ಸ್ಲೊವಾನಿ ಸ್ಟೀಫನ್ಸ್‌ಗೆ ಸೋಲುಣಿಸಿದ ಎಲಿನಾ ಸ್ವಿಟೊಲಿನಾಗೆ ಡಬ್ಲ್ಯೂಟಿಎ ಗರಿ 

ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಭಾನುವಾರ (ಅ.೨೮) ಸಿಂಗಪುರದಲ್ಲಿ ಮುಕ್ತಾಯ ಕಂಡ ಡಬ್ಲ್ಯೂಟಿಎ ಫೈನಲ್ಸ್‌ನಲ್ಲಿ ಚಾಂಪಿಯನ್ ಆದರು. ಪ್ರಶಸ್ತಿ ಸುತ್ತಿನಲ್ಲಿ ಅಮೆರಿಕ ಆಟಗಾರ್ತಿ ಸ್ಲೊವಾನಿ ಸ್ಟೀಫನ್ಸ್ ವಿರುದ್ಧ ಗೆಲುವು ಪಡೆದ ಸ್ವಿಟೋಲಿನಾ ವೃತ್ತಿಬದುಕಿನ ಬಹುದೊಡ್ಡ ಜಯ ಸಾಧಿಸಿದರು

“ಗ್ರಾಂಡ್‌ಸ್ಲಾಮ್ ಗೆಲ್ಲಲು ಇದುವೇ ಹೆಜ್ಜೆ. ಈ ಗೆಲುವೊಂದು ಸಾಕು, ನಾನು ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾದ ಅಗತ್ಯವಿಲ್ಲ ಎಂದು ಸಾರಲು. ಈ ಗೆಲುವಿನಿಂದ ನನ್ನಲ್ಲಿ ಆತ್ಮವಿಶ್ವಾಸವೇನೂ ಹೆಚ್ಚಾಗಲಿಲ್ಲ. ಏಕೆಂದರೆ, ಆತ್ಮವಿಶ್ವಾಸವೆನ್ನುವುದು ನನ್ನೊಳಗೇ ಉದುಗಿದೆ. ಇದು ನನ್ನ ವ್ಯಕ್ತಿತ್ವದ ಭಾಗವೇ ಆಗಿದೆ’’ ವೃತ್ತಿಬದುಕಿನ ಬಹುದೊಡ್ಡ ಪ್ರಶಸ್ತಿಯನ್ನು ಗೆಲ್ಲುತ್ತಲೇ ಭಾವೋದ್ವೇಗಕ್ಕೆ ಒಳಗಾದ ಎಲಿನಾ ಸ್ವಿಟೋಲಿನಾ ಪ್ರತಿಕ್ರಿಯಿಸಿದ್ದು ಹೀಗೆ.

“ಕಳೆದ ಐದು ತಿಂಗಳುಗಳಿಂದ ಇನ್ನಿಲ್ಲದಷ್ಟು ಪರಿಶ್ರಮದಿಂದ ಹೋರಾಡುತ್ತಿದ್ದೆ. ತರಬೇತಿಯಲ್ಲಿ ನೀಡುವ ಪ್ರದರ್ಶನ ಪ್ರಮುಖ ಘಟ್ಟಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ವ್ಯಕ್ತವಾಗದೆ ಇರುವುದು ನನ್ನಲ್ಲಿ ಅತೀವ ನಿರಾಸೆ ತಂದಿತ್ತು. ಅಂತಿಮವಾಗಿ, ನನ್ನ ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ,’’ ಎಂದು ಋತುವಿನ ಕೊನೇ ಟೂರ್ನಿಯಾದ ಡಬ್ಲ್ಯೂಟಿಎ ಫೈನಲ್ಸ್‌ನಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ಲೊವಾನಿ ಸ್ಟೀಫನ್ಸ್ ವಿರುದ್ಧ 3-6, 6-2,6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದ ನಂತರ ಸ್ಟಿಟೋಲಿನಾ ತಿಳಿಸಿದರು.

೨೪ರ ಹರೆಯದ ಸ್ವಿಟೋಲಿನಾ, ಈ ಬಾರಿಯ ಡಬ್ಲ್ಯೂಟಿಎ ಫೈನಲ್ಸ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡುವುದರೊಂದಿಗೆ ವೃತ್ತಿಬದುಕಿನಲ್ಲಿ ಬಹುದೊಡ್ಡ ತಿರುವು ಕಂಡಿದ್ದಾರೆ. ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಎದುರಿನ ಏಳು ಪಂದ್ಯಗಳ ಸೋಲಿನ ಸರಪಳಿಯನ್ನು ತುಂಡರಿಸಿದ್ದಲ್ಲದೆ, ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಕರೋಲಿನ್ ವೋಜ್ನಿಯಾಕಿ ಎದುರಿನ ಸೋಲನ್ನೂ ಮೆಟ್ಟಿನಿಂತ ಸ್ವಿಟೋಲಿನಾ ಗ್ರಾಂಡ್‌ಸ್ಲಾಮ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ : ‘ಓ ಮರಿಯಾ, ವಿಲ್ ಯು ಮ್ಯಾರಿ ಮೀ’ ಎಂದವನಿಗೆ ಶರಪೋವಾ ಓಕೆ ಅನ್ನೋದೇ!

ಅಂದಹಾಗೆ, ಫೈನಲ್‌ನಲ್ಲಿ ಸ್ವಿಟೋಲಿನಾ ವಿರುದ್ಧ ಸ್ಟೀಫನ್ಸ್ ಗೆಲ್ಲುವ ಫೇವರಿಟ್ ಎನಿಸಿದ್ದರು. ಅದಕ್ಕೆ ತಕ್ಕಂತೆ ಮೊದಲ ಸೆಟ್‌ನಲ್ಲಿ ಗೆಲುವು ಪಡೆದ ಸ್ಟೀಫನ್ಸ್ ಪ್ರಶಸ್ತಿ ಗೆದ್ದೇ ತೀರುತ್ತಾರೆ ಎಂಬುದು ನಿಚ್ಚಳವಾಗಿತ್ತು. ಎರಡು ಮತ್ತು ಮೂರನೇ ಸೆಟ್‌ನಲ್ಲಿ ನಿರ್ಣಾಯಕ ಹೋರಾಟ ನಡೆಸಿದ ಸ್ವಿಟೋಲಿನಾ, ಸ್ಟೀಫನ್ಸ್ ನಿರೀಕ್ಷಿಸದ ರೀತಿಯಲ್ಲಿ ತಿರುಗೇಟು ನೀಡಿದರು. ಕೊನೆಯ ಎರಡೂ ಸೆಟ್‌ಗಳಲ್ಲಿ ಕೇವಲ ಎರಡು ಗೇಮ್‌ಗಳನ್ನಷ್ಟೇ ಸ್ಟೀಫನ್ಸ್ ಗೆಲ್ಲಲು ಸಾಧ್ಯವಾಯಿತು.

ಆರು ಬ್ರೇಕ್ ಪಾಯಿಂಟ್ಸ್ ಗಳಿಸಿದ ಸ್ವಿಟೋಲಿನಾ ಒಮ್ಮೆ ಮಾತ್ರ ಡಬಲ್ ಫಾಲ್ಟ್‌ ಎಸಗಿದರೆ, ಸ್ಟೀಫನ್ಸ್ ಎರಡು ಬಾರಿ ಆ ಪ್ರಮಾದವೆಸಗಿದರು. ಒಟ್ಟಾರೆ, ಟೂರ್ನಿಯಾದ್ಯಂತ ಚೇತೋಹಾರಿ ಪ್ರದರ್ಶನ ನೀಡಿದ ಸ್ಟೀಫನ್ಸ್ ಫೈನಲ್ಸ್‌ನಲ್ಲಿ ಮಾತ್ರ ಸ್ವಿಟೋಲಿನಾಗೆ ಮಣಿದರು.

ಮ್ಲೆಡನೋವಿಕ್-ಬಾಬೋಸ್‌ಗೆ ಡಬಲ್ಸ್ ಪ್ರಶಸ್ತಿ

ಡಬ್ಲ್ಯೂಟಿಎ ಫೈನಲ್ಸ್‌ನ ಡಬಲ್ಸ್ ವಿಭಾಗದಲ್ಲಿ ಕ್ರಿಸ್ಟಿನಾ ಮ್ಲೆಡೆನೋವಿಕ್ ಮತ್ತು ಟಿಮಿಯಾ ಬಾಬೋಸ್ ಜೋಡಿ ಚಾಂಪಿಯನ್ ಆಯಿತು. ಫ್ರಾನ್ಸ್‌ ಮತ್ತು ಹಂಗೇರಿಯಾ ಜೋಡಿಯಾದ ಕ್ರಿಸ್ಟಿನಾ ಹಾಗೂ ಟಿಮಿಯಾ, ಜೆಕ್ ಜೋಡಿ ಕಟರಿನಾ ಸಿನಿಯಾಕೋವಾ ಮತ್ತು ಬಾರ್ಬೊರಾ ಕ್ರೆಜಿಸಿಕೋವಾ ಜೋಡಿಯ ವಿರುದ್ಧ ೬-೪, ೭-೫ ಎರಡು ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಋತುವಿನ ಶ್ರೇಷ್ಠ ಮಹಿಳಾ ಡಬಲ್ಸ್ ಜೋಡಿ ಎನಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More