ಏಷ್ಯಾ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮತ್ತೆ ಭಾರತ-ಪಾಕ್ ಕಾದಾಟ

ಪ್ರತಿಷ್ಠಿತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಶಸ್ತಿಗಾಗಿ ಸೆಣಸಲಿವೆ. ಶನಿವಾರ (ಅ. ೨೭) ತಡರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತ, ಏಷ್ಯಾಡ್ ಚಾಂಪಿಯನ್ ಜಪಾನ್ ವಿರುದ್ಧ ೩-೨ ಗೋಲುಗಳಿಂದ ಮಣಿಸಿ ಫೈನಲ್ ತಲುಪಿತು

ಲೀಗ್ ಹಂತದಲ್ಲಿ ಇದೇ ಜಪಾನ್ ವಿರುದ್ಧ ೯-೦ ಗೋಲುಗಳಿಂದ ವಿಜೃಂಭಿಸಿದ್ದ ಭಾರತ ಹಾಕಿ ತಂಡ, ಉಪಾಂತ್ಯದಲ್ಲಿ ಮತ್ತೊಮ್ಮೆ ಜಪಾನಿಗರನ್ನು ಹಣಿಯಿತು. ಆದಾಗ್ಯೂ, ಕಳೆದ ಪಂದ್ಯಕ್ಕೆ ಹೋಲಿಸಿದರೆ, ತೀವ್ರ ಪೈಪೋಟಿ ನೀಡಿದ ಜಪಾನ್ ಪಂದ್ಯವನ್ನು ರೋಚಕವಾಗಿಸಿತಾದರೂ, ಅಂತಿಮವಾಗಿ ಹಾಲಿ ಚಾಂಪಿಯನ್ನರ ಆಟಕ್ಕೆ ಶರಣಾಗಲೇಬೇಕಾಯಿತು. ವಿಶ್ವದ ಐದನೇ ಶ್ರೇಯಾಂಕಿತ ಭಾರತ ಹಾಕಿ ತಂಡ, ಇದೀಗ ಫೈನಲ್‌ನಲ್ಲಿ ತನ್ನ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.

ಮಸ್ಕಟ್‌ನ ಓಮನ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಸೆಮಿಫೈನಲ್ ಕಾಳಗದಲ್ಲಿ ಭಾರತ ತಂಡ ಆಕರ್ಷಕ ಆಟವಾಡಿತು. ಮೊದಲ ಕ್ವಾರ್ಟರ್‌ನಲ್ಲಿ ಗೋಲು ಗಳಿಸಲು ವಿಫಲವಾದ ಭಾರತಕ್ಕೆ ಪಂದ್ಯದ ೧೯ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಮೊದಲ ಗೋಲು ತಂದಿತ್ತರು. ಚಿತ್ತಾಕರ್ಷಕವಾದ ಅವರ ರಿವರ್ಸ್ ಶಾಟ್‌ನ ಫೀಲ್ಡ್ ಗೋಲು ಜಪಾನಿಗರ ವಿರುದ್ಧ ಭಾರತಕ್ಕೆ ಮುನ್ನಡೆ ತಂದುಕೊಟ್ಟಿತು. ಆದರೆ, ಮೂರು ನಿಮಿಷಗಳ ಅಂತರದಲ್ಲಿ ಜಪಾನ್ ಕೂಡ ಸಮಬಲದ ಗೋಲು ಬಾರಿಸಿತು. ವಾಕುರಿ ೨೧ನೇ ನಿಮಿಷದಲ್ಲಿ ಭಾರತ ವಿರುದ್ಧ ಪ್ರತಿಗೋಲು ಹೊಡೆದರು.

ವಿರಾಮದ ಹೊತ್ತಿಗೆ ೧-೧ ಗೋಲುಗಳ ಸಮಬಲ ಸಾಧಿಸಿದ ಇತ್ತಂಡಗಳೂ, ಆನಂತರದಲ್ಲಿ ಗೋಲಿಗಾಗಿ ಪರಸ್ಪರರ ಗೋಲುಪೆಟ್ಟಿಗೆಯನ್ನು ಗುರಿಯಾಗಿಸಿಕೊಂಡು ಮುಗಿಬಿದ್ದವು. ಈ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಭಾರತ ಮುನ್ನಡೆ ಪಡೆಯಿತು. ಪಂದ್ಯದ ೪೪ನೇ ನಿಮಿಷದಲ್ಲಿ ಚಿಂಗ್ಲೆನ್‌ಸಾನ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶದಡಿ ಭಾರತಕ್ಕೆ ಗೋಲು ತಂದಿತ್ತರು. ಇದಾದ ಕೆಲವೇ ನಿಮಿಷಗಳ ಅಂತರದಲ್ಲಿ ಅಂದರೆ ೫೫ನೇ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್ ಭಾರತದ ಮೂರನೇ ಗೋಲು ದಾಖಲಿಸಿದರು.

ಇದನ್ನೂ ಓದಿ : ಇಂಡೋ-ಪಾಕ್ ಕ್ರಿಕೆಟ್‌ ವೈಷಮ್ಯದ್ದಲ್ಲ; ಗೆಳೆತನದ ಕೊಂಡಿಯೂ ಹೌದು 

ಆದರೆ, ಭಾರತದ ಈ ಗೋಲಿನ ಹರ್ಷ ಹೆಚ್ಚು ಕಾಲ ಉಳಿಯಲಿಲ್ಲ. ಕೇವಲ ಒಂದೇ ನಿಮಿಷದ ಅಂತರದಲ್ಲಿ ಪೆನಾಲ್ಟಿ ಅವಕಾಶವನ್ನು ಝೆಂಡಾನ ಗೋಲಾಗಿ ಪರಿವರ್ತಿಸಿ ಭಾರತಕ್ಕೆ ಗಂಭೀರ ಎಚ್ಚರಿಕೆ ನೀಡಿದರು. ಪಂದ್ಯ ಮುಗಿಯುವ ಹೊತ್ತಿನಲ್ಲಿ ಜಪಾನ್ ತಿರುಗಿಬಿದ್ದ ಪರಿಗೆ ತುಸು ಕಂಗಾಲಾದ ಭಾರತ ತಂಡ, ತನ್ನ ರಕ್ಷಣಾಕೋಟೆಯನ್ನು ಇನ್ನಷ್ಟು ಸುಭದ್ರವಾಗಿರಿಸಿತು. ಇಷ್ಟಾದರೂ, ಕೊನೇ ಕ್ಷಣಗಳಲ್ಲಿ ಜಪಾನ್ ಆಟಗಾರರು ಭಾರತದ ಗೋಲುಪೆಟ್ಟಿಗೆಯನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿ ನಡೆಸಿದರೂ, ಕಡೆಗೂ ಅದು ಫಲ ಸಿಗಲಿಲ್ಲ.

ಇದಕ್ಕೂ ಮುನ್ನ ನಡೆದ ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ, ಮಲೇಷ್ಯಾವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ೩-೧ ಗೋಲುಗಳಿಂದ ಮಣಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಎರಡು ಬಾರಿಯ ಚಾಂಪಿಯನ್ ಪಾಕಿಸ್ತಾನ ಪೂರ್ಣಾವಧಿಯಲ್ಲಿ ಮಲೇಷ್ಯಾವನ್ನು ೪-೪ ಗೋಲುಗಳಿಗೆ ಕಟ್ಟಿಹಾಕಿತು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಇತ್ತಂಡಗಳೂ ಹ್ಯಾಟ್ರಿಕ್‌ಗಾಗಿ ನಡೆಸುವ ಕಾದಾಟ ಕೌತುಕ ಕೆರಳಿಸಿದೆ. ೨೦೧೧ರ ಚೊಚ್ಚಲ ಆವೃತ್ತಿಯನ್ನೂ ಸೇರಿದಂತೆ ೨೦೧೬ರಲ್ಲಿ ಚಾಂಪಿಯನ್ ಆಗಿರುವ ಭಾರತ, ಈ ಎರಡೂ ಫೈನಲ್‌ಗಳಲ್ಲಿ ಪಾಕ್ ವಿರುದ್ಧವೇ ಗೆಲುವು ಸಾಧಿಸಿತ್ತು. ಇನ್ನು, ೨೦೧೨, ೨೦೧೩ರಲ್ಲಿ ಚಾಂಪಿಯನ್ ಆದ ಪಾಕ್, ಆರು ವರ್ಷಗಳ ಹಿಂದೆ ಭಾರತವನ್ನು ಮಣಿಸಿದರೆ, ಮರು ವರ್ಷ ಜಪಾನ್ ತಂಡವನ್ನು ಹಣಿದು ಜಯಭೇರಿ ಬಾರಿಸಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More