ಪುಣೆಯಲ್ಲಿ ವಾರಾಂತ್ಯದ ಕದನಕ್ಕೆ ಅಣಿಯಾದ ವಿರಾಟ್-ಹೋಲ್ಡರ್ ಬಳಗ

ವೈಜಾಗ್ ಪಂದ್ಯದಲ್ಲಿನ ವೀರೋಚಿತ ಆಟದ ಬಳಿಕ ಇಂಡೋ-ಕೆರಿಬಿಯನ್ನರು ಮೂರನೇ ಪಂದ್ಯಕ್ಕೆ ಅಣಿಯಾಗಿದ್ದಾರೆ. ವಿರಾಟ್ ಕೊಹ್ಲಿಯ ಪ್ರಚಂಡ ಫಾರ್ಮ್‌ಗೆ ಪ್ರತಿಯಾಗಿ ಹೆಟ್ಮೆಯರ್ ಮತ್ತು ಶಾಯ್ ಹೋಪ್ ಕೆರಿಬಿಯನ್ನರ ಆತ್ಮವಿಶ್ವಾಸ ಹೆಚ್ಚಿಸಿದೆ. ವಾರಾಂತ್ಯದ ವಾರ್‌ಗೆ ಪುಣೆ ಈಗ ಸಜ್ಜಾಗಿದೆ!

“ವಿಶ್ರಾಂತಿ ನೀಡಲಾಗಿದ್ದ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಮತ್ತೆ ತಂಡಕ್ಕೆ ಮರಳುವಂತೆ ಮಾಡಿದ್ದೇವೆ’’ ಎಂಬ ವಿಂಡೀಸ್ ಕೋಚ್ ಸ್ಟುವರ್ಟ್ ಲಾ ಮಾತು ಆತಿಥೇಯ ಭಾರತ ಮತ್ತು ಪ್ರವಾಸಿ ವೆಸ್ಟ್‌ಇಂಡೀಸ್ ನಡುವಣದ ಸೀಮಿತ ಓವರ್‌ಗಳ ಸರಣಿಯ ಕಾವನ್ನು ಹೆಚ್ಚಿಸಿದೆ. ನಿಜ, ಕಳೆದ ಎರಡೂ ಪಂದ್ಯಗಳಲ್ಲಿ ಕೆರಿಬಿಯನ್ನರು ಟೀಂ ಇಂಡಿಯಾಗೆ ಸರಿಸಾಟಿ ಪ್ರದರ್ಶನ ನೀಡುತ್ತಾ ಸಾಗಿದೆ.

ಗೌಹಾತಿಯಲ್ಲಿನ ಪಂದ್ಯಕ್ಕೆ ಹೋಲಿಸಿದರೆ ವೈಜಾಗ್‌ನಲ್ಲಿ ಕೆರಿಬಿಯನ್ನರ ಹೋರಾಟ ಭಾರತ ತಂಡವನ್ನು ಖಂಡಿತವಾಗಿಯೂ ಎಚ್ಚರಿಸಿದೆ. ಅದರಲ್ಲೂ ಶಾಯ್ ಹೋಪ್ ಮತ್ತು ಯುವ ಆಟಗಾರ ಶಿಮ್ರೊನ್ ಹೆಟ್ಮೆಯರ್ ಆಕ್ರಮಣಕಾರಿ ಆಟ ಆತಿಥೇಯರ ಪಾಲಿಗೆ ಭಾರೀ ಸವಾಲಾಗಿ ಪರಿಣಮಿಸಿದೆ. ಇದೀಗ ಶನಿವಾರ (ಅ. ೨೭) ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿರುವ ಮೂರನೇ ಪಂದ್ಯವು ಉಭಯರಿಗೂ ಮಹತ್ವವಾಗಿದೆ.

ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ೧-೦ ಮುನ್ನಡೆ ಪಡೆದಿರುವ ಭಾರತ ತಂಡ, ಸದ್ಯ, ಸರಣಿಯಲ್ಲಿ ೨-೦ ಮುನ್ನಡೆಗೆ ತವಕಿಸುತ್ತಿದೆ. ವಿಶಾಖಪಟ್ಟಣದಲ್ಲಿ ವಿರಾಟ್ ಕೊಹ್ಲಿಯ ವಿರಾಟ್ ಆಟದ ಮಧ್ಯೆಯೂ ಆತಿಥೇಯರು ೨-೦ ಮುನ್ನಡೆ ಪಡೆಯಲು ಕೆರಿಬಿಯನ್ನರು ಬಿಡಲಿಲ್ಲ. ಅಷ್ಟರಮಟ್ಟಿಗೆ ವಿಂಡೀಸ್ ಪ್ರಬಲ ಪೈಪೋಟಿ ನೀಡಿತ್ತು. ಮೂರನೇ ಪಂದ್ಯದಲ್ಲೂ ಭಾರತ ಫೇವರಿಟ್ ಎನಿಸಿದ್ದರೂ, ಕೆರಿಬಿಯನ್ನರು ಸರಣಿಯನನ್ನು ಜೀವಂತವಾಗಿಡಲು ಪಣ ತೊಟ್ಟಿದ್ದಾರೆ.

ವಿರಾಟ್ ಆಟದ ಆಸರೆ

ಅತ್ಯದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಭಾರತ ತಂಡದ ಬ್ಯಾಟಿಂಗ್‌ಗೆ ಬಹುದೊಡ್ಡ ಆಸರೆಯಾಗಿದ್ದಾರೆ. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಜತೆಗೆ ದ್ವಿಶತಕದ ಜತೆಯಾಟವಾಡಿದ್ದ ಕೊಹ್ಲಿ, ವೈಜಾಗ್‌ನಲ್ಲಿ ಅಜೇಯ ೧೫೭ ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿಅತಿವೇಗವಾಗಿ ೧೦ ಸಾವಿರ ರನ್ ಗಡಿ ಮುಟ್ಟಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಹಿಂದಿಕ್ಕಿದರು. ಕೇವಲ ೨೦೫ ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮೆರೆದ ಕೊಹ್ಲಿಯ ಫಾರ್ಮ್ ಕೆರಿಬಿಯನ್ನರ ಪಾಲಿಗೆ ವಿಚಿತ್ರ ಸಂಕಟ ತಂದಿತ್ತಿದೆ. ಸದ್ಯ, ಸರಣಿಯಲ್ಲಿ ೨೯೭ ರನ್ ಗಳಿಸಿರುವ ಕೊಹ್ಲಿಯನ್ನು ಕಟ್ಟಿಹಾಕುವ ಕುರಿತು ಕೆರಿಬಿಯನ್ನರು ಗಂಭೀರ ಚಿಂತೆಗೆ ಬಿದ್ದಿದ್ದಾರೆ.

ಎರಡೂ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಲಾಗದ ಶಿಖರ್ ಧವನ್ ಪುಣೆಯಲ್ಲಿ ಪುಟಿದೇಳಲು ಮುಂದಾಗಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅವರಿಗೆ ಮತ್ತೊಂದು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಇನ್ನು, ಗೌಹಾತಿಯಲ್ಲಿ ಮಿಂಚು ಹರಿಸಿದ್ದ ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವೈಜಾಗ್‌ನಲ್ಲಿ ವಿಫಲವಾಗಿದ್ದರೂ, ವಿಂಡೀಸ್‌ಗೆ ಅವರ ಭೀತಿಯೂ ಆವರಿಸಿದೆ.

ಭುವಿ-ಬುಮ್ರಾ ವಾಪಸ್!

ಇದನ್ನೂ ಓದಿ : ವೈಜಾಗ್ ರೋಚಕ ಟೈನಲ್ಲಿ ವಿರಾಟ್ ವೈಭವದೊಂದಿಗೆ ಮಿಂದೆದ್ದ ಕೆರಿಬಿಯನ್ನರು!

ಭಾರತ ತಂಡದ ಬೌಲಿಂಗ್ ಪಡೆಗೆ ಇನ್ನಷ್ಟು ಶಕ್ತಿ ತುಂಬಲು ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ತಂಡಕ್ಕೆ ವಾಪಸಾಗಿದ್ದಾರೆ. ಇಂಗ್ಲೆಂಡ್ ಸರಣಿಯ ನಂತರ ಇಬ್ಬರಿಗೂ ವಿಶ್ರಾಂತಿ ನೀಡಲಾಗಿತ್ತು. ಆದರೆ, ಎರಡು ಟೆಸ್ಟ್ ಪಂದ್ಯ ಸರಣಿಗಳಲ್ಲಿ ೦-೨ ಹಿನ್ನಡೆ ಅನುಭವಿಸಿದ ನಂತರದಲ್ಲಿ ಕೆರಿಬಿಯನ್ನರು ಸೀಮಿತ ಓವರ್‌ಗಳಲ್ಲಿ ತಿರುಗೇಟು ನೀಡುವ ಸುಳಿವು ನೀಡುತ್ತಿರುವುದರಿಂದ ಮೂರನೇ ಪಂದ್ಯವನ್ನೂ ಒಳಗೊಂಡಂತೆ ಕೊನೆಯ ಎರಡು ಪಂದ್ಯಗಳಿಗೂ ಬುಮ್ರಾ ಮತ್ತು ಭುವಿಯನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಎರಡೂ ಪಂದ್ಯಗಳಲ್ಲಿ ೩೨೦ಕ್ಕೂ ಹೆಚ್ಚು ರನ್ ಹರಿದುಬಂದಿರುವ ಹಿನ್ನೆಲೆಯಲ್ಲಿ ಬೌಲಿಂಗ್ ಪಡೆ ಸಶಕ್ತವಾಗಬೇಕಾದುದು ಅನಿವಾರ್ಯವಾಗಿದೆ. ಭುವಿ ಪವರ್‌ಪ್ಲೇ ಮತ್ತು ಬುಮ್ರಾ ಡೆತ್ ಓವರ್‌ಗಳಲ್ಲಿ ತಂಡಕ್ಕೆ ನೆರವಾಗುವ ಸಾಮರ್ಥ್ಯ ಉಳ್ಳವರಾಗಿದ್ದು, ಕೆರಿಬಿಯನ್ನರನ್ನು ಕಟ್ಟಿಹಾಕಲು ಇವರಿಬ್ಬರ ಆಗಮನ ಸಹಾಯಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಇರಿಸಿಕೊಳ್ಳಲಾಗಿದೆ.

ಇನ್ನು, ಮುಂಗೈಮಣಿಕಟ್ಟಿನ ಮಾಂತ್ರಿಕರಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಒದ್ದೆಯಾದ ಚೆಂಡನ್ನು ಪರಿಣಾಮಕಾರಿ ಸ್ಪಿನ್‌ ಆಗಿಸಲು ಹೆಣಗುತ್ತಿದ್ದಾರೆ. ಮಂಜಿನಿಂದ ತೇವಗೊಂಡ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಕಷ್ಟವಾಗುತ್ತಿದೆ ಎಂದು ಕುಲದೀಪ್ ಯಾದವ್ ಹೇಳಿಕೊಂಡಿದ್ದರು. ಹೀಗಾಗಿ, ಇವರೀರ್ವರೂ ಈ ಸವಾಲನ್ನು ಮೆಟ್ಟಿನಿಲ್ಲಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಮನೀಶ್‌ಗೆ ಸಿಕ್ಕುವುದೇ ಸ್ಥಾನ?

ವಿಂಡೀಸ್ ವಿರುದ್ಧದ ಸರಣಿಗೆ ಕನ್ನಡಿಗರಾದ ಕೆ ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಕಳೆದ ಎರಡೂ ಪಂದ್ಯಗಳಲ್ಲಿ ಆಡುವ ಅಂತಿಮ ಹನ್ನೊಂದರಲ್ಲಿ ಸೇರ್ಪಡೆಯಾಗಿಲ್ಲ. ಧವನ್ ಅಸ್ಥಿರ ಆಟದ ಹಿನ್ನೆಲೆಯಲ್ಲಿ ರಾಹುಲ್‌ಗೆ ಹಾಗೂ ಮಧ್ಯಮ ಕ್ರಮಾಂಕದಲ್ಲಿನ ವೈಫಲ್ಯ ಮೆಟ್ಟಿನಿಲ್ಲಲು ಮನೀಶ್ ಪಾಂಡೆಗೆ ಸ್ಥಾನ ಕಲ್ಪಿಸುವ ಕುರಿತು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಚಿಂತಿಸಿದೆ. ವೈಜಾಗ್‌ನಲ್ಲಿ ಅಂಬಟಿ ರಾಯುಡು ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಕೊಹ್ಲಿ ಜತೆಗೆ ಆಕರ್ಷಕ ಜತೆಯಾಟವಾಡಿ ೭೩ ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ, ೫, ೬ ಮತ್ತು ೭ನೇ ಕ್ರಮಾಂಕ ಮಾತ್ರ ಇನ್ನೂ ಅಸ್ಥಿರತೆಯಿಂದಲೇ ನಲುಗಿದೆ. ಧೋನಿ, ರಿಷಭ್ ಪಂತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲವಾಗಿದ್ದರು.

ಕೆರಿಬಿಯನ್ನರ ಆಸರೆ

ಗೌಹಾತಿ ಪಂದ್ಯದಲ್ಲಿ ಅರ್ಧಶತಕ ದಾಖಲಿಸಲೂ ವಿಫಲವಾದ ಶಾಯ್ ಹೋಪ್ ವೈಜಾಗ್‌ನಲ್ಲಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು. ಅಜೇಯ ಆಟವಾಡಿದ್ದ ಶಾಯ್ ಹೋಪ್ ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್‌ಗೆ ಬೆನ್ನೆಲುಬಾಗಿದ್ದಾರೆ. ವಿಶೇಷವೆಂದರೆ, ಈತ ದಾಖಲಿಸಿದ ಎರಡೂ ಶತಕಗಳ ಪಂದ್ಯಗಳು ಟೈನಲ್ಲಿ ಅಂತ್ಯವಾಗಿದೆ ಎಂಬುದು ಗಮನೀಯ. ಇನ್ನು, ಇವರೊಂದಿಗೆ ತಂಡದ ಬ್ಯಾಟಿಂಗ್‌ಗೆ ಮತ್ತೊಂದು ಬೆನ್ನಲುಬಾಗಿ ನಿಂತಿರುವುದು ಹೆಟ್ಮೆಯರ್.

ಆಕ್ರಮಣಶೀಲತೆಯ ಹೆಟ್ಮೆಯರ್ ಎರಡೂ ಪಂದ್ಯಗಳಲ್ಲಿ ಭಾರತದ ಬೌಲರ್‌ಗಳನ್ನು ಕಾಡಿದ್ದಾರೆ. ಗೌಹಾತಿ ಪಂದ್ಯದಲ್ಲಿ ಶತಕ ದಾಖಲಿಸಿದ ಅವರು ನಿರ್ಣಾಯಕ ಘಟ್ಟದಲ್ಲಿ ಕ್ರೀಸ್ ತೊರೆದದ್ದು ತಂಡದ ಸೋಲಿಗೆ ಕಾರಣವಾಗಿತ್ತು. ಇನ್ನು, ವೈಜಾಗ್‌ನಲ್ಲಿ ಕೇವಲ ೫ ರನ್ ಅಂತರದಿಂದ ಶತಕವಂಚಿತವಾದ ಹೆಟ್ಮೆಯರ್ ತಂಡವನ್ನು ಗೆಲುವಿನ ಹಾದಿಗೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಚಾಹಲ್ ಬೌಲಿಂಗ್‌ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಅವರು ಕ್ರೀಸ್ ತೊರೆದ ಬಳಿಕ ಇಡೀ ಪಂದ್ಯದ ಚಿತ್ರಣವೇ ಬದಲಾಗಿತ್ತು. ಅಂತಿಮವಾಗಿ ಶಾಯ್ ಹೋಪ್ ರೋಚಕ ಟೈ ಆಗಲು ಕಾರಣರಾದರು. ಇನ್ನು, ಕೀರನ್ ಪೊವೆಲ್ ಮತ್ತು ಚಂದ್ರಪಾಲ್ ಹೇಮ್‌ರಾಜ್ ಸ್ಥಿರ ಪ್ರದರ್ಶನಕ್ಕಾಗಿ ಯತ್ನಿಸುತ್ತಿದ್ದು, ವಿಂಡೀಸ್ ಬ್ಯಾಟಿಂಗ್‌ ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ.

ಬೌಲಿಂಗ್ ಸವಾಲು!

ವಿಂಡೀಸ್ ಬ್ಯಾಟಿಂಗ್‌ನಲ್ಲಿ ನಿರಾಸೆಯನ್ನೇನೂ ಮೂಡಿಸಿಲ್ಲ. ಆದರೆ, ಅದರ ಬೌಲಿಂಗ್ ಪಡೆ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿಲ್ಲ. ಮುಖ್ಯವಾಗಿ, ಆಲ್ರೌಂಡರ್ ಹಾಗೂ ನಾಯಕ ಜೇಸನ್ ಹೋಲ್ಡರ್ ಸೇರಿದಂತೆ ಕೆಮರ್ ರೋಚ್ ಮತ್ತು ಸ್ಪಿನ್ನರ್‌ಗಳಾದ ದೇವೇಂದ್ರ ಬಿಶೂ ಮತ್ತುಆ್ಯಶ್ಲೆ ನರ್ಸ್ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಅಸ್ಥಿರ ಭಾವ ಮೂಡಿಸುವಲ್ಲಿ ವಿಫಲವಾಗಿದ್ದಾರೆ. ಒಟ್ಟಾರೆ ಚಿತ್ರಣ ತವರಿನಲ್ಲಿ ಟೀಂ ಇಂಡಿಯಾವನ್ನು ಕಟ್ಟಿಹಾಕಲು ವಿಂಡೀಸ್ ಆಲ್ರೌಂಡ್ ಆಟವಾಡದ ಹೊರತು ಬೇರೆ ದಾರಿಯೇ ಇಲ್ಲದಂತಾಗಿದೆ.

ಸಂಭವನೀಯ ಇಲೆವೆನ್

ಭಾರತ: ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್ / ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಅಂಬಟಿ ರಾಯುಡು, ರಿಷಭ್ ಪಂತ್, ಎಂ ಎಸ್ ಧೋನಿ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ.

ವೆಸ್ಟ್‌ಇಂಡೀಸ್: ಫ್ಯಾಬಿಯನ್ ಅಲೆನ್, ಚಂದ್ರಪಾಲ್ ಹೇಮ್‌ರಾಜ್, ಶಾಯ್ ಹೋಪ್, ಶಿಮ್ರೊನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಮರ್ಲಾನ್ ಸ್ಯಾಮುಯೆಲ್ಸ್, ಜೇಸನ್ ಹೋಲ್ಡರ್ (ನಾಯಕ), ಆ್ಯಶ್ಲೆ ನರ್ಸ್, ಕೆಮರ್ ರೋಚ್, ಒಶೇನ್ ಥಾಮಸ್, ಕೀಮೋ ಪೌಲ್ / ಎವಿನ್ ಲೆವಿಸ್.

ಪಂದ್ಯ ಆರಂಭ: ಮಧ್ಯಾಹ್ನ ೧.೩೦ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್ : ಸ್ಥಳ: ಪುಣೆ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More