ಫ್ರೆಂಚ್ ಓಪನ್ | ಕಡೆಗೂ ಝಾಂಗ್ ವಿರುದ್ಧ ಗೆದ್ದ ಸಿಂಧು ದ್ವಿತೀಯ ಸುತ್ತಿಗೆ

ಇತ್ತೀಚೆಗಷ್ಟೇ ಮುಗಿದ ಡೆನ್ಮಾರ್ಕ್ ಓಪನ್‌ನ ಮೊದಲ ಸುತ್ತಿನ ಪಂದ್ಯವನ್ನೂ ಒಳಗೊಂಡಂತೆ ಸತತ ಮೂರು ಪಂದ್ಯಗಳಲ್ಲಿ ಬಿವೆನ್ ಝಾಂಗ್‌ಗೆ ಮಣಿದಿದ್ದ ಪಿ ವಿ ಸಿಂಧು ಪ್ಯಾರಿಸ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮೊದಲ ಸುತ್ತಲ್ಲೇ ಅಮೆರಿಕನ್ ಆಟಗಾರ್ತಿ ಸವಾಲಿಗೆ ಸಿಂಧು ತೆರೆ ಎಳೆಯುವಲ್ಲಿ ಸಫಲರಾದರು

ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಕಡೆಗೂ ಅಮೆರಿಕನ್ ಆಟಗಾರ್ತಿ ಬಿವೆನ್ ಝಾಂಗ್ ಎದುರು ಜಯದ ನಗೆಬೀರಿದ್ದಾರೆ. ಸತತ ಮೂರು ಪಂದ್ಯಗಳ ಸೋಲಿನ ಬೇಗುದಿಯಲ್ಲಿದ್ದ ಸಿಂಧು ಮಂಗಳವಾರ (ಅ. ೨೩) ಪ್ಯಾರಿಸ್‌ನಲ್ಲಿ ಶುರುವಾದ ಫ್ರೆಂಚ್ ಓಪನ್ ಬಿಡಬ್ಲ್ಯೂಎಫ್ ಟೂರ್ ಸೂಪರ್ ೭೫೦ ಪಂದ್ಯಾವಳಿಯಲ್ಲಿ ಸಿಂಧು ೨೧-೧೭, ೨೧-೮ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೆ ಅರ್ಹತೆ ಪಡೆದರು.

ಪ್ರಚಂಡ ಆಟವಾಡಿದ ಸಿಂಧು ೩೪ ನಿಮಿಷಗಳಲ್ಲೇ ಅಮೆರಿಕನ್ ಆಟಗಾರ್ತಿಯ ಸವಾಲಿಗೆ ತೆರೆಎಳೆದರು. ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿದ್ದರೂ, ಸಿಂಧು ವಿರುದ್ಧ ಝಾಂಗ್ ಅಬ್ಬರಿಸಿದ್ದರು. ಕಳೆದ ಎರಡು ವರ್ಷಗಳ ಕಾಲ ಒಂದೇ ಸಮನೆ ಝಾಂಗ್ ವಿಶ್ವದ ಎರಡನೇ ಶ್ರೇಯಾಂಕಿತೆಯನ್ನು ಕಾಡಿದ್ದರು. ೨೦೧೭ರ ಜೂನ್‌ ತಿಂಗಳಿನಲ್ಲಿ ಇಂಡೋನೇಷ್ಯಾ ಓಪನ್‌ನಲ್ಲಿ ಸಿಂಧುವನ್ನು ಮಣಿಸಿದ್ದ ಝಾಂಗ್, ಇದೇ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಇಂಡಿಯನ್ ಓಪನ್ ಫೈನಲ್‌ನಲ್ಲೂ ಆಘಾತ ನೀಡಿದ್ದರು. ಬಳಿಕ ಕಳೆದ ವಾರ ಡೆನ್ಮಾರ್ಕ್ ಓಪನ್‌ನ ಮೊದಲ ಸುತ್ತಲ್ಲೇ ಸಿಂಧುಗೆ ಸೋಲುಣಿಸಿದ್ದರು.

ಈ ಮೂರು ಸೋಲುಗಳಿಂದ ಕಂಗೆಟ್ಟುಹೋಗಿದ್ದ ಸಿಂಧು ಈ ಬಾರಿ ಮಾತ್ರ ಕೆರಳಿದ್ದರು. ಝಾಂಗ್‌ಗೆ ಸೋಲುಣಿಸಲೇಬೇಕೆಂದು ಛಲ ತೊಟ್ಟಿದ್ದ ಸಿಂಧು, ಶುರುವಿನಲ್ಲೇ ಆಕ್ರಮಣಕಾರಿ ಆಟಕ್ಕಿಳಿದರು. ಇದರ ಫಲವಾಗಿ, ೭-೪ರಿಂದ ೧೦-೬ಕ್ಕೆ ಮುನ್ನಡೆ ವಿಸ್ತರಿಸಿಕೊಳ್ಳುವಲ್ಲಿ ಸಿಂಧು ಯಶಸ್ವಿಯಾದರು. ಆದರೆ, ಸಿಂಧುವಿನ ಆಕ್ರಮಣಕಾರಿ ನಡೆಗೆ ಪ್ರತ್ಯಾಕ್ರಮಣದ ಅಸ್ತ್ರ ಪ್ರಯೋಗಿಸಿದ ಝಾಂಗ್ ಕೂಡ ತಿರುಗಿಬಿದ್ದು, ಅಂತರವನ್ನು ೧೬-೧೫ಕ್ಕೆ ತಂದರು. ಝಾಂಗ್ ಪುಟಿದೇಳುವ ಸುಳಿವು ಸಿಗುತ್ತಿದ್ದಂತೆ ಎಚ್ಚರವಹಿಸಿದ ಸಿಂಧು, ಪ್ರಖರವಾದ ಹಾಫ್ ಸ್ಮ್ಯಾಶ್‌ ಹಾಗೂ ಕರಾರುವಾಕ್ ಶಾಟ್‌ಗಳಿಂದ ಸತತ ಐದು ಪಾಯಿಂಟ್ಸ್ ಗಳಿಸಿದ ಸಿಂಧು, ಜಯದ ಸಮೀಪ ಸಾಗಿದರು. ಇತ್ತ, ಝಾಂಗ್ ಕೂಡ ಎರಡು ಗೇಮ್ ಪಾಯಿಂಟ್ಸ್ ಪಡೆದರೂ, ಮೊದಲ ಗೇಮ್ ಗೆಲ್ಲಲು ಸಿಂಧು ಏನೂ ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ.

ಇದನ್ನೂ ಓದಿ : ಡೆನ್ಮಾರ್ಕ್ ಓಪನ್ | ಮೊದಲ ಸುತ್ತಲ್ಲೇ ಸೋತು ಹೊರಬಿದ್ದ ಪಿ ವಿ ಸಿಂಧು

ಮೊದಲ ಗೇಮ್‌ನಲ್ಲಿ ಮುನ್ನಡೆ ಸಾಧಿಸಿದ ಸಿಂಧು ನೇರ ಗೇಮ್‌ಗಳ ಗೆಲುವಿಗೆ ಪಣ ತೊಟ್ಟರು. ಅದರಂತೆ ಇಲ್ಲಿಯೂ ಝಾಂಗ್ ಮೇಲೆ ಆಕ್ರಮಣವೆಸಗಿದರು. ಆದರೆ, ಪಂದ್ಯವನ್ನು ಜೀವಂತವಾಗಿಡಲು ಈ ಗೇಮ್ ಅನ್ನು ಗೆಲ್ಲಲೇಬೇಕಿದ್ದ ಒತ್ತಡಕ್ಕೆ ಸಿಲುಕಿದ್ದ ಝಾಂಗ್ ಕೂಡ ಪ್ರಬಲ ಪೈಪೋಟಿ ನೀಡಿದ್ದರಿಂದ ಇಬ್ಬರೂ ೩-೩ರಿಂದ ಸಮಬಲ ಹೋರಾಟಕ್ಕೆ ಮುಂದಾದರು. ಆದರೆ, ಇಲ್ಲಿಂದಾಚೆಗೆ ಏಳು ಪಾಯಿಂಟ್ಸ್‌ ಹೆಕ್ಕಿದ ಸಿಂಧು, ಅಮೆರಿಕ ಆಟಗಾರ್ತಿಯ ಮೇಲೆ ಒತ್ತಡ ಹೇರಿದರು. ವಿರಾಮದ ಬಳಿಕವೂ ಮುನ್ನಡೆ ಪಡೆದ ಸಿಂಧು, ಝಾಂಗ್ ತಿರುಗಿಬೀಳದಂತೆ ನೋಡಿಕೊಂಡು ಜಯ ಪಡೆದರು.

“ಕಳೆದ ವಾರ ನಾನು ಹಲವಾರು ತಪ್ಪುಗಳನ್ನು ಎಸಗಿದೆ. ಆದರೆ, ಇಂದು ಶೇ. ೧೦೦ರಷ್ಟು ಹೋರಾಟ ನಡೆಸಿದೆ. ಇಷ್ಟಾದರೂ, ಇಂದು ಕೂಡ ಮೊದಲ ಗೇಮ್‌ನಲ್ಲಿ ಕೆಲವೊಂದು ತಪ್ಪುಗಳನ್ನೆಸಗಿದೆ. ಆದರೆ, ಆಟ ಸಾಗುತ್ತಿದ್ದಂತೆ ಕೊನೆ ಕೊನೆಗೆ ಎಚ್ಚರ ವಹಿಸಿದ್ದು ಮತ್ತೊಮ್ಮೆ ಝಾಂಗ್ ಎದುರು ಸೋಲದಂತೆ ಮಾಡಿತು. ಎರಡನೇ ಗೇಮ್ ಮೊದಲನೆಯದಕ್ಕಿಂತ ಸವಾಲಿನದ್ದಾಗಿರಲಿಲ್ಲ,’’ ಎಂದು ಮೊದಲ ಸುತ್ತಿನ ಗೆಲುವಿನ ಬಳಿಕ ಸಿಂಧು ಪ್ರತಿಕ್ರಿಯಿಸಿದರು.

ಪ್ರಸಕ್ತ ಟೂರ್ನಿಯಲ್ಲಿ ಬುಧವಾರ (ಅ. ೨೪) ಕಿಡಾಂಬಿ ಶ್ರೀಕಾಂತ್, ಸೈನಾ ನೆಹ್ವಾಲ್, ಸಾಯಿ ಪ್ರಣೀತ್ ಹಾಗೂ ಸಮೀರ್ ವರ್ಮಾ ಕಣಕ್ಕಿಳಿಯುತ್ತಿದ್ದಾರೆ. ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ ಸಮೀರ್ ವರ್ಮಾ ಗೆದ್ದರೆ, ಡೆನ್ಮಾರ್ಕ್ ಓಪನ್ ರನ್ನರ್ ಸೈನಾ ನೆಹ್ವಾಲ್, ಜಪಾನ್‌ನ ಸಿಯೆನಾ ಕವಾಕಮಿ ವಿರುದ್ಧ ಕಾದಾಡಲಿದ್ದಾರೆ. ಅಂತೆಯೇ ಕಿಡಾಂಬಿ ಶ್ರೀಕಾಂತ್ ಹಾಂಕಾಂಗ್ ಆಟಗಾರ ವೊಂಗ್ ವಿಂಗ್ ಕಿ ವಿನ್ಸೆಂಟ್ ಎದುರು ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ. ಇತ್ತ, ಸಾಯಿ ಪ್ರಣೀತ್ ಬ್ರೆಜಿಲ್‌ನ ಯೊಗರ್ ಕೊಯ್ಲೊಹ್ ವಿರುದ್ಧ ಕಾದಾಡಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More