ಜಿಟಿಡಿ ಮನದ ಮಾತು | ಸಿದ್ದು ಪ್ರಧಾನಿ ಆಗಬಹುದು ಎಂಬ ನನ್ನ ಮಾತು ನಿಜವಾಗಲಿದೆ!

ಮೈತ್ರಿ ಸರ್ಕಾರ ರಚನೆಯ ಬಳಿಕವೂ ಚಾಮುಂಡೇಶ್ವರಿ ಕ್ಷೇತ್ರದ ಎದುರಾಳಿಗಳಲ್ಲಿ ಕದನ ಕಹಿಭಾವ ಮುಂದುವರಿದಂತಿದೆ. ಈ ಹಿನ್ನೆಲೆಯಲ್ಲಿ, ಸಚಿವ ಸ್ಥಾನ ಮತ್ತು ಮೈತ್ರಿ ನಿರ್ವಹಣೆ ಕುರಿತು ಜಿ ಟಿ ದೇವೇಗೌಡ ಅವರು ‘ದಿ ಸ್ಟೇಟ್’ ಜೊತೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ

ಮುಖ್ಯಾಂಶಗಳು

 • ರಾಜ್ಯದ ೧೦೨ ಪದವಿ ಕಾಲೇಜುಗಳಿಗೆ ಕಟ್ಟಡವೇ ಇಲ್ಲ. ತ್ವರಿತ ಕಟ್ಟದ ನಿರ್ಮಾಣಕ್ಕೆ ರು. ೨೫೦ ಕೋಟಿ ವಿಶೇಷ ಅನುದಾನವನ್ನು ಈ ಬಜೆಟ್‌ನಲ್ಲಿ ಸೇರಿಸಿದ್ದೇವೆ. ನಬಾರ್ಡ್ ಯೋಜನೆಯಿಂದ ರಾಜ್ಯಕ್ಕೆ ಬರುವ ೧ ಸಾವಿರ ಕೋಟಿ ರೂಪಾಯಿಗಳಲ್ಲಿ ರು. ೩೦೦ ಕೋಟಿಗಳನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದ ಗಮನ ಸೆಳೆದಿದ್ದೇನೆ. ಎಲ್ಲ ವಿವಿ ಮತ್ತು ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರು, ಉಪನ್ಯಾಸಕರ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದ್ದು, ಹಣಕಾಸು ಇಲಾಖೆ ಒಪ್ಪಿದೆ.
 • ಆಗಸ್ಟ್ ೧ರಂದು ಉನ್ನತ ಶಿಕ್ಷಣ ಮಂಡಳಿ ಸಭೆ ಕರೆಯಲಾಗಿದ್ದು,ಎಲ್ಲ ಕುಲಪತಿಗಳ ಜೊತೆ ಚರ್ಚೆ ನಡೆಸಿ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಆ.೨ರಂದು ಎಲ್ಲ ವಿವಿಗಳ ಕುಲಸಚಿವರು ಮತ್ತು ಸಿಬ್ಬಂದಿಯ ಜೊತೆಗೂ ಸಮಸ್ಯೆಗಳ ಕುರಿತು ಚರ್ಚಿಸುತ್ತೇನೆ.
 • ಬಳಿಕ, ಗುಲ್ಬರ್ಗಾದಿಂದ ಶುರುವಾಗಿ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತೇನೆ. ನನ್ನ ಜೊತೆ ಅಧಿಕಾರಿಗಳ ತಂಡವೂ ಇರುತ್ತದೆ. ಸಮಸ್ಯೆಗಳನ್ನು ಖುದ್ದು ಅವಲೋಕಿಸಿ, ತಿಂಗಳೊಳಗೆ ಪಟ್ಟಿ ಮಾಡಿ, ಸರ್ಕಾರದಿಂದ ಏನೆಲ್ಲ ಆಗಬೇಕೋ ಅದನ್ನು ಮಾಡಿಸುತ್ತೇನೆ.
 • ಕಟ್ಟಡ, ಮೂಲಸೌಕರ್ಯಗಳ ಜೊತೆಗೆ ಗುಣಮಟ್ಟದ ಶಿಕ್ಷಣ ಮತ್ತು ಕೌಶಲಾಭಿವೃದ್ಧಿಗೂ ಹೆಚ್ಚು ಗಮನ ಹರಿಸಲಾಗುವುದು. ಸ್ವಿಜರ್ಲ್ಯಾಂಡ್ ಮತ್ತಿತರ ದೇಶಗಳಲ್ಲಿ ಪದವಿ ಶಿಕ್ಷಣದ ಜೊತೆಗೆ ವೃತ್ತಿ ಕೌಶಲಗಳನ್ನು ಕಲಿಸುವ ಪದ್ಧತಿ ಇದೆ. ನಾನು ಆ ಮಟ್ಟದವರೆಗೆ ಯೋಚನೆ ಮಾಡಿದ್ದೇನೆ,ಪರಿಣಾಮಕಾರಿಯಾದುದನ್ನು ಮಾಡಬೇಕೆಂದು ತೀರ್ಮಾನಿಸಿದ್ದೇನೆ. ಕರ್ನಾಟಕ ಮುಕ್ತ ವಿವಿಯಲ್ಲಿ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕು ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸುವಂತೆ ಮಾಡಬೇಕೆನ್ನುವ ಆಲೋಚನೆಯೂ ಇದೆ.
 • ಉನ್ನತ ಶಿಕ್ಷಣ ಕ್ಷೇತ್ರದ ಕುರಿತು ಸಿಎಂ ಕುಮಾರಸ್ವಾಮಿ ಸಾಕಷ್ಟು ಬದ್ಧತೆ ಹೊಂದಿದ್ದಾರೆ. ನಾನು ಕೂಡ ಬದ್ಧತೆಯಿಂದ ಕೆಲಸ ಮಾಡಬಲ್ಲೆ ಎನ್ನುವ ಭರವಸೆಯಿಂದ ಈ ಖಾತೆ ನೀಡಿದ್ದಾರೆ. ಅದು ವಿಳಂಬವಾಗಿ ಗೊತ್ತಾಗುತ್ತಿದೆ.
 • ಕುಲಪತಿಗಳ ನೇಮಕ ಸಂಬಂಧ ವಾರದಲ್ಲಿ ಶೋಧನಾ ಸಮಿತಿಗಳ ರಚನೆ ಮಾಡಲಾಗುವುದು. ವಿವಿ ಅಕ್ರಮಗಳ ಕುರಿತ ತನಿಖಾ ವರದಿಗಳನ್ನು ತರಿಸಿಕೊಂಡು ನೋಡಿ, ಪ್ರವಾಸದ ಸಂದರ್ಭ ಈ ಕುರಿತೂ ಪರಿಶೀಲನೆ ನಡೆಸುತ್ತೇನೆ. ಅಕ್ರಮ ಘಟಿಸಿರುವುದು ನಿಜ ಎನ್ನಿಸಿದರೆ, ತನಿಖಾ ವರದಿಯನ್ನಾಧರಿಸಿ ಕ್ರಮ ಜರುಗಿಸಲಾಗುವುದು. ತಪ್ಪಿತಸ್ಥರು ಯಾರೇ ಇರಲಿ, ತಪ್ಪನ್ನು ಮುಚ್ಚಿಹಾಕುವುದಿಲ್ಲ.
 • ಕೆ ಎಸ್ ರಂಗಪ್ಪ ಅವರು ಒಂದೇ ಒಂದು ದಿನ ನನ್ನ ಬಳಿ ಇಲಾಖೆಗೆ ಬರುವ ಆಸೆಯನ್ನು ವ್ಯಕ್ತಪಡಿಸಿಲ್ಲ. ಪಾಪ ಅವರಿಗೆ ಈ ಬಗ್ಗೆ ಆಸಕ್ತಿಯೂ ಇಲ್ಲ. ಚುನಾವಣೆಯಲ್ಲಿ ಸೋತ ಬಳಿಕ, ಸ್ಪರ್ಧೆ ಮಾಡಿ ತಪ್ಪು ಮಾಡಿದೆನೇನೋ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದು, ಆ ಚಿಂತೆಯಲ್ಲಿದ್ದಾರೆ. ಈ ಕಡೆ ಚಿಂತೆ ಅವರಿಗಿಲ್ಲ.
 • ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಗೆ ಬರಬಾರದಿತ್ತು. ವರುಣಾದಲ್ಲೇ ಸ್ಪರ್ಧೆ ಮಾಡಿ, ರಾಜ್ಯವನ್ನು ಸುತ್ತಬೇಕಿತ್ತು ಎಂದು ಚುನಾವಣೆಗೆ ಮೊದಲೇ ಇಬ್ಬರಿಗೂ ಸ್ನೇಹಿತರಾದ ಕೆಲವರ ಬಳಿ ಮಾತನಾಡಿದ್ದೆ. ಆ ನಂತರವೂ ನನ್ನದು ಅದೇ ಅಭಿಪ್ರಾಯ. ಅವರ ಜೊತೆ ವೈರ, ದ್ವೇಷ ಸಾಧಿಸುವ ಪ್ರಶ್ನೆಯೇ ಇಲ್ಲ.
ಇದನ್ನೂ ಓದಿ : ಉನ್ನತ ಶಿಕ್ಷಣ ಖಾತೆ ಬೇಡವೇ ಬೇಡವೆಂದು ಜಿಟಿಡಿ ಹಠಕ್ಕೆ ಬೀಳಲು ಕಾರಣವೇನು?
 • ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಪ್ರಥಮವಾಗಿ ಹೇಳಿದವನು ನಾನೇ. ಅಂತೆಯೇ, ಮೋದಿಯವರ ಮೇಲೆ ನೇರ ಯುದ್ಧ ಸಾರಿರುವ ಅವರು ರಾಷ್ಟ್ರಮಟ್ಟದ ರಾಜಕೀಯಕ್ಕೆ ಹೋಗುತ್ತಾರೆ; ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂದೂ ಹೇಳಿದ್ದೆ. ಈಗ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ನಾನು ಹೇಳಿದ್ದು ನಿಜವಾಗಿದೆ.
 • ಫಲಿತಾಂಶದ ಬಳಿಕ ಸಿದ್ದರಾಮಯ್ಯ ಅವರ ಮುಖಾಮುಖಿ ಭೇಟಿಯ ಅವಕಾಶ ಬಂದಿಲ್ಲ. ನಾನೇನು ಎನ್ನುವುದು ಅವರಿಗೆ ಗೊತ್ತು. ಅವರೇನು ನನಗೂ ಗೊತ್ತು. ಎಲ್ಲವೂ ಅರ್ಥವಾಗುವಂಥದ್ದು. ನಾನು ಗೆದ್ದೆ, ಅವರು ಸೋತರು ಎನ್ನುವುದು ನನ್ನ ತಲೆಯಲ್ಲಿ ಒಂದು ಕ್ಷಣಕ್ಕೂ ಬಂದಿಲ್ಲ.
 • ಮುಖ್ಯಮಂತ್ರಿಯ ಹೆಸರು ಹೇಳಿಕೊಂಡು ಅವರ ಪಕ್ಷದ ಕೆಲವರು ನನ್ನನ್ನು ನೋಯಿಸಿದರು ಎಂದು ಹೇಳಿದ್ದು ನಿಜ. ಅವರೇ ನೋವುಂಟು ಮಾಡಿದರು ಎಂದಿಲ್ಲ. ಚುನಾವಣೆ ಮುಗಿಯಿತು. ಇನ್ನುಮುಂದೆ ಎಲ್ಲರೂ ಒಂದಾಗಿ ಹೋಗಬೇಕು ಎನ್ನುವ ಸಂದೇಶವನ್ನು ನಮ್ಮ ಕಾರ್ಯಕರ್ತರಿಗೆ ನೀಡಿದ್ದೇನೆ.
 • ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನೇಮಿಸಿದ ಅಧಿಕಾರಿಗಳೇ ಚಾಮುಂಡೇಶ್ವರಿಯಲ್ಲಿದ್ದಾರೆ. ವರ್ತನೆಯನ್ನು ಮಾರ್ಪಡಿಸಿಕೊಳ್ಳುವಂತೆ ಅವರಿಗೆ ಸೂಚಿಸಿದ್ದೇನೆ. ಅವರು ಇದ್ದಾಗ ಆರಾರು ತಿಂಗಳಿಗೆ ಅಧಿಕಾರಿಗಳನ್ನು ಬದಲಿಸಿದ್ದರು. ನಾನು ಯಾರನ್ನೂ ಬದಲಾಯಿಸಿಲ್ಲ. ಅದಕ್ಕಿಂತ ಯಾವ ರೀತಿ ಇರಬೇಕು?
 • ಕುಮಾರಣ್ಣ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತಾರೆ ಎನ್ನುವ ಭಾವನೆ ಚುನಾವಣಾ ಪೂರ್ವದಲ್ಲಿ ಇದ್ದದ್ದು ನಿಜ. ನಮ್ಮ ಭಾಗದಲ್ಲಂತೂ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಘೋರ ಯುದ್ಧ ನಡೆಯಿತು. ನಮ್ಮ ಹೋರಾಟ ನಡೆದದ್ದು ಕಾಂಗ್ರೆಸ್ ವಿರುದ್ಧವೇ ಹೊರತು ಬಿಜೆಪಿ ವಿರುದ್ಧ ಅಲ್ಲ.
 • ಈಗ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ ಮೇಲೆ ಆ ಭಾವನೆ ಬದಲಾಗುತ್ತಿದೆ. ಕಾಂಗ್ರೆಸ್ ಜೊತೆ ಹೊಂದಿಕೊಂಡು ಹೋಗಬೇಕು, ಐದು ವರ್ಷ ಸರ್ಕಾರ ಉಳಿಯಬೇಕು, ಕುಮಾರಣ್ಣ ಮುಖ್ಯಮಂತ್ರಿಯಾಗಿ ಐದು ವರ್ಷ ಇರಬೇಕೆನ್ನುವ ಭಾವನೆ ಮೂಡುತ್ತಿದೆ.
 • ನೀವು ಬರೆದಿಟ್ಟುಕೊಳ್ಳಿ, ಸರ್ಕಾರದಲ್ಲಿ ಯಾವ ಸಮಸ್ಯೆಯೂ ಇರಲ್ಲ. ಅವರು ಮಾತನಾಡಿದರು ಅಂತ ಇವರು, ಇವರು ಮಾತನಾಡಿದರು ಎಂದು ಅವರು ಪ್ರತಿಕ್ರಿಯೆ ನೀಡುತ್ತಿದ್ದಾರಷ್ಟೆ. ಪಕ್ಷಭೇದ ಮರೆತು ಎಲ್ಲರೂ ಸರ್ಕಾರದ ಮಂತ್ರಿಗಳು ಎಂದು ನಡೆದುಕೊಳ್ಳುತ್ತಿದ್ದಾರೆ. ಎಲ್ಲೂ ವ್ಯತ್ಯಾಸ ಕಾಣಿಸುತ್ತಿಲ್ಲ.
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More