ವೈಜಾಗ್ ರೋಚಕ ಟೈನಲ್ಲಿ ವಿರಾಟ್ ವೈಭವದೊಂದಿಗೆ ಮಿಂದೆದ್ದ ಕೆರಿಬಿಯನ್ನರು!

ನಾಯಕ ವಿರಾಟ್ ಕೊಹ್ಲಿಯ (೧೫೭) ಅಜೇಯ ಹಾಗೂ ದಾಖಲೆ ಇನ್ನಿಂಗ್ಸ್ ಎಲ್ಲಿ ವ್ಯರ್ಥವಾಗುತ್ತದೋ ಎಂಬ ದಿಗಿಲು ಮೂಡಿಸಿದ್ದ ವಿಂಡೀಸ್, ಇನ್ನಿಂಗ್ಸ್‌ನ ಕೊನೇ ಹಂತದಲ್ಲಿ ತಾನೇ ಚಡಪಡಿಸಿತು. ಆದರೆ, ಹೆಟ್ಮೆಯರ್ (೯೪), ಶಾಯ್ ಹೋಪ್ (೧೨೩*) ಹೋರಾಟ ಪಂದ್ಯವನ್ನು ರೋಚಕ ಟೈ ಆಗಿಸಿತು!

ಒಂದು ಹಂತದಲ್ಲಿ ಸುನಾಯಾಸವಾಗಿ ಗೆಲುವು ಸಾಧಿಸಬಹುದಾಗಿದ್ದ ಕೆರಿಬಿಯನ್ನರು ಇನ್ನಿಂಗ್ಸ್‌ನ ಕೊನೆ ಕೊನೆಯಲ್ಲಿ ವ್ಯರ್ಥ ಹೋರಾಟ ನಡೆಸಿತೆಂಬಂತೆ ಕಂಡುಬಂದರೂ, ಶಾಯ್ ಹೋಪ್ (೧೨೩: ೧೩೪ ಎಸೆತ, ೧೦ ಬೌಂಡರಿ, ೩ ಸಿಕ್ಸರ್) ಅಜೇಯ ಹೋರಾಟ ಪಂದ್ಯವನ್ನು ರೋಚಕ ಟೈನಲ್ಲಿ ಅಂತ್ಯವಾಗಿಸಿತು. ಪಿಚ್‌ನ ವೈವಿಧ್ಯತೆಯಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ರನ್ ಗಳಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ, ಶಾಯ್ ಹೋಪ್ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಎರಡನೇ ಶತಕ ಹಾಗೂ ಹೆಟ್ಮೆಯರ್ ಜತೆಗೆ ೪ನೇ ವಿಕೆಟ್‌ಗೆ ಕಲೆಹಾಕಿದ ೧೪೯ ರನ್‌ಗಳು ಕೆರಿಬಿಯನ್ನರನ್ನು ಸತತ ಎರಡನೇ ಸೋಲಿನಿಂದ ಪಾರು ಮಾಡಿತು.

ಡೆತ್ ಓವರ್‌ನಲ್ಲಿ ಭಾರತಕ್ಕೆ ತಲೆನೋವಾಗಿದ್ದ ಬೌಲಿಂಗ್ ಸಕಾಲದಲ್ಲಿ ಸಮಯಪ್ರಜ್ಞೆ ತೋರಿತಾದರೂ, ಕೆರಿಬಿಯನ್ನರ ಎದುರು ಗೆಲುವು ಸಾಧಿಸಲು ನೆರವಿಗೆ ಬರಲಿಲ್ಲ. ಹಾಗೆಯೇ, ತಂಡವನ್ನು ಸೋಲಿಗೂ ಸಿಕ್ಕಿಸಲಿಲ್ಲ! ಬುಧವಾರ (ಅ. ೨೪) ವಿಶಾಖಪಟ್ಟಣದ ಡಾ ವೈ ಎಸ್ ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೆರಿಬಿಯನ್ನರು ಗೆಲ್ಲುವ ಪಂದ್ಯವನ್ನು ಒಂದು ವಿಧದಲ್ಲಿ ತಾವಾಗಿಯೇ ಬಿಟ್ಟುಕೊಟ್ಟರು! ಭಾರತ ನೀಡಿದ್ದ ೩೨೨ ರನ್‌ಗೆ ಉತ್ತರವಾಗಿ ವಿಂಡೀಸ್ ನಿಗದಿತ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೩೨೧ ರನ್‌ಗಳಿಗೆ ಹೋರಾಟ ಮುಗಿಸಿತು. ಇತ್ತಂಡಗಳನ್ನು ಮಾತ್ರವಲ್ಲ, ವೈಜಾಗ್ ಮೈದಾನದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳನ್ನೂ ಒಂದರೆಕ್ಷಣ ಮೂಕವಿಸ್ಮಿತವಾಗಿಸಿತು.

ಕೊನೆಯ ಓವರ್‌ನಲ್ಲಿ ೧೪ ರನ್‌ಗಳ ಅಗತ್ಯವಿದ್ದ ವಿಂಡೀಸ್‌ಗೆ ಉಮೇಶ್ ಯಾದವ್ ಮೊದಲ ಎಸೆತದಲ್ಲಿ ೧ ರನ್ ನೀಡಿದರು. ಎರಡನೇ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟು ಕಸಿವಿಸಿಗೊಂಡರೆ, ಮರು ಎಸೆತದಲ್ಲಿ ೨ ರನ್ ನೀಡಿದ ಉಮೇಶ್ ಯಾದವ್, ಮರು ಎಸೆತದಲ್ಲಿ ಬೌಂಡರಿ ಬಾರಿಸಿದ ಆ್ಯಶ್ಲೆ ನರ್ಸ್ (೫) ವಿಕೆಟ್ ಎಗರಿಸಿದರು. ಐದನೇ ಎಸೆತದಲ್ಲಿ ಶಾಯ್ ಹೋಪ್ ೨ ರನ್ ಗಳಿಸಿದರು. ಕೊನೆಯ ಎಸೆತದಲ್ಲಿಐದು ರನ್ ಅಗತ್ಯವಿದ್ದ ವಿಂಡೀಸ್, ಸಿಕ್ಸರ್ ಬಾರಿಸಿಬೇಕಾದ ಒತ್ತಡಕ್ಕೆ ಸಿಲುಕಿದಾಗ, ಶಾಯ್ ಹೋಪ್ ಕೈಲಾದದ್ದು ಬೌಂಡರಿ ಮಾತ್ರ!

ಜಯದ ಗುರಿಯನ್ನು ಬೆನ್ನತ್ತಿದ ವಿಂಡೀಸ್ ಆರಂಭಿಕ ಹಂತದಲ್ಲಿ ಅಸ್ಥಿರತೆ ತೋರಿದರೂ, ಶಾಯ್ ಹೋಪ್ ಮತ್ತು ಶಿಮ್ರೊನ್ ಹೆಟ್ಮೆಯರ್ (೯೪: ೬೪ ಎಸೆತ, ೪ ಬೌಂಡರಿ, ೭ ಸಿಕ್ಸರ್) ಅದ್ಭುತ ಜತೆಯಾಟದಲ್ಲಿ ಗೆಲುವು ಸಾಧಿಸುವ ಭರವಸೆ ಮೂಡಿಸಿತು. ಆದರೆ, ೩೨ನೇ ಓವರ್‌ನಲ್ಲಿ ಬೌಲಿಂಗ್‌ಗಿಳಿದ ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಾಹಲ್ ಅಪಾಯಕಾರಿ ಆಟಗಾರ ಹೆಟ್ಮೆಯರ್ ವಿಕೆಟ್ ಎಗರಿಸುತ್ತಿದ್ದಂತೆ ಇಡೀ ಪಂದ್ಯದ ಚಿತ್ರಣವೇ ಬುಡಮೇಲಾಯಿತು. ಹೆಟ್ಮೆಯರ್ ಬಾರಿಸಿದ ಚೆಂಡನ್ನು ಕೊಹ್ಲಿ ಕ್ಯಾಚ್ ಪಡೆಯುವುದರೊಂದಿಗೆ ೧೪೩ ರನ್‌ಗಳ ಅಮೋಘ ಜತೆಯಾಟಕ್ಕೆ ತಡೆಬಿದ್ದಿತು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಆಟದ ಬಲದಿಂದ ನಿಗದಿತ ೫೦ ಓವರ್‌ಗಳಲ್ಲಿ ೩೨೧ ರನ್ ಕಲೆಹಾಕಿ ಕೆರಿಬಿಯನ್ನರಿಗೆ ಸವಾಲಿನ ಗುರಿ ನೀಡಿತು. ವಾಸ್ತವವಾಗಿ, ಭಾರತದ ಆರಂಭವೇನೂ ಹೇಳಿಕೊಳ್ಳುವಂತಿರಲಿಲ್ಲ. ಕೇವಲ ೧೫ ರನ್ ಗಳಿಸುವಷ್ಟರಲ್ಲೇ ಭಾರತ ಆರಂಭಿಕ ರೋಹಿತ್ ಶರ್ಮಾ (೪) ವಿಕೆಟ್ ಕಳೆದುಕೊಂಡಿತು.

ಗೌಹಾತಿ ಪಂದ್ಯದಲ್ಲಿ ಅಜೇಯ ಶತಕದೊಂದಿಗೆ ವಿಜೃಂಭಿಸಿದ್ದ ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್, ಎದುರಿಸಿದ ೮ ಎಸೆತಗಳಲ್ಲಿ ಒಂದು ಬೌಂಡರಿ ಬಾರಿಸಿದ್ದರಷ್ಟೆ. ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಹೆಟ್ಮೆಯರ್‌ಗೆ ಕ್ಯಾಚಿತ್ತ ರೋಹಿತ್ ಶರ್ಮಾ ಕ್ರೀಸ್ ತೊರೆದರು. ಕೆಮರ್ ರೋಚ್ ಮುಂಬೈ ಆಟಗಾರನನ್ನು ಪೆವಿಲಿಯನ್ ತಲುಪುವಂತೆ ಮಾಡಿದರು.

ಆನಂತರದಲ್ಲಿ ಕ್ರೀಸ್‌ಗಿಳಿದ ಕೊಹ್ಲಿಯೊಂದಿಗೆ ಧವನ್ ಹೋರಾಟ ಮುಂದುವರೆಸಿದರು. ಆದರೆ, ‘ಮೀಸೆವಾಲ’ ಧವನ್ ಕೂಡ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ೨೫ ರನ್‌ಗಳ ಜತೆಯಾಟವಾಡುತ್ತಲೇ ಅವರನ್ನು ಆ್ಯಶ್ಲೆ ನರ್ಸ್ ಎಲ್‌ಬಿ ಬಲೆಗೆ ಬೀಳಿಸಿ ಭಾರತಕ್ಕೆ ಎರಡನೇ ಹೊಡೆತ ನೀಡಿದರು. ವಿಂಡೀಸ್‌ನ ಆರ್ಭಟ ಇಷ್ಟಕ್ಕೆ ಮಾತ್ರ ಸೀಮಿತವಾದದ್ದು ಆನಂತರದ ಸೋಜಿಗ. ವಿಂಡೀಸ್ ಬೌಲರ್‌ಗಳ ಪಾಲಿಗೆ ಜ

ಬೆರಾಗದ ಕ್ರಿಕೆಟ್ ಜಗತ್ತು!

ಇದನ್ನೂ ಓದಿ : ವೈಜಾಗ್‌ನಲ್ಲಿ ವಿಂಡೀಸ್‌ಗೆ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ಗೂ ವಿರಾಟ್ ದರ್ಶನ

ಧವನ್ ಕ್ರೀಸ್ ತೊರೆದಾಗ ಭಾರತದ ಮೊತ್ತ ೪೦ ರನ್‌ಗಳಷ್ಟೆ. ಈ ಹಂತದಲ್ಲಿ ಜತೆಯಾದ ಅಂಬಟಿ ರಾಯುಡು (೭೩: ೮೦ ಎಸೆತ, ೮ ಬೌಂಡರಿ) ಅವರೊಂದಿಗೆ ಅಮೋಘ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ, ವಿಂಡೀಸ್ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾದರು. ವೇಗದ ಇಲ್ಲವೇ ಸ್ಪಿನ್ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸಿದ ಕೊಹ್ಲಿ, ತಂಡದ ಇನ್ನಿಂಗ್ಸ್‌ಗೆ ನವಚೈತನ್ಯ ತುಂಬಿದರಷ್ಟೇ ಅಲ್ಲ, ಬೃಹತ್ ಮೊತ್ತದ ಸುಳಿವು ನೀಡಿದರು.

ಮತ್ತೊಂದು ಬದಿಯಲ್ಲಿ ಅಂಬಟಿ ರಾಯುಡು ಕೂಡ ವಿಂಡೀಸ್‌ಗೆ ಕಂಟಕರಾದರು. ಈ ಜೋಡಿಯನ್ನು ಬೇರ್ಪಡಿಸಲು ವಿಂಡೀಸ್ ಕಪ್ತಾನ ಜೇಸನ್ ಹೋಲ್ಡರ್ ಹಲವು ವಿಧದಲ್ಲಿ ಯತ್ನಿಸಿದರಾದರೂ, ಫಲ ಸಿಕ್ಕಿದ್ದು ಮಾತ್ರ ತಡವಾಗಿ. ಇನ್ನಿಂಗ್ಸ್‌ನ ೩೩ನೇ ಓವರ್‌ನ ಎರಡನೇ ಎಸೆತದಲ್ಲಿ ಆ್ಯಶ್ಲೆ ನರ್ಸ್, ರಾಯುಡು ಅವರನ್ನು ಕ್ಲೀನ್ ಬೌಲ್ಡ್ ಮಾಡುವುದರೊಂದಿಗೆ ೧೩೦ ರನ್‌ಗಳ ಜತೆಯಾಟಕ್ಕೆ ತೆರೆಬಿತ್ತು.

ಮತ್ತೆ ಬಯಲಾದ ಮಧ್ಯಮ ಕ್ರಮಾಂಕದ ಅಸ್ಥಿರತೆ

ಅಂಬಟಿ ರಾಯುಡು ಕ್ರೀಸ್‌ಗೆ ತೊರೆದ ನಂತರದಲ್ಲಿ ಬಂದ ಎಂ ಎಸ್ ಧೋನಿ (೨೦: ೨೫ ಎಸೆತ, ೧ ಸಿಕ್ಸರ್) ರಿಷಭ್ ಪಂತ್ (೧೭: ೧೩ ಎಸೆತ, ೨ ಬೌಂಡರಿ) ಮತ್ತು ರವೀಂದ್ರ ಜಡೇಜಾ (೧೩) ಸ್ಥಿರವಾಗಿ ಕ್ರೀಸ್‌ಗೆ ಕಚ್ಚಿ ನಿಲ್ಲಲಿಲ್ಲ. ಹೀಗಾಗಿ, ಮಧ್ಯಮ ಕ್ರಮಾಂಕದ ಅಸ್ಥಿರ ಆಟದ ಸಮಸ್ಯೆ ಟೀಂ ಇಂಡಿಯಾವನ್ನು ಬಾಧಿಸಲಿದೆ ಎಂಬುದು ಮತ್ತೊಮ್ಮೆ ಋಜುವಾಯಿತು. ಆದರೆ, ಈ ಮೂವರ ವೈಫಲ್ಯದ ಮಧ್ಯೆಯೂ ಕೊಹ್ಲಿ ಮಾತ್ರ ಇನ್ನಿಂಗ್ಸ್‌ನ ಕಡೆಯವರೆಗೂ ವಿಂಡೀಸ್ ಬೌಲರ್‌ಗಳಿಗೆ ಬಗ್ಗಲಿಲ್ಲ. ಅವರ ಅತ್ಯಮೋಘ ಶತಕದಾಟದಲ್ಲಿ ಹಲವಾರು ದಾಖಲೆಗಳು ನಿರ್ಮಿತಿಯಾದವು. ಆ ಪೈಕಿ ವೇಗದಲ್ಲಿ ೧೦ ಸಹಸ್ರ ರನ್ ಗಳಿಸಿದ್ದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಹೊಸ ಮೈಲುಗಲ್ಲಾಯಿತು.

ಸಂಕ್ಷಿಪ್ತ ಸ್ಕೋರ್

ಭಾರತ: ೫೦ ಓವರ್‌ಗಳಲ್ಲಿ ೩೨೧/೬ (ವಿರಾಟ್ ಕೊಹ್ಲಿ ೧೫೭*, ಅಂಬಟಿ ರಾಯುಡು ೭೩; ಆ್ಯಶ್ಲೆ ನರ್ಸ್ ೪೬ಕ್ಕೆ ೨, ಒಬೆದ್ ಮೆಕಾಯ್ ೭೧ಕ್ಕೆ ೨); ವೆಸ್ಟ್‌ಇಂಡೀಸ್: ೫೦ ಓವರ್ ಗಳಲ್ಲಿ ೩೨೧/೭ (ಚಂದ್ರಪಾಲ್ ಹೇಮ್‌ರಾಜ್ ೩೨, ಶಾಯ್ ಹೋಪ್ ೧೨೩*, ಶಿಮ್ರೊನ್ ಹೆಟ್ಮೆಯರ್ ೯೪; ಕುಲದೀಪ್ ಯಾದವ್ ೬೭ಕ್ಕೆ ೩) ಫಲಿತಾಂಶ: ಟೈ; ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More