ಡಬ್ಲ್ಯೂಟಿಎ ಫೈನಲ್ಸ್ | ವೋಜ್ನಿಯಾಕಿ ಹಾಗೂ ಪೆಟ್ರಾ ಕ್ವಿಟೋವಾ ನಿರ್ಗಮನ

ಹಾಲಿ ಚಾಂಪಿಯನ್ ಕರೋಲಿನ್ ವೋಜ್ನಿಯಾಕಿ ಡಬ್ಲ್ಯೂಟಿಎ ಫೈನಲ್ಸ್  ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅಂತೆಯೇ, ಮಾಜಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಕೂಡ ನಿರ್ಗಮಿಸಿದ್ದು, ಸ್ವಿಟೋಲಿನಾ ಮತ್ತು ಜೆಕ್ ಆಟಗಾರ್ತಿ ಕೆರೊಲಿನಾ ಪ್ಲಿಸ್ಕೋವಾ ಸೆಮಿಫೈನಲ್ ತಲುಪಿದರು

ಮೊದಲ ಸೆಟ್‌ನಲ್ಲಿ ಅನುಭವಿಸಿದ ಸೋಲನ್ನು ಲೆಕ್ಕಿಸದೆ ಪುಟಿದೆದ್ದ ಎಲಿನಾ ಸ್ವಿಟೊಲಿನಾ ಬಿಎನ್‌ಪಿ ಪರಿಬಾಸ್ ಡಬ್ಲ್ಯೂಟಿಎ ಫೈನಲ್ಸ್ ಪಂದ್ಯಾವಳಿಯಿಂದ ಹಾಲಿ ಚಾಂಪಿಯನ್ ಕೆರೋಲಿನ್ ವೋಜ್ನಿಯಾಕಿಯನ್ನು ಹಿಮ್ಮೆಟ್ಟಿಸಿದರು. ವೈಟ್‌ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್ ಆಟಗಾರ್ತಿ ವೋಜ್ನಿಯಾಕಿಯನ್ನು ೫-೭, ೭-೫, ೬-೩ ಸೆಟ್‌ಗಳಲ್ಲಿ ಮಣಿಸಿ ಉಪಾಂತ್ಯಕ್ಕೆ ಧಾವಿಸಿದರು. ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸುವ ಅವಕಾಶವನ್ನು ವೋಜ್ನಿಯಾಕಿ ಸ್ವಯಂಕೃತಾಪರಾಧದಿಂದ ಕಳೆದುಕೊಂಡರು.

ಮೊದಲ ಸೆಟ್‌ ಅನ್ನು ವೋಜ್ನಿಯಾಕಿ ಆಕ್ರಮಣಕಾರಿಯಾಗಿ ಆರಂಭಿಸಿದರು. ಮೊದಲ ಗೇಮ್‌ನಿಂದಲೇ ಆಕ್ರಮಣವೆಸಗಿದ ವೋಜ್ನಿಯಾಕಿ ಅದಕ್ಕೆ ತಕ್ಕಂತೆ ೨-೧ ಮುನ್ನಡೆ ಪಡೆದರು. ಆದರೆ, ಸ್ವಿಟೋಲಿನಾ ತಿರುಗೇಟು ನೀಡಿದರಲ್ಲದೆ, ಅಂತರವನ್ನು ೪-೪ಕ್ಕೆ ಸಮಗೊಳಿಸಿದರು. ಆನಂತರದಲ್ಲಿ ೫-೪ ಮುನ್ನಡೆ ಕಂಡ ವೋಜ್ನಿಯಾಕಿ ಮತ್ತೆ ಉಕ್ರೇನ್ ಆಟಗಾರ್ತಿ ಸ್ವಿಟೋಲಿನಾಗೆ ಹಿನ್ನಡೆ ಉಂಟುಮಾಡಿದರು. ಆ ಬಳಿಕವೂ ಮುನ್ನಡೆಗಾಗಿ ಇಬ್ಬರ ನಡುವೆ ಪ್ರಬಲ ಹೋರಾಟ ನಡೆಯಿತಾದರೂ, ವೋಜ್ನಿಯಾಕಿ ಸೆಟ್ ವಶಕ್ಕೆ ಪಡೆದು ೧-೦ ಮುನ್ನಡೆ ಕಂಡರು.

ಎರಡನೇ ಸೆಟ್ ಇಬ್ಬರಲ್ಲೂ ಭಾರೀ ಪೈಪೋಟಿಯನ್ನುಂಟುಮಾಡಿತು. ಇಷ್ಟಾದರೂ, ಸ್ಟಿಟೋಲಿನಾ ಸರ್ವ್ ಮುರಿದ ವೋಜ್ನಿಯಾಕಿ ೨-೧ ಮುನ್ನಡೆ ಪಡೆದರು. ಆದರೆ, ಮುಂದಿನ ಗೇಮ್‌ನಲ್ಲಿ ತಿರುಗಿಬಿದ್ದ ಸ್ವಿಟೊಲಿನಾ ಅಂತರವನ್ನು ಸಮಗೊಳಿಸಿದರು. ಆನಂತರದಲ್ಲಿ ಡೆನ್ಮಾರ್ಕ್ ಆಟಗಾರ್ತಿಯ ಸರ್ವ್ ಅನ್ನು ಗುರಿಯಾಗಿಸಿಕೊಂಡ ಸ್ವಿಟೋಲಿನಾ ವೋಜ್ನಿಯಾಕಿಗೆ ಸವಾಲೊಡ್ಡಿದರು. ಇಬ್ಬರೂ ಆಟಗಾರ್ತಿಯರು ಆಕರ್ಷಕ ರ್ಯಾಲಿಗಳಿಂದ ಪ್ರೇಕ್ಷಕರನ್ನು ರಂಜಿಸಿದರಲ್ಲದೆ, ಕೋರ್ಟ್‌ನಾದ್ಯಂತ ಓಡಾಡಿ ದಣಿದರು. ಅಂತಿಮವಾಗಿ ಈ ಸೆಟ್ ಅನ್ನು ಸ್ವಿಟೋಲಿನಾ ಗೆದ್ದುಕೊಂಡರು.

ಇದನ್ನೂ ಓದಿ : ಸೆರೆನಾ ಮಹದಾಸೆ ಹೊಸಕಿ ಹಾಕಿದ ಒಸಾಕಗೆ ಚೊಚ್ಚಲ ಗ್ರಾಂಡ್‌ಸ್ಲಾಮ್ ಸಿರಿ

ಬಳಿಕ ನಡೆದ ಏಳು ಗೇಮ್‌ಗಳು ಸರ್ವೀಸ್ ಮಾಡಿದ ಸ್ವಿಟೋಲಿನಾ ಪಾಲಾಯಿತು. ಸಮಬಲದ ಪೈಪೋಟಿ ನೀಡಲು ವೋಜ್ನಿಯಾಕಿ ಮುಂದಾದಾಗ ಸ್ವಿಟೋಲಿನಾ ಮೊದಲ ಸೆಟ್ ಪಾಯಿಂಟ್ಸ್ ಕಲೆಹಾಕಿದರು. ಟೈಬ್ರೇಕರ್‌ಗೆ ಸೆಟ್ ವಿಸ್ತರಿಸದಂತೆ ಎಚ್ಚರವಹಿಸಿದ ಸ್ವಿಟೋಲಿನಾ ಐದನೇ ಬ್ರೇಕ್ ಪಾಯಿಂಟ್ಸ್ ಪಡೆಯುವುದರೊಂದಿಗೆ ಹೆಚ್ಚು ಪ್ರಯಾಸವಿಲ್ಲದೆಯೇ ನಿರ್ಣಾಯಕ ಸೆಟ್ ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿದರು.

ಕ್ವಿಟೋವಾಗೆ ಸೋಲುಣಿಸಿದ ಪ್ಲಿಸ್ಕೋವಾ

ಇದಕ್ಕೂ ಮುನ್ನ ನಡೆದ ವೈಟ್ ಗುಂಪಿನ ಮತ್ತೊಂದು ಪಂದ್ಯದಲ್ಲಿ ತಮ್ಮ ದೇಶದವರೇ ಆದ, ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ವಿರುದ್ಧ ಪ್ಲಿಸ್ಕೋವಾ ಗೆಲುವು ಪಡೆದರು. ವಿಶ್ವದ ಎಂಟೆನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಪ್ಲಿಸ್ಕೋವಾ, ಸಹ ಆಟಗಾರ್ತಿಯನ್ನು ೬-೩, ೬-೪ ಎರಡು ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಮಣಿಸಿದರು.

೨೮ರ ಹರೆಯದ ಕ್ವಿಟೋವಾ ವಿರುದ್ಧದ ನಾಲ್ಕು ಮುಖಾಮುಖಿಗಳಲ್ಲಿ ಪ್ಲಿಸ್ಕೋವಾ ಮೊದಲ ಬಾರಿಗೆ ಜಯ ಸಾಧಿಸಿದ್ದು ಗಮನಾರ್ಹ. ವಿಶ್ವದ ಮಾಜಿ ನಂ ೧ ಆಟಗಾರ್ತಿ ಪ್ಲಿಸ್ಕೋವಾ ಸತತ ಎರಡನೇ ವರ್ಷ ಡಬ್ಲ್ಯೂಟಿಎ ಫೈನಲ್ಸ್‌ನಲ್ಲಿ ಉಪಾಂತ್ಯಕ್ಕೆ ಅರ್ಹತೆ ಪಡೆದರು. ೨೦೧೧ರಲ್ಲಿ ಡಬ್ಲ್ಯೂಟಿಎ ಫೈನಲ್ಸ್ ಟ್ರೋಫಿ ಜಯಿಸಿದ್ದ ಕ್ವಿಟೋವಾ, ಪ್ರಸ್ತುತ ಟೂರ್ನಿಯಲ್ಲಿ ಕಳಪೆ ಆಟವಾಡಿದರು. ಆಡಿದ ಮೂರೂ ಪಂದ್ಯಗಳಲ್ಲಿ ಪರಾಜಿತೆಯಾದ ಆಕೆ ವೈಟ್ ಗುಂಪಿನಲ್ಲಿ ಕೊನೆಯ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More