ವಿಶ್ವಕಪ್ ಹೊಸ್ತಿಲಲ್ಲಿ ವಿಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ ನಿವೃತ್ತಿ

ವಿಶ್ವಕಪ್‌ಗೂ ಮುನ್ನ ವೆಸ್ಟ್‌ಇಂಡೀಸ್‌ನ ಮಹತ್ವಪೂರ್ಣ ವಿಕೆಟ್ ಒಂದು ಪತನ ಕಂಡಿದೆ! ಮೂರನೇ ಐಸಿಸಿ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ವೆಸ್ಟ್‌ಇಂಡೀಸ್ ಕಂಡ ಪ್ರತಿಭಾನ್ವಿತ ಆಲ್ರೌಂಡರ್ ಡ್ವೇನ್ ಬ್ರಾವೊ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ ಸೇರಿದಂತೆ ಎಲ್ಲ ಬಗೆಯ ಟಿ೨೦ ಲೀಗ್‌ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದಾರೆ

ಚುಟುಕು ಕ್ರಿಕೆಟ್‌ನಲ್ಲಿ೩೦೦ ವಿಕೆಟ್ ಪಡೆದ ವಿಶ್ವದ ಮೊಟ್ಟಮೊದಲ ಬೌಲರ್ ಎನಿಸಿದ ವೆಸ್ಟ್‌ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೊ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುರುವಾರ (ಅ. ೨೫) ನಿವೃತ್ತಿ ಘೋಷಿಸಿದ್ದಾರೆ. ೩೫ರ ಹರೆಯದ ಬ್ರಾವೊ, ತಮ್ಮ ಹದಿನಾಲ್ಕು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಜಗತ್ತಿನಾದ್ಯಂತ ನಡೆಯಲಿರುವ ವಿವಿಧ ಬಗೆಯ ಟಿ೨೦ ಕ್ರಿಕೆಟ್ ಪಂದ್ಯಾವಳಿಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.

೨೦೦೪ರಲ್ಲಿ ವಿಂಡೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬ್ರಾವೊ, ಇಲ್ಲೀವರೆಗೆ ೪೦ ಟೆಸ್ಟ್, ೧೬೪ ಏಕದಿನ ಮತ್ತು ೬೬ ಟಿ೨೦ ಪಂದ್ಯಗಳನ್ನಾಡಿದ್ದಾರೆ. ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ಸರಣಿಯಲ್ಲಿ ವೆಸ್ಟ್‌ಇಂಡೀಸ್ ತಂಡ ಎರಡು ಟೆಸ್ಟ್ ಪಂದ್ಯ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮುಖಭಂಗಕ್ಕೆ ಗುರಿಯಾದರೂ, ಐದು ಏಕದಿನ ಪಂದ್ಯ ಸರಣಿಯಲ್ಲಿ ೦-೧ ಹಿನ್ನಡೆ ಅನುಭವಿಸಿದೆ.

ಏತನ್ಮಧ್ಯೆ, ಬ್ರಾವೊ ವೆಸ್ಟ್‌ಇಂಡೀಸ್ ಪರ ಕೊನೆಯ ಪಂದ್ಯವನ್ನಾಡಿ ಹೆಚ್ಚೂ ಕಮ್ಮಿ ಎರಡು ವರ್ಷಗಳೇ ಗತಿಸಿದೆ. ಅಬುಧಾಬಿಯಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಟಿ೨೦ ಪಂದ್ಯವೇ ಅವರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಕಡೆಯ ಪಂದ್ಯ. ಇನ್ನು, ೨೦೧೪ರ ಅಕ್ಟೋಬರ್‌ನಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದ ಬ್ರಾವೊ, ೨೦೧೦ರ ಡಿಸೆಂಬರ್ ನಂತರದಲ್ಲಿ ವಿಂಡೀಸ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ.

“ಇಂದು ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತಿರುವುದನ್ನು ಖಚಿತಪಡಿಸುತ್ತಿದ್ದೇನೆ. ಹದಿನಾಲ್ಕು ವರ್ಷಗಳ ಹಿಂದೆ ವಿಂಡೀಸ್ ಪರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಕ್ಷಣಗಳನ್ನು ಈಗಲೂ ನೆನೆಯುತ್ತಿದ್ದೇನೆ. ಜುಲೈ ೨೦೦೪ರ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದಾಡಿದ ಕ್ಷಣಗಳನ್ನು ನೆನೆದರೆ ಈಗಲೂ ರೋಮಾಂಚನವಾಗುತ್ತದೆ. ಅಂದಿನ ನನ್ನ ಭಾವೋದ್ರೇಕ ಮತ್ತು ಕ್ರಿಕೆಟ್ ಮೇಲಣ ಪ್ರೇಮವನ್ನು ನನ್ನ ವೃತ್ತಿಬದುಕಿನಾದ್ಯಂತ ಕಾದುಕೊಂಡಿದ್ದೇನೆ ಎಂಬ ನಂಬುಗೆ ನನ್ನದು,’’ ಎಂದು ಬ್ರಾವೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಯುವ ಪ್ರತಿಭೆಗಳಿಗೆ ಅವಕಾಶ ಸಿಗಲಿ

“ನನ್ನ ಕ್ರಿಕೆಟ್ ಬದುಕು ಯಶಸ್ಸಿನ ಹಾದಿಯಲ್ಲಿ ನಡೆಯಲು ಅದೆಷ್ಟೋ ಮಂದಿ ನೆರವಾಗಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಹೇಳಬಯಸುತ್ತೇನೆ. ವಿಶೇಷವಾಗಿ, ನನ್ನ ಕುಟುಂಬ ಹಾಗೂ ಎಳೆಯವನಾಗಿದ್ದಾಗ ನನ್ನಲ್ಲಿ ಕ್ರಿಕೆಟ್ ಕೌಶಲವನ್ನು ತುಂಬಿದ ಕ್ಯೂಪಿಸಿಸಿಗೆ ನಾನು ಅಭಾರಿಯಾಗಿದ್ದೇನೆ. ಇನ್ನು, ನನ್ನ ಅಭಿಮಾನಿಗಳಿಗೂ ಕೃತಜ್ಞನಾಗಿದ್ದೇನೆ. ಮೈದಾನ ಮತ್ತು ಮೈದಾನದಾಚೆಗೆ ನನ್ನನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದ ಅವರನ್ನು ಮರೆಯಲು ಸಾಧ್ಯವಿಲ್ಲ. ಇಷ್ಟುಕಾಲ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದ್ದು ಸಾಕೆಂಬುದು ಮನವರಿಕೆಯಾಗಿದೆ. ಏಕೆಂದರೆ, ಮುಂದಿನ ಪೀಳಿಗೆಗೆ ಅದರಲ್ಲೂ ಯುವ ಪ್ರತಿಭಾನ್ವಿತರಿಗೆ ಅವಕಾಶ ಕಲ್ಪಿಸುವುದು ನನ್ನ ಕರ್ತವ್ಯವಾಗಿದೆ. ಹೀಗಾಗಿ, ನಿವೃತ್ತಿ ಹೇಳಲಿದು ಸಕಾಲ ಎಂದು ಭಾವಿಸಿದೆ,’’ ಎಂದೂ ಬ್ರಾವೊ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಆಲ್ರೌಂಡರ್ ಬ್ರಾವೊ ಬೆಂಗಾವಲಿನಲ್ಲಿ ಗೆದ್ದ ಚೆನ್ನೈ ಕಪ್ಪು ಪಟ್ಟಿ ತೊಡುವುದೇ?

ಬ್ರಾವೊ ಹಾಗೂ ಕ್ರಿಕೆಟ್ ಬದುಕಿನ ಸಂಕ್ಷಿಪ್ತ ನೋಟ

  • ಹೆಸರು: ಡ್ವೇನ್ ಜಾನ್ ಬ್ರಾವೊ
  • ಜನನ: ಟ್ರಿನಿಡ್ಯಾಡ್ ಮತ್ತು ಟೊಬ್ಯಾಗೋದ ಸಾಂತಾ ಕ್ರೂಜ್
  • ದಿನಾಂಕ: ಅಕ್ಟೋಬರ್ ೭, ೧೯೮೩
  • ಟೆಸ್ಟ್ ಪದಾರ್ಪಣೆ: ೨೦೦೧೪ರ ಏಪ್ರಿಲ್ ೧೮ ಇಂಗ್ಲೆಂಡ್ ವಿರುದ್ಧ (ಲಾರ್ಡ್ಸ್ ಮೈದಾನ)
  • ಏಕದಿನ ಪದಾರ್ಪಣೆ: ೨೦೦೬ರ ಫೆಬ್ರವರಿ ೧೬ ನ್ಯೂಜಿಲೆಂಡ್ ವಿರುದ್ಧ
  • ಕೊನೆಯ ಏಕದಿನ ಪಂದ್ಯ: ೨೦೧೪ರ ಅಕ್ಟೋಬರ್ ೧೭ರಂದು ಭಾರತದ ವಿರುದ್ಧ
  • ಕೊನೆಯ ಟೆಸ್ಟ್: ೨೦೧೦ರ ಡಿಸೆಂಬರ್ ೧ರಂದು ಶ್ರೀಲಂಕಾ ವಿರುದ್ಧ

ಟೆಸ್ಟ್ | ೨೦೦೪ರಿಂದ ೨೦೧೦

ಪಂದ್ಯ: ೪೦ | ಇನ್ನಿಂಗ್ಸ್: ೭೧ | ನಾಟೌಟ್: ೧ | ರನ್: ೨೨೦೦ | ಗರಿಷ್ಠ: ೧೧೩ | ಆವರೇಜ್: ೩೧.೪ | ಶತಕ: ೩ | ಅರ್ಧಶತಕ: ೧೩

ಏಕದಿನ | ೨೦೦೪ರಿಂದ ೨೦೧೪

ಪಂದ್ಯ: ೧೬೪ | ಇನ್ನಿಂಗ್ಸ್: ೧೪೧ | ನಾಟೌಟ್: ೨೪ | ರನ್: ೨೯೬೮ | ಗರಿಷ್ಠ: ೧೧೨ | ಆವರೇಜ್: ೨೫.೪ | ಶತಕ: ೨ | ಅರ್ಧಶತಕ: ೧೦

ಟಿ೨೦ | ೨೦೦೬ರಿಂದ ೨೦೧೬

ಪಂದ್ಯ: ೬೬ | ಇನ್ನಿಂಗ್ಸ್: ೫೯ | ನಾಟೌಟ್: ೧೨ | ರನ್: ೧೧೪೨ | ಗರಿಷ್ಠ: ೬೬* | ಆವರೇಜ್: ೨೪.೩ | ಶತಕ: ೦ | ಅರ್ಧಶತಕ: ೪

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More