ಡಬ್ಲ್ಯೂಟಿಎ ಫೈನಲ್ಸ್ | ಬರ್ಟೆನ್ಸ್ ಸೋಲಿಸಿದ ಸ್ವಿಟೋಲಿನಾ ಪ್ರಶಸ್ತಿ ಸುತ್ತಿಗೆ

ಪ್ರತಿಷ್ಠಿತ ಡಬ್ಲ್ಯೂಟಿಎ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಎಲಿನಾ ಸ್ವಿಟೋಲಿನಾ ಲಗ್ಗೆ ಹಾಕಿದ್ದಾರೆ. ಶನಿವಾರ (ಅ.೨೭) ನಡೆದ ಸೆಮಿಫೈನಲ್‌ನಲ್ಲಿ ಸ್ವಿಟೋಲಿನಾ, ಕಿಕಿ ಬರ್ಟೆನ್ಸ್ ವಿರುದ್ಧ ೭-೫, ೬-೭ (೫/೭) ಮತ್ತು ೬-೪ ಸೆಟ್‌ಗಳಿಂದ ಜಯಿಸಿ ಈ ಸಾಧನೆ ಮೆರೆದ ಮೊದಲ ಸ್ಲೊವೇಕಿಯಾ ಟೆನಿಸ್ ಆಟಗಾರ್ತಿ ಎನಿಸಿದರು

ವಿಶ್ವದ ೨೪ನೇ ಶ್ರೇಯಾಂಕಿತೆ ಸ್ವಿಟೋಲಿನಾ, ಎಂಟನೇ ಶ್ರೇಯಾಂಕಿತ ಆಟಗಾರ್ತಿ ಎದುರು ನಡೆದ ಎರಡು ತಾಸು, ಮೂವತ್ತೆಂಟು ನಿಮಿಷಗಳ ಕಾದಾಟದಲ್ಲಿ ಜಯದ ಸಿಹಿ ಉಂಡರು. ಬರ್ಟೆನ್ಸ್ ವಿರುದ್ಧದ ಈ ಗೆಲುವಿನೊಂದಿಗೆ ೨೪ರ ಹರೆಯದ ಸ್ವಿಟೋಲಿನಾ ಡಬ್ಲ್ಯೂಟಿಎ ಫೈನಲ್ ತಲುಪಿದ ಉಕ್ರೇನ್‌ನ ಮೊಟ್ಟಮೊದಲ ಆಟಗಾರ್ತಿ ಎನಿಸಿಕೊಂಡರು. ಇದೀಗ ಭಾನುವಾರ (ಅ. ೨೮) ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸ್ವಿಟೋಲಿನಾ, ಅಮೆರಿಕದ ಸ್ಲೊವಾನಿ ಸ್ಟೀಫನ್ಸ್ ಇಲ್ಲವೇ ಜೆಕ್ ಆಟಗಾರ್ತಿ ಕರೋಲಿನಾ ಪ್ಲಿಸ್ಕೋವಾ ವಿರುದ್ಧ ಸೆಣಸಲಿದ್ದಾರೆ.

ಸಿಂಗಪುರದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೊದಲ ಸೆಟ್‌ನಿಂದಲೇ ಇಬ್ಬರೂ ಆಟಗಾರ್ತಿಯರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಆದರೆ, ಸೆಟ್‌ನ ಕೊನೆಯ ಗೇಮ್‌ನಲ್ಲಿ ಸ್ವಿಟೋಲಿನಾ, ಬರ್ಟೆನ್ಸ್ ಸರ್ವ್ ಮುರಿದು ಪಂದ್ಯದಲ್ಲಿ ಮುನ್ನಡೆ ಸಾಧಿಸಿದರು. ಉಕ್ರೇನ್ ಆಟಗಾರ್ತಿ ನಾಲ್ಕು ಸೆಟ್ ಪಾಯಿಂಟ್ಸ್ ಗಳಿಸಿದರಲ್ಲದೆ, ಎರಡು ಮತ್ತು ಮೂರನೇ ಗೇಮ್ ಅನ್ನು ಗೆಲ್ಲುವುದರೊಂದಿಗೆ ನೇರ ಸೆಟ್‌ಗಳ ಗೆಲುವಿನ ಮೇಲೆ ಸ್ವಿಟೋಲಿನಾ ಕಣ್ಣಿಟ್ಟರು. ಆದರೆ, ಬರ್ಟೆನ್ಸ್ ಟೈಬ್ರೇಕರ್ ಮೂಲಕ ಸೆಟ್ ಗೆದ್ದು ಪಂದ್ಯದಲ್ಲಿ ೧-೧ ಸಮಬಲ ಸಾಧಿಸಿದರು.

View this post on Instagram

@elisvitolina #MyPerformance 💪🙌 #WTAFinals

A post shared by WTA (@wta) on

ಇದನ್ನೂ ಓದಿ : ವಿಮಾನ ನಿಲ್ದಾಣದ ರನ್‌ ವೇನಲ್ಲಿ ಕುಣಿದು ಕುಪ್ಪಳಿಸಿದ ಕೃಷ್ಣಸುಂದರಿ ಸೆರೆನಾ! 

ಇನ್ನು, ಮೂರನೇ ಸೆಟ್‌ನಲ್ಲಂತೂ ಸ್ವಿಟೋಲಿನಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಎರಡು ಗೇಮ್‌ಗಳ ಮುನ್ನಡೆ ಪಡೆದ ಸ್ವಿಟೋಲಿನಾ, ಆಕರ್ಷಕ ಸರ್ವೀಸ್ ಮೂಲಕ ಜಯಭೇರಿ ಬಾರಿಸಿದರು. “ನಿಜವಾಗಿಯೂ ಈ ಪಂದ್ಯ ಅತ್ಯಂತ ಕಠಿಣವಾಗಿತ್ತು. ಕಿಕಿ ಬರ್ಟೆನ್ಸ್ ಪ್ರಬಲ ಪೈಪೋಟಿ ಒಡ್ಡಿದರು. ಅಂತಿಮವಾಗಿ, ಆಕೆಯ ಸವಾಲನ್ನು ಮೆಟ್ಟಿನಿಂತು ಫೈನಲ್ ತಲುಪಿದ್ದು ನನ್ನಲ್ಲಿ ಹೆಮ್ಮೆ ತರಿಸಿದೆ. ಇನ್ನು, ನಾಳೆ ನಡೆಯಲಿರುವ ಫೈನಲ್‌ನತ್ತ ಗಮನ ಹರಿಸುವುದಾದರೆ, ಇದು ಋತುವಿನ ಕೊನೆಯ ಪಂದ್ಯ. ನನ್ನಿಂದಾದಷ್ಟು ಶಕ್ತಿಮೀರಿ ಹೋರಾಡಿ ಗೆಲುವು ಸಾಧಿಸಲು ಪ್ರಯತ್ನಿಸುತ್ತೇನೆ,’’ ಎಂದು ಸ್ವಿಟೋಲಿನಾ ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯಿಸಿದರು.

ಗೆಲುವಿಗಾಗಿ ಪ್ಲಿಸ್ಕೋವಾ-ಸ್ಟೀಫನ್ಸ್ ಹೋರಾಟ

ಪಂದ್ಯಾವಳಿಯ ಎರಡನೇ ಸೆಮಿಫೈನಲ್‌ನಲ್ಲಿ ಜೆಕ್ ಆಟಗಾರ್ತಿ ಕರೋಲಿನಾ ಪ್ಲಿಸ್ಕೋವಾ ಮತ್ತು ಅಮೆರಿಕದ ಸ್ಲೊವಾನಿ ಸ್ಟೀಫನ್ಸ್ ನಡುವೆ ಪ್ರಬಲ ಹೋರಾಟ ನಡೆದಿದೆ. ಫೈನಲ್ ತಲುಪುವ ನಿರ್ಣಾಯಕವಾಗಿರುವ ಈ ಎರಡನೇ ಸೆಮಿಫೈನಲ್‌ನಲ್ಲಿ ಪ್ಲಿಸ್ಕೋವಾ ಮತ್ತು ಸ್ಟೀಫನ್ಸ್ ತಲಾ ಒಂದೊಂದು ಸೆಟ್ ಗೆಲ್ಲುವುದರೊಂದಿಗೆ ಮುನ್ನಡೆ ಪಂದ್ಯವನ್ನು ನಿರ್ಣಾಯಕ ಘಟ್ಟಕ್ಕೆ ಕೊಂಡೊಯ್ದರು.

ಮೊದಲ ಸೆಟ್‌ನಲ್ಲಿ ಅತೀವ ಆಕ್ರಮಣಕಾರಿ ಆಟವಾಡಿದ ಪ್ಲಿಸ್ಕೋವಾ, ಕೇವಲ ಒಂದೇ ಒಂದು ಗೇಮ್ ಅನ್ನೂ ಬಿಟ್ಟುಕೊಡದೆ ೬-೦ ಅಂತರದಿಂದ ಜಯಶಾಲಿಯಾದರು. ಆದರೆ, ಕಳೆದ ಬಾರಿಯ ಯುಎಸ್ ಓಪನ್ ಚಾಂಪಿಯನ್ ಸ್ಲೊವಾನಿ ಸ್ಟೀಫನ್ಸ್ ಎರಡನೇ ಸೆಟ್‌ ಅನ್ನು ೬-೪ರಿಂದ ಗೆದ್ದು ತಿರುಗೇಟು ನೀಡಿದರು. ಹೀಗಾಗಿ, ಪಂದ್ಯ ಮೂರನೇ ಸೆಟ್‌ಗೆ ವಿಸ್ತರಿಸುವಂತಾಯಿತು. ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿರುವ ಪ್ಲಿಸ್ಕೋವಾ, ಸ್ಟೀಫನ್ಸ್ ವಿರುದ್ಧ ಗೆಲ್ಲುವ ಫೇವರಿಟ್ ಎಂಬುದನ್ನು ಮೊದಲ ಸೆಟ್‌ನಲ್ಲೇ ನಿರೂಪಿಸಿದರೂ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡುವುದರೊಂದಿಗೆ ಸ್ಟೀಫನ್ಸ್ ಪಂದ್ಯವನ್ನು ಜೀವಂತವಾಗಿಟ್ಟರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More