ಮತ್ತೊಂದು ಶತಕದ ಮೇಲೆ ಕಣ್ಣಿಟ್ಟಿರುವ ಕೊಹ್ಲಿ ಕಟ್ಟಿಹಾಕಲು ವಿಂಡೀಸ್ ಪಣ

ದ್ವಿಪಕ್ಷೀಯ ಸರಣಿಯೊಂದರಲ್ಲಿ ಸತತ ನಾಲ್ಕು ಶತಕ ಬಾರಿಸಿ ಮತ್ತೊಂದು ದಾಖಲೆ ಬರೆಯಲು ತುಡಿಯುತ್ತಿರುವ ವಿರಾಟ್ ಕೊಹ್ಲಿಯನ್ನು ಕಟ್ಟಿಹಾಕಲು ವಿಂಡೀಸ್ ಪಣ ತೊಟ್ಟಿದೆ. ಜತೆಗೆ ಬ್ರೆಬೋರ್ನ್ ಮೈದಾನದಲ್ಲಿಂದು ನಡೆಯುವ ೪ನೇ ಪಂದ್ಯ ಮುನ್ನಡೆಯ ದೃಷ್ಟಿಯಿಂದ ಭಾರತ-ವಿಂಡೀಸ್‌ಗೆ ಮಹತ್ವವಾಗಿದೆ

ಗೌಹಾತಿ ಪಂದ್ಯದ ಸೋಲಿನ ಬಳಿಕ ವೈಜಾಗ್ ಹಾಗೂ ಪುಣೆಯಲ್ಲಿ ಆತಿಥೇಯರ ಎದುರು ಮಾನಸಿಕವಾಗಿ ಸಾಕಷ್ಟು ಹಿಡಿತ ಸಾಧಿಸಿರುವ ಪ್ರವಾಸಿ ಕೆರಿಬಿಯನ್ನರು, ಇದೀಗ ನಾಲ್ಕನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಿ ೧-೧ರ ಸಮಸ್ಥಿತಿಯಲ್ಲಿರುವ ಐದು ಪಂದ್ಯಗಳ ಸರಣಿಯಲ್ಲಿ ೨-೧ ಮುನ್ನಡೆ ಪಡೆಯುವ ಧಾವಂತ ಅವರದ್ದು. ವಿಂಡೀಸ್ ಮಾತ್ರವಲ್ಲದೆ, ಆತಿಥೇಯ ಭಾರತ ತಂಡಕ್ಕೂ ಈ ಪಂದ್ಯ ಮುನ್ನಡೆಯ ದೃಷ್ಟಿಯಿಂದ ಮಹತ್ವವೆನಿಸಿದೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು (ಅ.೨೯) ನಡೆಯಲಿರುವ ಪಂದ್ಯದಲ್ಲಿ ಏನಾದರೂ ಶತಕ ಬಾರಿಸಿದರೆ ಅದು ಮುಂಬೈ ಕ್ರಿಕೆಟ್‌ ಅಭಿಮಾನಿಗಳಿಗೆ ಮಾತ್ರವಲ್ಲ, ಅವರ ಏಕದಿನ ವೃತ್ತಿಬದುಕಿನಲ್ಲಿ ಮತ್ತೊಂದು ಮೈಲುಗಲ್ಲಾಗಲಿದೆ. ಪ್ರಸಕ್ತ ಸರಣಿಯ ಕಳೆದ ಮೂರೂ ಪಂದ್ಯಗಳಲ್ಲಿ ಶತಕ ದಾಖಲಿಸಿರುವ ಕೊಹ್ಲಿ ಈಗ ನಾಲ್ಕನೇ ಶತಕದತ್ತ ಕಣ್ಣಿಟ್ಟಿದ್ದಾರೆ. ಸದ್ಯದ ಅವರ ಫಾರ್ಮ್ ನೋಡಿದರೆ ಈ ಪಂದ್ಯದಲ್ಲಿ ಮಾತ್ರವಲ್ಲ, ಕೊನೆಯ ಪಂದ್ಯದಲ್ಲಿಯೂ ಶತಕ ಬಾರಿಸಿದರೆ ಅಚ್ಚರಿ ಇಲ್ಲ ಎಂಬಂತಾಗಿದೆ.

ಅಂದಹಾಗೆ, ದೇಶದ ಅತ್ಯಂತ ಹಳೆಯ ಕ್ರೀಡಾಂಗಣಗಳಲ್ಲಿ ಒಂದಾಗಿರುವ ಬ್ರೆಬೋರ್ನ್‌ ಮೈದಾನವು ವಿರಾಟ್ ಪಾಲಿಗೆ ಮೊದಲ ಸವಾಲಾಗಿದೆ. ಇಲ್ಲಿವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಿಲ್ಲಿ ಆಡದ ಅವರು, ಮೊದಲ ಯತ್ನದಲ್ಲೇ ಮೂರಂಕಿ ದಾಖಲೆ ಬರೆಯುವ ಉತ್ಸುಕತೆಯಲ್ಲಿದ್ದಾರೆ. ಸದ್ಯ ಆತಿಥೇಯ ತಂಡದ ಮೇಲೆ ಹಿಡಿತ ಸಾಧಿಸಿದಂತೆ ಕಂಡಿರುವ ವಿಂಡೀಸ್‌, ಪೂರ್ಣ ಪ್ರಮಾಣದಲ್ಲಿ ಯಶ ಕಂಡಿಲ್ಲ. ಕಾರಣ, ಕೊಹ್ಲಿ ಆಟ ಕೆರಿಬಿಯನ್ನರಿಗೆ ಭಾರಿ ಸವಾಲಾಗಿ ಪರಿಣಮಿಸಿದೆ. ಕಳೆದ ಮೂರೂ ಪಂದ್ಯಗಳಲ್ಲಿ ಅವರನ್ನು ತಡೆಯಲು ಯತ್ನಿಸಿ ಕೈಚೆಲ್ಲಿದ ಕೆರಿಬಿಯನ್ನರು, ಇದೀಗ ಅವರನ್ನು ಕಟ್ಟಿಹಾಕುವ ಬಗ್ಗೆ ಚಿಂತಿಸಿದ್ದಾರೆ.

ಇದನ್ನೂ ಓದಿ : ವಿರಾಟ್ ಶತಕ ವ್ಯರ್ಥಗೊಳಿಸಿ ಪುಣೆಯಲ್ಲಿ ಜಯದ ಖಾತೆ ತೆರೆದ ಕೆರಿಬಿಯನ್ನರು

ವಿರಾಟ್ ಪಡೆಗೆ ಬ್ರೆಬೋರ್ನ್ ಸವಾಲು

ಬರೋಬ್ಬರಿ ಒಂಬತ್ತು ವರ್ಷಗಳ ನಂತರ ಬ್ರೆಬೋರ್ಸ್ ಕ್ರೀಡಾಂಗಣ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಸಜ್ಜಾಗಿದೆ. ಈ ಮೈದಾನದಲ್ಲಿ ಭಾರತ ತಂಡ 23 ವರ್ಷಗಳ ಮತ್ತು ವೆಸ್ಟ್‌ ಇಂಡೀಸ್ 12 ವರ್ಷಗಳ ನಂತರ ಮುಖಾಮುಖಿಯಾಗುತ್ತಿವೆ. ಸದ್ಯ, ವಿರಾಟ್ ಪಡೆಯಂತೂ ಈ ಮೈದಾನದಲ್ಲಿ ಗೆಲುವಿನ ಖಾತೆ ತೆರೆಯುವ ಹಂಬಲದಲ್ಲಿದೆ. 1995ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಅಜರುದ್ದೀನ್ ಸಾರಥ್ಯದ ಭಾರತ ತಂಡ ಇಲ್ಲಿ ಆಡಿತ್ತು. ಇದುವೇ ಇಲ್ಲಿ ಭಾರತ ತಂಡ ಆಡಿದ್ದ ಏಕೈಕ ಪಂದ್ಯ. ಅಜರುದ್ದೀನ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.

ಇನ್ನು, ಪ್ರವಾಸಿ ವೆಸ್ಟ್‌ಇಂಡೀಸ್ ತಂಡ ಕೊನೆಯ ಬಾರಿಗೆ ಆಡಿದ್ದು, ೨೦೦೬ರಲ್ಲಿ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ಆ ಫೈನಲ್‌ನಲ್ಲಿ ಕೆರಿಬಿಯನ್ನರು ಆಸ್ಟ್ರೇಲಿಯಾ ಎದುರು ಸೋತಿದ್ದರು. ವೇಳಾಪಟ್ಟಿಯ ಪ್ರಕಾರ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಬೇಕಿತ್ತು. ಆದರೆ, ಟಿಕೆಟ್‌ ಮತ್ತು ಪಾಸ್ ವಿಷಯದಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐ ನಡುವಣ ಜಟಾಪಟಿಯಿಂದಾಗಿ ಪಂದ್ಯವು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ)ದ ಬ್ರೆಬೋರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದೆ.

ಪುಟಿದೇಳಬೇಕಾದ ಒತ್ತಡ

ಪುಣೆ ಪಂದ್ಯದಲ್ಲಿ ಸೋಲನುಭವಿಸಿರುವ ಭಾರತ ತಂಡ ಗೆಲುವಿನ ಹಳಿಗೆ ಮರಳುವ ಒತ್ತಡದಲ್ಲಿದೆ. ಬ್ಯಾಟಿಂಗ್‌ ನಲ್ಲಿ ಆರಂಭಿಕ ಜೋಡಿ ಮತ್ತು ಮಧ್ಯಮ ಕ್ರಮಾಂಕದ ಆಟಗಾರರ ವೈಫಲ್ಯವು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅನ್ನು ಚಿಂತೆಗೆಬ್ಬಿಸಿದೆ. ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದರೂ, ಉಳಿದೆರಡು ಪಂದ್ಯಗಳಲ್ಲಿ ಅವರು ವಿಫಲರಾಗಿದ್ದರು. ತಂಡದ ಬ್ಯಾಟಿಂಗ್ ಆಧಾರ ಸದ್ಯಕ್ಕೆ ನಾಯಕ ವಿರಾಟ್ ಮಾತ್ರವೇ. ಹೀಗಾಗಿ, ಬ್ಯಾಟಿಂಗ್‌ಗೆ ಕೊಹ್ಲಿಯನ್ನು ಮಾತ್ರ ಅವಲಂಬಿಸಿರುವ ಭಾರತ ತಂಡದ ಮೇಲೆ ಪುಟಿದೇಳಬೇಕಾದ ಒತ್ತಡ ಖಂಡಿತಾ ಇದೆ.

ಇನ್ನು, ಅಂಬಟಿ ರಾಯುಡು, ರಿಷಭ್ ಪಂತ್ ಮತ್ತು ಎಂ ಎಸ್ ಧೋನಿ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಾಗುತ್ತಿಲ್ಲ. ರನ್ ಚೇಸಿಂಗ್‌ ಸಂದರ್ಭದಲ್ಲಿ ಗ್ರೇಟ್ ‘ಫಿನಿಷರ್’ ಎಂತಲೆ ಹೆಸರಾದ ಧೋನಿ ಕೂಡ ಫಾರ್ಮ್ ಕಳೆದುಕೊಂಡಿರುವುದು ಮಧ್ಯಮ ಕ್ರಮಾಂಕದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ಅಸ್ಥಿರ ಆಟವಾಡುತ್ತಿರುವ ಶಿಖರ್ ಧವನ್ ಬದಲಿಗೆ ಕನ್ನಡಿಗ ಕೆ.ಎಲ್. ರಾಹುಲ್‌ ಹಾಗೂ ಅಂಬಟಿ ರಾಯುಡು ಬದಲಿಗೆ ಮನೀಷ್ ಪಾಂಡೆಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಇತ್ತ, ಪುಣೆಯಲ್ಲಿ ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಪೈಕಿ ಬುಮ್ರಾ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದಿದ್ದರು. ಈ ಇಬ್ಬರು ಮತ್ತೊಮ್ಮೆ ಆಡುವ ಸಂಭವವಿದೆ. ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಪರಿಣಾಮಕಾರಿ ಪ್ರದರ್ಶನ ನೀಡಿದ್ದೇ ಆದಲ್ಲಿ ಭಾರತ ತಂಡ ನಿಸ್ಸಂಶಯವಾಗಿಯೂ ಗೆಲುವಿನ ಹಾದಿಗೆ ಮರಳಲಿದೆ.

ಆತ್ಮವಿಶ್ವಾಸದಲ್ಲಿ ವಿಂಡೀಸ್

ಭಾರತ ತಂಡದ ಆಕ್ರಮಣಕಾರಿ ಆಟಕ್ಕೆ ಪ್ರತ್ಯಾಕ್ರಮಣವೇ ಉತ್ತರವೆಂಬಂತೆ ವಿಂಡೀಸ್ ಕೂಡ ಕಳೆದ ಮೂರೂ ಪಂದ್ಯಗಳಲ್ಲಿ ದಿಟ್ಟ ಆಟವಾಡುತ್ತಾ ಬಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ವೈಜಾಗ್ ಪಂದ್ಯವನ್ನು ಟೈ ಮಾಡಿಕೊಂಡಿದ್ದು ಮತ್ತು ಪುಣೆಯಲ್ಲಿ ೪೩ ರನ್ ಗೆಲುವು ಸಾಧಿಸಿದ್ದು ಜೇಸನ್ ಹೋಲ್ಡರ್ ಬಳಗದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮಧ್ಯಮ ಕ್ರಮಾಂಕದ ಶಾಯ್ ಹೋಪ್ ಮತ್ತು ಶಿಮ್ರೊನ್ ಹೆಟ್ಮೆಯರ್ ತಂಡದ ಬ್ಯಾಟಿಂಗ್‌ನ ಬಲಾಢ್ಯ ಶಕ್ತಿಯಾಗಿದ್ದಾರೆ.

ಇತ್ತ, ಬೌಲಿಂಗ್‌ನಲ್ಲೂ ವಿಂಡೀಸ್ ಮೊನಚು ಕಂಡುಕೊಂಡಿದೆ. ಮೊದಲ ಎರಡೂ ಪಂದ್ಯಗಳಿಗೆ ಹೋಲಿಸಿದರೆ, ಪುಣೆಯಲ್ಲಿ ಆ ತಂಡದ ಬೌಲಿಂಗ್ ಪುಟಿದೆದ್ದಿತ್ತು. ಮರ್ಲಾನ್ ಸ್ಯಾಮುಯೆಲ್ಸ್ ಬ್ಯಾಟಿಂಗ್‌ನಲ್ಲಿ ವಿಫಲವಾದರೂ, ಕಳೆದ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಸೇರಿದಂತೆ ಮೂರು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾಗಿದ್ದರು. ಕೆಳ ಕ್ರಮಾಂಕದಲ್ಲಿ ಆಶ್ಲೆ ನರ್ಸ್ ಮತ್ತು ಜೇಸನ್ ಹೋಲ್ಡರ್ ಆಲ್ರೌಂಡ್ ಆಟ ತಂಡದ ಆತ್ಮಬಲವನ್ನು ಹೆಚ್ಚಿಸಿದೆ.

ಪಂದ್ಯ ಆರಂಭ: ಮಧ್ಯಾಹ್ನ ೧.೩೦ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್ | ಸ್ಥಳ: ಮುಂಬೈ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More