ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ

ಅಂದುಕೊಂಡಂತೆ ವಿರಾಟ್ ಕೊಹ್ಲಿಯನ್ನು (೧೬) ಕಟ್ಟಿಹಾಕಿದ ಕೆರಿಬಿಯನ್ನರಿಗೆ ರೋಹಿತ್ ಶರ್ಮಾ (೧೬೨) ಮತ್ತು ಅಂಬಟಿ ರಾಯುಡುವನ್ನು (೧೦೦) ನಿಯಂತ್ರಿಸಲಾಗಲಿಲ್ಲ. ಬ್ರೆಬೋರ್ನ್ ಮೈದಾನದಲ್ಲಿ ಸೋಮವಾರ (ಅ. ೨೯) ನಡೆದ ೪ನೇ ಏಕದಿನ ಪಂದ್ಯದಲ್ಲಿ ಭಾರತ ೨೨೪ ರನ್ ಗೆಲುವು ಸಾಧಿಸಿತು

ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರೋಹಿತ್ ಶರ್ಮಾ (೧೬೨: ೧೩೭ ಎಸೆತ, ೨೦ ಬೌಂಡರಿ, ೪ ಸಿಕ್ಸರ್), ಬ್ರೆಬೋರ್ನ್ ಮೈದಾನದಲ್ಲಿ ಭೋರ್ಗರೆದರು. ತವರು ಅಭಿಮಾನಿಗಳನ್ನು ರಂಜಿಸಿದ ಅವರಿಗೆ ಮತ್ತೊಂದು ಬದಿಯಲ್ಲಿ ಅಂಬಟಿ ರಾಯುಡು (೧೦೦: ೮೧ ಎಸೆತ, ೮ ಬೌಂಡರಿ, ೪ ಸಿಕ್ಸರ್) ಅಮೋಘ ಸಾಥ್ ನೀಡಿದ ಫಲವಾಗಿ, ವೆಸ್ಟ್‌ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡ, ನಿಗದಿತ ೫೦ ಓವರ್‌ಗಳಲ್ಲಿ ಕೇವಲ ೫ ವಿಕೆಟ್ ನಷ್ಟಕ್ಕೆ ೩೭೭ ರನ್ ಕಲೆಹಾಕಿ ವಿಂಡೀಸ್‌ಗೆ ಭಾರೀ ಸವಾಲೊಡ್ಡಿತು.

ಮಧ್ಯಾಹ್ನ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ ೭೧ ರನ್ ಕಲೆಹಾಕಿದರು. ಧವನ್ ಈ ಬಾರಿಯೂ ಅಸ್ಥಿರ ಆಟದಿಂದ ಕೆರಿಬಿಯನ್ನರಿಗೆ ಸುಲಭವಾಗಿ ವಿಕೆಟ್ ಒಪ್ಪಿಸಿದರು. ೧೨ನೇ ಓವರ್‌ನ ಐದನೇ ಎಸೆತದಲ್ಲಿ ಕೀಮೊ ಪೌಲ್ ಎಸೆತದಲ್ಲಿ ಧವನ್, ಪೊವೆಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಬಳಿಕ ಬಂದ ವಿರಾಟ್ ಕೊಹ್ಲಿ ಕ್ರೀಸ್‌ಗೆ ಕಚ್ಚಿ ನಿಲ್ಲಲು ಮುಂದಾಗುತ್ತಿದ್ದಂತೆ ಕೆರಿಬಿಯನ್ನರು ಈ ಮೊದಲೇ ಸಂಕಲ್ಪಿಸಿದ್ದಂತೆ ಅವರನ್ನು ಬಲುಬೇಗ ಪೆವಿಲಿಯನ್ ದಾರಿ ತುಳಿಯುವಂತೆ ಮಾಡಿದರು. ೧೭ನೇ ಓವರ್‌ನಲ್ಲಿ ಕೊಹ್ಲಿ, ಕೆಮರ್ ರೋಚ್‌ ಬೌಲಿಂಗ್‌ನಲ್ಲಿ ಶಾಯ್ ಹೋಪ್‌ಗೆ ಕ್ಯಾಚಿತ್ತು ಬಲುಬೇಗ ನಿರ್ಗಮಿಸಿದರು. ಸತತ ಮೂರು ಶತಕಗಳನ್ನು ಬಾರಿಸಿದ್ದ ಕೊಹ್ಲಿ ನಾಲ್ಕನೇ ಶತಕದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಅವರ ಬಯಕೆಯನ್ನು ಕೆರಿಬಿಯನ್ನರು ಹೊಸಕಿ ಹಾಕಿದರು.

ಅಂಬಟಿ ಭರ್ಜರಿ ಸಾಥ್

ಇದನ್ನೂ ಓದಿ : ಕೊಹ್ಲಿ-ರೋಹಿತ್ ಪ್ರಚಂಡ ಬ್ಯಾಟಿಂಗ್‌ನಲ್ಲಿ ಕರಗಿದ ಕೆರಿಬಿಯನ್ನರ ಜಯದ ಕನಸು

ಕೊಹ್ಲಿ ಔಟಾಗಿ ಕ್ರೀಸ್ ತೊರೆದ ನಂತರ ಆಡಲಿಳಿದ ಅಂಬಟಿ ರಾಯುಡು ವಿಂಡೀಸ್ ಬೌಲರ್‌ಗಳನ್ನು ದಂಡಿಸಲು ಶುರುಮಾಡಿದರು. ಆಕ್ರಮಣಕಾರಿ ಆಟಕ್ಕಿಳಿದ ಅವರು, ರೋಹಿತ್ ಶರ್ಮಾಗೆ ಅದ್ಭುತ ಜತೆಯಾಟದ ಸಾಥ್ ನೀಡಿದರು. ವಿಂಡೀಸ್ ಬೌಲರ್‌ಗಳನ್ನು ದಯನೀಯವಾಗಿ ದಂಡಿಸಿದ ಈ ಜೋಡಿಯನ್ನು ಬೇರ್ಪಡಿಸಲಾಗದೆ ಕೆರಿಬಿಯನ್ನರು ಬಸವಳಿದರು. ಅಂತಿಮವಾಗಿ, ಇನ್ನಿಂಗ್ಸ್‌ನ ೪೪ನೇ ಓವರ್‌ನ ಐದನೇ ಎಸೆತದಲ್ಲಿ ಆ್ಯಶ್ಲೆ ನರ್ಸ್, ಆರಂಭಿಕ ರೋಹಿತ್ ಶರ್ಮಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಭರ್ಜರಿ ಹೊಡೆತಕ್ಕೆ ಯತ್ನಿಸಿದ ರೋಹಿತ್, ಚಂದ್ರಪಾಲ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ರೋಹಿತ್ ಶರ್ಮಾ ಮತ್ತು ಅಂಬಟಿ ರಾಯುಡು ಜತೆಯಾಟದಲ್ಲಿ ೩ನೇ ವಿಕೆಟ್‌ಗೆ ೨೧೧ ರನ್‌ಗಳು ಮೂಡಿಬಂದವು.

ಇತ್ತ, ಅವರ ನಿರ್ಗಮನದ ನಂತರದಲ್ಲಿ ಅಂಬಟಿ ರಾಯುಡು ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬರೋಬ್ಬರಿ ಮೂರಂಕಿ ದಾಟುತ್ತಲೇ ಅಂಬಟಿ ರಾಯುಡು ರನೌಟ್ ಆಗಿ ಕ್ರೀಸ್ ತೊರೆದರು. ಫ್ಯಾಬಿಯನ್ ಆ್ಯಲೆನ್ ರಾಯುಡುವನ್ನು ರನೌಟ್ ಮಾಡಿದರು. ನಂತರದಲ್ಲಿ ಎಂ ಎಸ್ ಧೋನಿ (೨೩) ಮತ್ತೊಮ್ಮೆ ಅಸ್ಥಿರ ಆಟದೊಂದಿಗೆ ವಿಕೆಟ್ ಒಪ್ಪಿಸಿ ಹೊರನಡೆದರೆ, ಕೇದಾರ್ ಜಾಧವ್ (೧೬) ಮತ್ತು ರವೀಂದ್ರ ಜಡೇಜಾ ೭ ರನ್‌ ಗಳೊಂದಿಗೆ ಅಜೇಯರಾಗುಳಿದರು.

ಬೆಲ್ ಬಾರಿಸಿದ ಸಚಿನ್

ಬ್ರೆಬೋರ್ನ್‌ ಮೈದಾನದಲ್ಲಿ ಬಹುದಿನಗಳ ನಂತರ ನಡೆದ ಪಂದ್ಯದಲ್ಲಿ ಸಚಿನ್ ಆಕರ್ಷಣೆಯಾಗಿದ್ದರು. ಅವರು ಬೆಲ್ ಬಾರಿಸುವುದರೊಂದಿಗೆ ಪಂದ್ಯಕ್ಕೆ ಚಾಲನೆ ಸಿಕ್ಕಿತು. ಆನಂತರದಲ್ಲಿ ರೋಹಿತ್ ಶರ್ಮಾ ಅವರ ದಾಖಲೆಯನ್ನು ಹಿಂದಿಕ್ಕಿದ್ದು ಗಮನೀಯ. ೯೮ ಎಸೆತಗಳಲ್ಲಿ ಮೂರಂಕಿ ಮುಟ್ಟಿದ ರೋಹಿತ್ ಶರ್ಮಾ, ೧೩ ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನೊಂದಿಗೆ ೨೧ನೇ ಏಕದಿನ ಶತಕ ಬಾರಿಸಿದರು.

೧೮೬ ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಈ ಸಾಧನೆ ಮಾಡಿದರೆ, ಸಚಿನ್ ೨೧ ಶತಕಗಳನ್ನು ದಾಖಲಿಸಲು ೨೦೦ ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಇನ್ನು, ಮಾಜಿ ನಾಯಕ ಸೌರವ್ ಗಂಗೂಲಿ ೨೧೭ ಇನ್ನಿಂಗ್ಸ್‌ಗಳಲ್ಲಿ ೨೧ನೇ ಶತಕ ಪೂರೈಸಿದ್ದರು. ಅಂದಹಾಗೆ, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವವರು ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ. ಅವರು ೧೧೬ ಇನ್ನಿಂಗ್ಸ್‌ಗಳಲ್ಲಿ ೨೧ ಶತಕ ದಾಖಲಿಸಿದರೆ, ಕೊಹ್ಲಿ (೧೩೮), ಎಬಿ ಡಿವಿಲಿಯರ್ಸ್ (೧೮೩) ನಂತರದ ಸ್ಥಾನದಲ್ಲಿದ್ದಾರೆ.

ಇನ್ನು, ಅಂಬಟಿ ರಾಯುಡು ಜತೆಗೆ ೨೧೧ ರನ್ ಜತೆಯಾಟವಾಡಿದ ೩೧ರ ಹರೆಯದ ರೋಹಿತ್ ಶರ್ಮಾ, ಸಚಿನ್ ಅವರ ೧೯೫ ಸಿಕ್ಸರ್‌ಗಳ ದಾಖಲೆಯನ್ನೂ ಹತ್ತಿಕ್ಕಿದರು. ಪ್ರಸ್ತುತ ಪಂದ್ಯದಲ್ಲಿ ೪ ಸಿಕ್ಸರ್ ಸಿಡಿಸಿದ ಅವರು, ೧೯೭ನೇ ಸಿಕ್ಸರ್ ದಾಖಲೆ ಬರೆದರು. ಭಾರತದ ಪರ ಅತಿಹೆಚ್ಚು ಸಿಕ್ಸರ್ ದಾಖಲಿಸಿರುವ ಕೀರ್ತಿ ಧೋನಿಗೆ (೨೧೮) ಸಲ್ಲುತ್ತದೆ. ಏತನ್ಮಧ್ಯೆ, ೧೧೭ ಎಸೆತಗಳಲ್ಲಿ ೧೫೨ ರನ್ ಗಳಿಸಿದ ಭಾರತ ತಂಡದ ಉಪನಾಯಕ ರೋಹಿತ್, ಒಂದು ದಿನದ ಕ್ರಿಕೆಟ್‌ನಲ್ಲಿ ಆರು ಬಾರಿ ೧೫೦+ ರನ್ ಕಲೆಹಾಕಿದ ವಿಶ್ವದ ನಂ ೧ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ವಿಂಡೀಸ್‌ಗೆ ಹೀನಾಯ ಸೋಲು

ಭಾರತ ನೀಡಿದ ಸವಾಲಿನ ಗುರಿ ಬೆನ್ನತ್ತಿದ ವಿಂಡೀಸ್ ಕಳಪೆ ಬ್ಯಾಟಿಂಗ್‌ನಿಂದಾಗಿ ಹೀನಾಯ ಸೋಲಪ್ಪಿತು. ಪಂದ್ಯ ಸಂಪೂರ್ಣ ಏಕಪಕ್ಷೀಯವಾಗಿದ್ದು, ಕೇವಲ ೧೪ ಓವರ್‌ಗಳು ಮುಗಿಯುವಷ್ಟರಲ್ಲೇ ವಿಂಡೀಸ್ ೬ ವಿಕೆಟ್ ನಷ್ಟಕ್ಕೆ ೫೬ ರನ್ ಗಳಿಸಿದ ವಿಂಡೀಸ್‌ಗೆ ಎಡಗೈ ಮಧ್ಯಮ ವೇಗಿ ಖಲೀಲ್ ಅಹಮದ್ (೧೩ಕ್ಕೆ ೩) ಮತ್ತು ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ (೪೨ಕ್ಕೆ ೩) ಮಾರಕರಾದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಜೇಸನ್ ಹೋಲ್ಡರ್ (೫೪: ೭೦ ಎಸೆತ, ೧ ಬೌಂಡರಿ, ೨ ಸಿಕ್ಸರ್) ದಾಖಲಿಸಿದ ಅರ್ಧಶತಕವಷ್ಟೇ ಕೆರಿಬಿಯನ್ ತಂಡದ ವೈಯಕ್ತಿಕ ಗರಿಷ್ಠ ಸ್ಕೋರ್.

ತಂಡದ ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದ ಶಾಯ್ ಹೋಪ್ (೦) ಮತ್ತು ಶಿಮ್ರೊನ್ ಹೆಟ್ಮೆಯರ್ (೧೩) ವೈಫಲ್ಯ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಶಾಯ್ ಹೋಪ್ ಅವರನ್ನು ಕುಲದೀಪ್ ಯಾದವ್ ರನೌಟ್ ಮಾಡಿದರೆ, ಹೆಟ್ಮೆಯರ್ ಅವರನ್ನು ಖಲೀಲ್ ಎಲ್‌ಬಿ ಬಲೆಗೆ ಕೆಡವಿದರು.

ಸಂಕ್ಷಿಪ್ತ ಸ್ಕೋರ್

ಭಾರತ: ೫೦ ಓವರ್‌ಗಳಲ್ಲಿ ೩೭೭/೫ (ರೋಹಿತ್ ಶರ್ಮಾ ೧೬೨, ಅಂಬಟಿ ರಾಯುಡು ೧೦೦; ಕೆಮರ್ ರೋಚ್ ೭೪ಕ್ಕೆ ೨); ವೆಸ್ಟ್‌ಇಂಡೀಸ್: ೩೬.೨ ಓವರ್‌ಗಳಲ್ಲಿ ೧೫೩ (ಜೇಸನ್ ಹೋಲ್ಡರ್ ೫೪; ಶಿಮ್ರೊನ್ ಹೆಟ್ಮೆಯರ್ ೧೩, ಶಾಯ್ ಹೋಪ್ ೦; ಕುಲದೀಪ್ ಯಾದವ್ ೪೨ಕ್ಕೆ ೩, ಖಲೀಲ್ ಅಹಮದ್ ೧೩ಕ್ಕೆ ೩); ಫಲಿತಾಂಶ: ಭಾರತಕ್ಕೆ ೨೨೪ ರನ್ ಗೆಲುವು ಹಾಗೂ ೫ ಪಂದ್ಯಗಳ ಸರಣಿಯಲ್ಲಿ ೨-೧ ಮುನ್ನಡೆ; ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಸ್ಲೊವಾನಿ ಸ್ಟೀಫನ್ಸ್‌ಗೆ ಸೋಲುಣಿಸಿದ ಎಲಿನಾ ಸ್ವಿಟೊಲಿನಾಗೆ ಡಬ್ಲ್ಯೂಟಿಎ ಗರಿ 
Editor’s Pick More