ಮತ್ತೊಮ್ಮೆ ತಾಯ್ ಪರೀಕ್ಷೆಗೆ ಸಜ್ಜಾದ ಸೈನಾ; ಕಿಡಾಂಬಿ-ಸಿಂಧು ಕ್ವಾರ್ಟರ್‌ಗೆ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಮೂವರು ಸ್ಟಾರ್ ಆಟಗಾರರಾದ ಸೈನಾ ನೆಹ್ವಾಲ್, ಕಿಡಾಂಬಿ ಶ್ರೀಕಾಂತ್ ಮತ್ತು ಪಿ ವಿ ಸಿಂಧು ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಡೆನ್ಮಾರ್ಕ್ ಓಪನ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಸೈನಾಗೆ ಮತ್ತೊಮ್ಮೆ ತಾಯ್ ಸವಾಲು ಎದುರಾಗಿದೆ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಿರ್ಣಾಯಕ ಘಟ್ಟ ತಲುಪಿದ್ದು, ಭಾರತದ ಆಟಗಾರ್ತಿಯರ ಪಾಲಿಗೆ ವಿಶೇಷವಾಗಿ ಸೈನಾ ನೆಹ್ವಾಲ್‌ಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಹಂತದ ಪಂದ್ಯ ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸೈನಾ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಚೈನೀಸ್ ತೈಪೆ ಆಟಗಾರ್ತಿ ತಾಯ್ ಟ್ಸು ಯಿಂಗ್ ಎದುರಿನ ಈ ಹೋರಾಟ ಸೈನಾಗೆ ಕಠಿಣ ಪರೀಕ್ಷೆ ಒಡ್ಡುವ ಸಾಧ್ಯತೆ ಇದೆ.

ಗುರುವಾರ (ಅ. ೨೫) ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸೈನಾ, ಜಪಾನ್ ಆಟಗಾರ್ತಿ ನೊಜೊಮಿ ಒಕುಹಾರ ವಿರುದ್ಧ ೧೦-೨೧, ೨೧-೧೪, ೨೧-೧೭ರ ಮೂರು ಗೇಮ್‌ಗಳ ಆಟದಲ್ಲಿ ಗೆಲುವು ಪಡೆದರು. ಮೊದಲ ಗೇಮ್‌ನಲ್ಲಿ ಏಕಾಗ್ರತೆ ಮರೆತಂತೆ ಕಂಡುಬಂದ ಸೈನಾ, ಕೊನೆಯ ಎರಡೂ ಗೇಮ್‌ಗಳಲ್ಲಿ ಪುಟಿದೆದ್ದರು. ನಿರ್ಣಾಯಕ ಗೇಮ್‌ನಲ್ಲಿ ಒಕುಹಾರ ತಿರುಗೇಟು ನೀಡಲು ಯತ್ನಿಸಿದರಾದರೂ, ಸೈನಾ ಮೂರು ಪಾಯಿಂಟ್ಸ್‌ಗಳಿಂದ ಆಕೆಯನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದರು.

ಇಂದು ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಸೈನಾ ಚೈನೀಸ್ ತೈಪೆಯ ತಾಯ್ ಟ್ಸು ಯಿಂಗ್ ವಿರುದ್ಧ ಸೆಣಸಲಿದ್ದಾರೆ. ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಚೀನಾದ ಗಾವೊ ಫಾಂಗ್ಝಿ ವಿರುದ್ಧ ಚೈನೀಸ್ ತೈಪೆ ಆಟಗಾರ್ತಿ ೨೧-೧೨, ೨೧-೧೭ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಅಂದಹಾಗೆ, ತಾಯ್ ಟ್ಸು ಯಿಂಗ್ ವಿರುದ್ಧ ಕಳೆದ ವಾರ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್‌ನಲ್ಲಿ ಮುಗ್ಗರಿಸಿದ್ದರು. ಇದರೊಂದಿಗೆ ಕಳೆದ ಐದು ವರ್ಷಗಳಿಂದಲೂ ಯಿಂಗ್ ಎದುರಿನ ಸವಾಲನ್ನು ಮೆಟ್ಟಿನಿಲ್ಲಲಾಗದ ಸೈನಾಗೆ ಮತ್ತೊಂದು ಪರೀಕ್ಷೆ ಎದುರಾಗಿದೆ.

ಸಿಂಧುಗೆ ಸುಲಭ ಗೆಲುವು

ಇದನ್ನೂ ಓದಿ : ಯಮಗುಚಿ, ಡಾನ್ ಸವಾಲು ಮೀರಿದ ಸೈನಾ-ಕಿಡಾಂಬಿ ಶ್ರೀಕಾಂತ್ ಕ್ವಾರ್ಟರ್‌ಗೆ

ಇನ್ನು, ತಡರಾತ್ರಿ ನಡೆದ ಮತ್ತೊಂದು ವನಿತೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಸುಲಭ ಗೆಲುವಿನೊಂದಿಗೆ ಕ್ವಾರ್ಟರ್‌ಫೈನಲ್ ತಲುಪಿದರು.. ಜಪಾನ್‌ನ ಸಯಾಕ ಸ್ಯಾಟೊ ಎದುರಿನ ಹಣಾಹಣಿಯಲ್ಲಿ ಸಿಂಧು ೨೧-೧೭, ೨೧-೧೬ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಎರಡೂ ಗೇಮ್‌ಗಳಲ್ಲಿ ಸಿಂಧುವಿನ ಆಕ್ರಮಣಕಾರಿ ಆಟದೆದುರು ಮಂಕಾದ ಸ್ಯಾಟೊ ಹೆಚ್ಚು ಪ್ರತಿರೋಧ ತೋರಲು ಸಾಧ್ಯವಾಗದೆ ಸೋಲೊಪ್ಪಿಕೊಂಡರು. ಮುಂದಿನ ಸುತ್ತಿನಲ್ಲಿ ಸಿಂಧು, ಚೀನಿ ಆಟಗಾರ್ತಿ ಹೀ ಬಿಂಗ್ಜಿಯಾವೊ ವಿರುದ್ಧ ಕಾದಾಡಲಿದ್ದಾರೆ.

ಶ್ರೀಕಾಂತ್‌ಗೆ ಮತ್ತೆ ಮೊಮೊಟಾ ಸವಾಲು

ಪ್ರಸಕ್ತ ಋತುವಿನಲ್ಲಿ ಒಂದೇ ಒಂದು ಪ್ರಮುಖ ಟೂರ್ನಿಗಳಲ್ಲಿಯೂ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ಹಾಲಿ ಚಾಂಪಿಯನ್ ಕೂಡ ಆಗಿರುವ ಕಿಡಾಂಬಿ ಶ್ರೀಕಾಂತ್ ಜಯಪಡೆದರು. ದಕ್ಷಿಣ ಕೊರಿಯಾದ ಡಾಂಗ್ ಕೆಯುನ್ ಲೀ ಎದುರಿನ ಹಣಾಹಣಿಯಲ್ಲಿ ಮೊದಲ ಗೇಮ್‌ನ ಹಿನ್ನಡೆಯನ್ನು ಮೆಟ್ಟಿನಿಂತ ಶ್ರೀಕಾಂತ್, ೧೨-೨೧, ೨೧-೧೬, ೨೧-೧೮ರಿಂದ ಗೆಲುವು ಪಡೆದರು. ಹೆಚ್ಚು ಪ್ರತಿರೋಧವಿಲ್ಲದೆ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ ನಂತರ ಶ್ರೀಕಾಂತ್ ಕೊನೆಯ ಎರಡೂ ಗೇಮ್‌ಗಳಲ್ಲಿ ಪುಟಿದೆದ್ದರು.

ಎರಡನೇ ಗೇಮ್‌ನಲ್ಲಿ ೫-೬ರಲ್ಲಿದ್ದ ಅಂತರವನ್ನು ಶ್ರೀಕಾಂತ್, ಶರವೇಗದ ಆಟದೊಂದಿಗೆ ೧೩-೮ಕ್ಕೆ ವಿಸ್ತರಿಸಿದರು. ಇಲ್ಲಿಂದಾಚೆಗೆ ಎರಡು ಪಾಯಿಂಟ್ಸ್‌ಗಳ ಮುನ್ನಡೆ ಕಾಯ್ದುಕೊಂಡ ಶ್ರೀಕಾಂತ್ ಪಂದ್ಯವನ್ನು ೧-೧ರಿಂದ ಜೀವಂತವಾಗಿಟ್ಟರು. ಇತ್ತ, ಮೂರನೇ ಗೇಮ್ ನಿರ್ಣಾಯಕವಾಗಿದ್ದರಿಂದ ಇಬ್ಬರೂ ಪ್ರಖರ ಹೋರಾಟಕ್ಕೆ ಇಳಿದರು. ಒಂದು ಹಂತದಲ್ಲಿ ಸಮಬಲದಿಂದ ಕೂಡಿದ್ದ ಹಣಾಹಣಿಯಲ್ಲಿ ಶ್ರೀಕಾಂತ್ ಮೂರು ಪಾಯಿಂಟ್ಸ್ ಕಲೆಹಾಕುವುದರೊಂದಿಗೆ ೧೭-೧೪ರಿಂದ ಮೇಲುಗೈ ಸಾಧಿಸಿದರು. ಇದಕ್ಕೆ ಪ್ರತಿಯಾಗಿ ಲೀ ಕೂಡ ತಿರುಗೇಟು ನೀಡಿ ೧೮-೧೮ರ ಸಮಬಲ ಹೋರಾಟ ನಡೆಸಿದರು. ಆದರೆ, ಗೆಲುವಿಗೆ ಬೇಕಿದ್ದ ಮೂರು ಪಾಯಿಂಟ್ಸ್‌ಗಳನ್ನು ಕಲೆಹಾಕಿದ ಶ್ರೀಕಾಂತ್ ಗೆಲುವಿನನ ನಗೆಬೀರಿದರು.

ಇಂದು ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಸೈನಾ ಅವರಂತೆ ಶ್ರೀಕಾಂತ್‌ಗೂ ಪ್ರಬಲ ಪರೀಕ್ಷೆ ಎದುರಾಗಿದೆ. ಜಪಾನ್ ಆಟಗಾರ ಕೆಂಟೊ ಮೊಮೊಟಾ ವಿರುದ್ಧದ ಹಣಾಹಣಿ ಶ್ರೀಕಾಂತ್‌ಗೆ ಮಹತ್ವಪೂರ್ಣವಾಗಿದೆ. ಕಳೆದ ವಾರಾಂತ್ಯದಲ್ಲಿ ನಡೆದ ಡೆನ್ಮಾರ್ಕ್ ಓಪನ್ ಸೆಮಿಫೈನಲ್ ಸೇರಿದಂತೆ ೨೦೧೫ರ ಮಾರ್ಚ್‌ನಿಂದ ಇಲ್ಲೀವರೆಗಿನ ಆರು ಪಂದ್ಯಗಳಲ್ಲಿಯೂ ಜಪಾನ್ ಆಟಗಾರನ ಸವಾಲು ಮೀರಲಾಗದ ಶ್ರೀಕಾಂತ್ ತೀವ್ರ ನಿರಾಸೆ ಅನುಭವಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More