ಕೆ ಎಸ್ ಈಶ್ವರಪ್ಪ ಮನದ ಮಾತು | ಬಿಎಸ್‌ವೈ ಸಿಎಂ ಆಗುವುದರಲ್ಲಿ ಅನುಮಾನವಿಲ್ಲ

ರಾಜ್ಯ ಬಿಜೆಪಿಯ ಮುಂದಾಳುಗಳಲ್ಲಿ ತಪ್ಪದೆ ಕಾಣಿಸುವ ಹೆಸರು ಕೆ ಎಸ್‌ ಈಶ್ವರಪ್ಪನವರದ್ದು. ಶಿವಮೊಗ್ಗದಲ್ಲಿ ಬಿಜೆಪಿ ಬಲಪಡಿಸುವ ಜೊತೆಗೆ ಯಡಿಯೂರಪ್ಪನವರ ಜೊತೆಗಿನ ಸಂಘರ್ಷಕ್ಕೂ ಈಶ್ವರಪ್ಪ ಹೆಸರುವಾಸಿ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ‘ದಿ ಸ್ಟೇಟ್’ ಜೊತೆ ಮಾತನಾಡಿದ್ದಾರೆ

ಚುನಾವಣಾ ತಯಾರಿ ಹೇಗೆ ನಡೆದಿದೆ?

ನಮ್ಮದು ಕೇವಲ ಚುನಾವಣೆಗೆ ತಯಾರಾಗುವಂತಹ ಪಕ್ಷವಲ್ಲ. ಚುನಾವಣೆ ಹೊರತಾಗಿಯೂ ವರ್ಷವಿಡೀ ನಮ್ಮ ಕಾರ್ಯಕರ್ತರು ಜನರ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ, ಚುನಾವಣೆಯಲ್ಲಿ ನಮ್ಮ ಸಂಘಟನೆಯೇ ಕಣಕ್ಕಿಳಿಯುತ್ತದೆ. ಬೇರೆ ಪಕ್ಷಗಳ ರೀತಿ ಕೇವಲ ಅಭ್ಯರ್ಥಿ ಮಾತ್ರ ಚುನಾವಣೆಗೆ ಇಳಿಯುವುದಿಲ್ಲ. ಹಾಗಾಗಿ, ಇಡೀ ಸಂಘಟನೆ ಚುನಾವಣೆಗೆ ಸಿದ್ದವಾಗಿದೆ.

ಈ ಬಾರಿ ನಿಮ್ಮ ಪಕ್ಷದ ಟಿಕೆಟ್ ಹಂಚಿಕೆಯ ಮಾನದಂಡಗಳೇನು?

ಕಾರ್ಯಕರ್ತರೊಂದಿಗೆ ಸಂಪರ್ಕ, ಜನರೊಂದಿಗೆ ಕೆಲಸ ಮಾಡುವುದು ಮತ್ತು ಗೆಲ್ಲುವ ಶಕ್ತಿ, ಇವೇ ಮೂರು ಮಾನದಂಡಗಳ ಮೇಲೆ ಈ ಬಾರಿ ಟಿಕೆಟ್ ಹಂಚಿಕೆ.

‘ಈ ಬಾರಿ ಬಿಜೆಪಿ’ ಎಂಬುದು ನಿಮ್ಮ ಪಕ್ಷದ ಘೋಷಣೆ. ಆದರೆ, ಯಾಕೆ ಜನ ಈ ಬಾರಿ ಬಿಜೆಪಿಗೇ ಮತ ನೀಡಬೇಕು ಎನ್ನುತ್ತೀರಿ?

ನಮ್ಮ ಸರ್ಕಾರವಿದ್ದಾಗ ಮೂವರು ಮುಖ್ಯಮಂತ್ರಿಗಳ ಅವಧಿಯಲ್ಲಿ ಆಗಿರುವ ಅಭಿವೃದ್ಧಿ, ಜನರ ಸಮಸ್ಯೆ ದೂರ ಮಾಡಿದ ಕೆಲಸಗಳಿಗಾಗಿ ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಕಾರಣಕ್ಕಾಗಿ ಈ ಬಾರಿ ಬಿಜೆಪಿಗೆ ಮತ ಹಾಕಬೇಕು.

ರೈತರ ಸಾಲ ಮನ್ನಾ ಮತ್ತು ಬೆಂಬಲ ಬೆಲೆ ನಿಗದಿ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಗಮನ ಕೊಟ್ಟಿಲ್ಲ ಎಂಬ ಮಾತಿದೆ. ಆ ಬಗ್ಗೆ ಏನು ಹೇಳ್ತೀರಿ?

ರಾಜ್ಯದಲ್ಲಿ ಈ ಹಿಂದೆ ರೈತರ ಸಾಲ ಮನ್ನಾ ಮಾಡಿದ್ದು ಬಿಜೆಪಿ ಸರ್ಕಾರ. ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಕೇಂದ್ರದ ಸಾಲವೂ ಸೇರಿ ಮನ್ನಾ ಮಾಡಲಾಗಿದೆ. ಹಾಗೆ ಮಾಡೋಕೆ ಕಾಂಗ್ರೆಸ್ ಸರ್ಕಾರಕ್ಕೆ ಏನು ರೋಗ? ತೊಗರಿಗೆ ಅತ್ಯಧಿಕ ಬೆಂಬಲ ಬೆಲೆ ಕೊಟ್ಟಿದ್ದು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ತನ್ನ ಪಾಲು ನೀಡಿಲ್ಲ ಏಕೆ? ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಮಹದಾಯಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ರಾಜಕೀಯ ಮಾಡುತ್ತಿವೆ ಎಂಬ ಅಸಮಾಧಾನವಿದೆ. ಚುನಾವಣೆಗೆ ಈ ವಿಷಯ ಬಳಸಿಕೊಳ್ಳುತ್ತಿವೆ ಎಂಬ ಮಾತಿದೆ?

ಮಹದಾಯಿ ಯೋಜನೆಗೆ ಚಾಲನೆ ನೀಡಿದ್ದೇ ನಾವು. ಮಾತುಕತೆ ಮೂಲಕ ಬಗೆಹರಿಸಲು ಮೂರೂ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚೆಗೆ ನಾವು ಹಿಂದಿನಿಂದಲೂ ಒತ್ತಾಯಿಸುತ್ತಿದ್ದೇವೆ. ವಿಷಯ ಸುಪ್ರೀಂ ಕೋರ್ಟಿಗೆ ಹೋಗಲು, ನ್ಯಾಯಮಂಡಳಿಗೆ ಹೋಗಲು ಕಾಂಗ್ರೆಸ್ಸೇ ಕಾರಣ. ಸೋನಿಯಾ ಗಾಂಧಿಯವರೇ ಹನಿ ನೀರು ಬಿಡುವುದಿಲ್ಲ ಎಂದಿದ್ದರು. ಅಂದರೆ, ಯಾರು ರಾಜಕೀಯ ಮಾಡುತ್ತಿದ್ದಾರೆ ಎಂಬುದನ್ನು ಜನರಿಗೆ ಬಿಡುತ್ತೇನೆ.

ರಾಯಣ್ಣ ಬ್ರಿಗೇಡ್ ಹುಟ್ಟುಹಾಕಿ, ಹಿಂದೆ ಸರಿದಿದ್ದೀರಿ. ಇದೀಗ ನಿಮಗೆ ಶಿವಮೊಗ್ಗ ಟಿಕೆಟ್ ನೀಡಿಕೆ ವಿಷಯದಲ್ಲಿ ಬ್ರಿಗೇಡ್ ಮತ್ತೆ ಸುದ್ದಿಯಾಗಿದೆ. ಹಾಗಾದರೆ, ಈಗ ಅದರ ಪರಿಸ್ಥಿತಿ ಏನಾಗಿದೆ?

ರಾಯಣ್ಣ ಬ್ರಿಗೇಡ್ ನಾನು ನನ್ನ ವೈಯಕ್ತಿಕ ಉದ್ದೇಶಕ್ಕೆ ಶುರುಮಾಡಿದ್ದಲ್ಲ. ಸಿದ್ದರಾಮಯ್ಯ ಅವರು ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಆ ವರ್ಗಗಳನ್ನು ಕಡೆಗಣಿಸಿದ್ದರಿಂದ ಆ ಸಂಘಟನೆ ಮಾಡಬೇಕಾಯಿತು. ಆದರೆ, ನಮ್ಮ ಪಕ್ಷದಲ್ಲೇ ಕೆಲವು ಮುಖಂಡರು ಅದು ಪಕ್ಷಕ್ಕೆ ಧಕ್ಕೆ ತರುತ್ತದೆ ಎಂದು ಅಪಸ್ವರ ಎತ್ತಿದ್ದರಿಂದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಸ್ಥಗಿತಗೊಳಿಸಿದೆ. ನಾನು ಅದರಿಂದ ದೂರ ಇದ್ದೇನೆ ಅಷ್ಟೇ.

ಜಾತಿ ಬೆಂಬಲ ಇಲ್ಲದೆ ಇರುವುದೇ ಪಕ್ಷದಲ್ಲಿ ನಿಮಗೆ ಹಿನ್ನಡೆಗೆ ಕಾರಣ ಎಂದು ಎಂದಾದರೂ ಅನಿಸಿದೆಯಾ?

ಇಲ್ಲ. ಭಾರತೀಯ ಜನತಾ ಪಕ್ಷ ಜಾತಿ ಆಧಾರದ ಮೇಲೆ ನಿಂತ ಪಕ್ಷ ಅಲ್ಲ ಮತ್ತು ಪಕ್ಷದ ನಾಯಕರನ್ನು ಕೂಡ ಅದು ಜಾತಿ ಆಧಾರದ ಮೇಲೆ ಗುರುತಿಸುವುದಿಲ್ಲ. ನಾನು ಪಕ್ಷನಿಷ್ಠೆ ಮತ್ತು ರಾಷ್ಟ್ರನಿಷ್ಠೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಹಾಗೇ, ಪಕ್ಷದಲ್ಲಿ ನನಗೆ ಉಪಮುಖ್ಯಮಂತ್ರಿ ಸ್ಥಾನದವರೆಗೆ ಅವಕಾಶ ಸಿಕ್ಕಿದೆ.

ಈ ಬಾರಿ ಯಡಿಯೂರಪ್ಪ ಸಿಎಂ ಆಗೋದು ನಿಶ್ಷಿತವಾ?

ಈ ಸರ್ಕಾರ ಕೊಲೆ, ಸುಲಿಗೆ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಾಗಾಗಿ, ರೋಸಿದ ಜನರಿಗೆ ಈ ಸಿದ್ದರಾಮಯ್ಯ ಸರ್ಕಾರ ತೊಲಗಬೇಕು ಎಂಬ ಅಪೇಕ್ಷೆ ಇದೆ. ಬಿಜೆಪಿಗೆ ಮತ ಹಾಕಲಿದ್ದಾರೆ. ಅಭಿವೃದ್ಧಿಯ ಹರಿಕಾರ ಯಡಿಯೂರಪ್ಪ ಸಿಎಂ ಆಗಲಿದ್ದಾರೆ. ಅದರಲ್ಲಿ ಅನುಮಾನವೇ ಇಲ್ಲ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More