ಭಟ್ಟಾರಕ ಶ್ರೀ ಮನದ ಮಾತು | ಧರ್ಮದ ಪರಂಪರೆ ಉಳಿಸಿಕೊಂಡು ಹೋಗುವುದು ಮಸ್ತಕಾಭಿಷೇಕದ ಉದ್ದೇಶ

ಐತಿಹಾಸಿಕ ಗರಿಮೆಯುಳ್ಳ ವೈರಾಗ್ಯ ಮೂರ್ತಿ ಬಾಹುಬಲಿಗೆ ಮತ್ತೊಂದು ಮಹಾಮಜ್ಜನ ನೆರವೇರಿಸಲು ಶ್ರವಣಬೆಳಗೊಳ ಸಜ್ಜಾಗಿದೆ. ಈ ಹಿಂದೆ ಮೂರು ಮಹಾ ಉತ್ಸವ ಸಂಘಟಿಸಿ, ಮತ್ತೊಂದರ ಹೊಣೆ ಹೊತ್ತಿರುವ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಉತ್ಸವ ಸಂಘಟನೆ ಮತ್ತು ಅದರ ಔಚಿತ್ಯ ಕುರಿತಂತೆ ‘ದಿ ಸ್ಟೇಟ್’ ಜೊತೆ ಮಾತನಾಡಿದ್ದಾರೆ

೧. ಮಹಾಮಸ್ತಕಾಭಿಷೇಕದ ಹಿನ್ನೆಲೆ, ಐತಿಹಾಸಿಕ ಮಹತ್ವ ಏನು?

೯೮೧ ನೇ ಇಸ್ವಿ ಮಾರ್ಚ್ ೧೩ ರಂದು ವಿಂಧ್ಯಗಿರಿಯಲ್ಲಿ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆಯಾಯಿತು. ಅಂದು ನಡೆದದ್ದು ಮೊದಲ ಮಹಾ ಮಸ್ತಕಾಭಿಷೇಕ. ಆಗ ಮಂತ್ರಿ ಮತ್ತು ಸೇನಾಪತಿಯಾಗಿದ್ದ ಚಾವುಂಡರಾಯನ ನಿರ್ದೇಶನದ ಪ್ರಕಾರ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆದುಕೊಂಡು ಬಂದಿದೆ. ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಮೈಸೂರು ಒಡೆಯರು, ಬ್ರಿಟಿಷರ ಆಡಳಿತ ಕಾಲ ಮತ್ತು ನಂತರ ಪ್ರಜಾ ಸರ್ಕಾರದ ಅವಧಿಯಲ್ಲಿ ನಿರಂತರ ಮಸ್ತಕಾಭಿಷೇಕಗಳು ನಡೆದಿವೆ. ಉತ್ತರದಲ್ಲಿ ಹರಿದ್ವಾರ,ಹೃಷಿಕೇಶಗಳಲ್ಲಿ ನಡೆಯುವ ಮಹಾಕುಂಭಮೇಳ ಹಿಂದೂ ಧರ್ಮದ ಮಹಾ ಉತ್ಸವ. ಸಾವಿರ ವರ್ಷದಿಂದ ನಡೆದುಕೊಂಡು ಬಂದಿರುವ ಮಹಾಮಸ್ತಕಾಭಿಷೇಕ ಜೈನ ಧರ್ಮ, ಕರ್ನಾಟಕ ಮತ್ತು ದಕ್ಷಿಣ ಭಾರತದ ಮಟ್ಟಿಗೆ ಬೃಹತ್ ಕಾರ್ಯಕ್ರಮ. ದೇಶ,ವಿದೇಶಗಳ ಲಕ್ಷಾಂತರ ಭಕ್ತರು, ಪ್ರವಾಸಿಗರು, ತ್ಯಾಗಿಗಳು ಬಂದು ಸೇರುವ ಉತ್ಸವ ರಾಷ್ಟ್ರವ್ಯಾಪಿ ಮತ್ತು ವಿಶ್ವವ್ಯಾಪಿ ಮಹತ್ವ ಪಡೆದಿದೆ.೧೯೮೧ ನೇ ಇಸ್ವಿಯಲ್ಲಿ ಗೊಮ್ಮಟ ಮೂರ್ತಿ ಪ್ರತಿಷ್ಠಾಪನೆಯಾಗಿ ೧ ಸಾವಿರ ವರ್ಷ. ಆಗ ನಡೆದ ಮಹಾಮಸ್ತಕಾಭಿಷೇಕ ಕಾರ್ಯಕ್ರಮವನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ಉದ್ಘಾಟಿಸಿದ್ದರು. ನಂತರವೂ ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರು, ಕರ್ನಾಟಕ ಸಹಿತ ಹಲವು ರಾಜ್ಯಗಳ ರಾಜ್ಯಪಾಲರು, ರಾಜ್ಯದ ಎಲ್ಲ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದಾರೆ.

೨. ೮೮ನೇ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ ಹೇಗಿದೆ, ಈ ಬಾರಿಯ ವಿಶೇಷಗಳೇನು?

ಧಾರ್ಮಿಕ ಅನುಷ್ಠಾನ, ಪದ್ಧತಿ, ಪರಂಪರಾನುಗತ ಆಚರಣೆಗಳು ಹಿಂದಿನಂತೆಯೇ ನಡೆಯುತ್ತವೆ. ವ್ಯವಸ್ಥೆಯಲ್ಲಿ ಆಧುನೀಕರಣ, ಆಧುನಿಕ ತಂತ್ರಜ್ಞಾನ ಬಂದಿದೆ. ಹಿಂದೆಲ್ಲ ಜಂಗ್‌ಶೀಟ್‌ ಬಳಸಿ ಚಪ್ಪರ ಹಾಕಲಾಗುತ್ತಿತ್ತು. ಈಗ ಜರ್ಮನ್‌ ಟೆಂಟ್, ಜೆಸಿಬಿ, ಕ್ರೇನ್‌, ಲಿಫ್ಟಿಂಗ್ ಮಶೀನ್ ಬಂದಿರುವುದರಿಂದ ಎಲ್ಲ ಕೆಲಸ ಸುಲಭವಾಗುತ್ತಿದೆ. ಬೆಟ್ಟದ ಮೇಲಿನ ಅಟ್ಟಣಿಗೆ ನಿರ್ಮಾಣದಲ್ಲೂ ಲಾಕ್‌ ಅಂಡ್‌ ಕೀ ಮಾದರಿಯನ್ನು ಇದೇ ಮೊದಲ ಬಾರಿ ಅಳವಡಿಸಿಕೊಳ್ಳಲಾಗಿದೆ.‌

೩. ಕ್ಷೇತ್ರದ ನೇತೃತ್ವ ವಹಿಸಿದ ನಂತರ ೪ನೇ ಬಾರಿ ಮಸ್ತಕಾಭಿಷೇಕ ಸಂಘಟಿಸುತ್ತಿದ್ದೀರಿ. ನಿಮ್ಮ ಅನುಭವ ಎಂಥದ್ದು? ಕ್ಷೇತ್ರಾಭಿವೃದ್ಧಿಗೆ ಮಹೋತ್ಸವ ಹೇಗೆ ಪೂರಕವಾಗಿದೆ?

ಇದೊಂದು ರಾಷ್ಟ್ರವ್ಯಾಪ್ತಿ ಜೈನ ಮಠ. ನಾವಿಲ್ಲಿ ಪಟ್ಟಾಧಿಕಾರ ಸ್ವೀಕರಿಸಿದ್ದು ೧೯೭೦ರಲ್ಲಿ. ಇದರ ಪಟ್ಟಾಚಾರ್ಯತ್ವ ಬಹಳ ಮಹತ್ವದ್ದು. ರಾಜಪರಂಪರೆಯ ಕಾಲದಿಂದಲೂ ಗೌರವ,ಮಾನ್ಯತೆ ಇತ್ತು. ಪಟ್ಟಾಧಿಕಾರ ಸ್ವೀಕರಿಸುತ್ತಿದ್ದಂತೆ ಕ್ಷೇತ್ರದ ದೇಗುಲಗಳ ಜೋರ್ಣೋದ್ಧಾರ, ಪೂಜೆ, ಅನುಷ್ಠಾನ ವ್ಯವಸ್ಥೆ ಮಾಡಲಾಯಿತು. ಪಕ್ಷ,ಮಾಸ, ವರ್ಷ ಮತ್ತು ದ್ವಾದಶ ವರ್ಷಕ್ಕೊಮ್ಮೆ ಇಲ್ಲಿ ಉತ್ಸವಗಳನ್ನು ನಡೆಸಲಾಗುತ್ತಿದೆ. ಹಿಂದೆಲ್ಲ ರಾಜರು,ಮಂತ್ರಿಗಳು, ಸೇನಾಪತಿಗಳು, ರಾಣಿಯರು,ಸಾಮಂತರು ದಾನ ನೀಡುತ್ತಿದ್ದರು. ಉತ್ಸವ ಸಂಘಟನೆಗೆಂದೇ ೩೫ ಗ್ರಾಮಗಳನ್ನು ಮಠಕ್ಕೆ ನೀಡಲಾಗಿತ್ತು. ಭೂ ಸುಧಾರಣೆ ಕಾಯಿದೆಯಿಂದ ಎಲ್ಲಾ ಹೋಯಿತು. ಆದ್ದರಿಂದ ಸರ್ಕಾರ ಮತ್ತು ಇಡೀ ಸಮಾಜದ ಸಹಯೋಗ, ಸಹಕಾರ ಅನಿವಾರ್ಯ. ೧೯೮೧ರಲ್ಲಿ ನಡೆದ ಮಸ್ತಕಾಭಿಷೇಕ ಸಂಘಟನೆ ನಮ್ಮ ಮೊದಲ ಜವಾಬ್ದಾರಿ. ಅದೂ ಸಾವಿರ ವರ್ಷದ್ದು. ಅನೇಕ ಗಣ್ಯ ವ್ಯಕ್ತಿಗಳು ಸಹಕಾರಕ್ಕೆ ನಿಂತರು. ಕರ್ನಾಟಕ ಸರ್ಕಾರ ನೆರವು ನೀಡಿತು. ಉತ್ಸವ ಅತ್ಯಂತ ಯಶಸ್ವಿಯಾಯಿತು. ನಂತರ ೧೯೯೩ ಮತ್ತು ೨೦೦೬ ರ ಮಹೋತ್ಸವಗಳು ಕೂಡ ಅದ್ಧೂರಿಯಾಗಿ ನಡೆದವು. ಉತ್ಸವದ ಜೊತೆಗೇ ಕ್ಷೇತ್ರದ ಪ್ರಗತಿ ಕೂಡ ಗಣನೀಯವಾಗಿ ಆಗಿದೆ. ಮುಂದಿನ ಹನ್ನೆರಡು ವರ್ಷಕ್ಕೆ ರಸ್ತೆ, ವಸತಿ, ನೀರು ಸಹಿತ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡೇ ಪ್ರತಿ ಮಸ್ತಕಾಭಿಷೇಕಗಳನ್ನು ಸಂಘಟಿಸಲಾಗುತ್ತದೆ. ಎಲ್ಲಾ ಕಾಲದಲ್ಲೂ ಸರ್ಕಾರ ಮತ್ತು ಜನಪ್ರತಿನಿಧಿಗಳು ಸ್ಪಂದಿಸಿದ್ದಾರೆ. ಈ ಬಾರಿ ಮುಖ್ಯಮಂತ್ರಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಸಂಸದರಾದ ದೇವೇಗೌಡರು ಕ್ಷೇತ್ರಕ್ಕೆ ರೈಲ್ವೆ ಸಂಪರ್ಕ ಸಹಿತ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಈ ಬಾರಿಯ ಉತ್ಸವವೂ ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸವಿದೆ.

೪. ಗೊಮ್ಮಟ ಮೂರ್ತಿಯ ಶಿಲೆಯ ಸಂರಕ್ಷಣೆ, ತೇಜಸ್ಸಿನ ದೃಷ್ಟಿಯಿಂದ ಹಿಂದೆ ಮಸ್ತಕಾಭಿಷೇಕ ಅಗತ್ಯವಾಗಿತ್ತೆನ್ನಲಾಗಿದೆ. ವೈಜ್ಞಾನಿಕವಾಗಿ ಮುಂದುವರಿದ ಈ ಕಾಲದಲ್ಲಿದು ನಂಬಿಕೆ, ಆಚರಣೆಗೆ ಸೀಮಿತವೇ?

ಒಂದು ಕಾರ್ಯ ಮಾಡುವಾಗ ಎರಡೆರಡು ಪ್ರಯೋಜನ ಇದ್ದೇ ಇರುತ್ತದೆ. ಒಂದು ಮರ ನೆಟ್ಟು ಬೆಳೆಸಿದರೆ ನೆಟ್ಟವರಿಗೆ ನೆರಳಾಗುತ್ತದೆ, ಫಲ ನೀಡುತ್ತದೆ. ಅನೇಕ ಪ್ರಾಣಿ ಪಕ್ಷಿಗಳಿಗೂ ಪ್ರಯೋಜನವಾಗುತ್ತದೆ. ಮರವೂ ಬೆಳೆಯುತ್ತದೆ. ಹಾಗೆಯೇ, ಒಂದು ಮಹಾಮಸ್ತಕಾಭಿಷೇಕ ಕೂಡ. ಅದು ಭಕ್ತಿ ಪರಂಪರೆ ನಿಜ. ಪೂಜೆ, ಅಭಿಷೇಕದಿಂದ ಭಕ್ತಿ,ಪುಣ್ಯ ಬರುತ್ತದೆ. ಮೂರ್ತಿಯ ಸಂರಕ್ಷಣೆಗೂ ಗಮನ ನೀಡಿದಂತಾಗುತ್ತದೆ. ಮಸ್ತಕಾಭಿಷೇಕ ನಡೆಯುತ್ತದೆಂದು ತಿಳಿಸಿದ ಕೂಡಲೇ ಕೇಂದ್ರ ಪುರಾತತ್ವ ಇಲಾಖೆಯು ಗೊಮ್ಮಟ ಮೂರ್ತಿ ಮತ್ತು ಇಡೀ ಬೆಟ್ಟವನ್ನು ಸ್ವಚ್ಛ ಗೊಳಿಸಿದೆ. ಮೂರ್ತಿಯಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸಲು ಚಿಂತನೆ ನಡೆಸುತ್ತದೆ. ಅಭಿಷೇಕ ನಂತರ “ಪ್ರಿಸರ್ವೇಶನ್‌ ಕೋಟಿಂಗ್’’ ಕೂಡ ಮಾಡುವರು. ಹೀಗೆ ಹಲವು ರೀತಿಯಲ್ಲಿ ಮೂರ್ತಿಯ ಸಂರಕ್ಷಣೆ ಮಾಡಲಾಗುತ್ತದೆ. ಅದರಲ್ಲಿ ಅಭಿಷೇಕ ದ್ರವ್ಯಗಳೂ ಒಂದೆಂದು ಹೇಳಿದರೆ ತಪ್ಪೇನಿಲ್ಲ.

೫. ಧರ್ಮ ಹಿಂಸೆ, ರಾಜಕಾರಣ ಸಹಿತ ಏನೇನಕ್ಕೋ ಬಳಕೆಯಾಗುತ್ತಿರುವ ಈ ಹೊತ್ತಿನಲ್ಲಿ ನಿಮ್ಮ ಸಂದೇಶವೇನು?

ಧರ್ಮ ಯಾವತ್ತೂ ಅಹಿಂಸೆ, ಶಾಂತಿಯನ್ನು ಬಯಸುತ್ತದೆ. ಮೈತ್ರಿ ಸಂದೇಶವನ್ನು ಸಾರುತ್ತದೆ. ಪರಸ್ಪರ ಪ್ರೀತಿ,ವಿಶ್ವಾಸ ಮೂಡಿಸುತ್ತದೆ. ಜನರಲ್ಲಿ ಒಳ್ಳೆಯತನವನ್ನು ಮೂಡಿಸಲು ಪ್ರಯತ್ನಿಸುತ್ತದೆ. ಉತ್ತಮ, ಸುಂಸ್ಕೃತ ಮಾನವರನ್ನು ರೂಪಿಸುವುದು, ರಾಗ-ದ್ವೇಷಗಳನ್ನು ತಡೆದು ಪರಸ್ಪರ ಪ್ರೀತಿ ವಿಶ್ವಾಸ ತುಂಬುವುದು ಧರ್ಮದ ಉದ್ದೇಶ. ಆದ್ದರಿಂದ, ಧರ್ಮವನ್ನು ಗೌರವದಿಂದ ನೋಡಬೇಕು. ಧರ್ಮದ ಹೆಸರಿನಲ್ಲಿ ಹಿಂಸೆ ಸಹಿತ ಅನೇಕ ವಿಪರೀತ ಪರಿಣಾಮಗಳು ಉಂಟಾಗಿವೆ. ಅವು ಧರ್ಮಕ್ಕೆ ಒಳ್ಳೆಯ ಹೆಸರು ತಂದಿಲ್ಲ. ರಾಜಕಾರಣದಲ್ಲಿ ಧರ್ಮ,ಜಾತಿ,ಪಂಗಡವನ್ನು ಉಪಯೋಗಿಸುತ್ತಾರೆ. ಸಂಪೂರ್ಣ ಉಪಯೋಗ ಮಾಡಬಾರದು ಎನ್ನಲಾಗದು. ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ. ಧರ್ಮಕ್ಕೆ ಕೆಟ್ಟ ಹೆಸರು ಬಾರದ ಹಾಗೆ, ನವ ಪೀಳಿಗೆಯಲ್ಲಿ “ಅಶ್ರದ್ಧೆ’’ ಉಂಟಾಗದ ಹಾಗೆ ಧರ್ಮ ಪೀಠಗಳು, ಧರ್ಮಾಧಿಕಾರಿಗಳು,ರಾಜಕಾರಣಿಗಳು ಗಮನ ವಹಿಸಬೇಕು.ಧರ್ಮದ ನೈಜ ಸ್ವರೂಪವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಶಾಂತಿ,ನೆಮ್ಮದಿಯನ್ನು ಕಾಪಾಡಿಕೊಳ್ಳಲು ಧರ್ಮ ಮುಖ್ಯ. ಧರ್ಮ ಇಲ್ಲದಿದ್ದರೆ ಶ್ರದ್ಧೆ ಕಳೆದುಹೋಗುತ್ತದೆ. ಶ್ರದ್ಧೆ ಇಲ್ಲದಿದ್ದರೆ ಎಲ್ಲವೂ ಲೌಖಿಕ ಆಗುತ್ತದೆ.

೬. ಧರ್ಮ ಮತ್ತು ಮೌಢ್ಯದ ನಡುವೆ ಭಿನ್ನತೆಯೇ ಇಲ್ಲದಂತಾಗಿದೆ. ಎರಡನ್ನೂ ಹೇಗೆ ನೋಡಬೇಕು?

ಧರ್ಮ ಮತ್ತು ಮೌಢ್ಯ ಎರಡೂ ಬೇರೆ ಬೇರೆ. ಮೌಢ್ಯ ಎನ್ನುವುದು ಪ್ರಾಚೀನ ಕಾಲದಿಂದಲೂ ಇದೆ. ಎಲ್ಲ ಧರ್ಮಾಚಾರ್ಯರೂ ಅದನ್ನು ಖಂಡನೆ ಮಾಡಿದ್ದಾರೆ. ಇತ್ತೀಚಿಗೆ ಧರ್ಮದ ಹೆಸರಿನಲ್ಲಿ ಮೌಢ್ಯವನ್ನು ಭಿತ್ತಿ ವಂಚನೆ, ಮೋಸ ಮಾಡುತ್ತಿದ್ದಾರೆ. ಧರ್ಮಕ್ಕೆ ಒತ್ತು ನೀಡುವ ಮೂಲಕ, ಸಾಮಾಜಿಕ ಅನಿಷ್ಠವಾಗಿರುವ ಮೌಢ್ಯವನ್ನು ಇನ್ನಿಲ್ಲದಂತೆ ಮಾಡಬೇಕು.

೭. ಮಸ್ತಕಾಭಿಷೇಕ ನೇರ ವೀಕ್ಷಣೆಗೆ ಜನಸಾಮಾನ್ಯರನ್ನೂ ಬಿಡಬೇಕೆಂಬ ಬೇಡಿಕೆ ಕೇಳುತ್ತಿದೆ. ಏನು ನಿರ್ಧರಿಸಿದ್ದೀರಿ?

ಹಿಂದೆಲ್ಲ ಮಸ್ತಕಾಭಿಷೇಕ ಹೇಗೆ ನಡೆಯುತ್ತಿತ್ತೋ ಅದೇ ಪರಂಪರೆಯಂತೆ ಈ ಬಾರಿಯೂ ನಡೆಯುತ್ತದೆ. ಯಾವುದೂ ಹೊಸದಿಲ್ಲ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More