ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ

ಇಂಡೊ-ಕೆರಿಬಿಯನ್ ನಡುವಣದ ಏಕದಿನ ಸರಣಿಯ ಕೊನೇ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಗುರುವಾರ (ನ. ೧) ತಿರುವನಂತಪುರದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿಯೂ ಭಾರತ ಫೇವರಿಟ್ ಆಗಿದೆ. ಸರಣಿ ಸಮಗೊಳಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡ ವಿಂಡೀಸ್ ಮೇಲಿದೆ

ಐದು ಪಂದ್ಯಗಳ ಸರಣಿಯಲ್ಲಿ ೨-೧ ಮುನ್ನಡೆ ಸಾಧಿಸಿರುವ ಭಾರತ ತಂಡ, ಇದೀಗ ಕೇರಳದ ತಿರುವನಂತಪುರದಲ್ಲಿ ನಡೆಯಲಿರುವ ಕೊನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಳ್ಳಲು ಸಜ್ಜಾಗಿದೆ. ಎರಡನೇ ಪಂದ್ಯವನ್ನು ಟೈ ಮಾಡಿಕೊಂಡ ವಿಂಡೀಸ್, ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ಜೀವಂತವಾಗಿಟ್ಟರೂ, ಬ್ರೆಬೋರ್ನ್ ಮೈದಾನದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ೨೪೪ ರನ್ ಹೀನಾಯ ಸೋಲನುಭವಿಸಿದೆ. ಹೀಗಾಗಿ, ಸರಣಿಯನ್ನು ಸಮ ಮಾಡಿಕೊಳ್ಳಲು ಈ ಪಂದ್ಯವನ್ನು ಅದು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದ್ದು, ಕೆರಿಬಿಯನ್ನರು ಕಡೇ ಆಟದ ಸತ್ವಪರೀಕ್ಷೆಗೆ ಗುರಿಯಾಗಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಸರಣಿಯನ್ನೂ ಒಳಗೊಂಡಂತೆ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಿಂದಲೂ ಅಸ್ಥಿರ ಆಟದಿಂದ ಕಂಗೆಟ್ಟುಹೋಗಿರುವ ಮಾಜಿ ನಾಯಕ ಎಂ ಎಸ್ ಧೋನಿಗಂತೂ ಈ ಪಂದ್ಯ ಮಹತ್ವವಾಗಿದೆ. ಈ ಪಂದ್ಯದ ಬಳಿಕ ನಡೆಯಲಿರುವ ಮೂರು ಚುಟುಕು ಸರಣಿಗಷ್ಟೇ ಅಲ್ಲದೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಆಯ್ಕೆಸಮಿತಿಯಿಂದ ಉಪೇಕ್ಷಿಸಲ್ಪಟ್ಟಿರುವ ಧೋನಿ ತನ್ನ ಸಾಮರ್ಥ್ಯವಿನ್ನೂ ಬತ್ತಿಲ್ಲ ಎಂಬುದನ್ನು ನಿರೂಪಿಸಲು ಈ ಪಂದ್ಯದಲ್ಲಿ ಪುಟಿದೇಳಬೇಕಿದೆ.

‘ಗ್ರೇಟ್ ಫಿನಿಶರ್’ ಎಂದೇ ಕರೆಯಲಾಗುವ ಧೋನಿ, ಪ್ರಸ್ತುತ ಟೂರ್ನಿಯಲ್ಲಿ ಅತ್ಯಂತ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಮೇಲಿನ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ರೋಹಿತ್ ಶರ್ಮಾ ಉತ್ತಮ ಲಯದಲ್ಲಿದ್ದುದರಿಂದ ತಂಡ ಕೆರಿಬಿಯನ್ನರ ವಿರುದ್ಧ ಗೆಲುವು ದಾಖಲಿಸಿದೆ. ಒಂದೊಮ್ಮೆ ಇವರುಗಳೂ ವೈಫಲ್ಯ ಅನುಭವಿಸಿದ್ದರೆ ಮಧ್ಯಮ ಕ್ರಮಾಂಕದ ಈ ಅಸ್ಥಿರ ಆಟದಲ್ಲಿ ವಿಂಡೀಸ್ ಅನ್ನು ಮಣಿಸುವುದು ಸಾಧ್ಯವಾಗುತ್ತಿರಲಿಲ್ಲ.

ಧೋನಿಗೆ ಸತ್ವ ಪರೀಕ್ಷೆ

ಇದನ್ನೂ ಓದಿ : ಎಂ ಎಸ್ ಧೋನಿ ನಿವೃತ್ತಿ ಊಹಾಪೋಹಕ್ಕೆ ತೆರೆ ಎಳೆದ ಕೋಚ್ ರವಿಶಾಸ್ತ್ರಿ

ಮುಂಬರುವ ೨೦೧೯ರ ವಿಶ್ವಕಪ್‌ವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯ ಬಯಸಿರುವ ಧೋನಿಗೆ ಎರಡು ಪ್ರಮುಖ ಟಿ೨೦ ಸರಣಿಗಳಿಂದ ಕೈಬಿಟ್ಟಿರುವುದು ಸಹಜವಾಗಿಯೇ ಬೇಸರವನ್ನುಂಟುಮಾಡಿದೆ. ಒಂದು ಹಂತದಲ್ಲಿ ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಇಲ್ಲಿಗೆ ಮುಗಿದಂತೆ ಎಂಬ ಕೆಲವರ ಅಭಿಪ್ರಾಯಗಳ ಮಧ್ಯೆ, ಇಂಗ್ಲೆಂಡ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿಗೆ ಧೋನಿಯ ಅನುಭವದ ಸಾಥ್ ಇದ್ದರೆ ಒಳಿತೆಂಬ ಅಭಿಪ್ರಾಯ ದಟ್ಟವಾಗಿ ಕೇಳಿಬರುತ್ತಿದೆ. ಹೀಗಾಗಿ, ಧೋನಿ ತನ್ನ ವಿರುದ್ಧದ ಟೀಕೆಗಳಿಗೆ ಸೂಕ್ತ ಉತ್ತರ ನೀಡಲಿದು ಸಕಾಲವಾಗಿದ್ದು, ಸದ್ಯ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎಲ್ಲರ ಚಿತ್ತ ಅವರತ್ತ ನಾಟಿದೆ.

ವಿಂಡೀಸ್‌ಗೆ ರೋಹಿತ್-ಕೊಹ್ಲಿ ಭೀತಿ

ವಿಂಡೀಸ್ ವಿರುದ್ಧದ ಸರಣಿಯಲ್ಲಿ ಎಂ ಎಸ್ ಧೋನಿ ಟಾಪ್ ಟೆನ್ ಪಟ್ಟಿಯಲ್ಲಿಯೂ ಕಾಣದಾಗಿದ್ದಾರೆ. ೩ ಇನ್ನಿಂಗ್ಸ್‌ಗಳಲ್ಲಿ ಕೇವಲ ೧೬.೬೭ರ ಸರಾಸರಿಯಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್ ಸೇರಿದ ೫೦ ರನ್ ಬಿಟ್ಟರೆ ಅವರಿಂದ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಆದರೆ, ಮೂರು ಶತಕ ಸೇರಿದಂತೆ ವಿರಾಟ್ ಕೊಹ್ಲಿ ೪ ಇನ್ನಿಂಗ್ಸ್‌ಗಳಲ್ಲಿ ೧೪೦.೦೦ ಸರಾಸರಿಯಲ್ಲಿ ೪೨೦ ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ. ಇಷ್ಟೇ ಇನ್ನಿಂಗ್ಸ್‌ಗಳಿಂದ ೧೦೮.೬೭ರ ಸರಾಸರಿಯಲ್ಲಿ ೩೨೬ ರನ್ ಪೇರಿಸಿರುವ ರೋಹಿತ್ ಶರ್ಮಾ ಎರಡು ಶತಕದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಕಳೆದ ನಾಲ್ಕೂ ಪಂದ್ಯಗಳಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ ಮೇಲುಗೈ ಸಾಧಿಸಿರುವುದು ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅಮೋಘ ಆಟದಿಂದಾಗಿಯೇ. ಅಂಬಟಿ ರಾಯುಡು ಕೂಡ ಒಂದು ಶತಕ ಸೇರಿದ ೨೧೭ ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಒಟ್ಟಾರೆ ಬ್ಯಾಟಿಂಗ್‌ನಲ್ಲಿ ಭಾರತ ಸದೃಢವಾಗಿದ್ದು, ಬೌಲಿಂಗ್‌ನಲ್ಲಿಯೂ ಚೇತೋಹಾರಿ ಪ್ರದರ್ಶನ ನೀಡಿದೆ. ಮುಖ್ಯವಾಗಿ, ಕಳೆದ ಪಂದ್ಯದಲ್ಲಿ ಯುವ ವೇಗಿ ಖಲೀಲ್ ಅಹಮದ್ ಮೊನಚಿನ ಸ್ಪೆಲ್‌ನಿಂದ ಗಮನ ಸೆಳೆದಿದ್ದರು.

೩ ಪಂದ್ಯಗಳಲ್ಲಿ ಅವರು ಐದು ವಿಕೆಟ್ ಪಡೆದಿದ್ದರೆ, ಸ್ಪಿನ್ನರ್ ಕುಲದೀಪ್ ಯಾದವ್ ೮ ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಾಹಲ್ ೫ ವಿಕೆಟ್ ಗಳಿಸಿದ್ದು, ಬುಮ್ರಾ ೪ ವಿಕೆಟ್ ಹೆಕ್ಕಿದ್ದಾರೆ. ಒಟ್ಟಾರೆ, ಭಾರತ ತಂಡದ ಬಹುದೊಡ್ಡ ಸಮಸ್ಯೆ ಎಂದರೆ ಮಧ್ಯಮ ಕ್ರಮಾಂಕದ್ದೇ. ಇದೊಂದು ಸುಧಾರಿಸಬೇಕಾದುದು ವಿಶ್ವಕಪ್‌ ದೃಷ್ಟಿಯಿಂದಲೂ ಮಹತ್ವವೆನಿಸಿದೆ. ಅದಾಗ್ಯೂ, ಕೊನೆಯ ಪಂದ್ಯದಲ್ಲಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆಯನ್ನು ನಿರೀಕ್ಷಿಸಲಾಗದು ಎನ್ನಲಾಗಿದೆ. ೨೦೧೬ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ೩-೨ರಿಂದ ಗೆದ್ದ ಭಾರತ ತಂಡ, ಅಲ್ಲಿಂದಾಚೆಗೆ ತವರಿನಲ್ಲಿ ವಿಜೃಂಭಿಸುತ್ತಲೇ ಸಾಗಿದ್ದು, ಮತ್ತೊಂದು ಸರಣಿಯ ಮೇಲೆ ಕಣ್ಣಿಟ್ಟಿದೆ.

ಜೇಸನ್ ಪಡೆಗೆ ಕಡೇ ಅವಕಾಶ

View this post on Instagram

Shimron Hetmyer!! 😎 💪🏼

A post shared by CricShots (@cricshots) on

ಗೌಹಾತಿ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದ ಪುಟಿದೆದ್ದ ವಿಂಡೀಸ್ ವಿಶಾಖಪಟ್ಟಣದಲ್ಲಿ ರೋಚಕ ಟೈ ಸಾಧಿಸಿದ ಮೇಲೆ ಪುಣೆಯಲ್ಲಿ ಅಮೋಘ ಗೆಲುವು ಕಂಡಿತ್ತು. ಇದರಿಂದ ಸರಣಿಯನ್ನು ಜೀವಂತವಾಗಿಟ್ಟಿದ್ದ ಜೇಸನ್ ಹೋಲ್ಡರ್ ಸಾರಥ್ಯದ ವಿಂಡೀಸ್, ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಅತ್ಯಂತ ಹೀನಾಯ ಸೋಲುಂಡಿತ್ತು. ೩೭೮ ರನ್ ಗೆಲುವಿನ ಗುರಿಗೆ ಪ್ರತಿಯಾಗಿ, ೨೪೪ ರನ್‌ಗಳ ಬೃಹತ್ ಅಂತರದ ಸೋಲನುಭವಿಸಿದ ಕೆರಿಬಿಯನ್ನರು ಕೆರಳಿ ಹೋಗಿದ್ದು, ಕೊನೆ ಪಂದ್ಯದಲ್ಲಿ ತಿರುಗಿಬೀಳುವ ಸನ್ನಾಹದಲ್ಲಿದ್ದಾರೆ.

ಅಂದಹಾಗೆ, ತಂಡದ ಪುಟಿದೇಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್‌ಕೀಪರ್ ಶಾಯ್ ಹೋಪ್ ಮತ್ತು ಆಕ್ರಮಣಕಾರಿ ಆಟಗಾರ ಹೆಟ್ಮೆಯರ್ ಬ್ರೆಬೋರ್ನ್ ಮೈದಾನದಲ್ಲಿ ಕುಸಿದಿದ್ದರು. ನಾಯಕ ಜೇಸನ್ ಹೋಲ್ಡರ್ (೫೪) ಒಬ್ಬರನ್ನು ಹೊರತುಪಡಿಸಿದರೆ, ಮಿಕ್ಕವರು ಆತಿಥೇಯ ತಂಡದ ಬೌಲರ್‌ಗಳ ಕೈಚಳಕಕ್ಕೆ ಮರುಳಾಗಿದ್ದರು. ಅದರಲ್ಲೂ ಎಡಗೈ ವೇಗಿ ಖಲೀಲ್ ಅಹಮದ್ ಮೊದಲ ಐದು ಓವರ್‌ಗಳಲ್ಲಿ ಕೇವಲ ೧೩ ರನ್‌ಗಳಿಗೆ ಮೂರು ವಿಕೆಟ್ ಪಡೆದು ವಿಂಡೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು. ಆರಂಭಿಕಾರದ ಚಂದ್ರಪಾಲ್ ಮತ್ತು ಪೊವೆಲ್ ತಂಡಕ್ಕೆ ಭದ್‌ರ ತಳಪಾಯ ಹಾಕಿಕೊಡಲು ವಿಫಲವಾಗಿದ್ದು, ಅಂತಿಮ ಪಂದ್ಯ ಅವರಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಇನ್ನು,ಅನುಭವಿ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ಕಳಪೆ ಫಾರ್ಮ್ ತಂಡದ ಬ್ಯಾಟಿಂಗ್‌ ಹಿನ್ನಡೆಗೆ ಮತ್ತೊಂದು ಪ್ರಮುಖ ಕಾರಣ. ಇಲ್ಲೀವರೆಗಿನ ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಗಳಿಸಿ ಗಮನ ಸೆಳೆದಿರುವ ಅವರು, ಪುಣೆಯಲ್ಲಿನ ತಂಡದ ಗೆಲುವಿಗೆ ನೆರವಾಗಿದ್ದರು. ಇವರೊಂದಿಗೆ ಆ್ಯಶ್ಲೆ ನರ್ಸ್ ಆಲ್ರೌಂಡ್ ಆಟ ತಂಡದ ಸರಣಿ ಸಮಬಲಕ್ಕೆ ಸಾಥ್ ನೀಡಬೇಕಿದೆ. ಕಳೆದ ಪಂದ್ಯದಲ್ಲಿನ ಸೋಲಿನಿಂದಾಗಿ, ವಿಂಡೀಸ್ ತಂಡದಲ್ಲಿ ಕೊಂಚ ಬದಲಾವಣೆ ಆಗುವ ಸಾಧ್ಯತೆ ಇದೆ. ಫ್ಯಾಬಿಯನ್ ಆ್ಯಲನ್ ಬದಲು ದೇವೇಂದ್ರ ಬಿಶೂ ಆಡುವ ಅಂತಿಮ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ತಂಡದ ಮಧ್ಯಮ ಕ್ರಮಾಂಕ ಚೇತರಿಕೆಯ ಪ್ರದರ್ಶನದ ಜತೆಗೆ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ಅಗತ್ಯವಿರುವ ವಿಂಡೀಸ್‌ಗೆ ಕಡೆಯ ಪಂದ್ಯ ನಿಸ್ಸಂಶಯವಾಗಿಯೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ನಾಯಕ ಜೇಸನ್ ಹೋಲ್ಡರ್ ಸಾಧ್ಯವಾದಷ್ಟೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡವನ್ನೂ ಹುರಿದುಂಬಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಸಂಭವನೀಯ ಇಲೆವೆನ್

ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಎಂ ಎಸ್ ಧೋನಿ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಕೇದಾರ್ ಜಾಧವ್, ಕುಲದೀಪ್ ಯಾದವ್, ಖಲೀಲ್ ಅಹಮದ್, ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ.

ವೆಸ್ಟ್ಇಂಡೀಸ್: ಕೀರನ್ ಪೊವೆಲ್, ಚಂದ್ರಪಾಲ್ ಹೇಮ್‌ರಾಜ್, ಶಾಯ್ ಹೋಪ್ (ವಿಕೆಟ್‌ಕೀಪರ್), ಶಿಮ್ರೊನ್ ಹೆಟ್ಮೆಯರ್, ಜೇಸನ್ ಹೋಲ್ಡರ್ (ನಾಯಕ), ಮರ್ಲಾನ್ ಸ್ಯಾಮುಯೆಲ್ಸ್, ಆ್ಯಶ್ಲೆ ನರ್ಸ್, ದೇವೇಂದ್ರ ಬಿಶೂ, ಕೀಮೊ ಪೌಲ್ ಹಾಗೂ ಕೆಮರ್ ರೋಚ್.

ಪಂದ್ಯ ಆರಂಭ: ಮಧ್ಯಾಹ್ನ ೧.೩೦ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್ | ಸ್ಥಳ: ತಿರುವನಂತಪುರಂ

ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
ಸ್ಲೊವಾನಿ ಸ್ಟೀಫನ್ಸ್‌ಗೆ ಸೋಲುಣಿಸಿದ ಎಲಿನಾ ಸ್ವಿಟೊಲಿನಾಗೆ ಡಬ್ಲ್ಯೂಟಿಎ ಗರಿ 
Editor’s Pick More