ಏಷ್ಯಾ ಚಾಂಪಿಯನ್ಸ್ ಹಾಕಿ| ಐದನೇ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಭಾರತ

ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಓಮನ್‌ನಲ್ಲಿ ನಡೆಯುತ್ತಿರುವ ಏಷ್ಯಾ ಚಾಂಪಿಯನ್ಸ್ ಹಾಕಿ ಟ್ರೋಫಿ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದೆ. ಆದರೆ, ಮಾಡು ಇಲ್ಲವೇ ಮಡಿ ಎಂಬಂತಿದ್ದ ಪಂದ್ಯದಲ್ಲಿ ಭಾರತದ ಎದುರು ೧-೪ ಗೋಲುಗಳಿಂದ ಸೋತ ದಕ್ಷಿಣ ಕೊರಿಯಾ ಹೊರಬಿದ್ದಿತು

ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೋಲುರಹಿತ ಡ್ರಾ ಸಾಧಿಸಿದ ಭಾರತ ತಂಡ, ಮತ್ತೆ ಮಸ್ಕಟ್‌ನಲ್ಲಿ ನಡೆಯುತ್ತಿರುವ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಪುಟಿದೆದ್ದು ನಿಂತಿದೆ. ಹಾಲಿ ಚಾಂಪಿಯನ್ ಭಾರತ ತಂಡ, ಬುಧವಾರ (ಅ. ೨೪) ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ೪-೧ ಗೋಲುಗಳ ಗೆಲುವು ಸಾಧಿಸುವುದರೊಂದಿಗೆ ಟೂರ್ನಿಯಲ್ಲಿ ಐದನೇ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಭಾರತ ತಂಡ ಐದು ಪಂದ್ಯಗಳಲ್ಲಿ ಅಜೇಯವಾಗಿ ೧೩ ಪಾಯಿಂಟ್ಸ್ ಕಲೆಹಾಕುವುದರೊಂದಿಗೆ ಅಂತಿಮ ನಾಲ್ಕರ ಘಟ್ಟವನ್ನು ಖಚಿತಪಡಿಸಿಕೊಂಡಿತು. ಆದರೆ, ಮಾಡು ಇಲ್ಲವೇ ಮಡಿ ಎಂಬಂತಿದ್ದ ಈ ಪಂದ್ಯವು ಕೊರಿಯನ್ನರ ಪಾಲಿಗೆ ಬಲು ದುಬಾರಿಯಾಗಿ ಪರಿಣಮಿಸಿತು. ಟೂರ್ನಿಯಲ್ಲಿ ಉಳಿದು ಸೆಮಿಫೈನಲ್ ತಲುಪಬೇಕಾದರೆ ಭಾರತದ ವಿರುದ್ಧ ಕೊರಿಯಾ ಗೆಲ್ಲಲೇಬೇಕಿತ್ತು. ಆದರೆ, ಸೋಲಿನಿಂದಾಗಿ ಅದು ನಾಕೌಟ್ ಹಂತದಿಂದ ವಂಚಿತವಾಯಿತು.

ಕೊರಿಯಾ ವಿರುದ್ಧದ ಪಂದ್ಯಕ್ಕೂ ಮೊದಲೇ ಭಾರತ ತಂಡ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿತ್ತು. ಮತ್ತೊಮ್ಮೆ ಆಕ್ರಮಣಕಾರಿ ಆಟದೊಂದಿಗೆ ಟೂರ್ನಿಯಲ್ಲಿ ಅಧಿಕಾರಯುತ ಗೆಲುವು ಪಡೆದ ಭಾರತ ತಂಡ, ಕೊರಿಯಾದ ಕೊನೆಯ ಆಸೆಯನ್ನೂ ಚಿವುಟಿಹಾಕಿತು. ಪರಿಣಾಮ, ಭಾರತದೊಂದಿಗೆ ಮಲೇಷ್ಯಾ, ಪಾಕಿಸ್ತಾನ ಮತ್ತು ಜಪಾನ್ ತಂಡಗಳು ನಾಲ್ಕರ ಘಟ್ಟಕ್ಕೆ ಅರ್ಹತೆ ಗಿಟ್ಟಿಸಿದವು.

ಇದನ್ನೂ ಓದಿ : ರಿಲೇ ತಂಡದ ಚಿನ್ನ-ಬೆಳ್ಳಿ ಸಾಧನೆಯ ಮಧ್ಯೆ ಕಾಡಿದ ಭಾರತ ಹಾಕಿ ತಂಡದ ಸೋಲು

ಹರ್ಮನ್‌ ಹ್ಯಾಟ್ರಿಕ್ ಗೋಲು

ಕೊರಿಯಾ ವಿರುದ್ಧವೂ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತ ಐದನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಹರ್ಮನ್‌ಪ್ರೀತ್ ಸಿಂಗ್ ಕೊರಿಯಾ ವಿರುದ್ಧ ಮೊದಲ ಗೋಲು ಬಾರಿಸಿದರು. ಇದರ ಬೆನ್ನಿಗೇ ಗುರ್ಜಂತ್ ಸಿಂಗ್ ಐದು ನಿಮಿಷಗಳ ಅಂತರದಲ್ಲಿ ಗೋಲು ಹೊಡೆದು ೨-೦ ಮುನ್ನಡೆ ತಂದಿತ್ತರು. ಆದರೆ, ಆನಂತರದಲ್ಲಿ ಕೊರಿಯಾದ ಪ್ರಬಲ ಪ್ರತಿರೋಧದಿಂದ ಭಾರತಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇನ್ನು, ಎರಡನೇ ಕ್ವಾರ್ಟರ್‌ನಲ್ಲೂ ಇತ್ತಂಡಗಳು ಗೋಲು ಗಳಿಸಲು ನಡೆಸಿದ ಹೋರಾಟದಲ್ಲಿ ಕೊರಿಯಯಾ ಯಶ ಕಂಡರೆ, ಭಾರತಕ್ಕೆ ಸಾಧ್ಯವಾಗಲಿಲ್ಲ.

೨೦ನೇ ನಿಮಿಷದಲ್ಲಿ ಲೀ ಸೆಯುಂಗ್ ಇಲ್ ಬಾರಿಸಿದ ಗೋಲು ಅಂತರವನ್ನು ತುಸು ತಗ್ಗಿಸಿತು. ಆದರೆ, ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಹರ್ಮನ್‌ಪ್ರೀತ್ ಮತ್ತೊಮ್ಮೆ ಕೊರಿಯಾ ರಕ್ಷಣಾವ್ಯೂಹವನ್ನು ಭೇದಿಸಿ ಭಾರತಕ್ಕೆ ಮತ್ತೆರಡು ಗೋಲು ತಂದಿತ್ತರು. ಪಂದ್ಯದ ೪೭ನೇ ನಿಮಿಷದಲ್ಲಿ ವೈಯಕ್ತಿಕ ಎರಡನೇ ಗೋಲು ದಾಖಲಿಸಿದ ಹರ್ಮನ್‌ಪ್ರೀತ್ ಸಿಂಗ್, ಪಂದ್ಯ ಮುಗಿಯಲು ಇನ್ನು ಒಂದು ನಿಮಿಷ ಬಾಕಿ ಇದೆ ಎನ್ನುವಾಗ ಅಂದರೆ ೫೯ನೇ ನಿಮಿಷದಲ್ಲಿ ಗೋಲು ಹೊಡೆದು ಹ್ಯಾಟ್ರಿಕ್ ಬಾರಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More