ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ

ಸ್ಟಾರ್ ಕ್ರೀಡಾ ದಂಪತಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಕುಟುಂಬಕ್ಕೆ ಹೊಸಬರ ಆಗಮನವಾಗಿದೆ. ಭಾರತದ ಟೆನಿಸ್ ತಾರೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಂತಸದ ಸಂಗತಿಯನ್ನು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಟೋಕಿಯೊ ಒಲಿಂಪಿಕ್ಸ್ ಗುರಿ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಂಗಳವಾರ (ಅ. ೩೦) ಗಂಡು ಮಗುವನ್ನು ಹಡೆದಿದ್ದು ಸೆಲೆಬ್ರಿಟಿ ಕ್ರೀಡಾ ದಂಪತಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಆಗಿದೆ. ತಮ್ಮ ಕುಟುಂಬಕ್ಕೆ ಹೊಸಬರ ಆಗಮನವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಶೊಯೆಬ್ ಮಲಿಕ್ ಹಂಚಿಕೊಂಡಿದ್ದಾರೆ. “ಈ ಸಂಗತಿಯನ್ನು ಹಂಚಿಕೊಳ್ಳುತ್ತಿರುವುದಕ್ಕೆ ಉದ್ರೇಕವಾಗುತ್ತಿದೆ: ಇದು ಗಂಡುಮಗು, ತಾಯಿ ಕೂಡ ಆರೋಗ್ಯವಾಗಿದ್ದು, ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು,’’ ಎಂದು ಶೋಯೆಬ್ ಟ್ವೀಟಿಸಿದ್ದಾರೆ.

ಮಲಿಕ್ ಟ್ವೀಟ್ ಬೆನ್ನಿಗೇ ಅವರ ಮ್ಯಾನೇಜರ್ ಹಾಗೂ ಏಜೆಂಟ್ ಅಮೀನ್ ಹಕ್, “ಮಗು ಮತ್ತು ತಾಯಿ ಹಸನ್ಮುಖಿಗಳಾಗಿದ್ದು, ಅಪ್ಪನ ಸಂಭ್ರಮವಂತೂ ಹೇಳತೀರದಾಗಿದೆ. ಆತ ಚಂದ್ರನಲ್ಲಿಗೇ ಮೇಲೆ ನಿಂತಂತಿದ್ದಾನೆ,’’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು, ಸಾನಿಯಾ ಆಪ್ತರಲ್ಲಿ ಒಬ್ಬರಾದ ಬಾಲಿವುಡ್ ಚಿತ್ರ ನಿರ್ಮಾಪಕ ಫರಾ ಖಾನ್ ಕುಂದೆರ್, “ನನ್ನ ಪ್ರೀತಿಪಾತ್ರಳೂ ಹಾಗೂ ಅತ್ಯುತ್ತಮ ಗೆಳತಿಯೂ ಆದ ಸಾನಿಯಾ ತಾಯಿಯಾಗಿದ್ದಾಳೆ!! ನನಗಂತೂ ಅತೀವ ಖುಷಿಯಾಗಿದೆ. ಶೀಘ್ರದಲ್ಲೇ ಪುಟ್ಟ ದೊರೆಯನ್ನು ಕಾಣಬರುತ್ತೇನೆ,’’ ಎಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ದಂಪತಿಗೆ ಶುಭ ಕೋರಿದ್ದಾರೆ.

ಸಾನಿಯಾ ಮತ್ತು ಶೋಯೆಬ್ ಏಪ್ರಿಲ್ ೧೨, ೨೦೧೦ರಂದು ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಇದೇ ಏಪ್ರಿಲ್ ೨೩ರಂದು ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿತ್ತು. ವಿಶ್ವದ ಮಾಜಿ ಮಹಿಳಾ ಡಬಲ್ಸ್ ನಂ ೧ ಆಟಗಾರ್ತಿ ೩೧ರ ಹರೆಯದ ಸಾನಿಯಾ, ೨೦೧೭ರ ಅಕ್ಟೋಬರ್‌ನಿಂದಲೇ ಟೆನಿಸ್ ಅಂಗಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಗರ್ಭಿಣಿಯಾಗಿದ್ದರ ಹಿನ್ನೆಲೆಯಲ್ಲಿ ಆಕೆ ಕಾಮನ್ವೆಲ್ತ್ ಮತ್ತು ಏಷ್ಯಾಡ್‌ ಕೂಟದಿಂದಲೂ ವಂಚಿತವಾಗಿದ್ದರು.

ಇದನ್ನೂ ಓದಿ : ಕಾಲುದಾರಿ | ಮತ್ತೆ ನೆನಪಾಯಿತು ಸಾನಿಯಾ ಮಿರ್ಜಾ ಕೊಟ್ಟ ಖಡಕ್ ಉತ್ತರ

ಈ ಋತುವಿನಲ್ಲಿ ಎರಡು ಪ್ರಮುಖ ಕ್ರೀಡಾಕೂಟದಿಂದ ವಂಚಿತವಾದ ಸಾನಿಯಾ ೨೦೨೦ರ ಟೋಕಿಯೋ ಒಲಿಂಪಿಕ್ಸ್‌ ಅನ್ನು ಗುರಿಯಾಗಿಸಿಕೊಂಡಿದ್ದಾರೆ. “ತಾಯ್ತತನವಾಗಲಿ, ಪೋಷಕತ್ವವಾಗಲಿ ಇದಾವುದೂ ನಿಮ್ಮ ಕನಸುಗಳಿಗೆ ಅಡ್ಡಿಯಾಗಕೂಡದು ಎಂಬುದನ್ನು ಸ್ವತಃ ನಾನೇ ತನ್ನ ಮಗುವಿಗೆ ನಿದರ್ಶನವಾಗಲು ಬಯಸುತ್ತೇನೆ,’’ ಎಂದು ನಿವೃತ್ತಿ ಕುರಿತ ಪ್ರಶ್ನೆಯೊಂದಕ್ಕೆ ಸಾನಿಯಾ ಗರ್ಭಿಣಿಯಾಗಿದ್ದ ವೇಳೆ ಉತ್ತರಿಸಿದ್ದರು.

ಮಾರ್ಟಿನಾ ಹಿಂಗಿಸ್ ಜತೆಗೆ ೨೦೧೫ರ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಸೇರಿದಂತೆ ಒಟ್ಟು ಆರು ಗ್ರಾಂಡ್‌ಸ್ಲಾಮ್ ವಿಜೇತೆ ಸಾನಿಯಾ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆಯಲ್ಲಿದ್ದಾರೆ. ೨೦೧೭ರ ಆಸ್ಟ್ರೇಲಿಯಾ ಓಪನ್‌ ಗೆದ್ದ ಸೆರೆನಾ ವಿಲಿಯಮ್ಸ್ ನಾಲ್ಕು ವಾರಗಳ ಗರ್ಭಿಣಿಯಾಗಿದ್ದರು. ಬಳಿಕ ಹೆಣ್ಣುಮಗು ಅಲೆಕ್ಸಿಸ್ ಒಲಿಂಪಿಯಾಗೆ ಜನ್ಮ ನೀಡಿದ ಸೆರೆನಾ, ೨೦೧೮ರ ಮಾರ್ಚ್‌ನಲ್ಲಿ ಡಬ್ಲ್ಯೂಟಿಎ ಟೂರ್‌ಗೆ ವಾಪಸಾಗಿದ್ದರು.

ಅಂದಹಾಗೆ, ಬೆಲ್ಜಿಯಂನ ಮಾಜಿ ಟೆನಿಸ್ ತಾರೆ ಕಿಮ್ ಕ್ಲಿಸ್ಟರ್ಸ್ ಹೆಣ್ಣುಮಗುವಿನ ಜನನದ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸಿದರೂ, ೨೦೦೮ರಲ್ಲಿ ಮತ್ತೆ ಟೆನಿಸ್ ಅಂಗಣಕ್ಕೆ ಮರಳಿದ್ದರು. ೨೦೦೫ರಲ್ಲಿ ಡಬ್ಲ್ಯೂಟಿಎ ಸಿಂಗಲ್ಸ್ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಟೆನಿಸ್ ಆಟಗಾರ್ತಿ ಎನಿಸಿದ ಸಾನಿಯಾ, ಅದೇ ಋತುವಿನಲ್ಲಿ ಯುಎಸ್ ಓಪನ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದ್ದರು. ಇನ್ನು, ಎರಡು ವರ್ಷಗಳ ಅಂತರದಲ್ಲಿ ವಿಶ್ವದ ಅಗ್ರ ೩೦ ಟೆನಿಸ್ ಆಟಗಾರ್ತಿಯರ ಪೈಕಿ ಗುರುತಿಸಿಕೊಂಡಿದ್ದು ಭಾರತದ ವನಿತಾ ಟೆನಿಸ್‌ನಲ್ಲಿ ಚಾರಿತ್ರಿಕ ಸಾಧನೆ ಎನಿಸಿತ್ತು.

ಭಾರತ ಮತ್ತು ಪಾಕಿಸ್ತನಾದ ಕ್ರಿಕೆಟಿಗರು ಹಾಗೂ ಹಿತೈಷಿಗಳು ಸಾನಿಯಾ ಮಿರ್ಜಾ ಮತ್ತು ಶೊಯೆಬ್ ಮಲಿಕ್‌ಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ. ಭಾರತ ವನಿತಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ, ಮೊಹಮದ್ ಹಫೀಜ್ ಸೇರಿದಂತೆ ಇನ್ನೂ ಮುಂತಾದವರು ಸಾನಿಯಾ-ಶೋಯೆಬ್ ದಂಪತಿಯನ್ನು ಅಭಿನಂದಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
ಸ್ಲೊವಾನಿ ಸ್ಟೀಫನ್ಸ್‌ಗೆ ಸೋಲುಣಿಸಿದ ಎಲಿನಾ ಸ್ವಿಟೊಲಿನಾಗೆ ಡಬ್ಲ್ಯೂಟಿಎ ಗರಿ 
Editor’s Pick More