ವಿರಾಟ್ ಶತಕ ವ್ಯರ್ಥಗೊಳಿಸಿ ಪುಣೆಯಲ್ಲಿ ಜಯದ ಖಾತೆ ತೆರೆದ ಕೆರಿಬಿಯನ್ನರು

ವಿರಾಟ್ ಆಟದಲ್ಲಿ ಕಳೆದುಹೋಗಿದ್ದ ಕೆರಿಬಿಯನ್ನರು ಕೊನೆಗೂ ಇಂಡೋ-ಕೆರಿಬಿಯನ್ ಸರಣಿಯಲ್ಲಿ ಜಯದ ಖಾತೆ ತೆರೆದಿದ್ದಾರೆ. ಇದೇ ಮೊದಲಿಗೆ, ಮೊನಚಿನ ಬೌಲಿಂಗ್ ಪ್ರದರ್ಶಿಸಿದ ಕೆರಿಬಿಯನ್ನರು ೩ನೇ ಪಂದ್ಯದಲ್ಲಿ ೪೩ ರನ್ ಗೆಲುವಿನೊಂದಿಗೆ ಐದು ಪಂದ್ಯ ಸರಣಿಯನ್ನು ೧-೧ರಿಂದ ಸಮಗೊಳಿಸಿದರು

ಕಳೆದ ಎರಡೂ ಪಂದ್ಯಗಳಲ್ಲಿ ೩೦೦+ ರನ್ ಕಲೆಹಾಕಿದರೂ, ಇತ್ತಂಡಗಳಿಂದ ಸಮಬಲ ಹೋರಾಟ ಕಂಡುಬಂದಿತ್ತಾದರೂ, ಪುಣೆಯಲ್ಲಿನ ಪಂದ್ಯದಲ್ಲಿ ಪ್ರವಾಸಿ ವಿಂಡೀಸ್ ಆತಿಥೇಯರ ಆಕ್ರಮಣಕಾರಿ ನಡೆಗೆ ತಡೆಯೊಡ್ಡಿತು. ವಿರಾಟ್ ಕೊಹ್ಲಿ (೧೦೭: ೧೧೯ ಎಸೆತ, ೧೦ ಬೌಂಡರಿ, ೧ ಸಿಕ್ಸರ್) ವಿಕೆಟ್ ಪತನ ಭಾರತದ ವಶದಲ್ಲಿದ್ದ ಪಂದ್ಯವನ್ನು ಕೈಜಾರುವಂತೆ ಮಾಡಿತು. ಇನ್ನೊಂದೆಡೆ, ಮೇಲಿನ ಕ್ರಮಾಂಕ ಕೈಕೊಟ್ಟರೆ ಭಾರತ ತಂಡದ ಕತೆ ಅಷ್ಟೇ ಎಂಬುದು ಮತ್ತೊಮ್ಮೆ ವಿದಿತವಾಯಿತು.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶನಿವಾರ (ಅ. ೨೭) ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಗೆಲ್ಲಲು ೨೮೪ ರನ್ ಗುರಿ ಪಡೆದಿದ್ದ ಭಾರತ ತಂಡ, ಪ್ರವಾಸಿ ತಂಡದ ಸಂಘಟನಾತ್ಮಕ ಬೌಲಿಂಗ್‌ನಿಂದಾಗಿ ೪೭.೪ ಓವರ್‌ಗಳಲ್ಲಿ ೨೪೦ ರನ್‌ಗಳಿಗೆ ಆಲೌಟ್ ಆಯಿತು. ೪೩ ರನ್ ಗೆಲುವು ಸಾಧಿಸಿದ ಕೆರಿಬಿಯನ್ನರು ಈ ಮೂಲಕ ಐದು ಪಂದ್ಯಗಳ ಸರಣಿಯನ್ನು ೧-೧ರಿಂದ ಜೀವಂತವಾಗಿಡುವಲ್ಲಿ ಸಫಲವಾದರು. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಬೇಗುದಿಗೆ ಸಿಲುಕಿದ ವಿಂಡೀಸ್, ಗೌಹಾತಿ ಪಂದ್ಯದಲ್ಲಿ ಸೋಲನುಭವಿಸಿದ ನಂತರ ವೈಜಾಗ್‌ನಲ್ಲಿ ರೋಚಕ ಟೈ ಸಾಧಿಸಿತ್ತು. ಇದೀಗ ಸರಣಿಯಲ್ಲಿ ಪುಟಿದೆದ್ದು ನಿಂತಿರುವುದು ಆತಿಥೇಯರಿಗೆ ಎಚ್ಚರಿಕೆ ಗಂಟೆಯಾಗಿದೆ.

ಜಯದ ಗುರಿ ಬೆನ್ನುಹತ್ತಿದ ಭಾರತ ತಂಡ, ನಿಯಮಿತವಾಗಿ ವಿಕೆಟ್‌ ಕಳೆದುಕೊಂಡಿತು. ಆದರೆ, ಕೊಹ್ಲಿ ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತೂ ವಿಂಡೀಸಿಗರ ಮೊಗದಲ್ಲಿ ದುಗುಡ ಮನೆಮಾಡಿಕೊಂಡಿಯೇ ಇತ್ತು. ಆದರೆ, ೪೨ನೇ ಓವರ್‌ನ ಮೂರನೇ ಎಸೆತದಲ್ಲಿ ಮರ್ಲಾನ್ ಸ್ಯಾಮುಯೆಲ್ಸ್‌ಗೆ ಕೊಹ್ಲಿ ಬೌಲ್ಡ್ ಆಗುತ್ತಲೇ ವಿಂಡೀಸಿಗರಲ್ಲಿ ಮಡುಗಟ್ಟಿದ್ದ ಕಾರ್ಮೋಡ ಸರಿಯಿತಲ್ಲದೆ, ತಂಡದ ಗೆಲುವಿನ ಹಾದಿಗಿದ್ದ ಮಸುಕೂ ದೂರಾಯಿತು. ಅಂದಹಾಗೆ, ವೃತ್ತಿಬದುಕಿನ ೩೮ನೇ ಏಕದಿನ ಶತಕ ಬಾರಿಸಿದ ಕೊಹ್ಲಿ, ಸರಣಿಯಲ್ಲಿ ಸತತ ಮೂರನೇ ಶತಕ ದಾಖಲಿಸಿ ಈ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಮಧ್ಯಮ ಕ್ರಮಾಂಕದ ವೈಫಲ್ಯ

ಜಯದ ಹಾದಿಯಲ್ಲಿನ ಭಾರತದ ಆರಂಭ ಅತ್ಯಂತ ಕಳಪೆಯಾಗಿತ್ತು. ರೋಹಿತ್ ಶರ್ಮಾ (೮) ಮತ್ತೊಮ್ಮೆ ವೈಫಲ್ಯ ಅನುಭವಿಸಿದರೆ, ಶಿಖರ್ ಧವನ್ (೩೫) ತುಸು ಭರವಸೆ ಮೂಡಿಸಿದರೂ, ೧೮ನೇ ಓವರ್‌ನಲ್ಲಿ ಆಶ್ಲೆ ನರ್ಸ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರು. ಬಳಿಕ ಬಂದ ಅಂಬಟಿ ರಾಯುಡು (೨೨), ರಿಷಭ್ ಪಂತ್ (೨೪) ಹಾಗೂ ವೃತ್ತಿಬದುಕಿನ ಇಳಿಸಂಜೆಯಲ್ಲಿರುವಂತೆ ಭಾಸವಾಗುತ್ತಿರುವ ಎಂ ಎಸ್ ಧೋನಿ (೭) ಎರಡಂಕಿ ದಾಟದೆ ಕ್ರೀಸ್ ತೊರೆದದ್ದು ಭಾರತಕ್ಕೆ ಬಹುದೊಡ್ಡ ಪೆಟ್ಟು ನೀಡಿತು.

ವಿರಾಟ್‌ ಜತೆಗೆ ಸಿಕ್ಕ ಒಂದೊಳ್ಳೆಯ ಜತೆಯಾಟವೆಂದರೆ, ಧವನ್ ಜತೆಗೆ ಅವರು ೨ನೇ ಕಲೆಹಾಕಿದ ೭೯ ರನ್‌ಗಳಷ್ಟೆ. ಮಧ್ಯಮ ಕ್ರಮಾಂಕದ ದಿವ್ಯ ವೈಫಲ್ಯವು ಭಾರತ ತಂಡವನ್ನು ಮತ್ತೊಮ್ಮೆ ಎಚ್ಚರಿಸಿತು. ಧೋನಿ ನಿರ್ಗಮನದ ನಂತರದಲ್ಲಿ ಭುವನೇಶ್ವರ್ ಕುಮಾರ್ (೧೦) ಮತ್ತು ಕುಲದೀಪ್ ಯಾದವ್ (೧೫*) ಬಿಟ್ಟು ಮಿಕ್ಕ ಯಾರೂ ಎರಡಂಕಿ ದಾಟಲಿಲ್ಲ. ಕೊಹ್ಲಿ ಸೇರಿದಂತೆ ಖಲೀಲ್ ಅಹಮದ್ (೩) ಮತ್ತು ಜಸ್ಪ್ರೀತ್ ಬುಮ್ರಾ (೦) ವಿಕೆಟ್ ಎಗರಿಸಿದ ಸ್ಯಾಮುಯೆಲ್ಸ್ ಭಾರತದ ಇನ್ನಿಂಗ್ಸ್‌ಗೆ ಇತಿಶ್ರೀ ಹಾಡಿದರು.

ಇದನ್ನೂ ಓದಿ : ವೈಜಾಗ್ ರೋಚಕ ಟೈನಲ್ಲಿ ವಿರಾಟ್ ವೈಭವದೊಂದಿಗೆ ಮಿಂದೆದ್ದ ಕೆರಿಬಿಯನ್ನರು!

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ವೆಸ್ಟ್‌ಇಂಡೀಸ್ ೫೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೨೮೩ ರನ್ ಗಳಿಸಿ ಭಾರತ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಆರಂಭಿಕರಾದ ಕೀರನ್ ಪೊವೆಲ್ (೨೧), ಚಂದ್ರಪಾಲ್ ಹೇಮ್‌ರಾಜ್ (೧೫) ತ್ವರಿತಗತಿಯಲ್ಲೇ ವಿಕೆಟ್ ಒಪ್ಪಿಸಿ ನಡೆದರೆ, ಮೂರನೇ ಕ್ರಮಾಂಕದಲ್ಲಿ ಮತ್ತೊಮ್ಮೆ ತಂಡಕ್ಕೆ ಆಸರೆಯಾದ ಶಾಯ್ ಹೋಪ್ (೯೫: ೧೧೩ ಎಸೆತ, ೬ ಬೌಂಡರಿ, ೩ ಸಿಕ್ಸರ್) ಅಮೋಘ ಇನ್ನಿಂಗ್ಸ್ ಕಟ್ಟಿ ತಂಡದ ಇನ್ನಿಂಗ್ಸ್‌ಗೆ ಜೀವ ತುಂಬಿದರು.

ಬುಮ್ರಾಗೆ ಬೌಲ್ಡ್ ಆಗಿ ಕೇವಲ ಐದು ರನ್‌ಗಳ ಅಂತರದಲ್ಲಿ ಶತಕವಂಚಿತವಾದ ಹೋಪ್ ನಂತರದಲ್ಲಿ ಶಿಮ್ರೊನ್ ಹೆಟ್ಮೆಯರ್ (೩೭) ಧೋನಿ ಕೈಯಲ್ಲಿ ಸ್ಟಂಪ್ಡ್ ಆಗಿ ಕ್ರೀಸ್ ತೊರೆದರು. ಆನಂತರ ನಾಯಕ ಜೇಸನ್ ಹೋಲ್ಡರ್ (೩೨: ೩೯ ಎಸೆತ, ೨ ಬೌಂಡರಿ, ೧ ಸಿಕ್ಸರ್) ಮತ್ತು ಕಡೆಯಲ್ಲಿ ಆಶ್ಲೆ ನರ್ಸ್ (೪೦: ೨೨ ಎಸೆತ, ೪ ಬೌಂಡರಿ, ೨ ಸಿಕ್ಸರ್) ತಂಡದ ಮೊತ್ತವನ್ನು ಸ್ಪರ್ಧಾತ್ಮಕವಾಗಿಸುವಲ್ಲಿ ಯಶಸ್ವಿಯಾದರು.

ಬೊಂಬಾಟ್ ಬುಮ್ರಾ!

ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ, ವಿಂಡೀಸ್ ವಿರುದ್ಧ ಮಾರಕ ದಾಳಿ ನಡೆಸಿ ಗಮನ ಸೆಳೆದರು. ಶತಕದತ್ತ ದಾಪುಗಾಲಿಟ್ಟಿದ್ದ ಹೋಪ್ ವಿಕೆಟ್ ಸೇರಿದಂತೆ ಕೀರನ್ ಪೊವೆಲ್ (೨೧), ಚಂದ್ರಪಾಲ್ ಹೇಮ್‌ರಾಜ್ (೧೫) ಮತ್ತು ಆಶ್ಲೆ ನರ್ಸ್ ವಿಕೆಟ್ ಎಗರಿಸಿದ ಬುಮ್ರಾ ಮತ್ತೊಮ್ಮೆ ಪವರ್‌ಪ್ಲೇ ಮತ್ತು ಡೆತ್ ಓವರ್‌ನಲ್ಲಿ ತನ್ನ ಇರುವಿಕೆಯನ್ನು ಋಜುಗೊಳಿಸಿದರು.

ಸಂಕ್ಷಿಪ್ತ ಸ್ಕೋರ್

ವೆಸ್ಟ್‌ಇಂಡೀಸ್: ೫೦ ಓವರ್‌ಗಳಲ್ಲಿ ೨೮೩/೯ (ಶಾಯ್ ಹೋಪ್ ೯೫, ಆಶ್ಲೆ ನರ್ಸ್ ೪೦; ಜಸ್ಪ್ರೀತ್ ಬುಮ್ರಾ ೩೫ಕ್ಕೆ ೪); ಭಾರತ: ೪೭.೪ ಓವರ್‌ಗಳಲ್ಲಿ ೨೪೦ (ವಿರಾಟ್ ಕೊಹ್ಲಿ, ಶಿಖರ್ ಧವನ್ ೩೫, ೧೦೭, ಧೋನಿ ೭; ಮರ್ಲಾನ್ ಸ್ಯಾಮುಯೆಲ್ಸ್ ೧೨ಕ್ಕೆ ೩, ಆಶ್ಲೆ ನರ್ಸ್ ೪೩ಕ್ಕೆ ೨, ಒಬೆದ್ ಮೆಕಾಯ್ ೩೮ಕ್ಕೆ ೨, ಜೇಸನ್ ಹೋಲ್ಡರ್ ೪೬ಕ್ಕೆ ೨, ಕೆಮರ್ ರೋಚ್ ೪೮ಕ್ಕೆ ೧); ಫಲಿತಾಂಶ: ವೆಸ್ಟ್‌ಇಂಡೀಸ್‌ಗೆ ೪೩ ರನ್ ಗೆಲುವು; ಪಂದ್ಯಶ್ರೇಷ್ಠ: ಆಶ್ಲೆ ನರ್ಸ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More