ನಾನೇಕೆ ‘ರಾಕ್ಷಸ ತಂಗಡಿ’ ಬರೆದೆ? ಗಿರೀಶ್‌ ಕಾರ್ನಾಡ್‌ ಹೇಳುತ್ತಾರೆ | ಭಾಗ ೧

ಪ್ರಸಿದ್ಧ ನಾಟಕಕಾರ ಗಿರೀಶ್‌ ಕಾರ್ನಾಡ್‌ ಬಹಳ ವರ್ಷಗಳ ನಂತರ ಐತಿಹಾಸಿಕ ವಸ್ತುವನ್ನಾಧರಿಸಿದ ನಾಟಕವನ್ನು ಬರೆದಿದ್ದಾರೆ. ಹೆಸರು, ‘ರಾಕ್ಷಸ ತಂಗಡಿ.’ ಈ ನಾಟಕ ಬರೆಯುವುದಕ್ಕೆ ಪ್ರೇರಣೆಯಾದ ಸಂಗತಿಗಳು, ಬರವಣಿಗೆಯ ಅನುಭವವನ್ನು ‘ದಿ ಸ್ಟೇಟ್‌’ನೊಂದಿಗೆ ಹಂಚಿಕೊಂಡಿದ್ದಾರೆ

ಮುಖ್ಯಾಂಶಗಳು

  • ಕರ್ನಾಟಕದ ಸಾವಿರ ವರ್ಷದ ಇತಿಹಾಸದಲ್ಲಿ ನನಗೆ ಮೂರು ಘಟನೆಗಳು ಬಹಳ ಮಹತ್ವದ ಘಟನೆಗಳು ಅನ್ನಿಸಿತ್ತು. ಅವುಗಳಲ್ಲಿ ಬೇರೆ-ಬೇರೆ ತರಹದ ಸಾಂಸ್ಕೃತಿಕ ಸಂಘರ್ಷಗಳು ಕಂಡುಬರುತ್ತವೆ. ಒಂದು, ಹನ್ನೆರಡನೆಯ ಶತಮಾನದ ವಚನ ಸಾಹಿತ್ಯ, ಬಸವಣ್ಣನವರ ಕ್ರಾಂತಿ; ಎರಡನೆಯದು, ೧೮ನೇ ಶತಮಾನದ ಟಿಪ್ಪು ಸುಲ್ತಾನ, ಹೊರಗಿನ ಸಂಸ್ಕೃತಿಯ ಹೋರಾಟ ಮತ್ತು ಮೂರನೆಯದಾಗಿ, ವಿಜಯನಗರ ಸಾಮ್ರಾಜ್ಯ, ಒಂದು ಯುದ್ಧದಲ್ಲಿ ಹಾಳಾಗಿಹೋಗಿದ್ದು.
  • ವಿಜಯನಗರದ ಬಗ್ಗೆ ತಪ್ಪು ಕಲ್ಪನೆಗಳು, ಹೇಳಿಕೆಗಳಿವೆ. ಅವುಗಳ ಬಗ್ಗೆ ಪುಸ್ತಕಗಳೂ ಬಂದಿವೆ. ಆದರೆ, ನಿಜವಾಗಿಯೂ ಏನಾಯಿತು ಎಂಬ ಬಗ್ಗೆ ನನಗೆ ಬಹಳಷ್ಟು ಕುತೂಹಲವಿತ್ತು.
  • ಕಳೆದ ನಾಲ್ಕೈದು ವರ್ಷಗಳ ಕಾಲ ಕೃಷ್ಣ ಕೋಲ್ಹಾರ ಕುಲಕರ್ಣಿ ಅವರು ಆ ಕಾಲದ ಪುಸ್ತಕಗಳನ್ನು ಅನುವಾದಿಸಿದ್ದಾರೆ. ರಿಚರ್ಡ್‌ ಈಟನ್‌ ಎಂಬ ಅಮೆರಿಕದ ವಿದ್ವಾಂಸರು ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಅದನ್ನೆಲ್ಲ ಓದಿದಾಗ ನನಗೆ ಮತ್ತೆ ಬರೆಯಬೇಕು ಅನ್ನಿಸಿತು. ಸಂಶೋಧನೆ ಮಾಡಿ ಈ ನಾಟಕ ಬರೆದೆ.
  • ವಿಜಯನಗರದ ಯುದ್ಧ ತಾಳಿಕೋಟೆಯಲ್ಲಿ ಆಯಿತೋ, ರಕ್ಕಸತಂಗಡಿಯಲ್ಲಿ ಆಯಿತೋ ಇನ್ನೂ ಗೊತ್ತಿಲ್ಲ. ಕೃಷ್ಣಾ ನದಿಯ ಉತ್ತರದಲ್ಲಿ ಐದು ಬಹುಮನಿ ಸುಲ್ತಾರ ರಾಜ್ಯಗಳಿದ್ದವು. ದಕ್ಷಿಣದಲ್ಲಿ ಇಡೀ ದಕ್ಷಿಣ ಭಾರತವಿತ್ತು, ಅದು ವಿಜಯನಗರದ ಕೈಯಲ್ಲಿತ್ತು. ಒಂದೇ ದಿನದ ಯುದ್ಧದ ಪರಿಣಾಮವಾಗಿ ಇಡೀ ವಿಜಯನಗರ ಸಾಮ್ರಾಜ್ಯ ನಾಶವಾಯಿತು.
  • ರಾಬರ್ಟ್‌ ಸಿವೆಲ್‌, 'ಎ ಫರ್ಗಾಟನ್‌ ಎಂಪೈರ್‌' ಕೃತಿ ವಿಜಯನಗರದ ಪತನದ ಬಗ್ಗೆ ಹೇಳುತ್ತದೆ. ರಕ್ಕಸತಂಗಡಿ ಯುದ್ಧವನ್ನು ಮುಸ್ಲಿಂ ದೊರೆಗಳು ಮತ್ತು ಹಿಂದೂ ದೊರೆಗಳ ನಡುವಿನ ಸಂಘರ್ಷ ಎಂದು ಬರೆದರು. ಉಳಿದವರೂ ಅದನ್ನೇ ಎತ್ತಿಹಿಡಿದು ಬರೆದರು.
  • ಹೊಸ ಸಂಶೋಧನೆಗಳು ಇಡೀ ಬೆಳವಣಿಗೆ ಸಂಕೀರ್ಣವಾಗಿದೆ ಎಂಬುದನ್ನು ತಿಳಿಸುತ್ತವೆ. ಬಹುಮನಿ ಸುಲ್ತಾನರಲ್ಲಿ ಒಬ್ಬನಾದ ಅಲಿ ಆದಿಲ್‌ ಶಾ ಹಂಪಿಗೆ ಬಂದು ರಾಮರಾಯನ ಕಾಲು ಮುಟ್ಟಿ, “ನೀನು ತಂದೆ,” ಎಂದಿದ್ದ. ಅಂಥವನು ಯುದ್ಧ ಯಾಕೆ ಮಾಡಿದ?
  • ಇಲ್ಲಿರುವುದು ಮಾನವೀಯ ಸಂಘರ್ಷವೇ ಹೊರತು, ಹಿಂದು-ಮುಸ್ಲಿಂ ಯುದ್ಧವಲ್ಲ. ಕೃಷ್ಣಾ ನದಿಯ ದಕ್ಷಿಣದಲ್ಲಿ ವಿಜಯನಗರವಿದ್ದು, ಉತ್ತರದಲ್ಲಿ ಸುಲ್ತಾನರಿದ್ದಾರೆ. ಅವರು ದಾಳಿ ಮಾಡಿದ್ದರೆ, ಯುದ್ಧ ದಕ್ಷಿಣದಲ್ಲಿ ಆಗಬೇಕಿತ್ತು. ಆದರೆ, ಯುದ್ಧ ನಡೆದಿದ್ದು ಉತ್ತರದಲ್ಲಿ. ಯಾಕೆ?
  • ತುಳುವ ವಂಶವನ್ನು ಕಾಪಾಡಿ, ಅರವೀಡು ವಂಶದ ರಾಮರಾಯ ವಿಜಯನಗರದ ಅರಸನಾಗಬೇಕೆಂದು ಪ್ರಯತ್ನ ಮಾಡುತ್ತಾನೆ. ಅವನು ಕೀಳುಜಾತಿಯವನು ಎಂಬ ಕಾರಣಕ್ಕೆ ಸಿಂಹಾಸನದಲ್ಲಿ ಕೂರಲು ವಿರೋಧ ವ್ಯಕ್ತವಾಯಿತು. ಅವನ ಬದಲಿಗೆ ಸದಾಶಿವ ಎಂಬುವನನ್ನು ಸಿಂಹಾಸನದ ಮೇಲೆ ಕೂರಿಸಲಾಯಿತು. ಅಳಿಯ ರಾಮರಾಯ ಅವನ ಹೆಸರಿನಲ್ಲಿ ಆಳ್ವಿಕೆ ಮಾಡುತ್ತಾನೆ. ಇಂಥ ದೊಡ್ಡ ಸಾಮ್ರಾಜ್ಯ ಅವನಿಂದ ನಡೆಯುತ್ತದೆ. ಎಂಬತ್ತೆರಡು ವಯಸ್ಸಿನ ರಾಮರಾಯ, ಅವನ ಸೋದರಿಬ್ಬರು ಸಹಾಯಕ್ಕಿದ್ದರು. ವಿಜಯನಗರ ಸೇನೆ ದೊಡ್ಡದಾಗಿತ್ತು. ಬಹುಮನಿ ಸುಲ್ತಾನರೆದುರು ಸೋಲುವ ಸಾಧ್ಯತೆ ಇರಲಿಲ್ಲ.
  • ಅಳಿಯ ರಾಮರಾಯ ತಾನೇ ಯುದ್ಧ ಮಾಡಲು ಹೋಗಿ, ವಿಜಯನಗರವನ್ನು ಕಾಯಲು ಯಾರೂ ಇಲ್ಲದಂತಾಯಿತು. ಅತ್ತ ರಾಮರಾಯ ಸೆರೆ ಸಿಕ್ಕಾಗ, ಇತ್ತ ರಾಮರಾಯನ ಸೋದರರೇ ಪೆನುಗೊಂಡದಲ್ಲಿ ಹೊಸ ರಾಜ್ಯ ಸ್ಥಾಪಿಸುವ ಉದ್ದೇಶದೊಂದಿಗೆ ವಿಜಯನಗರದ ಸಂಪತ್ತನ್ನು ೧,೫೦೦ ಆನೆಗಳ ಮೇಲೆ ಹೊತ್ತು ಸಾಗಿದರು.
ಇದನ್ನೂ ಓದಿ : ‘ಟೈಗರ್ ಜಿಂದಾ ಹೈ’ ಕಾಸ್ಟ್ಯೂಮ್‌ನೊಂದಿಗೇ ಓಡಾಡುತ್ತಿದ್ದಾರೆಯೇ ಕಾರ್ನಾಡ್?
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More