ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ | ಸೈನಾ ಬಳಿಕ ಸಿಂಧು, ಶ್ರೀಕಾಂತ್‌ಗೂ ಸೋಲಿನ ಬರೆ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸಿಂಗಲ್ಸ್ ಹೋರಾಟಕ್ಕೆ ತೆರೆಬಿದ್ದಿದೆ. ಸೈನಾ ನೆಹ್ವಾಲ್, ಕಿಡಾಂಬಿ ಶ್ರೀಕಾಂತ್, ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ಪರಾಭವಗೊಂಡಿದ್ದಾರೆ. ತಾಯ್ ಟ್ಸು ಯಿಂಗ್ ವಿರುದ್ಧ ಸೈನಾ ಸೋತರೆ, ಶ್ರೀಕಾಂತ್‌ಗೆ ಮತ್ತೊಮ್ಮೆ ಮೊಮೊಟಾ ಮಾರಕರಾದರು

ವಿಶ್ವದ ನಂ.೧ ಆಟಗಾರ್ತಿ ತಾಯ್ ಟ್ಸು ಯಿಂಗ್ ಎದುರಿನ ಮತ್ತೊಂದು ಕಾದಾಟದಲ್ಲೂ ಸೈನಾ ನೆಹ್ವಾಲ್ ಗೆಲುವು ಸಾಧಿಸಲಾಗಲಿಲ್ಲ. ಪುರುಷರ ವಿಭಾಗದಲ್ಲಿ ಕಿಡಾಂಬಿ ಶ್ರೀಕಾಂತ್ ಕೂಡ ಜಪಾನ್ ಆಟಗಾರ ಕೆಂಟೊ ಮೊಮೊಟಾ ಸವಾಲು ಮೆಟ್ಟಿನಿಲ್ಲಲಾಗಲಿಲ್ಲ. ಇವರಿಬ್ಬರ ಜೊತೆಗೆ, ಪಿ ವಿ ಸಿಂಧು ಕೂಡ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸೋಲನುಭವಿಸಿದ್ದರಿಂದ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಿಂಗಲ್ಸ್ ಸವಾಲು ಅಂತ್ಯ ಕಂಡಿದೆ.

ಶುಕ್ರವಾರ (ಅ.೨೬) ತಡರಾತ್ರಿ ನಡೆದ ಅಂತಿಮ ಎಂಟರ ಹಂತದ ಮೂರು ಮಹತ್ವದ ಪಂದ್ಯಗಳಲ್ಲಿ ಭಾರತದ ಸ್ಟಾರ್‌ತ್ರಯರು ಪರಾಭವಗೊಂಡರು. ಮೊದಲಿಗೆ, ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಚೈನೀಸ್ ತೈಪೆಯ ತಾಯ್ ಟ್ಸು ಯಿಂಗ್ ಎದುರು ಸೈನಾ, ೨೦-೨೨, ೧೧-೨೧ರಿಂದ ಸೋಲನುಭವಿಸಿದರು. ಈ ಸೋಲಿನೊಂದಿಗೆ ಸೈನಾ ವಿರುದ್ಧ ಒಟ್ಟಾರೆ ಮುಖಾಮುಖಿಯಲ್ಲಿ ತಾಯ್೧೪-೫ರ ಮೇಲುಗೈ ಮೆರೆದರು.

ತಾಯ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಸೈನಾ ಸೋಲನುಭವಿಸಿದ್ದು, ದುರದೃಷ್ಟಕರ ಎನಿಸಿತು. ಮೊದಲ ಗೇಮ್‌ನಲ್ಲಿ ಅಮೋಘ ಆಟವಾಡಿದ ಸೈನಾ, ಮಧ್ಯಂತರದ ಹೊತ್ತಿಗೆ ೧೧-೬ ಮುನ್ನಡೆ ಪಡೆದರು. ವಿರಾಮದ ನಂತರವೂ ಆಕ್ರಮಣಕಾರಿ ಆಟವಾಡಿದ ಸೈನಾ ೧೬-೯ರಿಂದ ತಾಯ್‌ಗೆ ಸವಾಲಾದರು. ಆದರೆ, ತೈಪೆ ಆಟಗಾರ್ತಿ ಇದರಿಂದ ಧೃತಿಗೆಡದೆ ಸತತ ಐದು ಪಾಯಿಂಟ್ಸ್‌ ಕಲೆಹಾಕುವುದರೊಂದಿಗೆ ಅಂತರವನ್ನು ೧೫-೧೬ಕ್ಕೆ ಇಳಿಸಿದರು. ಸೈನಾ ಕೂಡ ನಾಲ್ಕು ಗೇಮ್ ಪಾಯಿಂಟ್ಸ್‌ಗಳೊಂದಿಗೆ ತಿರುಗೇಟು ನೀಡಿ ಅಂತಿಮವಾಗಿ, ೨೦-೧೭ರಿಂದ ಮುನ್ನಡೆ ಸಾಧಿಸಿ ಗೆಲುವಿನ ಸಮೀಪ ಸುಳಿದರೂ, ಸತತ ಆರು ಪಾಯಿಂಟ್ಸ್ ಹೆಕ್ಕಿ ಗೆಲುವು ಸಾಧಿಸಿದ ತಾಯ್ ಆಟದ ಪರಿಗೆ ಸೈನಾ ಬೆಚ್ಚಿಬಿದ್ದರು.

ಇದನ್ನೂ ಓದಿ : ಮತ್ತೊಮ್ಮೆ ತಾಯ್ ಪರೀಕ್ಷೆಗೆ ಸಜ್ಜಾದ ಸೈನಾ; ಕಿಡಾಂಬಿ-ಸಿಂಧು ಕ್ವಾರ್ಟರ್‌ಗೆ
View this post on Instagram

#FrenchOpenSuper750 च्या उपांत्यपूर्व सामन्यात सायना नेहवालचा अव्वल मानांकित ताय झू यिंग कडून २०-२२,११-२१ ने पराभव. पहिल्या गेम मध्ये सायनाकडे एकवेळ ४ गेमपॉईंटस होते..ती संधी सायनाने दवडली नसती तर आज कदाचित सलग १२व्यांदा सायनाला हरवण्यात ताय यशस्वी झाली नसती. 😑 #badminton🏸 #sainanehwal #taitzuying #indiasports #क्रीडाजगत #मराठी_अपडेट्स #आम्ही_मराठी

A post shared by क्रीडाजगत (@kridajagat) on

ಇನ್ನು, ಎರಡನೇ ಗೇಮ್‌ ಸಂಪೂರ್ಣ ತಾಯ್ ವಶವಾಯಿತು. ೨೦ ನಿಮಿಷಗಳ ಕಾದಾಟದ ಮೊದಲ ಗೇಮ್‌ನಲ್ಲಿ ಆಗಾಗಲೇ ಆತ್ಮವಿಶ್ವಾಸ ಕಳೆದುಕೊಂಡಿದ್ದ ಸೈನಾ ವಿರುದ್ಧ ಎರಗಿದ ತಾಯ್, ವಿರಾಮದ ಹೊತ್ತಿಗೆ ೧೧-೬ ಮೇಲುಗೈ ಸಾಧಿಸಿದರಲ್ಲದೆ, ಆನಂತರವೂ ಆಕ್ರಮಣಕಾರಿ ಶಾಟ್‌ಗಳೊಂದಿಗೆ ಸೈನಾಗೆ ಸೋಲುಣಿಸಿದರು. ವಾರದ ಹಿಂದೆ ಡೆನ್ಮಾರ್ಕ್ ಓಪನ್ ಫೈನಲ್‌ನಲ್ಲಿಯೂ ಸೈನಾ ಪ್ರಶಸ್ತಿ ಕನಸು ಚಿವುಟಿದ್ದ ತಾಯ್, ಈ ಮೂಲಕ ಸೆಮಿಫೈನಲ್‌ಗೆ ಸುನಾಯಾಸವಾಗಿ ಮುನ್ನಡೆದರು.

ಇನ್ನು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿಡಾಂಬಿ ಶ್ರೀಕಾಂತ್, ಮೊಮೊಟಾಗೆ ಪ್ರತಿ ಹೇಳಲಾಗದೆ ಸೋಲಪ್ಪಿದರು. ೫೨ ನಿಮಿಷಗಳ ಕಾದಾಟದಲ್ಲಿ ಶ್ರೀಕಾಂತ್, ೧೬-೨೧, ೧೯-೨೧ರಿಂದ ಸೋಲನುಭವಿಸಿದರು. ಎರಡನೇ ಗೇಮ್‌ನಲ್ಲಿ ಕೊಂಚ ಪುಟಿದೇಳುವ ಸುಳಿವು ನೀಡಿದ ಶ್ರೀಕಾಂತ್‌ಗೆ ಮೊಮೊಟಾ ಅವಕಾಶವನ್ನೇ ನೀಡಲಿಲ್ಲ. ಈ ಗೆಲುವಿನೊಂದಿಗೆ ಶ್ರೀಕಾಂತ್ ವಿರುದ್ಧದ ವೃತ್ತಿಬದುಕಿನ ಒಟ್ಟಾರೆ ಕಾದಾಟದಲ್ಲಿ ಮೊಮೊಟಾ ೯-೩ ಮುನ್ನಡೆ ಸಾಧಿಸಿದರು.

ವನಿತೆಯರ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಚೀನಿ ಆಟಗಾರ್ತಿ ಹೀ ಬಿಂಗ್ಜಿಯಾವೊ ವಿರುದ್ಧ ಸಿಂಧು ನೇರ ಗೇಮ್‌ಗಳಲ್ಲಿ ಮುಗ್ಗರಿಸಿದರು. ವಿಶ್ವದ ಎರಡನೇ ಶ್ರೇಯಾಂಕಿತೆ ಸಿಂಧು, ಬಿಂಗ್ಜಿಯಾವೊ ವಿರುದ್ಧ ಮೇಲುಗೈ ಸಾಧಿಸಿದರಾದರೂ, ಬಳಿಕ ಬಿಂಗ್ಜಿಯಾವೊ ೬-೯ರಿಂದ ೧೫-೯ಕ್ಕೆ ಪುಟಿದೆದ್ದರು. ಅಂತಿಮವಾಗಿ ಸಿಂಧುವನ್ನು ೨೧-೧೩, ೨೧=೧೬ರಿಂದ ಮಣಿಸಿದ ಬಿಂಗ್ಜಿಯಾವೊ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More