ವೈಜಾಗ್‌ನಲ್ಲಿ ವಿಂಡೀಸ್‌ಗೆ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ಗೂ ವಿರಾಟ್ ದರ್ಶನ

“ಪ್ರತಿ ಇನ್ನಿಂಗ್ಸ್‌ಗೂ ಶತಕ ದಾಖಲಿಸಬೇಕೆನ್ನುವ ವಿರಾಟ್ ಕೊಹ್ಲಿ ಓರ್ವ ಮನುಷ್ಯನಂತೆ ಕಾಣುವುದಿಲ್ಲ,” ಎಂಬ ಬಾಂಗ್ಲಾದೇಶದ ಕ್ರಿಕೆಟಿಗ ತಮೀಮ್ ಇಕ್ಬಾಲ್ ಮಾತು ಹೊರಬಿದ್ದು ಇನ್ನೂ ೨೪ ತಾಸುಗಳಾಗಿಲ್ಲವಷ್ಟೆ. ಅಷ್ಟರಲ್ಲೇ ಭಾರತೀಯ ಆಟಗಾರನಿಂದ ಮತ್ತೊಂದು ವಿರಾಟ್ ದರ್ಶನವಾಗಿದೆ!

“ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಓರ್ವ ಮನುಷ್ಯನಂತೆ ಕಾಣುವುದೇ ಇಲ್ಲ. ಕ್ರೀಸ್‌ನಲ್ಲಿ ಇರುವಾಗಲಂತೂ ಆತನ ಬ್ಯಾಟಿಂಗ್ ವೈಖರಿ ಬೆರಗು ಮೂಡಿಸುವಂಥದ್ದು. ಪ್ರತಿ ಇನ್ನಿಂಗ್ಸ್‌ನಲ್ಲೂ ಶತಕ ದಾಖಲಿಸುವ ಅವರ ಧಾವಂತವನ್ನು ಮಾತುಗಳಲ್ಲಿ ವರ್ಣಿಸುವುದು ಅಸಾಧ್ಯ...”

-ದಿನದ ಹಿಂದಷ್ಟೇ, ಬಾಂಗ್ಲಾದೇಶದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ದೆಹಲಿ ಬ್ಯಾಟ್ಸ್‌ಮನ್‌ ಕುರಿತು ಆಡಿದ ನುಡಿಗಳಿವು. ನಿಜ, ವಿರಾಟ್ ಆಟದ ಪರಿಗೆ ವಿಶ್ವ ಕ್ರಿಕೆಟ್‌ನ ದಾಖಲೆಗಳೆಲ್ಲ ಪುನರ್ ರಚಿತವಾದಂತೆ ಕಾಣುತ್ತಿದೆ. 259 ಇನ್ನಿಂಗ್ಸ್‌ಗಳಲ್ಲಿ ಹತ್ತು ಸಹಸ್ರ ರನ್ ಪೂರೈಸಿದ್ದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಇನ್ನೂ ೪೫ ಇನ್ನಿಂಗ್ಸ್‌ ಬಾಕಿ ಇರುವಂತೆಯೇ ಮುಟ್ಟಿದ ಕೊಹ್ಲಿ, ಮತ್ತೊಮ್ಮೆ ಕ್ರಿಕೆಟ್ ಜಗತ್ತಿಗೆ ತನ್ನ ವಿರಾಟ್ ಆಟದ ದರ್ಶನ ಮಾಡಿಸಿದ್ದಾರೆ.

ವಿಶಾಖಪಟ್ಟಣದ ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ವಿರಾಟ್ (೧೫೭*: ೧೨೯ ಎಸೆತ, ೧೩ ಬೌಂಡರಿ, ೪ ಸಿಕ್ಸರ್) ಅಜೇಯ ಶತಕದ ನೆರವಿನೊಂದಿಗೆ ನಿಗದಿತ ೫೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೩೨೧ ರನ್ ಗಳಿಸಿ ಕೆರಿಬಿಯನ್ನರಿಗೆ ಸವಾಲಿನ ಗುರಿ ನೀಡಿತು.

ಧೋನಿ-ಸಚಿನ್‌ ದಾಖಲೆ ಮೀರಿದ ವಿರಾಟ್‌ ಆಟ

ಈ ಹಿಂದಿನ ಗೌಹಾತಿ ಪಂದ್ಯದಲ್ಲೂ ಅಮೋಘ ಶತಕ ದಾಖಲಿಸಿ ಪ್ರಚಂಡ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಕೆರಿಬಿಯನ್ನರ ವಿರುದ್ಧ ಸವಾಲಿನ ಮೊತ್ತಕ್ಕೆ ಕಾರಣವಾಗಿದ್ದಷ್ಟೇ ಅಲ್ಲ, ಇಡೀ ಇನ್ನಿಂಗ್ಸ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದದ್ದು ವಿಶೇಷ. ವೇಗವಾಗಿ ಹತ್ತು ಸಾವಿರ ರನ್ ಕಲೆಹಾಕಿದ್ದಲ್ಲದೆ, ತವರು ನೆಲದಲ್ಲಿ ಶರವೇಗದಲ್ಲಿ ೪ ಸಹಸ್ರ ರನ್, ವೆಸ್ಟ್‌ ಇಂಡೀಸ್ ವಿರುದ್ಧ ೪ ಶತಕ, ಋತುವೊಂದರಲ್ಲಿ ೧ ಸಹಸ್ರ ರನ್, ೧೦ ಸಹಸ್ರ ರನ್ ಗಳಿಕೆಯಲ್ಲಿ ಧೋನಿಯ ಗರಿಷ್ಠ ಸರಾಸರಿ ದಾಖಲೆ ಹಿಂದಿಕ್ಕಿದ್ದು, ವೆಸ್ಟ್‌ ಇಂಡೀಸ್ ವಿರುದ್ಧ ಅತ್ಯಧಿಕ ರನ್ ಪೇರಿಸಿದ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದದ್ದು ಹಾಗೂ ಭಾರತದಲ್ಲಿ ನಾಲ್ಕು ಸಹಸ್ರ ರನ್ ಗಳಿಸಿದ ಧೋನಿಯ ಸರಾಸರಿಯನ್ನು ಹಿಂದಿಕ್ಕಿದ್ದು... ಹೀಗೆ, ದಾಖಲೆಗಳ ಸರಮಾಲೆಯನ್ನೇ ಕೊಹ್ಲಿ ಈ ಇನ್ನಿಂಗ್ಸ್‌ನಲ್ಲಿ ವಿರಚಿಸಿದ್ದು ಗಮನಾರ್ಹ.

ಇನ್ನು, ಅಜೇಯ ಶತಕದೊಂದಿಗೆ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ೧೫೦+ ರನ್ ಗಳಿಸಿದ ಗರಿಷ್ಠ ಸಾಧಕರ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನ ಪಡೆದರು. ನಾಲ್ಕು ಬಾರಿ ೧೫೦ಕ್ಕೂ ಹೆಚ್ಚು ರನ್ ಗಳಿಸಿದ ಶ್ರೀಲಂಕಾದ ಸನತ್ ಜಯಸೂರ್ಯ, ವೆಸ್ಟ್‌ ಇಂಡೀಸ್‌ನ ಕ್ರಿಸ್‌ಗೇಲ್, ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ ಅವರೊಂದಿಗೆ ಕೊಹ್ಲಿ ಸೇರ್ಪಡೆಯಾದರು. ೧೫೦+ ರನ್‌ಧಾರಿಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ (೬) ಅಗ್ರಸ್ಥಾನದಲ್ಲಿದ್ದರೆ, ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (ಐದು ಬಾರಿ) ಎರಡನೇ ಸ್ಥಾನದಲ್ಲಿದ್ದಾರೆ.

೧೦ ಸಹಸ್ರ ರನ್ ಸರದಾರ ನಾಟೌಟ್

ಇದನ್ನೂ ಓದಿ : ಬಣ್ಣದ ಲೋಕಕ್ಕೆ ಬರಲಿದ್ದಾರೆಯೇ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ?

ಏತನ್ಮಧ್ಯೆ, ಋತುವೊಂದರಲ್ಲಿ ೧ ಸಹಸ್ರ ರನ್ ಕಲೆಹಾಕಲು ತೆಗೆದುಕೊಂಡ ಇನ್ನಿಂಗ್ಸ್‌ಗಳಲ್ಲೂ ಕೊಹ್ಲಿ ಪ್ರಭುತ್ವ ಮೆರೆದರು. ಕೊಹ್ಲಿ ೧೧ ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರೆ, ಹಾಶೀಮ್ ಆಮ್ಲ (೨೦೧೦) ೧೫ ಮತ್ತು ವಿರಾಟ್ ಕೊಹ್ಲಿ ೨೦೧೨ರಲ್ಲಿ ೧೫ ಇನ್ನಿಂಗ್ಸ್‌ಗಳಲ್ಲಿ ೧ ಸಾವಿರ ರನ್ ಪೂರೈಸಿದ್ದರು. ಇನ್ನುಳಿದಂತೆ, ಡೇವಿಡ್ ಗೋವರ್ (೧೯೮೩ರಲ್ಲಿ), ಶೇನ್ ವಾಟ್ಸನ್ (೨೦೧೧ರಲ್ಲಿ), ಕುಮಾರ್ ಸಂಗಕ್ಕಾರ (೨೦೧೩ರಲ್ಲಿ) ಹಾಗೂ ೨೦೧೫ರಲ್ಲಿ ಎಬಿ ಡಿವಿಲಿಯರ್ಸ್ ೧೭ ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

ಮಧ್ಯಮ ಕ್ರಮಾಂಕದ ವೈಫಲ್ಯ!

ಅಂದಹಾಗೆ, ಮತ್ತೊಮ್ಮೆ ಮಧ್ಯಮ ಕ್ರಮಾಂಕ ವೈಫಲ್ಯ ಕಂಡದ್ದು ವೈಜಾಗ್‌ನಲ್ಲಿನ ಈ ಪಂದ್ಯದಲ್ಲಿ ಎದ್ದುಕಂಡ ಅಂಶ. ಮುಂಬರುವ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕ ಹೆಚ್ಚು ಸದೃಢವಾಗಬೇಕಾದುದು ಅಗತ್ಯವಾಗಿದೆ. ಆದರೆ, ಎಂ ಎಸ್ ಧೋನಿ (೨೦), ರಿಷಭ್ ಪಂತ್ (೧೭), ರವೀಂದ್ರ ಜಡೇಜಾ (೧೩) ಸ್ಥಿರ ಆಟವಾಡಲು ಸಾಧ್ಯವಾಗದೆ ಹೋದದ್ದು ನಿರಾಸೆ ತರಿಸಿತು. ಕೊಹ್ಲಿಯ ಅಜೇಯ ಶತಕದೊಂದಿಗೆ ಅಂಬಟಿ ರಾಯುಡು (೭೩: ೮೦ ಎಸೆತ, ೮ ಬೌಂಡರಿ) ದಾಖಲಿಸಿದ ಅರ್ಧಶತಕ ತಂಡದ ಮೊತ್ತವನ್ನು ೩೦೦ರ ಗಡಿ ದಾಟಿಸಿತು.

ವಿಂಡೀಸ್ ವಿರುದ್ಧ ಗರಿಷ್ಠ ರನ್‌ ದಾಖಲಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು

  • ವಿರೇಂದ್ರ ಸೆಹ್ವಾಗ್: ಗಳಿಸಿದ ರನ್: ೨೧೯ | ಸ್ಥಳ: ಇಂದೋರ್ | ವರ್ಷ: ೨೦೧೧
  • ರೋಹಿತ್ ಶರ್ಮಾ: ಗಳಿಸಿದ ರನ್: ೧೫೨* | ಸ್ಥಳ: ಗೌಹಾತಿ | ವರ್ಷ: ೨೦೧೮
  • ವಿರಾಟ್ ಕೊಹ್ಲಿ: ಗಳಿಸಿದ ರನ್: ೧೫೭* | ಸ್ಥಳ: ವಿಶಾಖಪಟ್ಟಣ | ವರ್ಷ: ೨೦೧೮
  • ಸಚಿನ್ ತೆಂಡೂಲ್ಕರ್: ಗಳಿಸಿದ ರನ್: ೧೪೧* | ಸ್ಥಳ: ಸಿಂಗಪುರ | ವರ್ಷ: ೨೦೦೬
  • ವಿರಾಟ್ ಕೊಹ್ಲಿ: ಗಳಿಸಿದ ರನ್: ೧೪೦ | ಸ್ಥಳ: ಗೌಹಾತಿ | ವರ್ಷ: ೨೦೧೮
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More