ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ

ಮಹಾತ್ಮ ಗಾಂಧಿ ಅವರನ್ನು ಕುರಿತು ಹಲವರ ಮಾತು ಕೇಳಿದ್ದೇವೆ. ಅವರ ಬರಹಗಳನ್ನು ಓದಿದ್ದೇವೆ. ಗಾಂಧಿ ಕುರಿತು ಸಿನಿಮಾಗಳಲ್ಲಿ ಗಾಂಧಿ ಪಾತ್ರಧಾರಿಗಳು ಮಾತನಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಸ್ವತಃ ಗಾಂಧಿ ಮಾತನಾಡಿದ್ದನ್ನು ಕೇಳಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

ಅಮೆರಿಕದ ಫಾಕ್ಸ್‌ ಮೂವಿಟೋನ್‌ ನ್ಯೂಸ್‌ ೧೯೩೧ರ ಮೇ ತಿಂಗಳಲ್ಲಿ ಗಾಂಧಿ ಮೊದಲ ವಿಡಿಯೋ ಸಂದರ್ಶನ ಮಾಡಿತು. ಗುಜರಾತಿನ ಬೋರ್ಸಾದ್‌ನಲ್ಲಿ ನಡೆದ ಈ ಸಂದರ್ಶನ ನಾಲ್ಕು ನಿಮಿಷ ಇಪ್ಪತ್ತು ಸೆಕೆಂಡ್‌ಗಳದ್ದು. ಈ ವಿಡಿಯೋದಲ್ಲಿ ಮೊದಲಿಗೆ ಅಮೆರಿಕದ ಪತ್ರಕರ್ತ ಸೈನಿಕರೊಬ್ಬರೊಂದಿಗೆ ಗಾಂಧಿ ಕುರಿತು ಮಾತನಾಡುತ್ತಾರೆ. ಸೈನಿಕರು ಗಾಂಧಿ ಅವರ ಕುರಿತು ಮಾತನಾಡುತ್ತಾ, ಗಾಂಧಿಯ ಧ್ವನಿ ಕ್ಷೀಣ ಎಂದು ಪತ್ರಕರ್ತನಿಗೆ ಹೇಳುತ್ತಾರೆ. ನಂತರದಲ್ಲಿ ಕಸ್ತೂರ ಬಾ ಮತ್ತು ಅವರ ಅನುಯಾಯಿಗಳೊಂದಿಗೆ ಗಾಂಧಿ ನಡೆದು ಬರುವ ದೃಶ್ಯವಿದೆ. ನಂತರದಲ್ಲಿ ಗಾಂಧಿ ಅವರೊಂದಿಗೆ ಪ್ರಶ್ನೋತ್ತರ ಆರಂಭವಾಗುತ್ತದೆ.

ದುಂಡು ಮೇಜಿನ ಸಭೆಗೂ ಮುನ್ನ ನಡೆದ ಈ ಸಂದರ್ಶನದಲ್ಲಿ ಪತ್ರಕರ್ತ, ಸಭೆಯ ಕುರಿತು ಕೇಳಿದ ಪ್ರಶ್ನೆಗಳು, ಗಾಂಧಿ ಹೋರಾಟದ ನಡೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಸಂದರ್ಶನದ ಕಡೆಯಲ್ಲಿ ದೇಶಕ್ಕಾಗಿ ಪ್ರಾಣ ಬಿಡಲು ಸಿದ್ಧವೇ ಎಂಬ ಪ್ರಶ್ನೆಗೆ ಗಾಂಧಿ ' ಎಂಥ ಕೆಟ್ಟ ಪ್ರಶ್ನೆ' ಎಂದು ನಗುವ ದೃಶ್ಯವನ್ನು ಇದರಲ್ಲಿ ಕಾಣಬಹುದು. ಇಡೀ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗಳು ಮತ್ತು ಅದಕ್ಕೆ ಗಾಂಧಿ ನೀಡಿದ ಉತ್ತರಗಳನ್ನು ಮುಂದೆ ಓದಬಹುದು.

ಪ್ರಶ್ನೋತ್ತರ

ಒಂದು ವೇಳೆ ಇಂಗ್ಲೆಂಡ್‌ ನಿಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೆ ನಿಮ್ಮ ಮುಂದಿನ ನಡೆ ಏನಾಗಿರುತ್ತದೆ?

ಅಸಹಾಯಕ ಮತ್ತು ಸತ್ಯಾಗ್ರಹ ಚಳವಳಿ ಮಾರ್ಗ ನಮ್ಮ ಮುಂದಿವೆ

ನೀವು ಎರಡನೆಯ ದುಂಡು ಮೇಜಿನ ಸಭೆಗಾಗಿ ಲಂಡನ್‌ಗೆ ಯಾವಾಗ ತೆರಳಲಿದ್ದೀರಿ ಎಂದು ನಮಗೆ ತಿಳಿಸಬಹುದೆ?

ನನಗೆ ಹೋಗುವ ಉದ್ದೇಶವಿಲ್ಲ. ಹಿಂದು ಮತ್ತು ಮುಸ್ಲಿಮರ ಸಮಸ್ಯೆಯನ್ನು ಪರಿಹರಿಸದೇ ನಾನು ಹೋಗುವ ಸಾಧ್ಯತೆ ಇಲ್ಲ

ಒಂದು ವೇಳೆ ಇಂಗ್ಲೆಂಡ್‌ ನಿಮ್ಮ ಬೇಡಿಕೆ ಒಪ್ಪಿದರೆ, ಮಿಸ್ಟರ್‌ ಗಾಂಧಿ, ಭಾರತದ ಹೊಸ ರಾಜ್ಯಗಳಲ್ಲಿ ಸಂಪೂರ್ಣ ನಿಷೇಧ (ಮದ್ಯಪಾನ) ಜಾರಿಗೆ ತರುವ ಉದ್ದೇಶವಿದೆಯೇ?

ಹೌದು

ಸಂಪೂರ್ಣ ನಿಷೇಧ?

ಸಂಪೂರ್ಣ

ಒಂದು ವೇಳೆ ಭಾರತ ಸ್ವಾತಂತ್ರ್ಯಗೊಂಡರೆ ಬಾಲ್ಯವಿವಾಹವನ್ನು ನಿಷೇಧಿಸುವ ಉದ್ದೇಶವಿದೆಯೇ?

ಸ್ವಾತಂತ್ರ್ಯ ಪೂರ್ವದಲ್ಲೇ ನಿಷೇಧ ಮಾಡುವುದಕ್ಕೆ ಬಯಸುತ್ತೇನೆ

ಇಂಗ್ಲೆಂಡ್‌ ಸಂಪೂರ್ಣವಾಗಿ ಅಧಿಕಾರವನ್ನು ಭಾರತಕ್ಕೆ ಒಪ್ಪಿಸಬಹುದೆಂದು ನಿರೀಕ್ಷಿಸುತ್ತೀರಾ

ಅದಕ್ಕಿಂತ ಹೆಚ್ಚೇನು ಏನು ಹೇಳಲು ಸಾಧ್ಯ?

ಹಾಗಾದರೆ ನಿಮಗೆ ಆ ಭರವಸೆ ಇದೆ

ನಾನು ಆಶಾವಾದಿ

ಎರಡನೆಯ ಬಾರಿಗೆ ದುಂಡು ಮೇಜಿನ ಸಭೆಗೆ ನೀವು ಹೋಗುವುದಾದರೆ, ನೀವು ಭಾರತೀಯ ಉಡುಪಿನಲ್ಲಿ ಹೋಗುತ್ತೀರೋ? ಯುರೋಪಿಯನ್‌ ಉಡುಪಿನಲ್ಲಿ ಹೋಗುತ್ತೀರೊ?

ಖಂಡಿತ ಯುರೋಪಿಯನ್‌ ಉಡುಪಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಒಂದು ವೇಳೆ ಅಲ್ಲಿನ ಹವಾಮಾನ ಅವಕಾಶ ಮಾಡಿಕೊಟ್ಟರೆ, ನಾನಿಂದು ಹೇಗಿದ್ದೇನೊ, ಹಾಗೆಯೇ ಇರುತ್ತೇನೆ.

ಒಂದು ವೇಳೆ ಇಂಗ್ಲೆಂಡಿನ ರಾಜ ಬಕಿಂಗ್‌ ಹ್ಯಾಮ್‌ ಪ್ಯಾಲೇಸ್‌ಗೆ ಭೋಜನಕ್ಕೆ ಆಹ್ವಾನಿಸಿದರೆ ನೀವು ನಿಮ್ಮ ಸಾಂಪ್ರದಾಯಿಕ ಉಡುಪಿನಲ್ಲೇ ತೆರಳುತ್ತೀರಾ?

ಇನ್ನಾವುದೇ ಉಡುಪು ಧರಿಸಿದರೆ ಅವರಿಗೆ ಸೌಜನ್ಯ ತೋರಿದಂತಾಗುವುದಿಲ್ಲ ಮತ್ತು ನಾನು ಕ್ರೃತ್ರಿಮವಾಗಿ ಕಾಣಿಸುತ್ತೇನೆ.

ಒಂದು ವೇಳೆ ಇಂಗ್ಲೆಂಡ್‌ ನಿಮ್ಮ ಬೇಡಿಕೆ ಈಡೇರಿಸದೇ ಇದ್ದರೆ, ನೀವು ಮತ್ತೆ ಜೈಲಿಗೆ ಹೋಗಲು ಸಿದ್ಧರಿದ್ದೀರಾ?

ಜೈಲಿಗೆ ಮರಳಲು ನಾನು ಯಾವಾಗಲೂ ಸಿದ್ಧ

ಭಾರತದ ಸ್ವಾತಂತ್ರ್ಯಕ್ಕಾಗಿ ನೀವು ಪ್ರಾಣತ್ಯಾಗ ಮಾಡಲೂ ಸಿದ್ಧವೆ?

ಎಂಥ ಕೆಟ್ಟ ಪ್ರಶ್ನೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಗಾಂಧಿ ಜಯಂತಿ ವಿಶೇಷ | ಹಲವು ‘ವೈಷ್ಣವ ಜನತೋ ತೇನೇ ಕಹಿಯೇ ಜೆ...’
Editor’s Pick More