ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ | ಬುಡಾಪೆಸ್ಟ್‌ನಲ್ಲಿ ಕಂಚಿಗೆ ಮುತ್ತಿಟ್ಟ ಪೂಜಾ

ಭಾರತೀಯ ಮಹಿಳಾ ಕುಸ್ತಿ ಅಖಾಡದಲ್ಲಿ ಪೂಜಾ ಧಂಡಾ ಎಂಬ ಹೊಸ ಪ್ರತಿಭೆ ಉದಯಿಸಿದೆ. ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪೂಜಾ, ಇದೀಗ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿ ಗಮನ ಸೆಳೆದಿದ್ದಾರೆ

ಬಜರಂಗ್ ಪೂನಿಯಾ ಪುರುಷರ ವಿಭಾಗದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ ಬಳಿಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪೂಜಾ ಭಾರತಕ್ಕೆ ಕಂಚಿನ ಪದಕ ತಂದಿತ್ತಿದ್ದಾರೆ. ಇದರೊಂದಿಗೆ ಕಳೆದ ಆರು ವರ್ಷಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ನಾಲ್ಕನೇ ಕುಸ್ತಿಪಟು ಎನಿಸಿದರು. ಕಾಮನ್ವೆಲ್ತ್ ಕೂಟದ ಬಳಿಕ ಪೂಜಾ ಮಹತ್ವಪೂರ್ಣ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಬಹುದೊಡ್ಡ ಸಾಧನೆ ಮಾಡಿದಂತಾಗಿದೆ.

ಗುರುವಾರ ನಡೆದ ವನಿತೆಯರ ೫೭ ಕೆಜಿ ವಿಭಾಗದಲ್ಲಿ ೨೪ರ ಹರೆಯದ ಪೂಜಾ ೨೦೧೭ರ ಯೂರೋಪಿಯನ್ ಚಾಂಪಿಯನ್ ನಾರ್ವೆಯ ಜೇಕಬ್ ಬುಲೆನ್ ವಿರುದ್ಧ ೧೦-೭ರಿಂದ ಗೆಲುವು ಸಾಧಿಸಿದರು. ಪ್ರತೀ ಎರಡು ಅವಧಿಯ ಸೆಣಸಿನಲ್ಲಿ ತಲಾ ನಾಲ್ಕು ಪಾಯಿಂಟ್ಸ್ ಕಲೆಹಾಕಿದ ಪೂಜಾ, ವೃತ್ತಿಬದುಕಿನಲ್ಲೇ ಶ್ರೇಷ್ಠ ಪ್ರದರ್ಶನ ನೀಡಿದರು.

ಪೂಜಾಗೂ ಮುನ್ನ ವಿಶ್ವ ಚಾಂಪಿಯನ್‌ಶಿಪ್ ಅಖಾಡದಲ್ಲಿ ಆಲ್ಕಾ ತೋಮಾರ್ (೨೦೦೬), ಗೀತಾ (೨೦೧೨), ಬಬಿತಾ ಫೋಗಟ್ (೨೦೧೨) ಪದಕ ಗೆದ್ದಿದ್ದರು. ವಿಶೇಷವೆಂದರೆ, ಈ ಮೂವರೂ ಕಂಚಿನ ಪದಕ ಗೆದ್ದಿದ್ದರು. ಪೂಜಾ ಇವರುಗಳ ಸಾಧನೆಯನ್ನು ಸರಿಗಟ್ಟಿದಂತಾಗಿದೆ. “ಇದೊಂದು ಹೆಮ್ಮೆಯ ಕ್ಷಣ. ಈ ಪದಕದೊಂದಿಗೆ ನನ್ನ ದೇಶಕ್ಕೆ ಗೌರವ ತಂದಿದ್ದೇನೆ. ನಿಜವಾಗಿಯೂ ನನ್ನೀ ಸಾಧನೆಯಿಂದ ನನಗೆ ಖುಷಿಯಾಗಿದೆ. ಶುರುವಿನಲ್ಲೇ ಆಕ್ರಮಣಕಾರಿ ಪ್ರದರ್ಶನ ನೀಡಿದ್ದರಿಂದ ಮುನ್ನಡೆ ದೊರಕಿತು. ಇದು ನನ್ನಲ್ಲಿ ಆತ್ಮವಿಶ್ವಾಸವನ್ನೂ ತಂದಿತು,’’ ಎಂದು ಪೂಜಾ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಮುದುಕೇಶ್ವರ ಜಾತ್ರೆಯಲ್ಲಿ ಜಟ್ಟಿಗರ ಕುಸ್ತಿ ಕಮಾಲ್

“ಬುಲೆನ್ ದೇಹ ಮೇಲ್ಭಾಗದಲ್ಲಿ ಅತ್ಯಂತ ಬಲಶಾಲಿಯಿಂದ ಕೂಡಿತ್ತು. ಆಕೆಯ ಈ ಹಿಂದಿನ ಹಲವಾರು ಬೌಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ನನಗೆ ವೇದ್ಯವಾಯಿತು. ಹೀಗಾಗಿ, ನನ್ನ ತರಬೇತುದಾರರು ನಾನು ಆಕೆಯ ದೇಹದ ಕೆಳಭಾಗವು ಜಗ್ಗದಂತೆ ಗಟ್ಟಿಯಾಗಿ ಆಕ್ರಮಿಸುವಂತೆ ಸೂಚಿಸಿದ್ದರು. ಹೀಗಾಗಿ, ಆಕೆಯ ಕಾಲುಗಳು ಮಿಸುಕದಂತೆ ಎಚ್ಚರವಹಿಸಿದೆ,’’ ಎಂತಲೂ ಗೆಲುವು ಸಾಧಿಸಿದ ಬಗೆಯನ್ನು ಪೂಜಾ ಹೇಳಿಕೊಂಡರು.

ಇನ್ನು, ರಿಯೋಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸಾಕ್ಷಿ ಮಲಿಕ್ ಇನ್ನೂ ಪದಕ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಹಂಗೇರಿಯಾದ ಮರಿಯಾನ ಸಾಸ್ಟಿನ್ ಎದುರು ನಡೆದ ರಿಪೀಚೆಜ್ ಸುತ್ತಿನಲ್ಲಿ ಸಾಕ್ಷಿ ೨-೩ರಿಂದ ಪರಾಭವಗೊಂಡರು. ಶುರುವಿನಲ್ಲಿ ೨-೧ ಮುನ್ನಡೆ ಪಡೆದಿದ್ದ ಸಾಕ್ಷಿ ಕೊನೆಯ ಹಂತದಲ್ಲಿ ಕೇವಲ ರಕ್ಷಣಾತ್ಕಕ ಪಟ್ಟಿಗಷ್ಟೇ ಆದ್ಯತೆ ನೀಡಿದರು. ಹೀಗಾಗಿ, ಕೊನೆಯ ಏಳು ಸೆಕೆಂಡುಗಳಲ್ಲಿ ಫಲಿತಾಂಶ ಆಕೆಯ ಪಾಲಿಗೆ ವ್ಯತಿರಿಕ್ತವಾಗಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More