ಡಬ್ಲ್ಯೂಟಿಎ ಫೈನಲ್ಸ್| ಪುಟಿದೆದ್ದ ಕೆರ್ಬರ್, ಒಸಾಕಗೆ ಜೀವದಾನ ನೀಡಿದ ಸ್ಟೀಫನ್ಸ್ ಗೆಲುವು

ಸಿಂಗಪುರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡಬ್ಲ್ಯೂಟಿಎ ಫೈನಲ್ಸ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೋತಿದ್ದ ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್ ಪುಟಿದೆದ್ದಿದ್ದಾರೆ. ಇತ್ತ, ಸ್ಲೊವಾನಿ ಸ್ಟೀಫನ್ಸ್ ಗೆಲುವಿನಿಂದ ಕೆರ್ಬರ್ ವಿರುದ್ಧವೂ ಸೋತ ಯುಎಸ್ ಓಪನ್ ಚಾಂಪಿಯನ್ ಒಸಾಕಗೆ ಜೀವದಾನ ಸಿಕ್ಕಿದೆ 

ಋತುವಿನ ಡಬ್ಲ್ಯೂಟಿಎ ಕಿರೀಟಕ್ಕಾಗಿ ನಡೆಯುತ್ತಿರುವ ಕಾದಾಟ ರೋಚಕ ತಿರುವು ಪಡೆಯುತ್ತಿದೆ. ರೊಮೇನಿಯಾದ ವಿಶ್ವದ ನಂ ೧ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಪ್ರಸ್ತುತ ಟೂರ್ನಿಗೆ ಗಾಯದ ನಿಮಿತ್ತ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಕೆರ್ಬರ್, ಸ್ಟೀಫನ್ಸ್, ವೋಜ್ನಿಯಾಕಿ, ಕ್ವಿಟೋವಾ ಮುಂತಾದವರು ಪ್ರಶಸ್ತಿಗಾಗಿ ಮುಗಿಬಿದ್ದಿದ್ದು ಪ್ರಬಲ ಪೈಪೋಟಿ ನೀಡುತ್ತಾ ಸಾಗಿದ್ದಾರೆ.

ಬುಧವಾರ (ಅ. ೨೪) ನಡೆದ ಪಂದ್ಯದಲ್ಲಿ ಅಮೆರಿಕದ ೨೫ರ ಹರೆಯದ ಕಳೆದ ಸಾಲಿನ ಯುಎಸ್ ಓಪನ್ ಚಾಂಪಿಯನ್ ಸ್ಟೀಫನ್ಸ್, ಕಿಕಿ ಬರ್ಟೆನ್ಸ್ ವಿರುದ್ಧದ ಕಠಿಣ ಕಾದಾಟದಲ್ಲಿ ೭-೬ (೭/೪), ೨-೬, ೬-೩ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಸ್ಟೀಫನ್ಸ್ ಗೆಲುವಿನಿಂದಾಗಿ ರೆಡ್ ಗುಂಪಿನಲ್ಲಿರುವ ಎಲ್ಲ ನಾಲ್ವರು ಆಟಗಾರ್ತಿಯರೂ ಫೈನಲ್ ತಲುಪಲು ಅವಕಾಶ ಸಿಕ್ಕಂತಾಗಿದೆ. ಈ ಮಧ್ಯೆ, ಸ್ಟೀಫನ್ಸ್ ಗೆಲುವು ಜಪಾನ್ ಆಟಗಾರ್ತಿ ನವೊಮಿ ಒಸಾಕಗಂತೂ ಮತ್ತೊಂದು ಜೀವದಾನ ನೀಡಿದಂತಾಗಿದೆ.

೨೩ ಗ್ರಾಂಡ್‌ಸ್ಲಾಮ್‌ಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ಗೆ ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಆಘಾತ ನೀಡಿ ವೃತ್ತಿಬದುಕಿನ ಚೊಚ್ಚಲ ಗ್ರಾಂಡ್‌ಸ್ಲಾಮ್ ಗೆದ್ದ ಒಸಾಕ, ಡಬ್ಲ್ಯೂಟಿಎ ಫೈನಲ್ಸ್‌ನ ಆರಂಭದ ಮೂರೂ ಪಂದ್ಯಗಳಲ್ಲಿ ಸೋತು ಸೊರಗಿದ್ದಾರೆ. ಶುಕ್ರವಾರ (ಅ. ೨೬) ನಡೆಯಲಿರುವ ಪಂದ್ಯದಲ್ಲಿ ಬರ್ಟೆನ್ಸ್ ವಿರುದ್ಧ ಒಸಾಕ ಕಾದಾಡಲಿದ್ದರೆ, ಸ್ಟೀಫನ್ಸ್ ಜಪಾನ್ ಆಟಗಾರ್ತಿ ಏಂಜಲಿಕ್ ಕೆರ್ಬರ್ ವಿರುದ್ಧ ಸೆಣಸಲಿದ್ದಾರೆ.

ಇದನ್ನೂ ಓದಿ : ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ

ಪುಟಿದೆದ್ದ ಕೆರ್ಬರ್

ಟೂರ್ನಿಯ ಮೊದಲ ಸುತ್ತಿನಲ್ಲಿ ಸೋಲನುಭವಿಸಿದ್ದ ಕೆರ್ಬರ್, ನಿನ್ನೆ ನಡೆದ ಪಂದ್ಯದಲ್ಲಿ ಪುಟಿದೆದ್ದು ನಿಂತರು. ಯುವ ಆಟಗಾರ್ತಿ ಒಸಾಕ ಎದುರಿನ ಪಂದ್ಯದಲ್ಲಿ ೬-೪, ೫-೭, ೬-೪ ಸೆಟ್‌ಗಳಲ್ಲಿ ಕೆರ್ಬರ್ ಜಯಭೇರಿ ಬಾರಿಸಿದರು. ೩೦ರ ಹರೆಯದ ಕೆರ್ಬರ್ ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿದರೂ, ಎರಡನೇ ಸೆಟ್‌ನಲ್ಲಿಯೂ ೫-೪ ಮುನ್ನಡೆ ಸಾಧಿಸಿದರು. ಆದರೆ, ಈ ಹಂತದಲ್ಲಿ ಎಚ್ಚರವಹಿಸಿದ ಒಸಾಕ, ಪ್ರಬಲ ಪೈಪೋಟಿ ನೀಡಿ ಸೆಟ್ ಗೆದ್ದು ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.

ನಿರ್ಣಾಯಕವಾಗಿದ್ದ ಸೆಟ್‌ನಲ್ಲಿ ಕೆರ್ಬರ್ ಆಕ್ರಮಣಕಾರಿ ಆಟವಾಡುವುದರೊಂದಿಗೆ ಒಸಾಕಗೆ ಸವಾಲಾಗಿ ಪರಿಣಮಿಸಿದರು. ಸರಿಸುಮಾರು ೨ ತಾಸು, ೩೧ ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕೆರ್ಬರ್ ಒತ್ತಡ ಮೆಟ್ಟಿನಿಂತು ಒಸಾಕಗೆ ಸೋಲುಣಿಸಿ ಟೂರ್ನಿಯಲ್ಲಿ ತನ್ನ ಹೋರಾಟವನ್ನು ಜೀವಂತವಾಗಿಡುವಲ್ಲಿ ಸಫಲವಾದರು.

ಸ್ಟೀಫನ್ಸ್ ಜಯದ ಓಟ

ಅಮೆರಿಕದ ಸ್ಟೀಫನ್ಸ್ ಟೂರ್ನಿಯಲ್ಲಿ ಜಯದ ಓಟ ಮುಂದುವರೆಸಿದ್ದಾರೆ. ಮೊದಲ ಪಂದ್ಯದಲ್ಲಿ ಒಸಾಕ ವಿರುದ್ಧ ೭-೫, ೪-೬, ೬-೧ ಸೆಟ್‌ ಗೆಲುವು ಕಂಡಿದ್ದ ಸ್ಟೀಫನ್ಸ್, ನಿನ್ನೆ ನಡೆದ ಪಂದ್ಯದಲ್ಲಿ ಕಿಕಿ ಬರ್ಟೆನ್ಸ್ ವಿರುದ್ಧ ಆಕ್ರಮಣಕಾರಿ ಆಟವಾಡಿ ಜಯಶಾಲಿ ಆದರು. ನಾಳೆ ಕೆರ್ಬರ್ ವಿರುದ್ಧ ಸೆಣಸಲಿರುವ ಸ್ಟೀಫನ್ಸ್, ಹ್ಯಾಟ್ರಿಕ್ ಗೆಲುವಿನ ಗುರಿ ಹೊತ್ತಿದ್ದಾರೆ.

ಪ್ರಸ್ತುತ ಡಬ್ಲ್ಯೂಟಿಎ ಫೈನಲ್ಸ್‌ನಲ್ಲಿ ಎಂಟು ಆಟಗಾರ್ತಿಯರು ಪಾಲ್ಗೊಂಡಿದ್ದು, ರೆಡ್ ಮತ್ತು ವೈಟ್ ಎಂಬ ಎರಡು ಗುಂಪುಗಳಲ್ಲಿ ತಲಾ ನಾಲ್ವರನ್ನು ವಿಂಗಡಿಸಲಾಗಿದೆ. ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವವರು ಸೆಮಿಫೈನಲ್ ತಲುಪಲಿದ್ದು, ಭಾನುವಾರ (ಅ. ೨೮) ಫೈನಲ್ ನಡೆಯಲಿದೆ. ಅಂದಹಾಗೆ, ರೆಡ್ ಗುಂಪಿನಂತೆ, ವೈಟ್ ಗುಂಪಿನಲ್ಲಿರುವವರ ಸ್ಥಿತಿಯೂ ಒಂದೇ ತೆರೆನದ್ದಾಗಿದೆ. ಎಲಿನಾ ಸ್ವಿಟೊಲಿನಾ, ಕೆರೊಲಿನಾ ಪ್ಲಿಸ್ಕೋವಾ, ಕೆರೋಲಿನಾ ವೋಜ್ನಿಯಾಕಿ ಮತ್ತು ಪೆಟ್ರಾ ಕ್ವಿಟೋವಾ ಕೂಡ ಎರಡು ಪಂದ್ಯಗಳನ್ನಾಡಿದ್ದು, ನಾಲ್ವರೂ ಸೆಮಿಫೈನಲ್ ತಲುಪುವ ಅವಕಾಶ ಹೊಂದಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More