ಚುಟುಕು ಸರಣಿಗೆ ಕೈಬಿಟ್ಟು ಧೋನಿ ಯುಗಾಂತ್ಯಕ್ಕೆ ನಾಂದಿ ಹಾಡಿತೇ ಬಿಸಿಸಿಐ?

ಎಂಎಸ್‌ಕೆ ಪ್ರಸಾದ್ ಸಾರಥ್ಯದ ಭಾರತ ಕ್ರಿಕೆಟ್ ತಂಡದ ಆಯ್ಕೆಸಮಿತಿ, ಶುಕ್ರವಾರ (ಅ.೨೬) ತಡರಾತ್ರಿ ವಿಂಡೀಸ್ ವಿರುದ್ಧದ ಟಿ೨೦ ಸರಣಿ ಸೇರಿದಂತೆ ಆಸ್ಟ್ರೇಲಿಯಾ ಪ್ರವಾಸಕ್ಕೂ ತಂಡವನ್ನು ಪ್ರಕಟಿಸಿದೆ. ಚುಟುಕು ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಿರುವ ವಿಂಡೀಸ್, ಧೋನಿಯನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ!

ಭಾರತಕ್ಕೆ ಚೊಚ್ಚಲ ಟಿ೨೦ ವಿಶ್ವಕಪ್ ಗೆದ್ದುಕೊಟ್ಟ ಎಂ ಎಸ್ ಧೋನಿ ಬಹುತೇಕ ವೃತ್ತಿಬದುಕಿನಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ತಂಡವೊಂದರ ವಿರುದ್ಧ ನಡೆಯಲಿರುವ ಟಿ೨೦ ಸರಣಿಯಿಂದ ಕೈಬಿಡಲ್ಪಟ್ಟಿದ್ದಾರೆ. ಆಯ್ಕೆಸಮಿತಿಯ ಅಚ್ಚರಿಯ ಈ ನಡೆಯಲ್ಲಿ ೧೬ ಮಂದಿ ಆಟಗಾರರ ಪೈಕಿ ರಾಂಚಿ ಕ್ರಿಕೆಟಿಗನಿಗೆ ಸ್ಥಾನ ಇಲ್ಲವಾಗಿದ್ದರೆ, ನಾಯಕ ವಿರಾಟ್ ಕೊಹ್ಲಿಗೆ ಸರಣಿಯಿಂದ ವಿನಾಯಿತಿ ನೀಡಲಾಗಿದೆ. ಏತನ್ಮಧ್ಯೆ, ಧೋನಿಯನ್ನು ವಿಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಗಳೆರಡರಿಂದಲೂ ಕೈಬಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರೇಮಿಗಳಿಂದ ಕಟು ಟೀಕೆ ವ್ಯಕ್ತವಾಗಿದೆ.

ಇನ್ನು, ಮುಂಬರಲಿರುವ ಆಸ್ಟ್ರೇಲಿಯಾ ಸರಣಿಗೂ ತಂಡವನ್ನು ಪ್ರಕಟಿಸಿರುವ ಆಯ್ಕೆಸಮಿತಿ, ಮುಂಬೈ ಆಟಗಾರ ರೋಹಿತ್ ಶರ್ಮಾ ಮತ್ತು ತಮಿಳುನಾಡಿನ ಮುರಳಿ ವಿಜಯ್‌ಗೆ ಸ್ಥಾನ ಕಲ್ಪಿಸಿದೆ. “ಎರಡನೇ ಕೀಪರ್‌ ಸ್ಥಾನದ ಮೇಲೆ ಹೆಚ್ಚಿನ ಗಮನ ವಹಿಸುವ ಸಲುವಾಗಿ ಮುಂಬರಲಿರುವ ಆರು ಟಿ೨೦ ಸರಣಿಯಿಂದ ಧೋನಿಯನ್ನು ಕೈಬಿಡಲಾಗಿದೆ,’’ ಎಂದಿರುವ ಎಂಎಸ್‌ಕೆ ಪ್ರಸಾದ್, ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಟಿ೨೦ ಸರಣಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ, ಪ್ರಸ್ತುತ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಐದು ಏಕದಿನ ಪಂದ್ಯ ಸರಣಿಗೆ ಮೊದಲ ಮೂರು ಪಂದ್ಯಗಳಿಂದ ಕೈಬಿಡಲ್ಪಟ್ಟದ್ದನ್ನು ಪ್ರಶ್ನಿಸಿದ್ದ ಕೇದಾರ್ ಜಾಧವ್‌ಗೆ ಕೊನೆಯ ಎರಡು ಪಂದ್ಯಗಳಿಗೆ ಕರೆಕೊಡಲಾಗಿದೆ. ದೇವ್‌ಧರ್ ಟ್ರೋಫಿಯಲ್ಲಿ ದೈಹಿಕ ಕ್ಷಮತೆಯನ್ನು ಅವರು ಋಜುವಾತುಪಡಿಸಿದ್ದು ಇದಕ್ಕೆ ಕಾರಣ ಎಂಬ ಸಮಜಾಯಿಷಿಯನ್ನೂ ನೀಡಲಾಗಿದೆ. “ದೇವ್‌ಧರ್ ಫೈನಲ್‌ಗೆ ಜಾಧವ್ ತಂಡ ಪ್ರವೇಶ ಪಡೆದದ್ದು ಅವರ ದೈಹಿಕ ಕ್ಷಮತೆ ನಿರೂಪಿಸಲು ಸಿಕ್ಕ ಮತ್ತೊಂದು ಅವಕಾಶ. ಈ ಕ್ಷಮತೆಯ ಕಾರಣದಿಂದಾಗಿಯೇ ಮೊದಲ ಮೂರು ಪಂದ್ಯಗಳಿಗೆ ಆರಿಸಲಾಗಲಿಲ್ಲ,’’ ಎಂದು ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ : ಸಚಿನ್, ಕೊಹ್ಲಿಗಿಂತಲೂ ಧೋನಿ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟಿಗ

ನವೆಂಬರ್ ೪ರಿಂದ ಶುರುವಾಗಲಿರುವ ವೆಸ್ಟ್ಇಂಡೀಸ್ ವಿರುದ್ಧದ ಮೂರು ಟಿ೨೦ ಪಂದ್ಯಗಳ ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವ ಹೊತ್ತಿದ್ದಾರೆ. ವಿಂಡೀಸ್ ವಿರುದ್ಧದ ಸರಣಿ ರೋಹಿತ್ ಶರ್ಮಾ ಪೂರ್ಣ ಪ್ರಮಾಣದಲ್ಲಿ ಮೂರನೇ ಬಾರಿಗೆ ಟಿ೨೦ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಂಡೀಸ್ ಸರಣಿಯಿಂದ ವಿಶ್ರಾಂತಿ ಪಡೆದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಸರಣಿಗೆ ಕೊಹ್ಲಿ ವಾಪಸಾಗಲಿದ್ದಾರೆ. ಜತೆಗೆ ಇದೇ ಕಾಂಗರೂ ವಿರುದ್ಧ ನಡೆಯಲಿರುವ ಮೂರು ಟಿ೨೦ ಸರಣಿಯಲ್ಲಿಯೂ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮಧ್ಯೆ, ಭಾರತ ‘ಎ’ ಮತ್ತು ನ್ಯೂಜಿಲೆಂಡ್ ‘ಎ’ ತಂಡದ ವಿರುದ್ಧದ ನಾಲ್ಕು ದಿನಗಳ ಪಂದ್ಯಕ್ಕೂ ೧೫ ಆಟಗಾರರ ತಂಡವನ್ನು ಆಯ್ಕೆಸಮಿತಿ ಪ್ರಕಟಿಸಿದೆ.

ವಿಂಡೀಸ್ ವಿರುದ್ಧದ ಸರಣಿಗೆ ಟಿ೨೦ ತಂಡ

ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ದಿನೇಶ್ ಕಾರ್ತಿಕ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹಮದ್, ಉಮೇಶ್ ಯಾದವ್ ಮತ್ತು ಶಾಬಾಜ್ ನದೀಮ್

ಆಸ್ಟ್ರೇಲಿಯಾ ಟಿ೨೦ ಸರಣಿಗೆ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಾಗೂ ಖಲೀಲ್ ಅಹಮದ್.

ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೂ ಪೃಥ್ವಿಗೆ ಸ್ಥಾನ

ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ ಎಲ್ ರಾಹುಲ್, ಪೃಥ್ವಿಶಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಭ್ ಪಂತ್, ಪಾರ್ಥೀವ್ ಪಟೇಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್.

ಭಾರತ ಎ ತಂಡದಲ್ಲಿ ಮಯಾಂಕ್, ಗೌತಮ್

ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ರೋಹಿತ್ ಶರ್ಮಾ, ಪಾರ್ಥೀವ್ ಪಟೇಲ್ (ವಿಕೆಟ್‌ಕೀಪರ್), ಕೆ ಗೌತಮ್, ಶಾಬಾಜ್ ನದೀಮ್, ಮೊಹಮದ್ ಸಿರಾಜ್, ನವದೀಪ್ ಸೈನಿ, ದೀಪಕ್ ಚಾಹರ್, ಆರ್. ಗುರ್ಬಾನಿ, ವಿಜಯ್ ಶಂಕರ್ ಹಾಗೂ ಕೆ ಎಸ್ ಭರತ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More