾಂಗ್ ಆಟಗಾರ ವೊಂಗ್ ವಿಂಗ್ ಕಿ ವಿನ್ಸೆಂಟ್ ಎದುರು ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆದರು. ೨೧-೧೯, ೨೧-೧೩ ಎರಡು ನೇರ ಗೇಮ್‌ಗಳಲ್ಲಿ ಹಾಂಕಾಂಗ್ ಆಟಗಾರನ ಹೋರಾಟಕ್ಕೆ ಶ್ರೀಕಾಂತ್ ತೆರೆ ಎಳೆದರು. ಮೊದಲ ಗೇಮ್‌ನಲ್ಲಿ ಹಾಂಕಾಂಗ್ ಆಟಗಾರ ತಿರುಗಿಬೀಳುವ ಸುಳಿವು ನೀಡಿದರೂ, ಶ್ರೀಕಾಂತ್ ಚಾಣಾಕ್ಷ ಆಟಕ್ಕೆ ಅದಕ್ಕೆ ಆಸ್ಪದ ಕಲ್ಪಿಸಲಿಲ್ಲ.

ಇದನ್ನೂ ಓದಿ : ಫ್ರೆಂಚ್ ಓಪನ್ | ಕಡೆಗೂ ಝಾಂಗ್ ವಿರುದ್ಧ ಗೆದ್ದ ಸಿಂಧು ದ್ವಿತೀಯ ಸುತ್ತಿಗೆ

ಇತ್ತ, ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ ಕೂಡ ಶುಭಾರಂಭ ಮಾಡಿದರು. ಕಳೆದ ವಾರ ನಡೆದ ಡೆನ್ಮಾರ್ಕ್ ಓಪನ್‌ನಲ್ಲಿ ರನ್ನರ್ ಆದ ಸೈನಾ, ಮೊದಲ ಸುತ್ತಿನ ಹಣಾಹಣಿಯಲ್ಲಿ ಜಪಾನ್ ಆಟಗಾರ್ತಿ ಸಯೀನಾ ಕವಾಕಮಿ ವಿರುದ್ಧ ೨೧-೧೧, ೨೧-೧೧ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ವಿಶ್ವದ ೩೭ನೇ ಶ್ರೇಯಾಂಕಿತ ಆಟಗಾರ್ತಿ ಎದುರು ಹತ್ತನೇ ಶ್ರೇಯಾಂಕಿತೆ ಸೈನಾ, ಹೆಚ್ಚು ಪ್ರಯಾಸ ಪಡದೆ ದ್ವಿತೀಯ ಸುತ್ತಿಗೆ ಮುನ್ನಡೆದರು.

ಏತನ್ಮಧ್ಯೆ, ಮಿಶ್ರ ಡಬಲ್ಸ್‌ನಲ್ಲಿ ಭಾರತದ ಹೋರಾಟ ಮೊದಲ ಸುತ್ತಿಗೇ ಮುಗಿಯಿತು. ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಇಂಗ್ಲೆಂಡ್‌ನ ಕ್ರಿಸ್ ಅಡ್ಕಾಕ್ ಹಾಗೂ ಗೇಬ್ರಿಯಲ್ ಅಡ್ಕಾಕ್ ಜೋಡಿಯ ಎದುರಿನ ರೋಚಕ ಸೆಣಸಾಟದಲ್ಲಿ ಪರಾಭವಗೊಂಡಿತು. ಇಂಗ್ಲೆಂಡ್ ಜೋಡಿ ೨೪-೨೨, ೧೮-೨೧, ೨೧-೧೯ರಿಂದ ಭಾರತೀಯ ಜೋಡಿಯನ್ನು ಮಣಿಸುವಲ್ಲಿ ಯಶಸ್ವಿಯಾಯಿತು.

ಮತ್ತೊಂದು ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಕಪೂರ್ ಹಾಗೂ ಕುಹೂ ಗಾರ್ಗ್ ಜೋಡಿಯನ್ನು ಚೀನಾದ ಝೆಂಗ್ ಶಿವೀ ಮತ್ತು ಹುವಾಂಗ್ ಯಕಿಯೊಂಗ್ ಜೋಡಿ ೨೧-೫, ೨೧-೧೦ ಎರಡು ನೇರ ಗೇಮ್‌ಗಳಲ್ಲಿ ಮಣಿಸಿ ದ್ವಿತೀಯ ಸುತ್ತಿಗೆ ದಾಪುಗಾಲಿಟ್ಟಿತು. ಅನನುಭವಿ ಆಟಗಾರರಾದ ಭಾರತದ ರೋಹನ್ ಮತ್ತು ಕುಹೂ ಆಟದ ಯಾವುದೇ ಹಂತದಲ್ಲೂ ಚೀನಿ ಜೋಡಿಗೆ ಸವಾಲಾಗಿ ಪರಿಣಮಿಸಲೇ ಇಲ್ಲ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More