‘ಚರಂಡಿಗೆ ಬಿದ್ದ ಕೊಡಗು ಜಿಲ್ಲಾಧಿಕಾರಿ’ ಎಂಬ ಶೀರ್ಷಿಕೆಯಡಿ ವೈರಲ್ ಆದ ವಿಡಿಯೋ ನಿಜವೇ?

ಚರಂಡಿಗಳ ಸ್ಥಿತಿಗತಿ ಕುರಿತಂತೆ ಅವಲೋಕಿಸಲು ತೆರಳಿದ್ದ ಕೊಡಗಿನ ಜಿಲ್ಲಾಧಿಕಾರಿ ಚರಂಡಿಗೆ ಜಾರಿ ಬಿದ್ದಿದ್ದಾರೆ ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಬೆನ್ನತ್ತಿದ್ದ ‘ಬೂಮ್ ಲೈವ್’ ತಂಡ, ಇದರ ಹಿಂದಿನ ನಿಜವನ್ನು ಬಹಿರಂಗಪಡಿಸಿದೆ

ಗುಜರಾತ್‌ನಲ್ಲಿ 2016ರಲ್ಲಿ, ಕೊಳಗೇರಿ ತೆರವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಜೊತೆ ಮಾತುಕತೆಗೆ ತೆರಳಿದ್ದ ಗುಜರಾತ್‌ನ ಜಾಮನಗರದ ಬಿಜೆಪಿ ಸಂಸದೆ ಪೂನಂಬೆನ್ ಮೋರಿಯೊಳಗೆ ಬಿದ್ದು ಗಾಯಗೊಂಡಿದ್ದರು. ಈ ವಿಡಿಯೋ, ಇದೀಗ 'ಕೊಡಗಿನ ಜಿಲ್ಲಾಧಿಕಾರಿ ಚರಂಡಿಗೆ ಬಿದ್ದಿದ್ದಾರೆ' ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಹೈದ್ರಬಾದ್‌ನ ಸಿರಾಜ್ ಎ ಎಲ್ ಶೇಖ್ ಎಂಬುವವರು ತಮ್ಮ ಫೇಸ್ಬುಕ್ ಪೇಜಿನಲ್ಲಿ ಈ ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿ, "ಒಳಚರಂಡಿ ವ್ಯವಸ್ಥೆಯ ಬಗ್ಗೆ ತಪಾಸಣೆಗಾಗಿ ಹೋಗಿದ್ದ ಕೂರ್ಗ್‌ನ ಜಿಲ್ಲಾಧಿಕಾರಿ ಮೇಡಂ (ಕರ್ನಾಟಕ) ಒಳಚರಂಡಿ ಮೇಲೆ ಅಳವಡಿಸಲಾಗಿದ್ದ ಶೀಟ್ ಮೇಲೆ ನಿಂತಿದ್ದರು. ಈ ಸಂದರ್ಭ ಶೀಟ್ ಕುಸಿದಿದ್ದರಿಂದ ಅವರು ಚರಂಡಿಯೊಳಗೆ ಬಿದ್ದಿದ್ದಾರೆ,” ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಿರಾಜ್ ಪೋಸ್ಟ್ ಮಾಡಿರುವ ವಿಡಿಯೋವನ್ನು 1000 ಮಂದಿ ವೀಕ್ಷಿಸಿದ್ದರೆ, 17 ಮಂದಿ ಶೇರ್ ಮಾಡಿದ್ದಾರೆ. ಮತ್ತೊಬ್ಬ ಫೇಸ್ಬುಕ್ ಬಳಕೆದಾರ. ಪರ್ವಾಝ್ ಮಕ್ಬೂಲ್ ಕೂಡ ಇದೇ ವಿಡಿಯೋವನ್ನು ಪೋಸ್ಟ್ ಮಾಡಿದ್ದು, 'ಡ್ರೈನೇಜಿಗೆ ಬಿದ್ದ ಕಲೆಕ್ಟರ್' ಎಂಬ ಶೀರ್ಷಿಕೆಯಡಿ ಪ್ರಕಟವಾದ ಈ ವಿಡಿಯೋವನ್ನು 29 ಸಾವಿರಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದರೆ, 811 ಮಂದಿ ಶೇರ್ ಮಾಡಿದ್ದರು.

ವಿಡಿಯೋದಲ್ಲಿ ಮಹಿಳೆ ಹಳದಿ ಸಲ್ವಾರ್ ಕಮೀಜ್ ಧರಿಸಿದ್ದು, ಪ್ರತಿಭಟನಾ ನಿರತರೊಂದಿಗೆ ಮಾತನಾಡುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಕೆಳಗೆ ಕುಸಿದುಬಿದ್ದಿದ್ದಾರೆ. 1.49 ಸೆಕೆಂಡ್ ವಿಡಿಯೋದಲ್ಲಿ ಮಹಿಳೆ ಕೆಳಗೆ ಬೀಳುತ್ತಿರುವುದು, ಭಯಗೊಂಡ ಜನ ಅತ್ತಿತ್ತ ಓಡಾಡುತ್ತಿರುವುದು, ಆಕೆಯನ್ನು ರಕ್ಷಿಸಿ ಹೊರತರುತ್ತಿರುವುದು, ತಲೆಯಿಂದ ರಕ್ತಸೋರುತ್ತಿರುವ ಮಹಿಳೆಯನ್ನು, ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುಲು ಯತ್ನಿಸುತ್ತಿರುವುದು ಕಾಣಿಸುತ್ತಿದೆ. ಇನ್ನು, ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲೆಂದು ಕಾದುನಿಂತಿದ್ದ ಅಂಬುಲೆನ್ಸ್ ನಂಬರ್ ಪ್ಲೇಟ್‌ನಲ್ಲೂ ಜಿ ಜೆ (GJ) ಎಂದಿದ್ದು, ಇದು ಗುಜರಾತ್‌ನದ್ದು ಎಂಬು ಸ್ಪಷ್ಟವಾಗುತ್ತಿದೆ.

ಬೂಮ್ ಲೈವ್ ಫ್ಯಾಕ್ಟ್ ಚೆಕ್

ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಕಲೆಕ್ಟರ್ ಎಂದು ಹರಿದಾಡುತ್ತಿರುವ ವಿಡಿಯೋ ಕುರಿತಂತೆ ಸ್ಪಷ್ಟನೆ ನೀಡಿರುವ ‘ಬೂಮ್ ಲೈವ್’ ತಂಡ, 2016ರಲ್ಲಿ ಗುಜರಾತ್‌ನ ಜಾಮನಗರದ ನಗರ ಪಾಲಿಕೆ ಕೊಳಗೇರಿ ತೆರವು ಕಾರ್ಯಾಚರಣೆ ಹಮ್ಮಿಕೊಂಡಿತ್ತು. ಇದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ಆರಂಭಿಸಿದ್ದರು. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಜೆಪಿ ಸಂಸದೆ ಪೂನಂಬೆನ್‌ ಅವರು ಎಂಟು ಅಡಿ ಆಳದ ಮೋರಿಗೆ ಬಿದ್ದಿದ್ದರು. ಘಟನೆಯಲ್ಲಿ ಪೂನಂ ತಲೆಗೆ ಗಾಯವಾಗಿತ್ತು. ಆದರೆ, ಇದೀಗ ಇದೇ ವಿಡಿಯೋವನ್ನು ಬಳಸಿಕೊಂಡು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More